ನನ್ನಪ್ಪ ನಾನು ಮತ್ತು……
ನನ್ನಪ್ಪ
ತನ್ನ ಕನಸುಗಳಂತೆ ಬೆಳೆಸಿ
ಆದರ್ಶಗಳ ಅಡಿಪಾಯ ಸೂಚಿಸಿ
ನನ್ನ ಸುಖಕೆ ನೋವನು ಅನುಭವಿಸಿ
ಮೌಢ್ಯರ ಮತಿಹೀನ ನುಡಿಗೆ ನರಳಿ
ನನ್ನ ಜೀವನದ ಸತ್ಪಥಕೆ
ಜೀವನವನ್ನೇ ಒತ್ತೆಯಿಟ್ಟಾತ
ನನ್ನಪ್ಪ ನನ್ನ ಪಾಲಿನ ಮಹಾತ್ಮಾ
ಆ ನನ್ನಪ್ಪ
ಕೊನೆಗೂ
ನನ್ನವ್ವನಂತೆ ಕರಗಿದರೂ
ಅನ್ಯರ ಬದುಕಿಗೆ ಬೆವರಿಳಿಸಿಕೊಂಡಾತ
ಅಪವಾದಗಳನು ತಣ್ಣಗೆ ಸಹಿಸಿದಾತ
ನನಗಾಗಿ ಹಿಂಸೆಯನು ಅನುಭವಿಸಿದಾತ
ತುಟಿ ಪಿಟಕ್ಕೆನ್ನದ ಶಾಂತಿಧೂತ
ಧನದಾಹಿಗಳ ಪಾಲಿಗೆ ಅರೆಹುಚ್ಚ
ಆಕಾರಣ
ನನ್ನಪ್ಪ
ದೇವರಿಗಿಂತ ಮಿಗಿಲಾಗಿ
ಮಾನವೀಯ ಮೌಲ್ಯಗಳ ನಿಧಿಯಾಗಿ
ನನ್ನ ಜೀವನದ ತವನಿಧಿಯಾಗಿ
ಸಾಧನೆಯ ಹಿಂದಿನ ಹೊಂಬೆಳಕಾಗಿದ್ದಾನೆ
ಆತನ ಜೀವನ
ಉರಿಯುಂಡ ಕರ್ಪೂರದಂತೆ
ಆದರೂ
ಜೊತೆಗಿದ್ದಾನೆ
ಮಾರ್ಗಸೂಚಿಯಾಗಿದ್ದಾನೆ
ನನ್ನಪ್ಪ
ಎಂದೆಂದಿಗೂ ಅನವರತ ಮುಕ್ತಾತ್ಮ ಮಹಂತ
ಶರಣ ಸಂಗದ ಪರಿಕಲಿಸಿದ ಧೀಮಂತ
ನನ್ನೊಳಗೆ
ಜೀವನೋತ್ಸಾಹದ ಚಿಲುಮೆಯಾಗಿ
ನನ್ನ ದೇಹದ ನಾಡಿಯೊಳಗೆ ರಕ್ತವಾಗಿ ಬೆಸುಗೆಯಾಗಿದ್ದಾನೆ
–ಡಾ. ನಾಹೀರಾ ಕುಷ್ಟಗಿ