ಅಕ್ಕ ಮಹಾದೇವಿಯ ಹಿರಿಮೆ
ಆಡಂಬರ, ವೈಭವ, ಭೋಗದ ಜೀವನ ತೊರೆದು
ವೈರಾಗ್ಯ ಭಾವದ ದೀಪ್ತಿಯಾದವಳು ಅಕ್ಕ ಮಹಾದೇವಿ
ಮಹಿಳಾ ಚಳುವಳಿಯ ಪ್ರಮಥ ಕವಯಿತ್ರಿ
ಉಡುತಡಿಯ ಶರಣೆ ಅಕ್ಕಮಹಾದೇವಿ
ಲೌಕಿಕ ಭವಿತನವ ಧಿಕ್ಕರಿಸಿ
ಕೇಶಾಂಬರಿಯಾಗಿ ಚೆನ್ನಮಲ್ಲಿಕಾರ್ಜುನನ್ನೇ ಪತಿಯೆಂದು ಅರಸಿ ಹೋದ ಅನುಭಾವಿ ಅಕ್ಕಮಹಾದೇವಿ
ಹಸಿವಾದಡೆ ಭಿಕ್ಷಾನ್ನಗಳುಂಟು
ತೃಷಿಯಾದಡೆ ಕೆರೆ ಬಾವಿಗಳುಂಟು ಎಂದು ಲೋಕಾನುಭವಕ್ಕೆ ಕನ್ನಡಿಯಾದ ಕನ್ನಡತಿ ಅಕ್ಕಮಹಾದೇವಿ
ಕಲ್ಯಾಣದ ಅನುಭವ ಮಂಟಪದಲ್ಲಿ
ಶರಣ ಶರಣೆಯರ ಮಧ್ಯದಲ್ಲಿ
ದಿವ್ಯ ಸ್ವರೂಪ
ತೇಜಸ್ವಿನಿಯಾದವಳು ಅಕ್ಕಮಹಾದೇವಿ
ಅಲ್ಲಮನ ಪ್ರಶ್ನೆಗೆ
ಅಂಜದೆ ಉತ್ತರವ ಕೊಟ್ಟು
ಬಸವಣ್ಣ, ಚೆನ್ನಬಸವಣ್ಣ, ಸಿದ್ದರಾಮರಿಗೂ ತಾಯಿಯಾದವಳು ಅಕ್ಕಮಹಾದೇವಿ
ಹರಿಹರನ ರಗಳೆ
ಅಕ್ಕನ ವ್ಯಕ್ತಿತ್ವವನ್ನು ಉತ್ತುಂಗಕ್ಕೊಯ್ದು
ಹೆಣ್ತನದ ಎರಕವಾದವಳು ಅಕ್ಕಮಹಾದೇವಿ
ಎಚ್. ತಿಪ್ಪೇರುದ್ರ ಸ್ವಾಮಿಯ ‘ಕದಳಿಯ ಕರ್ಪೂರ’ ಪುಟಗಳಲ್ಲಿ ಜೀವನ ಚಿತ್ರಪಟಕ್ಕೆ ಚೌಕಟ್ಡಿನ ಮೆರುಗು ಹೆಚ್ಚಿಸಿದ ಸ್ತ್ರೀ ಕುಲದ ಪತಾಕೆಯಾದವಳು ಅಕ್ಕ ಮಹಾದೇವಿ !
–ಸ್ವರೂಪರಾಣಿ ಎಸ್. ನಾಗೂರೆ