“ತುಂಬಿ ಹರಿದಾವ ಹೊಳೆ ಹಳ್ಳ”
ಧೋಧೋ ಮಳೆಯು ಸುರಿದೈತಿ
ಮುಗಿಲು ಹರಿದು ನೆಲಕ ಬಿದ್ದೈತಿ
ಕಣ್ಣು ಹಾಯ್ದಷ್ಟ ನೀರ ಕಾಣತೈತಿ
ಮಳೆಯ ಆರ್ಭಟ ಜೋರಾಗೈತಿ
ತುಂಬಿ ಹರಿದಾವ ಹೊಳೆ ಹಳ್ಳಗಳು
ಅಬ್ಬೆ ಜೋಗ ಗೋಕಾಕ ಫಾಲ್ಸಗಳು
ಬೆಟ್ಟಗುಡ್ಡದಾಗ ಮಲ್ಲಿಗೆ ಝರಿಗಳು
ಹಾಲಿನ್ಹಂಗ ಉಕ್ಯಾವ ಜಲಧಾರೆಗಳು
ಮುಂಗಾರು ಮಳೆ ಕಳೆಯ ತಂದೈತಿ
ಹೊಲದಾಗ ಬಿತ್ತನೆಯು ಜರುಗೈತಿ
ರೈತನ ಮೊಗದಾಗ ನಗು ಮೂಡೈತಿ
ಮುಂಬರುವ ಮಳೆ ಕೈಯ ಹಿಡಿದೈತಿ
ತಣಿಸೈತಿ ಕಾದ ಧರಣಿಯನ್ನ ಮಳೆ
ತೊಳೆದೈತಿ ಊರು ಕೇರಿಗಳ ಕೊಳೆ
ಮಿಂಚ್ಯಾಳ ಹಸಿರು ಸೀರೆಯಲಿ ಇಳೆ
ತುಂಬ್ಯಾಳ ಸುತ್ತ ನಿಸರ್ಗದಾಗ ಕಳೆ
ಹೂಗಳು ಮುಗಿಲ ನೋಡಿ ನಕ್ಕಾವ
ದುಂಬಿಗಳು ಗುಯ್ಯಂದು ನಲಿದಾವ
ಹಕ್ಕಿಗಳು ಗೂಡಿನಿಂದ ಇಣಿಕ್ಯಾವ
ನವಿಲುಗಳು ಗರಿಗೆದರಿ ಕುಣಿದಾವ
ಚೆಂದೈತಿ ನೋಡ ಮೊಳಕೆಯ ನಗುವು
ಮೂಡೈತಿ ಹೊಸದೊಂದು ಚೈತನ್ಯವು
ಹೆಚ್ಚೈತಿ ಪ್ರಕೃತಿಯ ಸೌಂದರ್ಯವು
ಕುಣಿದೈತಿ ಖುಷಿಯಿಂದ ತನುಮನವು
–ಜಯಶ್ರೀ ಎಸ್ ಪಾಟೀಲ
ಧಾರವಾಡ