ನನ್ನ ತಾಯಿ ನನ್ನ ಮೊದಲ ವೈದ್ಯೆ.

ನನ್ನ ತಾಯಿ ನನ್ನ ಮೊದಲ ವೈದ್ಯೆ

 

 

 

 

 

 

 

 

 

 

ಕಾಟನ್ ಸೀರೆ, ಸದಾ ಹೆಗಲು ಮುಚ್ಚುವ ಸೆರಗು, ಹಣೆಯಲ್ಲಿ ದೊಡ್ಡದಾದ ಕುಂಕುಮ, ಮುಖದಲ್ಲೊಂದು ಮಾಸದ ನಗು. ಸಾದಾಸೀದ ಹೆಣ್ಣು ಮಗಳು. ಯಾವಾಗಲು ನೇರ ಮಾತು. ಸಣ್ಣ ಮನೆಯೊಂದರಲ್ಲಿ ಸರಳ ಜೀವನ. ಗುರು ಖಾಸ್ಗತೇಶ್ವರ ಸ್ವಾಮಿಗಳ ಪರಮಭಕ್ತೆ. ಸದಾ ನಗು ಮುಖದಲ್ಲಿ ನಡೆದು ಬರುತ್ತಿದ್ದರೆ, ಜೀವನ್ಮರಣದ ನಡುವೆ ಹೋರಾಡುತ್ತಿರುವವರ ಕಣ್ಣಲ್ಲಿ ಭರವಸೆಯ ಬೆಳಕು.

Business ಮಾಡುವ ಕುಟುಂಬದಿಂದ ಬಂದು ರೈತಳಾಗಿ, ಹತ್ತು ಮಕ್ಕಳ ತಾಯಾಗಿ, ನಮ್ಮಮ್ಮಾ ಸಾಗಿದ ದಾರಿಯುದ್ದಕ್ಕೂ ಬರೀ ಕಷ್ಟಗಳ ಸರಮಾಲೆ. ನಮ್ಮೆಲ್ಲರ ಸೇವೆಯೇ ಪರಮ ಧೈಯವಾಗಿಸಿಕೊಂಡಿದ್ದಳು.
ಮಮತೆಯ ಮಡಿಲು, ತ್ಯಾಗದ ಒಡಲು ಆಗಿರುವ ದೈವಸ್ವರೂಪಿಯಾದ ನಮ್ಮ ತಾಯಿ ನಮ್ಮನ್ನು ಅಗಲಿ 3 ವರ್ಷ ಕಳೆದವು.
ಇವತ್ತು ವೈದ್ಯರ ದಿನವಾಗಿರುವದರಿಂದ ನನ್ನ ತಾಯಿ ತುಂಬಾ ನೆನಪಾದಳು  ಇಲ್ಲಿ, “ವೈದ್ಯೋ ನಾರಾಯಣೋ ಹರಿಃ ನನ್ನ ತಾಯಿ” ನನ್ನ ತಾಯಿಯ ಪ್ರೀತಿ, ವಾತ್ಸಲ್ಯ, ನಿಸ್ವಾರ್ಥ ಸೇವೆ, ಪರಿಶ್ರಮ ಮತ್ತು ತ್ಯಾಗವನ್ನು ಮರೆಯಲು ಸಾಧ್ಯವೇ?

ಪ್ರಾರಂಭದಲ್ಲಿ ವೈದ್ಯನು ತಾಯಿ ಯ ಪಾತ್ರವನ್ನು ವಹಿಸಬೇಕಾಗುತ್ತದೆ. ಅನಂತರ ಜವಾಬ್ದಾರಿಯುತವಾದ ತಂದೆ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ತದನಂತರ ಆಧ್ಯಾತ್ಮಿಕ ಜ್ಞಾನ ಸೇರಿಸಿ ಗುರುಗಳ ಪಾತ್ರವನ್ನು ವಹಿಸಬೇಕು. ಗುರುಗಳ ಪಾತ್ರವನ್ನು ವಹಿಸಬೇಕಾದರೆ ಆತ್ಮಜ್ಞಾನ ವೈದ್ಯನಿಗೆ ಇರಲೇಬೇಕು. ಆತ್ಮಜ್ಞಾನ ಇರಬೇಕಾದರೆ ನಾರಾಯಣನು ಆಗಲೇಬೇಕು. ಅಂದರೆ, ಯೋಗೀಶ್ವರನು ಆಗಲೇಬೇಕು. ಧ್ಯಾನ ವಿದ್ಯೆಯನ್ನು ಅಭ್ಯಸಿಸಿ ಆತ್ಮಾನುಭವವನ್ನು ಹೊಂದಿರುವ ವೈದ್ಯರೇ ನಿಜವಾದ ವೈದ್ಯರು.

ನನ್ನ ತಾಯಿ ವೃತ್ತಿ ಯಲ್ಲಿ ವೈದ್ಯಳು ಅಲ್ಲದೆ ಹೋದರು ಕೂಡಾ ಮನೆಯ ಮದ್ದು ನಮ್ಮೆಲ್ಲ ರೋಗಕ್ಕೂ ರಾಮಬಾಣವಾಗಿತ್ತು. ಅನಾರೋಗ್ಯದ ಸಮಯದಲ್ಲಿ ಅವಳ ಉಪಸ್ಥಿತಿ ಮತ್ತು ಆರೈಕೆ ಚೇತರಿಕೆಯ ಮೇಲೆ ತುಂಬಾ ಪರಿಣಾಮ ಬೀರುತಿತ್ತು. ನಗುಮೊಗದಿಂದ ಕೊಡುವ ಆತ್ಮಷ್ಟೈರ್ಯ ಮತ್ತು ಸಾಂತ್ವನ ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ಶಾರೀರಕ ಖಾಯಿಲೆಗಳಿಂದ ಗುಣವಾಗುವದಕ್ಕೆ ಮುಖ್ಯವಾಗಿ ಕಾರ್ಯನಿರ್ವಹಿಸುತಿತ್ತು .

ತಾಯಿಯ ಇನ್ನೊಂದು ಹೆಸರೆ ತ್ಯಾಗ ಮತ್ತು ಬಲಿದಾನ. ತಾಯಿ ಇಲ್ಲದ ಜಗತ್ತು ಊಹಿಸಲಸಾಧ್ಯ. ತಾಯಿಯ ಪ್ರೀತಿ ಅಮರ. ಅಮ್ಮ ಅಂದರೆ ಹಾಗೆ ಪದಗಳಿಗೂ ಸಿಗದ ಕವಿತೆ, ವರ್ಣನೆಗೂ ಎಟುಕದ ಕಾವ್ಯ.

—-ಪ್ರಭಾವತಿ ಹಿರೇಮಠ – ಹುಬ್ಬಳ್ಳಿ

Don`t copy text!