ಅರ್ಥಶಾಸ್ತ್ರದಲ್ಲಿ 2025ರ ನೋಬೆಲ್ ಪ್ರಶಸ್ತಿ ವಿಜೇತರು
ಆರ್ಥಿಕ ವಿಜ್ಞಾನದಲ್ಲಿ ಈ ವರ್ಷ ನೋಬೆಲ್ ಪ್ರಶಸ್ತಿಯನ್ನು ಜೋಯೆಲ್ ಮೋಕಿಯರ್, ಫಿಲಿಪ್ ಅಗಿಯೊನ್ ಹಾಗೂ ಪೀಟರ್ ಹೋವಿಟ್ ರವರಿಗೆ ಲಭಿಸಿದೆ. “ಆವಿಷ್ಕಾರ- ಚಾಲಿತ ಆರ್ಥಿಕ ಬೆಳವಣಿಗೆ”- ಕುರಿತು ಸಂಶೋಧನೆ ನಡೆಸಿದ್ದರಿಂದ ಈ ಮೂರು ಜನರಿಗೆ ಈ ವರ್ಷದ ನೋಬೆಲ್ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
ಜೋಯೆಲ್ ಮೋಕಿಯರ್, ನಾರ್ತ್‌ವೆಸ್ಟರ್ನ್ ಯುನಿವರ್ಸಿಟಿ ಇವಾನ್‌ಸ್ಟೋನ್ ಇಲಿನಾಯ್ಸ್, ಯು.ಎಸ್.ಎ. ರವರು ತಾಂತ್ರಿಕ ಪ್ರಗತಿಯ ಮೂಲಕ ಸುಸ್ಥಿರ ಬೆಳವಣಿಗೆಗಾಗಿ ಪೂರ್ವಾಪೇಕ್ಷಿತಗಳನ್ನು ಗುರುತಿಸಿದ್ದಕ್ಕಾಗಿ ಹಾಗೂ
ಫಿಲಿಪ್ ಅಗಿಯೊನ್, ಕಾಲೇಜ್ ಡಿ. ಫ್ರಾನ್ಸ್ ಮತ್ತು INSEAD, ಪ್ಯಾರಿಸ್, ಫ್ರಾನ್ಸ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅ್ಯಂಡ್ ಪೊಲಿಟಿಕಲ್ ಸೈನ್ಸ್ ಯುಕೆ ಮತ್ತು ಪೀಟರ್ ಹೋವಿಟ್, ಬ್ರಾನ್ ಯುನಿವರ್ಸಿಟಿ, ಆರ್.ಐ ಯುಎಸ್ಎ ರವರಿಗೆ ಸಂಯುಕ್ತವಾಗಿ ಸೃಜನಾತ್ಮಕ ವಿನಾಶ ( Creative Destruction) ತತ್ವದ ಮೂಲಕ ಸುಸ್ಥಿರ ಆರ್ಥಿಕ ವೃದ್ಧಿಯ ಸಿದ್ಧಾಂತಕ್ಕಾಗಿ ಈ ಬಾರಿಯ ಅರ್ಥಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇವರು ನಡೆಸಿದ ಸಂಶೋಧನೆಗಳಿಂದಾಗಿ ಹೊಸ ತಂತ್ರಜ್ಞಾನದ ಸಹಾಯದಿಂದ ಸುಸ್ಥಿರ ಬೆಳವಣಿಗೆ ಹೇಗೆ ಸಾಧಿಸಬಹುದು ಎಂಬುದನ್ನು ತಿಳಿಯಬಹುದಾಗಿದೆ.
ಕಳೆದೆರಡು ದಶಕಗಳಲ್ಲಿ ಮನುಕುಲವು ಹಿಂದೆಂದೂ ಕಾಣದ ಅಧಿಕ ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಕಂಡುಕೊಂಡಿದೆ. ಇದಕ್ಕೆ ತಂತ್ರಜ್ಞಾನದಲ್ಲಿ ಸುಸ್ಥಿರ ಆವಿಷ್ಕಾರದ ಹರಿವೇ ಕಾರಣವಾಗಿದೆ. ಆರ್ಥಿಕತೆಯಲ್ಲಿ ಹೊಸ ಆವಿಷ್ಕಾರಗಳಾದಾಗ ಹಳೆಯ ಮಾದರಿಗಳು ಮಾಯವಾಗುವ ಸೃಜನಾತ್ಮಕ ವಿನಾಶವೇ ಸುಸ್ಥಿರ ಅಭಿವೃದ್ಧಿಗೆ ಅನುವು ಮಾಡಿಕೊಡುತ್ತದೆ. ಪ್ರಶಸ್ತಿ ವಿಜೇತರು ಈ ವಿಧಾನಗಳನ್ನು ಬಳಸಿಕೊಂಡು ಅಭಿವೃದ್ಧಿ ಹೇಗೆ ಸಾಧ್ಯವಾಯಿತು ಹಾಗೂ ಸುಸ್ಥಿರ ಬೆಳವಣಿಗೆಗೆ ಏನೇನು ಅಗತ್ಯ ಎಂಬುದನ್ನು ತಮ್ಮ ಸಂಶೋಧನಾ ಕೊಡುಗೆಗಳಲ್ಲಿ ವಿವರಿಸಿದ್ದಾರೆ. ಮನುಜ ಇತಿಹಾಸದ ಬಹುಪಾಲು ಆವಿಷ್ಕಾರಗಳು ಸ್ವಲ್ಪ ಮಟ್ಟಿಗೆ ಕಂಡುಬಂದರೂ ಅವುಗಳಿಂದಾಗಿ ಯಾವುದೇ ರೀತಿಯಲ್ಲಿ ಜನರ ಜೀವನ ಮಟ್ಟವು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಯತ್ತ ಗಣನೀಯವಾಗಿ ಬದಲಾಗಲಿಲ್ಲ.
ಆದರೆ ಇತ್ತೀಚೆಗೆ, ಆರ್ಥಿಕತೆಯಲ್ಲಿ ತಂತ್ರಜ್ಞಾನವು ಅತೀವೇಗವಾಗಿ ಬೆಳೆಯುತ್ತಿದ್ದು, ಹೊಸ ಉತ್ಪನ್ನಗಳು ಹಾಗೂ ಹೊಸ ಉತ್ಪಾದನಾ ವಿಧಾನಗಳನ್ನು ಪರಿಚಯಿಸುತ್ತಿದ್ದರಿಂದ ಹಳೆಯ ವಿಧಾನಗಳು ಬದಲಾಗಿ ಹೊಸತನದ ನಿರಂತರತೆಯಿಂದಾಗಿ ಆರ್ಥಿಕ ಬೆಳವಣಿಗೆ ವೃದ್ಧಿಯಾಗುತ್ತಿದೆ. ಈ ಬದಲಾವಣೆಗೆ ಕ್ರಿಯೇಟಿವ್ ಡಿಸ್ಟ್ರಕ್ಷನ್ ಚಕ್ರವೇ ಆಧಾರವಾಗಿದೆ. ಅದು ಜನರ ಜೀವನ ಮಟ್ಟ, ಉತ್ತಮ ಆರೋಗ್ಯ ಹಾಗೂ ಉತ್ತಮ ಗುಣಮಟ್ಟವನ್ನು ಜನರಿಗೆ ಒದಗಿಸುವಲ್ಲಿ ಯಶಸ್ವಿಯಾಗಿದೆ. ಸೃಜನಾತ್ಮಕ ವಿನಾಶ( ಕ್ರಿಯೇಟಿವ್ ಡಿಸ್ಟ್ರಕ್ಷನ್ ) ಈ ಪದವನ್ನು 1942 ರಲ್ಲಿ ಮೊಟ್ಟಮೊದಲ ಬಾರಿಗೆ ಜೋಸೆಫ್ ಶುಂಪೀಟರ್‌ರವರು ಪರಿಚಯಿಸಿದ್ದರು.
ಜೋಯಲ್ ಮೋಕಿರ್‌ರವರು ಸುಸ್ಥಿರ ಅಭಿವೃದ್ಧಿ ಎಂಬುದು ಹೊಸ ಸಾಮಾನ್ಯ ಸ್ಥಿತಿಯಾಗಲು ಐತಿಹಾಸಿಕ ಮೂಲಗಳನ್ನು ಸಾಧನವಾಗಿ ಬಳಸಿಕೊಂಡಿದ್ದಾರೆ. ಸ್ವ-ಉತ್ಪಾದನಾ ಪ್ರಕ್ರಿಯೆಗಳಲ್ಲಿ ಆವಿಷ್ಕಾರ ಅಥವಾ ನಾವೀನ್ಯತೆಗಳು ಒಂದಕ್ಕೊಂದು ಯಶಸ್ವಿಯಾಗಬೇಕಾದರೆ ಯಾವುದೇ ಕೆಲಸವು ತಾನಾಗಿಯೇ ನಡೆಯುತ್ತದೆ ಎಂದು ತಿಳಿಯುವುದು ಮಾತ್ರವಲ್ಲ ಅದು ಏಕೆ ಹಾಗೂ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ತಿಳಿಯಬೇಕು ಎಂದಿದ್ದಾರೆ. ಕೈಗಾರಿಕಾ ಕ್ರಾಂತಿಯ ಮೊದಲು ಈ ಚಿಂತನೆ ಕಾಣದಾಗಿತ್ತು. ಕೈಗಾರಿಕಾ ಕ್ರಾಂತಿಯಿಂದಾಗಿ ಬ್ರಿಟನ್‌ನಿಂದ ಆರಂಭವಾದ ಆವಿಷ್ಕಾರದ ಪಥವು ಇಡೀ ಜಗತ್ತಿಗೆಯೇ ಆವರಿಸಿತು. ಪ್ರಗತಿಯು ಅಂತ್ಯವಿಲ್ಲದ ಚಕ್ರದಂತೆ ಮುಂದುವರೆಯಿತು. ಆ ಕಾಲದಲ್ಲಿ ಹೊಸ ಅನ್ವಷಣೆಗಳನ್ನು ಹಾಗೂ ಆವಿಷ್ಕಾರಗಳನ್ನು ಸಾಧಿಸುವುದು ಕಷ್ಟಕರವಾಗಿತ್ತು. ಆದ್ದರಿಂದ ಸಮಾಜವು ಹೊಸ ಆಲೋಚನೆಗಳಿಗೆ ತೆರೆದುಕೊಳ್ಳಬೇಕು ಹಾಗೂ ಬದಲಾವಣೆಗಳಿಗೆ ಅವಕಾಶ ನೀಡಿದಾಗ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದು ಅದರ ಮಹತ್ವವನ್ನು ಅವರು ವಿವರಿಸಿದ್ದಾರೆ.
ಫಿಲಿಪ್ ಅಗಿಯೊನ್ ಹಾಗೂ ಪೀಟರ್ ಹೋವಿಟ್ ಇವರು ಕ್ರಿಯೇಟಿವ್ ಡಿಸ್ಟ್ರಿಕ್ಷನ್ ತತ್ವವನ್ನು ಗಣಿತೀಯ ಮಾದರಿಯಲ್ಲಿ 1992 ರಲ್ಲಿ ಪ್ರಚುರಪಡಿಸಿದ್ದಾರೆ. ಈ ತತ್ವದ ಪ್ರಕಾರ ಮಾರುಕಟ್ಟೆಯಲ್ಲಿ ಹೊಸ ಮತ್ತು ಉತ್ತಮ ಉತ್ಪನ್ನಗಳು ಪ್ರವೇಶಿಸಿದಾಗ ಹಳೆಯ ಉತ್ಪನ್ನಗಳು ಹಿನ್ನಡೆ ಅನುಭವಿಸಯತ್ತವೆ. ಇದರಿಂದಾಗಿ ಆವಿಷ್ಕಾರಗಳು ಸೃಜನಾತ್ಮಕವಾಗಿದ್ದರೂ ಅವು ಹಳೆಯ ವಿಧಾನಗಳನ್ನು ಹಾಗೂ ತಂತ್ರಜ್ಞಾನವನ್ನು ನಾಶ ಮಾಡುವುದರಿಂದ ವಿನಾಶಕಾರಿ ಕೂಡ ಆಗಿರುತ್ತವೆ ಎಂದಿದ್ದಾರೆ. ಮುಂದುವರೆದು ಈ ರೀತಿಯಾಗಿ ಸೃಜನಾತ್ಮಕ ವಿನಾಶವುಂಟು ಮಾಡುವ ಸಂಘರ್ಷನಾತ್ಮಕ ಪ್ರಕ್ರಿಯೆಗಳನ್ನು ಸೃಜನಾತ್ಮಕ ವಿಧಾನಗಳಲ್ಲಿಯೇ ನಿರ್ವಹಿಸುವುದು ಅಗತ್ಯವಾಗಿರುತ್ತದೆ, ಇಲ್ಲವೆಂದರೆ ಹಳೆಯ ಸಂಸ್ಥೆಗಳು ಹಾಗೂ ಹಿತಾಸಕ್ತಿ ಗುಂಪುಗಳು ಹೊಸ ಸೃಜನಾತ್ಮಕತೆಗೆ ತಡೆಯುಂಟುಮಾಡುತ್ತವೆ ಎಂದಿದ್ದಾರೆ.
ಹೊಸ ಸಾಮಾನ್ಯತೆ ( ನ್ಯೂ ನಾರ್ಮಲ್)
ಸಾಮಾನ್ಯವಾಗಿ ಅರ್ಥಶಾಸ್ತ್ರಜ್ಞರು ಒಟ್ಟು ದೇಶೀಯ ಉತ್ಪನ್ನ (ಜಿ.ಡಿ.ಪಿ) ದಲ್ಲಿನ ಹೆಚ್ಚಳವನ್ನು ಲೆಕ್ಕಹಾಕುವ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಅಳೆಯುತ್ತಾರೆ. ಆದರೆ ವಾಸ್ತವವಾಗಿ ಅದು ಹಣಕ್ಕಿಂತ ಹೆಚ್ಚಿನ ಅಂಶಗಳನ್ನು ಒಳಗೊಂಡಿರುತ್ತದೆ. ನವೀನ ಔಷಧಿಗಳು, ಸುರಕ್ಷಿತ ಕಾರುಗಳು, ಉತ್ತಮ ಆಹಾರ ಹೆಚ್ಚಿನ ಪರಿಣಾಮಕಾರಿಯಾಗಿ ನಮ್ಮ ಮನೆಯನ್ನು ಬೆಳಗಿಸುವ ವಿಧಾನಗಳು, ಇಂಟರ್ನೆಟ್ ಹಾಗೂ ಹೆಚ್ಚಿನ ದೂರದಲ್ಲಿರುವ ಜನರೊಂದಿಗಿನ ಸಂವಹನಕ್ಕಾಗಿ ಹೆಚ್ಚಿದ ಅವಕಾಶಗಳು ಹೀಗೆ ಇವೆಲ್ಲವೂ ಹೊಸತನದ ಬೆಳವಣಿಗೆಯಲ್ಲಿ ಒಳಗೊಂಡಿರುವ ಅಂಶಗಳಾಗಿವೆ.
ಹೊಸ ವಿಚಾರಗಳನ್ನು ಸಾಕಾರಗೊಳಿಸಲು ಎಲ್ಲಾ ರೀತಿಯ ಜ್ಞಾನ ಅಗತ್ಯವಾಗಿರುತ್ತದೆ. ಇಲ್ಲವೆಂದರೆ ಅದ್ಭುತವಾದ ವಿಚಾರಗಳು ಹಾಗೆಯೇ ಉಳಿದು ಬಿಡುತ್ತವೆ.
ಈ ವರ್ಷದ ಆರ್ಥಿಕ ವಿಜ್ಞಾನದಲ್ಲಿ ನೋಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯು ವಿಜೇತರ ಸಂಶೋಧನಾ ಕಾರ್ಯಗಳನ್ನು ಶ್ಲಾಘಿಸಿ ಈ ರೀತಿ ಹೇಳಿದೆ – “ಆರ್ಥಿಕ ಪ್ರಗತಿ ಎಂಬುದು ಎಂದಿಗೂ ಸ್ವಯಂಪ್ರೇರಿತವಾಗಿ ನಡೆಯುವುದಿಲ್ಲ. ಅದಕ್ಕಾಗಿ ಸೃಜನಾತ್ಮಕ ವಿನಾಶ ಪ್ರಕ್ರಿಯೆಗಳನ್ನು ನಾವು ಉಳಿಸಿಕೊಳ್ಳಬೇಕು ಇಲ್ಲವಾದರೆ ನಾವು ಮತ್ತೇ ಸ್ಥಗಿತದ ನಿಶ್ಚಲ ಸ್ಥಿತಿಗೆ ಮರಳುವ ಅಪಾಯವಿದೆ” ಎಂದಿದ್ದಾರೆ.
ಭಾರತಕ್ಕೆ ಅನ್ವಯಿಸುವಂತೆ ಈ ಮೂರೂ ಜನರ ಸಂಶೋಧನಾ ಕೊಡುಗೆಗಳ ವಿಚಾರಧಾರೆಗಳನ್ನು ವಿವರಿಸುವುದಾದರೆ- ಹೊಸ ಆವಿಷ್ಕಾರಗಳೇ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುತ್ತಿರುವುದನ್ನು ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ದಂತಹ ಯೋಜನೆಗಳಲ್ಲಿ ಕಾಣಬಹುದಾಗಿದೆ. ಈ ಹೊಸ ಸಂಶೋಧನೆಗಳು ಹೊಸ ಉದ್ಯಮ, ಹೊಸ ಉದ್ಯಮಶೀಲತೆಗಳೊಂದಿಗೆ ಹೊಸ ತಂತ್ರಜ್ಞಾನ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕಾಗಿದೆ. ಕ್ರಿಯೇಟಿವ್ ಡಿಸ್ಟ್ರಕ್ಷನ್ ಅಂದರೆ ಹೊಸ ಆವಿಷ್ಕಾರಗಳಿಂದಾಗಿ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬಂದಾಗ ಹಳೆಯವು ಮಾಯವಾಗುತ್ತಾ ಬರುತ್ತವೆ ಎಂಬುದನ್ನು ಫಿನ್‌ಟೆಕ್ ಹಣಕಾಸು ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು, ಎಲೆಕ್ಟ್ರಿಕ್ ವಾಹನಗಳು ಹಳೆಯ ಮಾದರಿಯ ವಾಹನಗಳಿಗೆ ಸವಾಲು ಹಾಕುತ್ತಿರುವುದನ್ನು ಗುರುತಿಸಬಹುದು. ಈ ಸೃಜನಾತ್ಮಕ ವಿನಾಶದಿಂದಾಗಿ ಹಳೆಯ ಉದ್ಯಮಗಳು ಹಾಗೂ ಉದ್ಯೋಗಗಳು ಮಾಯವಾಗಿ ಹೊಸದಾದ ಅವಕಾಶಗಳು ಅಂದರೆ ಗ್ರೀನ್ ಎನರ್ಜಿ, ಇ ಕಾಮರ್ಸ್‌ಗಳು ಇತ್ಯಾದಿ ಏಳಿಗೆ ಹೊಂದುತ್ತಿರುವುದನ್ನು ಕಾಣಬಹುದಾಗಿದೆ.
ಈ ಮೂರು ಜನ ವಿಜೇತರ ಸಂಶೋಧನೆಗಳಲ್ಲಿನ ವಿಚಾರಗಳಂತೆ ಭಾರತದಲ್ಲಿ ನಾವೀನ್ಯ ಆವಿಷ್ಕಾರಗಳು ಬೆಳೆದು ಅಧಿಕ ಅಭಿವೃದ್ಧಿ ಸಾಧನೆಗಾಗಿ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ಹೆಚ್ಚಿನ ಹೂಡಿಕೆ, ಮುಕ್ತ ಸಾಮಾಜಿಕ ವಾತಾವರಣ, ನೀತಿ ಆಧಾರಿತ ಸೃಜನಾತ್ಮಕ ಬದಲಾವಣೆಗಳು ಬೆಳೆದರೆ ಎಲ್ಲವನ್ನೂ ಒಳಗೊಳ್ಳುವ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಬಹುದಾಗಿದೆ.
–ಫರ್ಹಾನಾಜ಼್ ಮಸ್ಕಿ
ಲೇಖಕರು ಹಾಗೂ
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೆಲಮಂಗಲ