ಮುಂಡರಗಿಯಲ್ಲಿ 20 ನೆಯ ಶರಣ ಚಿಂತನ ಮಾಲೆ

ಮುಂಡರಗಿಯಲ್ಲಿ 20 ನೆಯ ಶರಣ ಚಿಂತನ ಮಾಲೆ

 

ಬಸವಣ್ಣನವರು ವಿಶ್ವದ ಮೊದಲ ಸಮಾಜವಾದಿ ಚಿಂತಕ.ಮೌಲ್ಯಗಳ ಜೊತೆಗೆ ಜಾತ್ಯತೀತ ಸಮಾಜ ರಚನೆ ಮಾಡಬಯಸಿ ಯಶಸ್ವಿಯಾದ ಕ್ರಾಂತಿ ಪುರುಷ. ಬಸವಾದಿ ಪ್ರಮಥರ ಮೂಲ ಮಂತ್ರ ಕಾಯಕವೇ ಕೈಲಾಸ. 20ನೇ ಶತಮಾನದಲ್ಲಿ ಅಮೆರಿಕಾದ ಅಧ್ಯಕ್ಷರಾಗಿದ್ದ ಜಾನ್ ಅಬ್ರಹಾಂ ಬಯಸಿದ ಪ್ರಜಾಪ್ರಭುತ್ವ ಮಾದರಿಯನ್ನು ನಮ್ಮ ಕನ್ನಡ ನಾಡಿನಲ್ಲಿ 12ನೇ ಶತಮಾನದಲ್ಲಿ
ಸರ್ವರಿಗೂ ಲೇಸನ್ನು ಬಯಸುವ ಪ್ರಭುತ್ವ ಮಾದರಿಯನ್ನು ಬಸವಾಧೀಶ ಶರಣರು ನಮಗೆ ನೀಡಿದ್ದರು ಎಂದು ಆರ್ ಕೆ ರಾಯನ ಗೌಡರ್ ಹೇಳಿದರು.

ಅವರು ಮುಂಡರಗಿ ತಾಲೂಕ ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಚೈತನ್ಯ ಶಿಕ್ಷಣ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಶರಣ ಚಿಂತನ ಮಾಲಿಕೆ 20ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವ್ಯಕ್ತಿಗೆ ಆರೋಗ್ಯವೆ ಸಂಪತ್ತು. ದೇಶಕ್ಕೆ ನೈತಿಕತೆಯೇ ಸಂಪತ್ತು ಎಂಬುದನ್ನು ಸಾಬೀತುಪಡಿಸಿದ್ದ ಸಮಾಜ ನಮ್ಮದು. ಅತ್ಯಂತ ಕಲುಷಿತವಾಗಿರುವ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯ ಪ್ರಸ್ತುತ ದಿನಮಾನಗಳಲ್ಲಿ ಮತ್ತೊಮ್ಮೆ ಬಸವಣ್ಣನವರು ಪ್ರತಿಪಾದಿಸಿದ ಸಾಮಾಜಿಕ ಮೌಲ್ಯಗಳ ಪುನರುತ್ಥಾನವಾಗಬೇಕಿದೆ ಎಂದು ಅವರು ಪ್ರತಿಪಾದಿಸಿದರು.

ಶರಣ ಚಿಂತನ ಮಾಲಿಕೆಯ 20ನೇ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ಆಗಮಿಸಿದ್ದ ಕ. ರಾ. ಬೆಲ್ಲದ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಜೆ ಕುಮಾರ್ ಅವರು ಉಪೇಕ್ಷಿತ ಶರಣ ಹರಳಯ್ಯನವರ ಕುರಿತು ಮಾತನಾಡಿದರು.
ಹೀನ ಕುಲದಲ್ಲಿ ಹುಟ್ಟಿದರೂ ಕಲ್ಯಾಣದ ಅಂದಿನ ಶರಣರ ಗಣದಲ್ಲಿ ಒಬ್ಬರಾಗಿ, ಕಾಯಕ ನಿಷ್ಠೆಯನ್ನು ಉಳ್ಳವರಾಗಿ ಕಾಯಕ ದಾಸೋಹ ಲಿಂಗಪೂಜೆ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಹರಳಯ್ಯ ಮತ್ತು ಕಲ್ಯಾಣಮ್ಮ ದಂಪತಿಗಳ ಬದುಕು ಆದರ್ಶಮಯವಾದುದು. ಪತಿಗೆ ಸರಿಯಾದ ಮಾರ್ಗದರ್ಶನವನ್ನು ಮಾಡುವ ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮನವರದು ಕೂಡ ಶರಣ ಬದುಕು ಎಂದು ಅವರು ನೆನೆದರು. ಹರಳಯ್ಯನವರ ಬದುಕಿನ ಅತಿ ದೊಡ್ಡ ಘಟನೆಯನ್ನು ವಿವರಿಸಿದ ಉಪನ್ಯಾಸಕರು ಹರಳಯ್ಯನವರ ಒಂದು ಶರಣ ಸಮರ್ಪಣೆಗೆ ಶರಣು ಶರಣಾರ್ಥಿ ಎಂದು ಬಸವಣ್ಣನವರು ನುಡಿದ ಕಾರಣ ದಂಪತಿಗಳಿಬ್ಬರು ತಮ್ಮ ತೊಡೆಯ ಚರ್ಮವನ್ನು ಕತ್ತರಿಸಿ ಅವರಿಗೆ ಪಾದುಕೆಯನ್ನಾಗಿ ಮಾಡಿ ಹೊಲಿದು ತಂದು ಕೊಟ್ಟ ಪ್ರಸಂಗವನ್ನು ಸವಿವರವಾಗಿ ವರ್ಣಿಸಿದ ಅವರು ಯಾವುದೇ ರೀತಿಯ ಸಾಮಾಜಿಕ ಭೇದಭಾವಗಳನ್ನು ತೋರದ ಅಂದಿನ ಸಮ ಸಮಾಜದಲ್ಲಿ ಮಾನವೀಯತೆಯ ಮುನ್ನೆಲೆಯನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಆರ್ ಎಲ್ ಪೊಲೀಸ್ ಪಾಟೀಲ್ ಅವರು ಶರಣರ ಬದುಕು, ಮತ್ತು ವಚನಗಳ ಬರಹ ನಮಗೆ ಕೇವಲ ದಾರಿದೀಪವಲ್ಲ…. ತೋರುದೀಪಗಳು ಎಂದು ಬಣ್ಣಿಸಿದರು. ಅಂದಿನ ಕಲ್ಯಾಣದ ಅನುಭವ ಮಂಟಪದಲ್ಲಿ
ಪದವಿ, ಉದ್ಯೋಗಗಳು ವ್ಯಕ್ತಿಯ ವ್ಯಕ್ತಿತ್ವದ ಅಳತೆಗೋಲುಗಳಾಗಿರಲಿಲ್ಲ…. ನಡತೆಯೇ ಅಳತೆಗಗೋಲಾಗಿತ್ತು. ಇಂಗ್ಲೆಂಡ್ ನ ತಿಯೋಡೋರ್ ಎಂಬ ವಿದ್ವಾಂಸರು ಬಸವಣ್ಣನವರ ಕೇವಲ ಐದು ವಚನಗಳನ್ನು ಓದಿ ಶರಣ ಜೀವನ ಮತ್ತು ಚಿಂತನ ಶೈಲಿಯ ಪ್ರಭಾವಕ್ಕೆ ಒಳಗಾಗಿದ್ದರು ಎಂದರೆ ನಮ್ಮ ಯುವ ಜನಾಂಗಕ್ಕೆ ಏಕೆ ಸಾಧ್ಯವಿಲ್ಲ ಎಂದು ಅವರು ಕಳಕಳಿಯನ್ನು ವ್ಯಕ್ತಪಡಿಸಿದ್ದರು. ಇಂತಹ ಚಿಂತನ ಮಾಲೆಗಳಲ್ಲಿ ಯುವಕರು ಹೆಚ್ಚು ಭಾಗವಹಿಸುವ ಅವಶ್ಯಕತೆಯಿದ್ದು, ಆ ಮೂಲಕ ಶರಣರು ಪ್ರತಿಪಾದಿಸಿದ ಉನ್ನತ ಸಾಮಾಜಿಕ ಮೌಲ್ಯಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಅವರು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ವೀಣಾ ಪಾಟೀಲ್ ಅವರು ಸಮ ಸಮಾಜದ ನಿರ್ಮಾಣದ ಕನಸು ಹೊತ್ತ ಬಸವಣ್ಣನವರಾದಿಯಾಗಿ ಎಲ್ಲಾ ಶರಣರ ತತ್ವ ಚಿಂತನೆಗಳು ಅತ್ಯಂತ ಸರಳವಾಗಿದ್ದು ಅವುಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಬೇಕು. ಶರಣ ಚಿಂತನ ಮಾಲಿಕೆಯ 20ನೇ ಕಾರ್ಯಕ್ರಮ ಇದಾಗಿದ್ದು ಇಲ್ಲಿಯವರೆಗೂ ನಡೆದ ಎಲ್ಲ ಉಪನ್ಯಾಸಗಳನ್ನು ಕ್ರೋಢೀಕರಿಸಿ ಒಂದು ಪುಸ್ತಕವನ್ನು ಹೊರ ತರುವ ಯೋಚನೆ ಮೂರು ಸಂಘಟನೆಗಳಿಗೆ ಇದ್ದು
25ನೇ ಶರಣ ಚಿಂತನ ಮಾಲಿಕೆಯಲ್ಲಿ ಈ ಪುಸ್ತಕವನ್ನು ಬಿಡುಗಡೆ ಮಾಡುವ ಆಶಯವನ್ನು ವ್ಯಕ್ತಪಡಿಸಿದರು.

ನಯನ ಅಳವಂಡಿ ಪ್ರಾರ್ಥನೆಯನ್ನು ಮಾಡಿದರೆ ರತ್ನಾ ಕಾಗನೂರಮಠ ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ. ಎಸ್ ಬಿ ಕರಿಭರಮಗೌಡರ್,
ವಿ ಕೆ ಗುಡದಪ್ಪನವರ್, ಎಂ ಎಸ್ ಶೀರನಹಳ್ಳಿ, ಯುವರಾಜ್ ಮುಂಡರಗಿ, ಎನ್ ಎಸ್ ಅಲೀಪುರ್,
ಎಸ್ ಕೆ ಹುಬ್ಬಳ್ಳಿ, ಶಂಕರ್ ಕುಕುನೂರ್, ಎಂಐ ಮುಲ್ಲಾ, ಕೃಷ್ಣ ಸಾಹುಕಾರ, ಹನುಮರೆಡ್ಡಿ ಇಟಗಿ, ಎಂಎಸ್ ಹೊಟ್ಟಿನ್, ಗೌರಮ್ಮ ಕೊಪ್ಪಳ, ರತ್ನಾ ಕಾಗನೂರ್ ಮಠ, ಜಯಶ್ರೀ ಅಳವಂಡಿ, ಶ್ರೀಮತಿ ಹಿರೇಮಠ, ಮಾನಸ ಅಳವಂಡಿ ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ ಜಿ ಗಚ್ಚಣ್ಣವರ್, ನಾರಾಯಣಪ್ಪ ಗುಬ್ಬಿ ಮುಂತಾದವರು ಉಪಸ್ಥಿತರಿದ್ದರು.

Don`t copy text!