ರಾಜ್ಯ ಪುರಸ್ಕಾರ…. ಒಂದು ಸ್ಮರಣೀಯ ಘಟನೆ

ರಾಜ್ಯ ಪುರಸ್ಕಾರ…. ಒಂದು ಸ್ಮರಣೀಯ ಘಟನೆ
( ಮಾನಸಿ ಕಿರಣ್ ಕುಮಾರ್ ಪಟ್ಟಣಶೆಟ್ಟಿ)

 

ನಮ್ಮ ಹೆಮ್ಮೆಯ ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ತಾವರ ಚಂದ್ ಗೆಹಲೋಟ್ ಅವರು ಇತ್ತೀಚೆಗೆ ರಾಜ ಭವನದಲ್ಲಿ ರಾಜ್ಯ ಪುರಸ್ಕಾರವನ್ನು ನನಗೆ ನೀಡಿ ಗೌರವಿಸಿದ್ದು ನನ್ನ ಬದುಕಿನ ಸ್ಮರಣೀಯ ಘಟನೆಗಳಲ್ಲಿ ಒಂದಾಗಿದೆ.
ನನ್ನ ಪಾಲಿಗೆ ಇದು ಕೇವಲ ಒಂದು ಪುರಸ್ಕಾರವಲ್ಲ, ಪ್ರಶಸ್ತಿಯಲ್ಲ ನನ್ನ ಬಾಲ್ಯದ ಸತತ ಆರು ವರ್ಷಗಳ ಶ್ರದ್ಧೆ, ನಿರಂತರ ಕಠಿಣ ಪರಿಶ್ರಮಗಳ ಒಟ್ಟು ಮೊತ್ತದ ಫಲಿತಾಂಶವಿದು.

ನನ್ನ ಏಳನೇ ವಯಸ್ಸಿನಲ್ಲಿ ನಾನು ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ನ ಕಬ್ಸ್ ಮತ್ತು ಬುಲ್ ಬುಲ್ ತರಬೇತಿಗೆ ಹಾಜರಾದೆ. ಎಂಟನೇ ತರಗತಿಯಲ್ಲಿ ಓದುತ್ತಿರುವಾಗ ನಾನು ಗೈಡ್ ಕ್ಯಾಂಪ್ ಗಳಿಗೆ ತರಬೇತಿಗಾಗಿ ಹಾಜರಾಗುತ್ತಿದ್ದೆ. ನನ್ನ ಮೊದಲ ಕ್ಯಾಂಪ್ 6 ದಿನಗಳದ್ದಾಗಿದ್ದು ಮನೆಯಿಂದ ಅಷ್ಟು ದೂರ ವಿಭಿನ್ನ ಪರಿಸರದಲ್ಲಿ ಕಳೆಯಬೇಕಾದದ್ದು ನನಗೆ ಅತಿ ದೊಡ್ಡ ಸವಾಲಿನ ವಿಷಯವಾಗಿತ್ತು.

ಭಯ, ಆತಂಕ ಮತ್ತು ಅರಿಯದ ದಿಗಿಲು ನನ್ನನ್ನು ಆವರಿಸಿದ್ದು ಮೊದಲ ಬಾರಿ ನನ್ನ ಮನೆಯವರಿಂದ ದೂರ ಬಂದಿದ್ದ ನಾನು ಶಿಕ್ಷಕರು ಮತ್ತು ಉಳಿದ ವಿದ್ಯಾರ್ಥಿಗಳಿದ್ದಾಗಲೂ ಕೂಡ ಉಸಿರುಗಟ್ಟಿಸಿದ, ಭಯಗ್ರಸ್ತ ಭಾವದಿಂದ ಉಳಿದವರನ್ನು ನೋಡುತ್ತಿದ್ದೆ. ಅಗಾಧವಾದ ಸಡಗರ, ಸಂಭ್ರಮ ವಿದ್ಯಾರ್ಥಿಗಳಲ್ಲಿ ಮನೆ ಮಾಡಿದ್ದರೂ ಕೂಡ ನನ್ನ ಸುತ್ತ ನಡೆಯುತ್ತಿರುವ ಎಲ್ಲ ವಿದ್ಯಮಾನಗಳು ನನಗೆ ಮನೆಯಿಂದ ಹೊರಗಿನ ಹೊಸ ಪ್ರಪಂಚವನ್ನೇ ತೋರುತ್ತಿದ್ದವು.. ಕಣ್ಣು ತೆಗೆಯಲು ಕೂಡ ಭಯಪಡುತ್ತಿದ್ದ ನಾನು ನನ್ನ ಶಾಲೆಯ ಸ್ನೇಹಿತರಿಗೆ ಅಂಟಿಕೊಂಡೇ ಇರಲಾರಂಭಿಸಿದೆ.. ಸದಾ ತಾಯಿ ಮತ್ತು ಅಣ್ಣನ ಸುರಕ್ಷತಾ ವಲಯದಲ್ಲಿ ಬೆಳೆದಿದ್ದ ನಾನು ಚಿಕ್ಕಬಳ್ಳಾಪುರದ ಕ್ಯಾಂಪಿನಲ್ಲಿ ಅತ್ಯಂತ ಕಸಿವಿಸಿಯನ್ನು ಅನುಭವಿಸಿದೆ. ಕೊನೆಗೆ ನನ್ನ ತಾಯಿಗೆ ಕರೆ ಮಾಡಿ ನನಗೆ ಇಲ್ಲಿ ಇರಲು ಆಗುತ್ತಿಲ್ಲ ಎಂದು ಅಳುತ್ತಲೇ ಹೇಳಿ ನನಗೆ ಮನೆಗೆ ಮರಳಿ ಬರಬೇಕೆಂದೆನಿಸಿದೆ ಎಂದು ಅಲವತ್ತುಕೊಂಡೆ. ಆಗ ನನ್ನಮ್ಮ ನನಗೆ ಹೇಳಿದ್ದು ಒಂದೇ ಮಾತು . ಅಲ್ಲಿಯವರೆಗೂ ಹೋಗಿ ಬರಿ ಕೈಯಲ್ಲಿ ಬರುವುದರಲ್ಲಿ ಅರ್ಥವಿಲ್ಲ ಹೊಸ ಅನುಭವಗಳ ಮೂಟೆ ನಿನ್ನ ಕಣ್ಣ ಮುಂದೆ ಇದೆ. ಎಲ್ಲಿಯೂ ನಿಲ್ಲದಿರು ಇದು ಕೇವಲ ಆರಂಭ… ಇದರ ತಾರ್ಕಿಕ ಅಂತ್ಯ ಸಾಧನೆಯ ಶಿಖರಕ್ಕೆ ನಿನ್ನನ್ನು ತಲುಪಿಸುತ್ತದೆ, ಅದಿಲ್ಲವಾದರೂ ಉತ್ತಮ ಅನುಭವಗಳು ನಿನ್ನ ಬದುಕಿನಲ್ಲಿ ಮರೆಯದ ನೆನಪುಗಳನ್ನು, ಒಳ್ಳೆಯ ಗಳಿಗೆಗಳನ್ನು ಕೊಡಮಾಡುತ್ತದೆ. ದುಡ್ಡು ಕೊಟ್ಟು ಎಲ್ಲವನ್ನೂ ಕೊಳ್ಳಬಹುದು ಆದರೆ ಅನುಭವಗಳನ್ನು ಮತ್ತು ನೆನಪುಗಳನ್ನು ನಾವು ಖುದ್ದಾಗಿ ಸೃಷ್ಟಿಸಬೇಕು. ಆ ಹೊತ್ತಿಗೆ ಅಮ್ಮ ಉಪದೇಶ ಮಾಡುತ್ತಿದ್ದಾಳೆ ಎಂದು ತೋರಿದರೂ ಕ್ಯಾಂಪಿನಲ್ಲಿ ಮಲಗಿದ ನನಗೆ ನಿದ್ರೆ ಬಾರದೆ ಅದೇ ವಿಚಾರವನ್ನು ಯೋಚಿಸುತ್ತಿದ್ದ ಸಮಯದಲ್ಲಿ ಹೌದಲ್ಲವೇ ಇಲ್ಲಿ ಈ ರೀತಿ ಇರುವವಳು ನಾನೊಬ್ಬಳೇ ಅಲ್ಲ ಹಿಂದೆಯೂ ನನ್ನಂತೆ ಸಾಕಷ್ಟು ಜನ ವಿದ್ಯಾರ್ಥಿಗಳು ಇದ್ದರು ಮುಂದೆಯೂ ಬರುವರು, ಅಂತದ್ದರಲ್ಲಿ ನಾನು ಹೀಗೆ ಹಿಂಜರಿಯುವುದರಲ್ಲಿ ಏನು ಅರ್ಥ? ಎಂಬ ಭಾವ ಮೂಡಿ ಮನಸ್ಸಿಗೆ ತುಸು ನಿರಾಳವಾಯಿತು. ಅಮ್ಮನ ಭರವಸೆಯ ಮಾತುಗಳು ನನ್ನಲ್ಲಿ ಕೊಂಚ ಧೈರ್ಯವನ್ನು ತುಂಬಿ ಕ್ಯಾಂಪ್ ಮುಗಿಯುವವರೆಗೆ ನಾನು ಅಲ್ಲಿ ಸಂಪೂರ್ಣ ಕ್ರಿಯಾಶೀಲವಾಗಿ ನನ್ನನ್ನು ತೊಡಗಿಸಿಕೊಂಡೆ. ಮೊದಲ ಕ್ಯಾಂಪ್ ನಲ್ಲಿ ಸಾಕಷ್ಟು ಚಟುವಟಿಕೆಗಳ ಮೂಲಕ ವೈವಿಧ್ಯಮಯ ವಿಷಯಗಳು ಅರಿವನ್ನು ಸೇವೆಯ ಮಹತ್ವವನ್ನು ಗೊತ್ತು ಮಾಡಿಕೊಡಲಾಯಿತು.

 

 

 

 

 

 

ನನ್ನ ಎರಡನೇ ಕ್ಯಾಂಪನ ಹೊತ್ತಿಗೆ ನಾನು ಸಾಕಷ್ಟು ವಿಭಿನ್ನವಾದ ಮನಸ್ಥಿತಿಯನ್ನು ಹೊಂದಿದ್ದೆ. ನನಗೆ ನಾನೇ ಸವಾಲನ್ನು ಹಾಕಿಕೊಂಡು ನನ್ನ ಸುರಕ್ಷತಾ ವಲಯದಿಂದ ಹೊರಬಂದು ಎಲ್ಲರೊಂದಿಗೆ ಬೆರೆಯಲಾರಂಭಿಸಿದೆ. ಖುದ್ದು ನನ್ನಲ್ಲಾದ ಬದಲಾವಣೆ ನನಗೆ ಆಶ್ಚರ್ಯ ತಂದಿತ್ತು. ಇದೀಗ ನಾನು ಭಯ ಪಡುತ್ತಿರಲಿಲ್ಲ, ಬದಲಾಗಿ ಎಲ್ಲರೊಂದಿಗೆ ಮಿಳಿತಗೊಂಡು ಕ್ರಿಯಾಶೀಲವಾಗಿ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಾರಂಭಿಸಿದೆ.

ನನ್ನ ಮೂರನೇ ಕ್ಯಾಂಪ್ನ ಸಮಯಕ್ಕೆ ನಾನು ಸಂಪೂರ್ಣವಾಗಿ ಬದಲಾಗಿದ್ದೆ. ಶಿಬಿರಾರ್ಥಿಗಳಲ್ಲಿ ಅತ್ಯಂತ ಜನಪ್ರಿಯ ವಿದ್ಯಾರ್ಥಿ ನಾನಾಗಿದ್ದು ಪ್ರತಿಯೊಬ್ಬರು ನನ್ನನ್ನು ಗುರುತಿಸುತ್ತಿದ್ದರು. ಇದು ನನಗೆ ಹೆಮ್ಮೆ ಯ ಭಾವವನ್ನು ಮೂಡಿಸಿತ್ತು ಎಂದರೆ ತಪ್ಪಾಗಲಾರದು. ಅಲ್ಲಿ ಶಿಬಿರಾರ್ಥಿಗಳಾಗಿ ಬಂದ ಸರಿ ಸುಮಾರು ಇನ್ನೂರು ಜನ ವಿದ್ಯಾರ್ಥಿಗಳಲ್ಲಿ ವೈಯುಕ್ತಿಕವಾಗಿ ನೂರಕ್ಕಿಂತ ಹೆಚ್ಚು ಜನ ನನಗೆ ಪರಿಚಯವಾಗಿದ್ದು ಇದು ನಾನು ಹೆಚ್ಚು ಜನರೊಂದಿಗೆ ಸಂಪರ್ಕವನ್ನು ಹೊಂದಿರಲು ಸಹಾಯಕವಾಗಿದ್ದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಅಂತಿಮವಾಗಿ ನನ್ನ ಗುರಿಯತ್ತ ನನ್ನ ಚಿತ್ತವನ್ನು ಕೊಂಡೊಯ್ಯಲು ಈ ಆತ್ಮವಿಶ್ವಾಸ ನನಗೆ ದಿಕ್ಸೂಚಿಯಾಗಿತ್ತು. ನಾನು ಕೂಡ ವಿವಿಧ ಟಾಸ್ಕಗಳನ್ನು ಆರ್ಡರ್ಗಳನ್ನು ನಾಯಕತ್ವದ ಕೆಲಸಗಳನ್ನು ನಿಭಾಯಿಸಲಾರಂಭಿಸಿದೆ. ಇದೀಗ ಯಾವುದೇ ಹೆಂದರಿಕೆ ಇಲ್ಲದೆ ನನ್ನ ಗೈಡ್ ಕ್ಯಾಪ್ಟನಗಳು ನನಗೆ ಕೆಲಸವನ್ನು ನಿರ್ವಹಿಸಲು ಅವಕಾಶ ಮಾಡಿಕೊಡಲಾರಂಭಿಸಿದರು. ಅವರು ಕೊಟ್ಟ ಎಲ್ಲ ನಾಯಕತ್ವದ ಕಾರ್ಯಗಳನ್ನು ನಾನು ಲೀಲಾಜಾಲವಾಗಿ ನಿರ್ವಹಿಸಿದೆ.

ನನ್ನ ಗೈಡ್ ಕ್ಯಾಪ್ಟನ್ ಹೇಳಿದ ಎಲ್ಲಾ ಅಪಾಯಿಂಟ್ಮೆಂಟುಗಳನ್ನು ನಾನು 100 ಪ್ರತಿಶತ ನನ್ನ ಶ್ರಮ ಮತ್ತು ಶ್ರದ್ಧೆಯಿಂದ ನಿರ್ವಹಿಸಿದ್ದು ಎಲ್ಲರ ಗಮನ ಸೆಳೆಯಿತು. ನನ್ನ ಗೈಡ್ ಕ್ಯಾಪ್ಟನ್ ಆಗಿದ್ದ ಶ್ರೀಮತಿ ವಿಜಯಲಕ್ಷ್ಮಿ ಮೇಡಂ ಅವರು ನನ್ನ ಈ ಪಯಣದುದ್ದಕ್ಕೂ ನನಗೆ ಪ್ರೋತ್ಸಾಹ ಮತ್ತು ಧೈರ್ಯ ತುಂಬಿದರು. ನನ್ನ ಜಾಣ್ಮೆ ಕಠಿಣ ಪರಿಶ್ರಮ ಮತ್ತು ನಾಯಕತ್ವ ಗುಣಗಳಿಂದ ಎಲ್ಲಾ ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದ ನನ್ನ ಕುರಿತು ಎಲ್ಲರೂ ಪ್ರಶಂಶಿಸಿದಾಗ ನಾನು ಮತ್ತಷ್ಟು ಜವಾಬ್ದಾರಿ ಪ್ರಜ್ಞೆಯನ್ನು ಸೂಕ್ಷ್ಮ ಒಳನೋಟಗಳನ್ನು ಅರಿತುಕೊಂಡೆ.

ಈ ಕ್ಯಾಂಪ್ಗಳ ನಂತರ ರಾಜ್ಯ ಪುರಸ್ಕಾರ ಲೆವೆಲ್ ನ ಮತ್ತೆರಡು ಕ್ಯಾಂಪುಗಳಲ್ಲಿ ನಾನು ಭಾಗವಹಿಸಿದೆ. ಈ ಮೊದಲ ಕ್ಯಾಂಪುಗಳಿಗಿಂತ ತುಸು ಹೆಚ್ಚು ಸವಾಲುಗಳನ್ನು ಹೊಂದಿರುವಂತಹ ಕಠಿಣ ತರಬೇತಿ ಮತ್ತು ನೆನಪಿಡುವಂತಹ ಘಟನೆಗಳು ನನಗೆ ದೊರೆತವು.

ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಮತ್ತು ವೈಶಾಲಿ ಕಾಸರವಳ್ಳಿ ದಂಪತಿಗಳ ಮಗಳು ನಟಿ, ನಿರ್ದೇಶಕಿ ಅನನ್ಯ ಕಾಸರವಳ್ಳಿ ಅವರು
ಈ ಕ್ಯಾಂಪಿನಲ್ಲಿ ಭಾಗವಹಿಸಿ ನನ್ನ ಸಂದರ್ಶನ ಮಾಡಿದರು. ಒಟ್ಟು ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಕ್ಯಾಂಪಿನಲ್ಲಿ ನಾನು ಮತ್ತು ನನ್ನ ಓರ್ವ ಸ್ನೇಹಿತೆ ಮಾತ್ರ ಅಂತಿಮ ಸುತ್ತಿಗೆ ಆಯ್ಕೆಯಾದೆವು. ಅವರ ಪ್ರಶಂಸೆಯ ಮಾತುಗಳು ನನ್ನಲ್ಲಿ ಮತ್ತಷ್ಟು ಸ್ಪೂರ್ತಿಯನ್ನು ತುಂಬಿದವು.

ಅಂತಿಮ ಸುತ್ತು ಕಠಿಣವಾಗಿದ್ದು ರಾಜ ಭವನದಲ್ಲಿ ರಾಜ್ಯ ಪುರಸ್ಕಾರವನ್ನು ಪಡೆಯಲು ಪ್ರತಿ ಜಿಲ್ಲೆಯಿಂದ ಕೇವಲ 3 ಗೈಡ್ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತಿತ್ತು. ರಾಜಭವನವನ್ನು ಪ್ರವೇಶಿಸುವುದೇ ಒಂದು ಸಾಧನೆ ಎಂಬಂತೆ ನಮಗೆ ತೋರುತ್ತಿತ್ತು. ಅಂತಹ ಮೂರು ಜನ ವಿದ್ಯಾರ್ಥಿಗಳಲ್ಲಿ ನಾನು ಒಬ್ಬಳಾಗಿದ್ದು ನನಗೆ ಸಂತಸದನ್ನು ತಂದಿತ್ತು.

ಸಾಮಾನ್ಯ ಜನರು ಪ್ರವೇಶಿಸಲಾಗದ ನಮ್ಮ ರಾಜ್ಯದ ಪ್ರಥಮ ಪ್ರಜೆ ವಾಸಿಸುವ ರಾಜಭವನ ಅತ್ಯಂತ ಕಟ್ಟುನಿಟ್ಟಿನ ಸುರಕ್ಷಾ ಪ್ರವೇಶ ವಿಧಾನಗಳನ್ನು ಹೊಂದಿದೆ. ಹಲವಾರು ಹಂತದ ಸುರಕ್ಷೆ ಮತ್ತು ಪರೀಕ್ಷಣಾ ವಿಧಿ ವಿಧಾನಗಳು ಅಲ್ಲಿದ್ದು ಎಲ್ಲಾ ಹಂತದ ಪರೀಕ್ಷೆಯನ್ನು ನಾವು ಪೂರೈಸಲೇಬೇಕು.ಅಂತಿಮವಾಗಿ ಆಯ್ಕೆಯಾದ ಮೂರು ಜನರಲ್ಲಿ ನನಗೆ ರಾಜಭವನದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಪುರಸ್ಕಾರವನ್ನು ಪಡೆಯುವ ಅವಕಾಶ ದೊರೆಯಿತು.

ಈ ಸಮಾರಂಭವನ್ನು ವೀಕ್ಷಿಸಲು ನನ್ನ ತಾಯಿಗೂ ಅವಕಾಶ ನೀಡಿದ್ದು ನನಗೆ ಈ ಸಮಾರಂಭ ಮತ್ತಷ್ಟು ವಿಶೇಷವೆನಿಸಿತು. ವೀಕ್ಷಕರ ಗ್ಯಾಲರಿಯಲ್ಲಿ ಕುಳಿತ ನನ್ನ ತಾಯಿಯನ್ನು ನೋಡಿ ನನ್ನ ಮನ ಮತ್ತಷ್ಟು ಹೆಮ್ಮೆ ಮತ್ತು ಸಂತಸದಿಂದ ತುಂಬಿ ನನ್ನ ಸಾಧನೆಗೆ ನಿಜವಾದ ಅರ್ಥ ದೊರೆಯಿತು ಎಂಬಂತೆ ಭಾಸವಾಯಿತು..
ಅಲ್ಲಿಯೂ ಕೂಡ ರಾಜ್ಯ ಪುರಸ್ಕಾರ ಪ್ರಶಸ್ತಿಯನ್ನು ಪಡೆಯಲು ವೇದಿಕೆಯ ಮೇಲೆ ಯಾರು ಹೋಗಬೇಕೆಂದು ತೀರ್ಮಾನಿಸಲು ಈ ಆಯ್ಕೆ ಪ್ರಕ್ರಿಯೆ ಇದ್ದು ಬೆಂಗಳೂರು ದಕ್ಷಿಣ ಭಾಗ(ಜಿಲ್ಲೆ)ದಿಂದ ನಾನು ಆಯ್ಕೆಯಾಗಿದ್ದೆ. ಈ ವಿಷಯ ನನಗೆ ತಿಳಿಸಲ್ಪಟ್ಟಾಗ ಅದುವೇ ನನ್ನ ಬದುಕಿನ ಧನ್ಯತೆಯ ಕ್ಷಣಗಳಾಗಿದ್ದು ತೀವ್ರ ಸಂತಸ ಮತ್ತು ಧನ್ಯತೆಯ ಭಾವವನ್ನು ನನ್ನಲ್ಲಿ ಮೂಡಿಸಿದ್ದವು. ನನ್ನ ಕನಸಿನ ಹಕ್ಕಿ ರೆಕ್ಕೆ ಬಿಚ್ಚಿ ಪಟಪಟನೆ ಆಗಸದಲ್ಲಿ ಹಾರಿದಂತಾಗಿತ್ತು. ನನ್ನ ಇಷ್ಟು ದಿನಗಳ, ವರ್ಷಗಳ ಪರಿಶ್ರಮ ಮತ್ತು ಕನಸು ನನಸಾದ ಈ ಕ್ಷಣ ನನ್ನ ಬದುಕಿನ ವಿಶೇಷಗಳಲ್ಲಿ ಒಂದು.

ನಮ್ಮ ರಾಜ್ಯದ ಗೌರವಾನ್ವಿತ ರಾಜ್ಯಪಾಲರಿಂದ ಪಡೆಯುವ ಈ ರಾಜ್ಯ ಪುರಸ್ಕಾರಕ್ಕೆ ಪ್ರಶಸ್ತಿಗೆ ತನ್ನದೇ ಆದ ಮಹತ್ವವಿದೆ. ರಾಜ್ಯ ಪುರಸ್ಕಾರ ಕೇವಲ ಒಂದು ಪ್ರಶಸ್ತಿಯಲ್ಲ ನನಗೆ ಬದುಕಿನಲ್ಲಿ ದೃಢತೆಯನ್ನು ತಂದುಕೊಟ್ಟ, ನಾಯಕತ್ವ ಗುಣಗಳನ್ನು ನನ್ನಲ್ಲಿ ಉದ್ಯೀಪಿಸಿದ ಮತ್ತು ನನ್ನದೇ ಆದ ಸುರಕ್ಷತಾ ವಲಯದಿಂದ ಹೊರಗೆ ಕಾಲಿಟ್ಟು ಬದುಕನ್ನು ಎದುರಿಸಲು ಕಲಿಸಿದ ಮಹಾನ್ ಗುರು ಈ ಪ್ರಶಸ್ತಿ. ನನ್ನ ಬದುಕಿನಲ್ಲಿ ನಾನು ಯಾವಾಗಲೂ ನೆನಪಿಡುವಂತಹ ಒಂದು ಅಮೋಘ ಘಳಿಗೆ ನನ್ನ ಈ ರಾಜ್ಯ ಸೇವಾ ಪುರಸ್ಕಾರ ಪ್ರಶಸ್ತಿ.

( ಗೈಡ್ ಎಂಬುದು ಕೇವಲ ಒಂದು ಗುಂಪಲ್ಲ…. ನಿರಂತರ ಕಲಿಕೆಯ ಸಾಹಸಮಯ ಮತ್ತು ಸೇವಾ ಮನೋಭಾವವನ್ನು ನಮ್ಮಲ್ಲಿ ತುಂಬುವ ಪಯಣ. ಸ್ಕೌಟ್ಸ್ ಇಲ್ಲವೇ ಗೈಡ್ ನಲ್ಲಿ ಮಕ್ಕಳನ್ನು ಭರ್ತಿ ಮಾಡಿಕೊಂಡಾಗ ಅವರಲ್ಲಿ ಕ್ರಿಯಾಶೀಲ ಚಟುವಟಿಕೆಗಳು, ಕ್ಯಾಂಪುಗಳಲ್ಲಿ ಪ್ರತಿದಿನ ಕವಾಯತುಗಳು ಬೇರೆಯವರಿಗೆ ಸಹಾಯ ಮಾಡುವುದು ಮತ್ತು ನಿಗದಿತ ದೈನಂದಿನ ಕಾರ್ಯಕ್ರಮಗಳು ನಮಗೆ ದೊರೆಯುತ್ತವೆ.

ಸ್ಕೌಟ್ಸ್ ಅಂಡ್ ಗೈಡ್ಸ್ ನ ಪಯಣದ ಆರಂಭದಲ್ಲಿ
ನಾವು ನಮಗೆ ಸಾಧ್ಯವಿದ್ದಷ್ಟು ನಿಯಮಗಳನ್ನು ಪಾಲಿಸಿ ಇತರರಿಗೆ ಸಹಾಯ ಮಾಡುವ ಪ್ರತಿಜ್ಞೆಯನ್ನು ಮಾಡಬೇಕಾಗುತ್ತದೆ.

ಸ್ಕೌಟ್ಸ್ ಮತ್ತು ಗೈಡ್ ನಲ್ಲಿ ಪ್ರಾರಂಭಿಕ ಹಂತವನ್ನು ಪ್ರವೇಶ ಎಂಬ ಹೆಸರಿನಲ್ಲಿ ಆರಂಭಿಸುತ್ತಾರೆ. ನೈಜ ಜೀವನದ ವಿವಿಧ ಘಟನೆಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳುವ ಮತ್ತು ಹೊಸ ಹೊಸ ಕೌಶಲಗಳನ್ನು ಕಲಿಯುವ ರೀತಿಯಲ್ಲಿ ನಮಗೆ ತರಬೇತಿ ನೀಡಲಾಗುತ್ತದೆ.

ವಿವಿಧ ಹಂತಗಳ ಪೂರೈಸುವುದು

ತರಗತಿಗಳಲ್ಲಿ ಪಾಸಾಗಿ ಮುಂದೆ ಹೋಗುವಂತೆ ಗೈಡ ನಲ್ಲಿಯೂ ಕೂಡ ಹಲವಾರು ಹಂತಗಳನ್ನು ಪೂರೈಸಲೇಬೇಕಾಗುತ್ತದೆ.

1.ಪ್ರಥಮ ಸೋಪಾನ….
ಮೂಲಭೂತವಾದ ರಕ್ಷಣಾ ಕ್ರಮಗಳು, ಪ್ರಥಮ ಚಿಕಿತ್ಸೆ ಮತ್ತು ಸಮೂಹವಾಗಿ ಕಾರ್ಯನಿರ್ವಹಿಸುವುದು.

2.ದ್ವಿತೀಯ ಸೋಪಾನ…
ಹೆಚ್ಚು ಹೊರಾಂಗಣ ಕೌಶಲಗಳು, ಅಡುಗೆ ಮತ್ತು ಜವಾಬ್ದಾರಿಯನ್ನು ನಿರ್ವಹಿಸುವುದು.

3.ತೃತೀಯ ಸೋಪಾನ…
ನಾಯಕತ್ವ ತರಬೇತಿ ಮತ್ತು ಸಮುದಾಯ ಸೇವೆ

4. ಅಂತಿಮವಾಗಿ ರಾಜ್ಯ ಪುರಸ್ಕಾರ…. ರಾಜ್ಯಮಟ್ಟದ ಸ್ಕೌಟ್ಸ್ ಅಂಡ್ ಗೈಡ್ಸ್ ನಲ್ಲಿ ಅದ್ವಿತೀಯ ಕಾರ್ಯ ನಿರ್ವಹಿಸಿದವರಿಗೆ

5. ಪ್ರೆಸಿಡೆಂಟ್ ಪುರಸ್ಕಾರ…. ಅತ್ಯುತ್ತಮ ವಿದ್ಯಾರ್ಥಿಗೆ ನೀಡಲ್ಪಡುವ ಅತಿ ದೊಡ್ಡ ಗೌರವ ಪುರಸ್ಕಾರ.

ಪ್ರತಿಯೊಂದು ಹಂತವು ನಮಗೆ ಸ್ವತಂತ್ರ್ಯವಾಗಿ ತೊಂದರೆಗಳನ್ನು ನಿವಾರಿಸಿಕೊಳ್ಳುವ ಮತ್ತು ಬೇರೆಯವರ ತೊಂದರೆಗಳನ್ನು ಕೂಡ ನಿರ್ವಹಿಸುವ ಕೌಶಲ್ಯಗಳನ್ನು ಕಲಿಸಿಕೊಡುತ್ತದೆ

ಕ್ಯಾಂಪ್ ಗಳು..ಜೀವನದ ನಿಜವಾದ ಅನುಭವಗಳು
ಸ್ಕೌಟ್ಸ್ ಅಂಡ್ ಗೈಡ್ಸ್ ಗಳು ಕೇವಲ ಪುಸ್ತಕದಲ್ಲಿ ಓದುವುದಲ್ಲ ಕ್ಯಾಂಪ್ ಗಳಲ್ಲಿ ತರಬೇತಿ ಪಡೆದು ಅನುಭವಿಸುವುದು.
ಕಾಡಿನಲ್ಲಿ ನಮ್ಮ ಟೆಂಟುಗಳನ್ನು ನಾವೇ ನಿರ್ಮಿಸಿಕೊಂಡು ಆಹಾರ ತಯಾರಿಸುವುದು.
ನಕಾಶೆ ಮತ್ತು ದಿಕ್ಸೂಚಿಯ ಸಹಾಯದಿಂದ ನಿಗದಿತ ಸ್ಥಳವನ್ನು ತಲುಪುವ ಕಲಿಕೆ.ನಿಗದಿತ ಎತ್ತರಗಳನ್ನು ಚಾರಣದ ಮೂಲಕ ಗುಂಪಿನಲ್ಲಿ ಸಾಗಿ ತಲುಪುವುದು.

ಕೆಲ ಕ್ಯಾಂಪ್ಗಳು ಚಿಕ್ಕದಾಗಿರುತ್ತದೆ ಮತ್ತೆ ಕೆಲ ಕ್ಯಾಂಪ್ ಗಳು, ರಾಷ್ಟ್ರಮಟ್ಟದ ಜಾಂಬೂರಿಗಳು ಸಾವಿರಾರು ಜನ ವಿದ್ಯಾರ್ಥಿಗಳನ್ನು ಒಂದೇ ಸೂರಿನಡಿ ತರಬೇತಿ ಪಡೆಯುವಂತೆ ಆಯೋಜಿಸಲ್ಪಟ್ಟಿರುತ್ತವೆ

ಕ್ಯಾಂಪ್ನ ಉದ್ದೇಶ…..ಬೇರೆಯವರಿಗೆ ಸಹಾಯ ಮಾಡುವುದು ನಿಜವಾದ ಉದ್ದೇಶ
ಸ್ಕೌಟ್ಸ್ ಅಂಡ್ ಗೈಡ್ ನಲ್ಲಿ ತರಬೇತಿಯಾದ ವಿದ್ಯಾರ್ಥಿಗಳು ರಾಷ್ಟ್ರೀಯ ವಿಪತ್ತು ನಿರ್ವಹಣೆಯಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ. ದುರಂತದ ಸಮಯದಲ್ಲಿ ಆಹಾರ, ನೀರು ಮತ್ತು ಪ್ರಥಮ ಚಿಕಿತ್ಸೆಯನ್ನು ನೀಡಲು ಇವರು ತರಬೇತಿಗೊಂಡಿರುತ್ತಾರೆ.
ಒಂದೊಂದು ಕ್ಯಾಂಪಿನಲ್ಲಿ ಸಾಕಷ್ಟು ಜನರಿದ್ದರೂ ಕೂಡ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಇವರು ಉಳಿದವರಿಗೆ ಕೂಡ ಸ್ವಚ್ಛತೆಯ ಅರಿವನ್ನು ಮೂಡಿಸುತ್ತಾರೆ.

ಹಿರಿಯ ಅಧಿಕಾರಿಗಳಿಂದ ಆದೇಶ ಬರುವವರೆಗೆ ಕಾಯದೆ ಅವಶ್ಯಕತೆ ಇದ್ದಾಗ ಸಹಾಯ ಮಾಡುವುದು ಸ್ಕೌಟ್ಸ್ ಅಂಡ್ ಗೈಡ್ಸ್ ನ ವಿದ್ಯಾರ್ಥಿಗಳ ಮುಖ್ಯ ಕರ್ತವ್ಯವಾಗಿರುತ್ತದೆ

ದೈಹಿಕವಾಗಿ ಬಲಿಷ್ಠನಾಗಿರುವುದು ಶಕ್ತಿಯ ಸಂಕೇತವಲ್ಲ ಬದಲಾಗಿ ದಯಾಳುತನ ಮತ್ತು ಜವಾಬ್ದಾರಿಯತವಾಗಿರುವುದು ಶಕ್ತಿ ಎಂಬುದು ಸ್ಕೌಟ್ಸ್ ಅಂಡ್ ಗೈಡ್ಸ್ ನ ಧ್ಯೇಯವಾಗಿದೆ

ಸ್ಕೌಟ್ಸ್ ಅಂಡ್ ಗೈಡ್ಸ್ ಮಾರ್ಗದರ್ಶಿಯು ವಿದ್ಯಾರ್ಥಿಗಳು ನಿಯಮಗಳನ್ನು ಪರಿಪಾಲಿಸುತ್ತಾ ತಮ್ಮ ಉನ್ನತ ವ್ಯಕ್ತಿತ್ವ ನಿರ್ಮಾಣದ ಬೃಹತ್ ಪ್ರಕ್ರಿಯೆ.

ಸೆಲ್ಯೂಟ್ ಹೊಡೆಯುವುದು ಗೌರವವನ್ನು ಸೂಚಿಸಿದರೆ
ಸಮವಸ್ತ್ರವು ಏಕತೆಯನ್ನು ಸೂಚಿಸುತ್ತದೆ.

ಸ್ಕೌಟ್ಸ್ ಅಂಡ್ ಗೈಡ್ನ ಕಾಯ್ದೆಗಳು ಗೌರವ ನಂಬಿಕೆ ಮತ್ತು ದಯೆಗಳನ್ನು ಚಿಕ್ಕಂದಿನಿಂದಲೇ ಮಕ್ಕಳು ಅಳವಡಿಸಿಕೊಳ್ಳಲು ಕಲಿಸುತ್ತದೆ

ಸ್ಕೌಟ್ಸ್ ಅಂಡ್ ಗೈಡ್ಸ್ ನಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವ ಶಿಸ್ತು ಮತ್ತು ಜವಾಬ್ದಾರಿಗಳು ಅವರು ಉನ್ನತ ವ್ಯಕ್ತಿತ್ವವನ್ನು ಹೊಂದಲು ಕಾರಣವಾಗುತ್ತದೆ.
ಸ್ಕೌಟ್ಸ್ ಅಂಡ್ ಗೈಡ್ ತರಬೇತಿಯು ಒಂದು ಜೀವಮಾನದ ಕಲಿಕೆಯಾಗಿದೆ

ಕಾಲಾಂತರದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ತರಬೇತಿ ಪಡೆದವರು ಸ್ವತಂತ್ರ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ. ಮತ್ತೆ ಕೆಲವರು ತರಬೇತಿಯನ್ನು ಮುಂದುವರಿಸಿ ರೋವರ್ಸ್ ಮತ್ತು ರೇಂಜರ್ಸ್ ಗಳಾಗುತ್ತಾರೆ… ಉಳಿದವರು ತಾವು ಕಲಿತ ಮೌಲ್ಯಗಳನ್ನು ಬದುಕಿನಲ್ಲಿ, ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಾರೆ
ಪ್ರಾರಂಭದಲ್ಲಿ ಒಂದು ಕ್ರಿಯೆಯ ಮೂಲಕ ಆರಂಭವಾಗುವ ಸ್ಕೌಟ್ಸ್ ಅಂಡ್ ಗೈಡ್ ಪಯಣವು ಜೀವನೋತ್ಸಾಹವನ್ನು ಹೆಚ್ಚಿಸುವ ಬದುಕಿನ ಕೊನೆಯವರೆಗೂ ನಮ್ಮೊಂದಿಗೆ ಇರುವ ಮುಗಿಯದ ಪಯಣವಾಗಿರುತ್ತದೆ.

-ನಿರೂಪಿಸಿದವರು…
ಶ್ರೀಮತಿ ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್

Don`t copy text!