ಮರಿಯಮ್ಮನಹಳ್ಳಿ ಸೀಮೆಯ ಸಂವೇದನಾಶೀಲ ರಂಗಲೋಕ

ಮರಿಯಮ್ಮನಹಳ್ಳಿ ಸೀಮೆಯ ಸಂವೇದನಾಶೀಲ ರಂಗಲೋಕ

ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಹೆಸರಾಂತ ರಂಗನಟಿ ನಾಗರತ್ನಮ್ಮನವರ ಹೆಸರ ಹಿಂದಿನ ಇನಿಷಿಯಲ್ ‘ಕೆ’ ಎಂದರೆ ಕೇಶವ ರಾಮನಬಂಡಿ ಎಂಬ ಪೂರ್ಣಾರ್ಥ. ಅದನ್ನು ಲೋಕರೂಢಿಯ ಆಡುನುಡಿಯಲ್ಲಿ ಕೆಸರುಬಂಡಿ ಅಂತಲೂ ಕರೆಯೋದುಂಟು. ಹೊಸಪೇಟೆ ಬಳಿಯ ತುಂಗಭದ್ರ ಅಣೆಕಟ್ಟೆ ನಿರ್ಮಾಣದ ಸಂದರ್ಭದಲ್ಲಿ ಮುಳುಗಡೆಯಾದ ನಾರಾಯಣ ದೇವರ ಕೆರೆಯ ವಿಶಾಲ ಪ್ರದೇಶವದು. ಆಗ ಅಲ್ಲಿಂದ ಮರಿಯಮ್ಮನಹಳ್ಳಿಗೆ ಸ್ಥಳಾಂತರಗೊಂಡು ಬದುಕು ಕಟ್ಟಿಕೊಂಡವರು ಈ ಊರವರು. ಅದರಲ್ಲೂ ಪ್ರಮುಖವಾಗಿ ವೃತ್ತಿ ರಂಗಸಂಸ್ಕೃತಿಯ ಪಾರಮ್ಯ ಮೆರೆದವರು ಇಲ್ಲಿನ ಕಲಾವಿದರು. ತನ್ಮೂಲಕ ಮರಿಯಮ್ಮನಹಳ್ಳಿಗೆ ಪ್ರಾದೇಶಿಕ ರಂಗಪ್ರೌಢಿಮೆಯ ಅಸ್ಮಿತೆ ಸಾದ್ಯಂತಗೊಳಿಸಿದವರು.

ಅದೀಗ ಹತ್ತಾರು ಸಾವಿರ ಜನಸಂಖ್ಯೆಯುಳ್ಳ ಪಟ್ಟಣ ಪಂಚಾಯತಿಯ ಎತ್ತರಕೆ ಬೃಹದಾಕಾರ ಬೆಳೆದುನಿಂತ ಊರು ಮರಿಯಮ್ಮನಹಳ್ಳಿ. ತುಂಗಭದ್ರೆಯ ಮುಳುಗಡೆ ಪ್ರದೇಶದ ಕೆಲವರು ಬೇರೆ ಬೇರೆ ಊರುಗಳಿಗೆ ಹೋಗಿ ಸೂರು ಕಟ್ಟಿಕೊಂಡರು. ಇದೆಲ್ಲ ಅಜಮಾಸು ಎಂಬತ್ತು ವರುಷಗಳ ಹಿಂದಿನ ವಿಘಟಿತಗೊಂಡ ಜೀವನ ಕಥನ. ಆಗಿನ್ನೂ ಎಂಟು ವರುಷಗಳ ಹುಡುಗ, ಇದೀಗ ಎಂಬತ್ತೆಂಟು ವರುಷಗಳ ಏರುಪ್ರಾಯದ ಮರಿಯಮ್ಮನಹಳ್ಳಿಯ ಡಾ. ಅಂಬಣ್ಣನವರ ಒಡಲು ಅಂತಹ ಹತ್ತಾರು ಕಥನಗಳ ನೆನಪು ತುಂಬಿದ ಕಡಲು. ಅಂಬಣ್ಣನವರ ಅಮ್ಮ ಬಾರೀಕರ ನಿಂಗಮ್ಮ ವೃತ್ತಿ ರಂಗಭೂಮಿಯ ಅಭಿಜಾತ ಕಲಾವಿದೆ.

ಬೇಸಿಗೆಯಲ್ಲಿ ಬತ್ತಿಹೋದ ತುಂಗಭದ್ರೆಯ ಬರಿದಾದ ಬಯಲೊಡಲು ತೋರಿಸುತ್ತಾ ಅಲ್ಲಿ ಮುಳುಗಿ ಹೋದ ಬಸಾಪುರ, ಆನವೇರಿ, ಹಳ್ಳಳ್ಳಿ ಇನ್ನೂ ಮೊದಲಾದ ಮೂವತ್ಮೂರು ಹಳ್ಳಿಗಳು. ಅಲ್ಲಿದ್ದ ತಮ್ಮ ಮನೆಗಳು, ಆಂಜನೇಯನ ದೇವಸ್ಥಾನ, ಬಯಲಾಟದ ಅಟ್ಟ, ಗೌಡರಮನೆ ಇಲ್ಲೇ ಇತ್ತೆಂದು ಕಳೆದುಹೋದ ಗತ ಕಥನಗಳನ್ನು ಹರದಾರಿಗಳ ದೂರದಿಂದಲೇ ಹಳಹಳಿಕೆಯ ಕಣ್ಮನಗಳಿಂದ ಪಳೆಯುಳಿಕೆಯಂತೆ ಬಣ್ಣಿಸುತ್ತಾರೆ.‌ ಡಾ. ಅಂಬಣ್ಣ ಸೇರಿದಂತೆ ಅವರ ವಾರಗೆಯ ಅನೇಕರು ಅದನ್ನೆಲ್ಲ ಆಗಾಗ ಬೇಸಿಗೆ ತುಂಗಭದ್ರೆಯ ಮಹಾ ಬಯಲಿನತ್ತ ನಿರುತ್ತರವಾಗಿ ನೋಡುತ್ತಿರುತ್ತಾರೆ.

ಆದರೆ ಅದಕ್ಕಿಂತ ಮುಖ್ಯವಾಗಿ ಮರಿಯಮ್ಮನಹಳ್ಳಿಯು, ತುಂಬಿದ ತುಂಗಭದ್ರೆಯ ಸಮ ಸಮಕ್ಕೆ ಸಮೃದ್ಧ ಕನ್ನಡ ರಂಗಸಂಸ್ಕೃತಿಯ ಮಧುರ ಘಮಲು ತುಂಬಿ ತುಳುಕುತ್ತಿರುವ ಊರು. ರಾಜ್ಯಮಟ್ಟದ ಪ್ರಶಸ್ತಿಯಿಂದ ಹಿಡಿದು ರಾಷ್ಟಮಟ್ಟದ ಪದ್ಮಶ್ರೀ ಪ್ರಶಸ್ತಿಯವರೆಗೂ ಈ ಊರಿನ ಹಿರಿಮೆ ಹೆಚ್ಚಿಸಿದೆ. ರಂಗಸಿರಿಯ ವಿವಿಧ ಆಯಾಮಗಳನ್ನು ಹಾಳತವಾಗಿ ಬೆಳಗಿದ ಪ್ರದೇಶ ಮರಿಯಮ್ಮನಹಳ್ಳಿ. ಪರಂಪರೆಯ ವೃತ್ತಿ ರಂಗಭೂಮಿ ಮತ್ತು ಪ್ರಯೋಗಶೀಲ ರಂಗಭೂಮಿ ಕಲಾವಿದರ ಆಡುಂಬೊಲ. ತಲೆಮಾರುಗಳ ರಂಗಚರಿತೆ ಮೆರೆದ ಪ್ರಬುದ್ಧ ರಂಗಕಣಜ. ರಂಗನಾಟಕಗಳನ್ನು ಹದಗೊಳಿಸುವ ಕೇಂದ್ರ.

 

ಈ ಪ್ರದೇಶವು ವೃತ್ತಿ ರಂಗಭೂಮಿಯ ಮೇರು ಕಲಾವಿದರುಗಳ ಕರ್ಮಭೂಮಿ. ಡಿ. ದುರ್ಗಾದಾಸ, ಏಣಗಿ ಕಾಶೀಮಸಾಬ, ಕೋಗಳಿ ಪಂಪಣ್ಣ, ಎಲಿವಾಳ ಸಿದ್ದಯ್ಯ, ಬಯಲಾಟದ ಖಾದರಸಾಬ, ಬಾರೀಕರ ನಿಂಗಮ್ಮ, ಸೇರೆಗಾರ ಸುವರ್ಣಮ್ಮ, ತಳವಾರ ಹನುಮಂತಮ್ಮ, ಕಲ್ಲುಕುಟಿಕರ ಗಂಗಮ್ಮ, ಎಸ್. ರೇಣುಕಾ, ಸುಮಿತ್ರಮ್ಮ, ಸರೋಜಮ್ಮ ಇದೇ ಸಂಭ್ರಮದ ಸಾಲಿಗೆ ಸೇರುವ ಕೆ. ನಾಗರತ್ನಮ್ಮ ಮತ್ತು ಅವರ ಸರೀಕರನೇಕರಿಂದ ತುಂಬಿದ ರಂಗಮಡಿಲು. ಇವರೆಲ್ಲರ ಪೂರ್ವದಲ್ಲಿ ಒಂದು ಶತಮಾನದಷ್ಟು ಹಿಂದೆಯೇ ಈ ಊರು ವೃತ್ತಿ ರಂಗಭೂಮಿಯ ತವರುಮನೆಯಾಗಿತ್ತು. ರಂಗಸಜ್ಜಿಕೆಯ ಮಾಲೀಕ ಅಕ್ಕಸಾಲಿಗರ ಚಿಂತಪ್ಪ, ಗೌಳೇರ ಮೈಲಾರಪ್ಪ, ಕಮ್ಮಾರ ಸೋಮಣ್ಣ, ನರಸಿಂಹಾಚಾರ್ ಇನ್ನೂ ಅನೇಕ ಪೂರ್ವಸೂರಿಗಳು ಕಟ್ಟಿಬೆಳೆಸಿದ ರಂಗಭೂಮಿಯ ಫಲವತ್ತಾದ ನೆಲವಿದು. ಅಂತಹದ್ದೊಂದು ಅಸೀಮ ರಂಗಪರಂಪರೆಯ ಸಾತತ್ಯ ಈ ನೆಲಕ್ಕಿದೆ. ಅಕ್ಕಪಕ್ಕದ ಊರು, ಜಿಲ್ಲೆಗಳ ಕಲಾವಿದರು ಸಮಾಗಮಿಸುತ್ತಿದ್ದ ಮರಿಯಮ್ಮನಹಳ್ಳಿ ರಂಗಭೂಮಿಯ “ಅನುಭವ ಮಂಟಪ”ವಾಗಿತ್ತು.

ಅಂತೆಯೇ ವಲ್ಲಭಾಪುರದ ರಂಗವಿದ್ವಾಂಸ ಎಂ. ಪಿ. ಪ್ರಕಾಶ್ ಅವರಿಗೆ ಈ ಪ್ರಾಂತ್ಯದ ರಂಗಸಂಪನ್ನತೆಯ ಬಗ್ಗೆ ವಿಶೇಷ ಪ್ರೀತಿ ಮತ್ತು ಅಭಿಮಾನವಿತ್ತು. ವೃತ್ತಿ ಮತ್ತು ಹೊಸ ಅಲೆ ಅನ್ನದೇ ಸಮಗ್ರ ರಂಗಭೂಮಿಯ ಕುರಿತು ಅವರದು ದಿವ್ಯಾಸಕ್ತಿ. ಆಧುನಿಕ ರಂಗಸಾಹಿತ್ಯ ಮತ್ತು ರಂಗಪ್ರಯೋಗಗಳ ಬಗ್ಗೆ ಅಗಾಧ ಆಸ್ಥೆ ಹೊಂದಿದ್ದ ಪ್ರಕಾಶರು ಖುದ್ದು ಕಲಾವಿದರೆ ಆಗಿದ್ದರು. ಅವರು ನಾಟಕದಿಂದ ತಪ್ಪಿಸಿಕೊಂಡು ವಿಧಾನಸೌಧಕ್ಕೆ ಹೋಗಿ ಉಪಮುಖ್ಯಮಂತ್ರಿ ಪಟ್ಟ ಏರಿದ್ದರು. ಅವರು ದಾರಿತಪ್ಪಿ ರಾಜಕೀಯ ರಂಗಕ್ಕೆ ಹೋದರೂ ತಮ್ಮ ಪರಮ ಪ್ರೀತಿಯ ರಂಗಭೂಮಿಯನ್ನು ಬದುಕಿನುದ್ದಕ್ಕೂ ಮರೆಯಲಿಲ್ಲ. ಅದನ್ನು ಆದ್ಯತೆಯಂತೆ ಗೌರವಿಸಿದರು.

ವಿಶೇಷವೆಂದರೆ ಹಿಂದುಳಿದ ವಾಲ್ಮೀಕಿ ಕುಲದವರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಅವರೇ ಅಧಿಕ ಸಂಖ್ಯೆಯ ಕಲಾವಿದರು. ಬಹುಪಾಲು ಅವರೆಲ್ಲರೂ ಮಹಿಳೆಯರು ಮತ್ತು ದೇವದಾಸಿಯರು. ರಂಗಸಾನಿಯರೆಂದೆ ಕರೆಯಬಹುದಾದ ಅವರು ಗಂಧರ್ವರೇ ಆಗಿದ್ದರು. ಅಂಥವರ ಪೈಕಿ ಪ್ರಸ್ತುತ ಎರಡು ಕೈ ಬೆರಳೆಣಿಕೆಯಷ್ಟು ಈಗ ಸಿಗಬಲ್ಲರು. ಮರಿಯಮ್ಮನಹಳ್ಳಿಯ ರಂಗಗರಡಿಯಲ್ಲೇ ಬೆಳೆದು ರಾಷ್ಟ್ರಮಟ್ಟಕ್ಕೇರಿದವರು ಕಲ್ಕಂಬದ ಜೋಗತಿ ಮಂಜಮ್ಮ. ಜನಪದ ರಂಗಭೂಮಿಯ ಮಂಜಮ್ಮಗೆ ಪದ್ಮಶ್ರೀ ಪ್ರಶಸ್ತಿ ಬಂದುದು ಹೆಮ್ಮೆಯ ಸಂಗತಿ. ಮಂಜಮ್ಮ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆಯಾಗಿದ್ದರು. ಅವರ ಕ್ರಿಯಾಶೀಲ ರಂಗಬದುಕು ಸಾಧನೆಗಳ ಕುರಿತಾದ ಕೃತಿ ವಿಶ್ವವಿದ್ಯಾಲಯಗಳ ಪಠ್ಯಪುಸ್ತಕ ಆಗಿದ್ದಿದೆ. ಆಧುನಿಕ ರಂಗಭೂಮಿಯ ಮತ್ತೊಂದು ಪ್ರತಿಭೆ, ಬಿ.ವಿ. ಕಾರಂತ ಪ್ರಶಸ್ತಿ ಪುರಸ್ಕೃತರಾದ ಹೊಸಪೇಟೆಯ ಭಾವೈಕ್ಯದ ಅಬ್ದುಲ್ಲಾ.

ಈ ನೆಲದ ಗ್ರಾಮ್ಯಜನ್ಯ ರಂಗಭೂಮಿಯ ತಾಯಿಬೇರು ಪ್ರಾಬಲ್ಯವು ಪ್ರಯೋಗಶೀಲ ರಂಗಕ್ಕೂ ಅಂತಃಶ್ರೋತಗೊಂಡಿದೆ. ಅದು ಹೊಸಪೇಟೆಯನ್ನೂ ಒಳಗೊಂಡಿದೆ. ಪರಿಣಾಮ ಎನ್.ಎಸ್.ಡಿ. ಪದವೀಧರೆ ಡಾ. ಸಹನಾ ಪಿಂಜಾರ ಸೇರಿದಂತೆ ಹತ್ತಾರು ರಂಗಪ್ರತಿಭೆಗಳು ರಾಜ್ಯಮಟ್ಟದಲ್ಲಿ ಹೆಸರು ಮಾಡುವಂತಾಗಿದೆ. ರಂಗನಿರ್ದೇಶಕ ಬಿಎಂಎಸ್ ಪ್ರಭು, ಡಿ. ಹನುಮಕ್ಕ, ರಂಗಚೌಕಿಯ ಬಿ. ಸರ್ದಾರ, ಕಿರುತೆರೆ ಧಾರಾವಾಹಿಗಳ ನಟ ಜಹಾಂಗೀರ, ತೀರಿಹೋದ ಚಿದಾನಂದಗೌಡ, ಜೋಗಿನಕಟ್ಟೆ ಯೋಗಾನಂದ, ತಳವಾರ ನವೀನ್, ಅಕ್ಕಮ್ಮ, ಪ್ರಶಾಂತ್, ನಿರ್ಮಲ, ರವಿ, ಮಜಾಭಾರತದ ಯೋಗೀಶ್, ಮೈಸೂರು ರಂಗಾಯಣದ ಪ್ರಸಿದ್ದ ನಟ ಮತ್ತು ನಿರ್ದೇಶಕ ಹುಲಗಪ್ಪ ಕಟ್ಟೀಮನಿ. ಹುಲಗಪ್ಪ ನಿವೃತ್ತಿಯ ನಂತರವೂ ತಮ್ಮನ್ನು ಪೂರ್ಣಪ್ರಮಾಣದಲ್ಲಿ ರಂಗನಿರ್ದೇಶಕನೆಂದು ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ. ಇವರಲ್ಲದೇ ಇನ್ನೂ ಅನೇಕ ಪ್ರಯೋಗಶೀಲ ರಂಗಕರ್ಮಿಗಳು ಇದೇ ಸೀಮೆಯಲ್ಲಿದ್ದಾರೆ.

 

ಬಹುತೇಕರು ನೀನಾಸಂ ಪಾಸೌಟ್. ಬಿಎಂಎಸ್ ಪ್ರಭು, ಮರಿಯಮ್ಮನಹಳ್ಳಿಯ ಲಲಿತಕಲಾ ರಂಗತಂಡಕ್ಕೆ ಹತ್ತಾರು ನಾಟಕಗಳ ನಿರ್ದೇಶನ ಮಾಡಿ ಯಶಸ್ಸು ಗಳಿಸಿದ್ದಾರೆ. ಮರಿಯಮ್ಮನಹಳ್ಳಿ ಮಹಿಳಾ ವೃತ್ತಿ ರಂಗತಂಡವು ಕೆ. ನಾಗರತ್ನಮ್ಮನವರ ಸಾರಥ್ಯದಲ್ಲಿ ಅನೇಕ ರಂಗನಾಟಕ ಪ್ರದರ್ಶನಗಳಿಗೆ ಕಾರಣವಾಗಿದೆ. ಈ ಪ್ರಾಂತ್ಯದ ಗ್ರಾಮೀಣ ಕಲಾವಿದರು ಅದೆಷ್ಟು ಪ್ರತಿಭಾಶಾಲಿಗಳೆಂದರೆ ಕೇವಲ ವೃತ್ತಿ ಕಂಪನಿ ಶೈಲಿಯ ನಾಟಕಗಳಲ್ಲದೇ ವೈಚಾರಿಕ ನೆಲೆಯ ಆಧುನಿಕ ರಂಗನಾಟಕಗಳಲ್ಲೂ ಅಗದೀ ಸೋಜಾಗಿ ಅಭಿನಯಿಸುವಷ್ಟು ಕ್ರಿಯಾಶೀಲರು.

ರಂಗಸಂಗೀತದಲ್ಲಂತೂ ಇಲ್ಲಿನ ಕಲಾವಿದರು ಅಪ್ರತಿಮರು. ರಂಗಸಂಗೀತದ ಚೇತನವೇ ಆಗಿದ್ದವರು ದಿಲ್ರುಬಾ ಖ್ಯಾತಿಯ ಡಣಾಯಕನಕೆರೆಯ ತೋಟಪ್ಪಯ್ಯ ಶಾಸ್ತ್ರಿ, ರಂಗಗೀತೆಗಳ ರಾಗಸಂಯೋಜಕ ಕಂಪ್ಲಿ ವಾದಿರಾಜ, ನಾರಾಯಣಮೂರ್ತಿ ಇನ್ನೂ ಅನೇಕರು. ನಮ್ಮ ನಡುವಿನ ಹಿರಿಯ ರಂಗಕರ್ಮಿ ನಾಗಲಾಪುರದ ಮಾ.ಬ.ಸೋಮಣ್ಣ ವೃತ್ತಿ ಮತ್ತು ಹೊಸಅಲೆ ಎರಡರಲ್ಲು ರಂಗಭೂಮಿಯ ಸವ್ಯಸಾಚಿಯೇ ಹೌದು. ಸೋಮಣ್ಣ ರಂಗಭೂಮಿಯ ಬಹುಶೃತ ವಿದ್ವಾಂಸರೇ ಆಗಿದ್ದಾರೆ.

ಕರ್ನಾಟಕ ಸರ್ಕಾರವು ವೃತ್ತಿ ರಂಗಭೂಮಿಯ ಸಾಧಕರಿಗೆ ನೀಡುವ ಅತ್ಯುನ್ನತ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಭಾಜನರಾದ ಕೆ. ನಾಗರತ್ನಮ್ಮ ಮರಿಯಮ್ಮನಹಳ್ಳಿಯ ರಂಗರತ್ನ. ಅವರು ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಯ ಸಮನ್ವಯದ ಕೊಂಡಿ. ಕುತ್ಸಿತ ಮನಸಿನ ಕೆಲವು ಸ್ಥಾಪಿತ ಹಿತಾಸಕ್ತಿಗಳು ನಾಗರತ್ನಮ್ಮ ಅವರಿಗೆ ಪ್ರಶಸ್ತಿ ಕೊಡಕೂಡದೆಂದು ತಕರಾರು ತೆಗೆದಿದ್ದವು. ಅವರದು ವೃತ್ತಿಪರ ರಂಗಸೇವೆ ಅಲ್ಲವೆಂಬುದು ತಕರಾರಿನ ಒಳಹೇತು. ಅದೇನೇ ಇರಲಿ ನಾಗರತ್ನಮ್ಮನವರ ಸಾರ್ಥಕ ವೃತ್ತಿ ರಂಗಸೇವೆಗೆ ಕೊನೆಗೂ ಸರ್ಕಾರದ ದಿವ್ಯಮಾನ್ಯತೆ ದೊರಕಿತು.

ಎಪ್ಪತ್ತೈದರ ಏರುಪ್ರಾಯದ ನಾಗರತ್ನಮ್ಮ ಇದುವರೆಗೆ ಅಭಿನಯಿಸಿದ ನೂರಾರು ನಾಟಕಗಳ ಸಹಸ್ರಾರು ಪಾತ್ರಗಳನ್ನು ಲೆಕ್ಕವಿಟ್ಟವರಲ್ಲ. ಒಂದು ಅಂದಾಜಿನಂತೆ ಹದಿನೈದು ಸಹಸ್ರಕ್ಕೂ ಹೆಚ್ಚು ನಾಟಕಗಳು ಪ್ರದರ್ಶನ ಕಂಡಿವೆ. ಮರಿಯಮ್ಮನಹಳ್ಳಿಯ ರಂಗಸಿರಿ ಹೆಸರಿನ ಅವರ ಆತ್ಮಕಥನ ‘ಸುಧಾ’ ಸಾಪ್ತಾಹಿಕವು ತುಂಬಾ ಹಿಂದೆಯೇ ಪ್ರಕಟಿಸಿದೆ.‌ ಅದು ರಂಗನಟಿಯೊಬ್ಬಳ ಪ್ರಕಟಿತ ಪ್ರಥಮ ಆತ್ಮಕಥನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. *ನಾಗರತ್ನಮ್ಮ ತಾನು ಕಂಡ ಗೌರವ, ಸನ್ಮಾನಗಳಿಗಿಂತ ಆಕೆ ಉಂಡ ನೋವು, ಅವಮಾನಗಳೇ ದೊಡ್ಡವು.* ಅದನ್ನು ದಾರ್ಷ್ಟ್ಯದಿಂದ ಎದುರಿಸಿದ ಮಹಿಳೆ ಅವರು. ಇತ್ತೀಚೆಗೆ ಗುಬ್ಬಿ ವೀರಣ್ಣ ಪ್ರಶಸ್ತಿ ಘೋಷಣೆ ಸಂದರ್ಭ ಅದಕ್ಕೆ ಹೊರತಾಗಿರಲಿಲ್ಲ. ಸರ್ಕಾರದ ನಿಲುವು ಗಟ್ಟಿಮುಟ್ಟಾಗಿದ್ದರಿಂದ ಅವರಿಗೆ ನ್ಯಾಯ ದೊರಕಿತು. ಎಂ.ಪಿ. ಪ್ರಕಾಶ್ ಅವರ ರಾಜಕೀಯ ಒಡನಾಟದಿಂದ ನಾಗರತ್ನಮ್ಮ ತಾಲೂಕು ಪಂಚಾಯ್ತಿ ಉಪಾಧ್ಯಕ್ಷೆಯಾಗಿಯೂ ಕೆಲಸ ಮಾಡಿದ್ದುಂಟು.

 

ನಾಟಕವು ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಯಾವುದೇ ಆಗಿರಲಿ ಅಲ್ಲಿ ನಾಗರತ್ನ ಎಂಬ ರಂಗಛಾಪು ಇರುವುದು ಮಾತ್ರ ಖಚಿತ. ಮನ್ಸೂರ ಸುಭದ್ರಮ್ಮನವರ ಜತೆಯಾಗಿ ಸಮಸ್ತ ಕರ್ನಾಟಕದ ಎಲ್ಲಾ ಪ್ರಾಂತ್ಯಗಳಲ್ಲಿ ಹೇಮರೆಡ್ಡಿ ಮಲ್ಲಮ್ಮ ಮತ್ತು ರಕ್ತರಾತ್ರಿ ನಾಟಕ ಪ್ರದರ್ಶನಗಳಂತೂ ದಾಖಲೆ ಬರೆದಿವೆ. ಮುದೇನೂರು ಸಂಗಣ್ಣ ವಿರಚಿತ, ಮಾ.ಬ.ಸೋಮಣ್ಣ ನಿರ್ದೇಶನದ ‘ಶೀಲಾವತಿ’ ನಾಟಕದ ಹೀರೋಯಿನ್ ಪಾತ್ರ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದೆ. ಅದು ಕೇರಳದಲ್ಲಿ ಜರುಗಿದ ರಾಷ್ಟ್ರೀಯ ನಾಟಕೋತ್ಸವದಲ್ಲು ಪ್ರದರ್ಶನ ಕಂಡಿದೆ. ಹೊಸ ಅಲೆಯ ಸಂಗ್ಯಾಬಾಳ್ಯ, ಸೂರ್ಯಶಿಕಾರಿ ಮುಂತಾದ ನಾಟಕಗಳಲ್ಲೂ ಅವರದು ಸಂವೇದನಾಶೀಲ ಅಭಿನಯ. ಹೀಗಾಗಿ ಅವರೊಬ್ಬ ಸಮಗ್ರ ರಂಗಭೂಮಿಯ ಸಮರ್ಥ ‘ಅಭಿನೇತ್ರಿ’ ಎಂಬ ಖ್ಯಾತಿ ಪಡೆದಿರುವುದು ಗಮನಾರ್ಹ.

 

ನಾಗರತ್ನಮ್ಮ ಅವರಿಗೆ ಇದೀಗ ತವರೂರಿನ ಗೌರವ ಸಮರ್ಪಣೆ. ಇದೇ ೨೦೨೫ ರ ಅಕ್ಟೋಬರ್ ೧೯ ರಂದು ಡಾ. ಮಲ್ಲಯ್ಯ ಸಂಡೂರು ಸಂಪಾದಿಸಿದ ‘ರಂಗಸಿರಿ’ ಹೆಸರಿನ ಮರಿಯಮ್ಮನಹಳ್ಳಿ ಸೀಮೆಯ ರಂಗಕಥನ ಗ್ರಂಥದ ಬಿಡುಗಡೆ. ಆ ಮೂಲಕ ಅವತ್ತು ಮರಿಯಮ್ಮನಹಳ್ಳಿಯಲ್ಲಿ ಇಡೀ ದಿವಸ ರಂಗಸಂಭ್ರಮ, ಸಡಗರದ ಹಬ್ಬ. ಕಲಾವಿದರ ಸಮಾಗಮ, ರಂಗಗೀತೆಗಳ ಝೇಂಕಾರ. ವೃತ್ತಿ ರಂಗಭೂಮಿ ಕುರಿತಾದ ವಿಚಾರ ಸಂಕಿರಣ. ಅಂದುಸಂಜೆ ಅವರ ಮಗಳು ಕೆ. ಪಂಕಜಾ ಸಂಗೀತ ನೀಡಿರುವ, ಜೀವನ್ ನಿರ್ದೇಶನದ, ಬೆಂಗಳೂರಿನ ತಲಕಾವೇರಿ ಬಡಾವಣೆ ಕಲಾವಿದರು ಅಭಿನಯಿಸುವ ಕುವೆಂಪು ವಿರಚಿತ ‘ಕಿಂದರಜೋಗಿ’ ನಾಟಕ ಪ್ರದರ್ಶನ.

 

 

 

 

 

 

 

 

 

 

ಮಲ್ಲಿಕಾರ್ಜುನ ಕಡಕೋಳ
ನಿರ್ದೇಶಕರು
ರಂಗಾಯಣ, ದಾವಣಗೆರೆ

9341010712

Don`t copy text!