ಅಕ್ಕಮಹಾದೇವಿಯ ವಚನಗಳಲ್ಲಿ ಸತಿಪತಿ ಭಾವ
ಮಹಾದೇವಿ ಅಕ್ಕ ಚಿಕ್ಕಂದಿನಿಂದಲೂ ಶಿವಭಕ್ತಿ ಯುಕ್ತಳಾಗಿ ಚೆನ್ನಮ್ಮಲ್ಲಿಕಾರ್ಜುನ ಹಂಬಲವನ್ನು ಹಚ್ಚಿಕೊಂಡು ಎಳತನದ ಬಾಲ ಲೀಲೆಯ ಮನೋಭಾವದಿಂದಲೋ, ಸಂಸ್ಕಾರ ವಿಶೇಷದಿಂದಲೂ, ದೈವ ಸಂಕಲ್ಪದಿಂದಲೋ ಪರಮಾತ್ಮನನ್ನೇ ಮದುವೆಯಾಗಬೇಕೆಂದಿದ್ದಳು. ಪರಮಾತ್ಮನು ಸಾಕ್ಷಾತ್ ಆಗಿ ಎದುರಿಗೆ ಬಂದು ಮದುವೆ ಮಾಡಿಕೊಳ್ಳುವನು ಎಂದು ಮುಗ್ಧತನದಿಂದ ಭಾವಿಸಿ ಮನುಷ್ಯರಾದ ಯಾರನ್ನೂ ಗಂಡನನ್ನಾಗಿ ಸ್ವೀಕರಿಸಲು ಒಲ್ಲದೆ ಹಾಗೆಯೇ ಬೆಳೆದು ಯೌವನತಿಯಾಗಿದ್ದಳು. ಬಾಲ್ಯಾವಸ್ಥೆಯಲ್ಲಿ ಶರಣಸತಿ ಲಿಂಗಪತಿಯೆಂಬ ಭಾವ ಸ್ವಭಾವತ ಅಂಕುರಿಸಿ ಪಲ್ಲವಿಸಿತ್ತು.
ತನು ಮನ ಏಕೋ ಭಾವದಿಂದ ಚೆನ್ನಮಲ್ಲಿಕಾರ್ಜುನನೇ ಗಂಡನೆಂದು ಆತನನ್ನು ಹುಡುಕುತ್ತಾ ಹೊರಟಳು.
ಬೆರೆಸುವರೆ ಬೇಗ ತೋರಾ, ಹೊರಹಾಕದಿರಯ್ಯ ನಿಮ್ಮಲ್ಲಿಗೆ ಸಲೆ ಸಂದ ತೊತ್ತಾನು ಎನ್ನ ಹೊರ ಹಾಕದಿರೆಯ್ಯ ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ನಂಬಲೆಂದು ಬಳಿಯ ಬಂದೆನು ಇಂಬುಗೊಳ್ಳಯ್ಯ ಬೇಗದಲಿ.
ಎಂದು ತವಕಿಸುತ್ತ, ಮೊರೆಯಿಡುತ್ತಾ, ಬಳಲುತ್ತಾ ಮಹಾದೇವಿಯಕ್ಕ ಊರೂರು ಅಲೆಯುತ್ತಾ ಕಲ್ಯಾಣ ಪಟ್ಟಣದ ಅನುಭವ ಮಂಟಪಕ್ಕೆ ಬರುತ್ತಾಳೆ. ಅಲ್ಲಿ ನೆರೆದಿದ್ದ ಅಸಂಖ್ಯಾತ ಶರಣ ಶರಣೆಯರು ಅವಳ ವೈವಾಹಿಕ ಜೀವನದ ಬಗೆಗೆ ಪ್ರಶ್ನೆಗಳನ್ನು ಕೇಳುತ್ತಾರೆ ಆಗ ಅಕ್ಕಮಹಾದೇವಿ ತನ್ನ ಗಂಡನ ಪರಿಚಯವನ್ನು ಮಾಡಿಕೊಡುವಳು
ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ, ಚೆಲುವಂಗಾನೊಲಿದೆನವ್ವ, ಎಡೆಯಿಲ್ಲದ, ಕಡೆಯಿಲ್ಲದ, ತೆರಹಿಲ್ಲದ, ಕುರುಹಿಲ್ಲದ, ಚೆಲುವಂಗಾನೊಲಿದೆ ಎಲೆ ಅವ್ವಾ ನೀನು ಕೇಳಾ ತಾಯೆ. ಭವವಿಲ್ಲದ, ಭಯವಿಲ್ಲದ, ನಿರ್ಭಯ ಚೆಲುವಂಗೆ ನಾನೊಲಿದೆ ಇದು ಕಾರಣ ಚೆನ್ನಮಲ್ಲಿಕಾರ್ಜುನ ಚೆಲುವ ಗಂಡನೆನಗೆ ಈ ಸಾವ, ಕೆಡುವ, ಗಂಡರನೊಯ್ದು ಒಲೆಯೊಳಗಿಕ್ಕು ಎಂಬ ದಿಟ್ಟ ನಿಲುವನ್ನು ಅಕ್ಕಮಹಾದೇವಿ ಅನುಭವ ಮಂಟಪದ ಎಲ್ಲಾ ಶರಣ ಶರಣೆಯರಿಗೆ ಚನ್ನಮಲ್ಲಿಕಾರ್ಜುನನೇ ತನ್ನ ಪಾರಮಾರ್ಥಿಕ ಗಂಡ ಎಂದು ಸ್ಪಷ್ಟಪಡಿಸುತ್ತಾಳೆ. ಅನುಭವ ಮಂಟಪದಲ್ಲಿರುವ ಎಲ್ಲರೂ ಅವಳ ಜ್ಞಾನ ಭಕ್ತಿ ವೈರಾಗ್ಯಗಳ ಸ್ವರೂಪವನ್ನು ಕಂಡು ಮೂಕವಿಸ್ಮಿತರಾಗುತ್ತಾರೆ. ಆ ಸಂದರ್ಭದಲ್ಲಿ ಬಸವಣ್ಣನವರು ಮಹಾದೇವಿಯಕ್ಕನನ್ನು ಆಶೀರ್ವದಿಸಿ ದೀಕ್ಷಾ ವಿವಾಹವನ್ನು ಮಾಡಿಸುತ್ತಾರೆ.ಆಗ ಅಕ್ಕ ಮಹಾದೇವಿ ಹೇಳಿದ ಮಾತೇನೆಂದರೆ
ಗುರುವೇ ತೆತ್ತಿಗನಾದ, ಲಿಂಗವೇ ಮದುವಣಿಗನಾದ,ಆನು ಮದುವಳಿಗೆಯಾದೆನು. ವಸುದೆಯ ಭಕ್ತರೆಲ್ಲರೂ ನಿಬ್ಬಣಿಗರಾದರು. ಕೊಟ್ಟರು ಸಾದೃಶ್ಯವಪ್ಪ ಗಂಡ ನೋಡಿ. ಇದು ಕಾರಣ ಚೆನ್ನಮಲ್ಲಿಕಾರ್ಜುನನೇ ಗಂಡನೆನಗೆ
ಯಾವಾಗ ಅನುಭವ ಮಂಟಪದಲ್ಲಿ ಎಲ್ಲ ಶರಣೆಮರ ಸಮ್ಮುಖದಲ್ಲಿ ದೀಕ್ಷಾ ವಿವಾಹವನ್ನು ಆದಳೊ ಮುಂದೆ ಚೆನ್ನಮ್ಮಲ್ಲಿಕಾರ್ಜುನನ್ನು ಕುರಿತು ಈ ತೆರನಾಗಿ ಹೇಳುತ್ತಾಳೆ.
ಹರನೇ ನೀ ನನಗೆ ಗಂಡನಾಗಬೇಕೆಂದು ಅನಂತಕಾಲ ತಪ್ಪಿಸಿದ್ದೆ ನೋಡಾ. ಹಸೆಯ ಮೇಲಣ ಮಾತ ಬೆಸಗೊಳಲಟ್ಟಿದರೆ, ಶಶಿಧರನ ಹತ್ತಿರಕ್ಕೆ ಕಳುಹಿದರೆಮ್ಮವರು ಭಸ್ಮವನೆ ಹೂಸಿ ಕಂಕಣವನೇ ಕಟ್ಟಿದರು ಚೆನ್ನಮ್ಮಲ್ಲಿಕಾರ್ಜುನಯ್ಯ ನನಗೆ ನೀನಾಗಬೇಕೆಂದು
ಹೀಗೆ ಅಕ್ಕ ಮಹಾದೇವಿ ಚೆನ್ನಮಲ್ಲಿಕಾರ್ಜುನಲ್ಲಿ ಪತಿ ಭಾವ ತೋರಿದವಳಾಗಿ ಬಾಲ್ಯದಲ್ಲಿ ಕಂಡ ಕನಸನ್ನು ನನಸಾಗಿಸಿಕೊಳ್ಳವಳು.
ನಾನು ನಿನಗೊಲಿದೆ, ನೀನು ಎನಗೊಲಿದೆ.ನೀನೆನ್ನಗಲದಿಪ್ಪೆ,ನಾ ನಿನ್ನ ಅಗಲದಿಪ್ಪೆನಯ್ಯಾ.ನಿನಗೆ ನನಗೆ ಬೇರೊಂದು ಠಾವುಂಟೆ? ನೀನು ಕರುಣಿ ಎಂಬುದ ನಾನು ಬಲ್ಲೆನು.ನೀನಿರಿಸಿದ ಗತಿಯೊಳಗೆ ಇಪ್ಪವಳಾನಯ್ಯ.ನೀನೆ ಬಲ್ಲೆ ಚೆನ್ನಮಲ್ಲಿಕಾರ್ಜುನಾ