ಧುತ್ತರಗಿ ಎಂಬ ಗದ್ಯಗಂಧಿ ಕವಿಯ ಕುರಿತು…
ಕನ್ನಡ ವೃತ್ತಿ ರಂಗಭೂಮಿ ಅಂತ ಹೇಳಿದರೆ ಭಾರತೀಯ ಇತರೆ ಭಾಷೆಗಳಲ್ಲೂ ಇಂತಹದ್ದೊಂದು ಪರಂಪರೆಯ ಪ್ರಕಾರ ಇದೆಯೆಂಬುದನ್ನು ನಾವೆಲ್ಲ ಪ್ರಜ್ಞಾಪೂರ್ವಕವಾಗಿ ನೆನಪಿಡಬೇಕಿದೆ. ವಿಷಾದಪೂರಿತ ಸಂಗತಿಯೆಂದರೆ ಭಾರತೀಯ ವೃತ್ತಿ ರಂಗಭೂಮಿ ಪರಂಪರೆಗೆ ಸಿಗಬೇಕಾದ ಸಾಂಸ್ಕೃತಿಕ ಮಹತ್ವ ಸಿಗದಿರುವುದು ರಂಗಸಂಸ್ಕೃತಿಯ ದುರ್ದಮ್ಯ ದುರಂತವೇ ಸೈ. ನೂರೈವತ್ತಕ್ಕೂ ಅಧಿಕ ವರುಷಗಳ ಐತಿಹ್ಯವುಳ್ಳ ಕನ್ನಡ ರಂಗಭೂಮಿ ಚರಿತ್ರೆಯಲ್ಲಿ ವೃತ್ತಿ ರಂಗಭೂಮಿಗೆ ಪ್ರಧಾನ ಸಂಸ್ಕೃತಿ ಧಾರೆಯ ಗುರುತರ ಗಮ್ಯ ದೊರಕಿಲ್ಲ. ಪಾರ್ಸಿ ಮತ್ತಿತರೆ ಮೂಲಗಳಿಂದ ರೂಪುಗೊಂಡ ಅದು ಸಾಂಸ್ಥಿಕ ನಾಟಕ ಕಂಪನಿಗಳ ಅಸ್ಮಿತೆಯಾಗಿ ವಿ.ವಿ. ಪಂಡಿತೋತ್ತಮರು ಬಳಸಿಕೊಂಡ ಪಿಎಚ್.ಡಿ. ಪ್ರಬಂಧಗಳ ಆಕರಗಳಿಗೆ ಸೀಮಿತವಲ್ಲ.
ಮುಂದುವರೆದು ಹೇಳುವುದಾದರೆ ನಾಟಕಗಳ ಜಾತ್ರೆ ಬನಶಂಕರಿ ಸೇರಿದಂತೆ ಇತರೆ ಜಾತ್ರಾ ನಾಟಕಗಳ ಹಣಗಳಿಕೆಯ ಮಾನದಂಡ ಪ್ರಣೀತ ದಾಖಲೆಗಳಲ್ಲ. ಅಷ್ಟಲ್ಲದೇ ಸಾಮಾಜಿಕ ಜಾಲತಾಣಗಳ ಟಿ.ಆರ್.ಪಿ. ಮಾದರಿ ಪ್ರದರ್ಶಿಸುವ ಪ್ರತೀತಿ ಮಾತ್ರವಲ್ಲ. ಅದನ್ನು ದಾಟಿ ತೀರ ಇತ್ತೀಚಿಗೆ ಅಭಿವೃದ್ಧಿ ಆಗುತ್ತಿರುವ ಕೃತಕ ಬುದ್ಧಿಮತ್ತೆಯ ಪ್ರೋಮೋ ಪ್ರಕಾರಗಳೆಂದು ಸಹಿತ ಭ್ರಮಿಸಬೇಕಿಲ್ಲ. ಇದೆಲ್ಲವನ್ನೂ ಒಳಗೊಂಡು ಮತ್ತು ಮೀರಿದ ಜನಸಾಮಾನ್ಯರ ಪ್ರಜಾಸತ್ತಾತ್ಮಕ ಪ್ರೀತಿ ಮತ್ತು ಲೋಕಮೀಮಾಂಸೆಯ ಜನಸಂಸ್ಕೃತಿ ಅದಾಗಿದೆ. ಇಂತಹ ಲೋಕೋಪಯೋಗಿ ಸಂಪ್ರೀತಿ ಪ್ರಕಾರವನ್ನು ಹಾಳತವಾಗಿ ಬಾಳಿದ ಅನೇಕ ಪೂರ್ವಸೂರಿ ಕವಿಗಳು ಅಂದರೆ ವೃತ್ತಿ ರಂಗಭಾಷೆಯಲ್ಲಿ ನಾಟಕಕಾರರು ಈ ರಂಗಪರಂಪರೆಯನ್ನು ಉಜ್ವಲಗೊಳಿಸಿದ್ದಾರೆ. ತನ್ಮೂಲಕ ಜನಸಾಮಾನ್ಯರ ರಂಗಭೂಮಿಯ ಆತ್ಮಚೈತನ್ಯವನ್ನು ಸುದೀಪ್ತಗೊಳಿಸಿದ್ದಾರೆ.
ಅಂದಿನ ಅವಿಭಜಿತ ಬಿಜಾಪುರ ಜಿಲ್ಲೆಯು ವೃತ್ತಿ ನಾಟಕಕಾರರ ಆಡುಂಬೊಲವೇ ಆಗಿತ್ತು. ಅಂಥವರಲ್ಲಿ ಪುಂಡಲೀಕ ಬಸನಗೌಡ ಧುತ್ತರಗಿ ಅಗ್ರಗಣ್ಯರು. ಪಿ.ಬಿ. ಧುತ್ತರಗಿ ಕವಿಗಳೆಂದ ಕೂಡಲೇ ಧುತ್ತನೆ ನೆನಪಾಗುವುದೇ ಮುದುಕನ ಮದುವೆ ಅರ್ಥಾತ್ ಮಲಮಗಳು ಮತ್ತು ಸಂಪತ್ತಿಗೆ ಸವಾಲ್ ನಾಟಕಗಳು. ಅವು ಕನ್ನಡ ರಂಗಭೂಮಿಯ ಸಾರ್ವಕಾಲಿಕ ಸಂಪತ್ತುಗಳು. ಇವೆರಡಲ್ಲದೇ ಧುತ್ತರಗಿ ಅವರ ಇನ್ನೂ ಹತ್ತಾರು ಮಹತ್ತರ ನಾಟಕಗಳು ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಿವೆ.
ಹರಗಿರಿಜೆ, ತಾಯಿಕರುಳು, ಸುಖದ ಸುಪ್ಪತ್ತಿಗೆ, ಅತ್ತಿಗೆ, ಚಿಕ್ಕಸೊಸೆ, ಚಾರುದತ್ತ ಹೀಗೆ ಸಾಲು ಸಾಲು ಸಂವೇದನಾಶೀಲ ನಾಟಕಗಳು. ಅದರಲ್ಲಿ ಕೆಲವು ಇತರೆ ಭಾಷೆಗಳಿಗೂ ಅನುವಾದಗೊಂಡಿವೆ. ಅವೆಲ್ಲಕ್ಕೂ ಲೋಕಹೃದಯದ ಗುಣಬಾಹುಳ್ಯ. ಅವರು ಅಜಮಾಸು ಅರವತ್ನಾಲ್ಕು ನಾಟಕಗಳನ್ನು ರಚಿಸಿದ್ದಾರೆ. “ದಿಕ್ಕೆಟ್ಟ ದೇಶಕ್ಕೆ ದೇವರೇ ದಿಕ್ಕು” ಇದು ಅವರ ಕೊನೆಯ ನಾಟಕದ ಹೆಸರು. ಅಂದಹಾಗೆ ಅವರ ಪ್ರಥಮ ನಾಟಕದ ಹೆಸರು ಕಲ್ಪನಾ ಪ್ರಪಂಚ. ಸಜ್ಜನಿಕೆ, ಸಭ್ಯತೆ ಮತ್ತು ಸರಳತೆಗಳನ್ನು ನಾಟಕಗಳ ಮೂಲಕ ಬರೆದು ತೋರುವುದು ಮಾತ್ರವಲ್ಲ., ಅದನ್ನು ಅವರು ಅಕ್ಷರಶಃ ಬದುಕಿ ತೋರಿದವರು.
ಧುತ್ತರಗಿ ಅವರ ಹುಟ್ಟೂರು (೧೫ ಜೂನ್೧೯೨೯) ಹುನಗುಂದ ತಾಲೂಕಿನ ಸೂಳೀಬಾವಿ. ಅವರದು ಕೈಮಗ್ಗದ ನೇಕಾರಿಕೆ ಮನೆತನ. ಸರಳ ಸಜ್ಜನಿಕೆಯ ಬಸನಗೌಡ ಸಂಗಮ್ಮ, ಪುಂಡಲೀಕ ಅವರ ಅಪ್ಪ ಅಮ್ಮ. ಹಂದಿಗನೂರು ಸಿದ್ರಾಮಪ್ಪನವರ ನಾಟಕ ಕಂಪನಿಯಲ್ಲಿ ಅಪ್ಪ ಬಸನಗೌಡ ರಂಗನಟ. ಅಪ್ಪನ ಅನುಭವದ ರಂಗಗರಡಿಯಲ್ಲಿ ಸಾಮು ತೆಗೆಯುತ್ತಾ ಪುಂಡಲೀಕ ಓದಿ, ಆಗಿನ ಮುಲ್ಕಿ ಪರೀಕ್ಷೆ ಕೂಡಾ ಪಾಸಾಗಲಿಲ್ಲ. ಅಂದರೆ ಏಳನೇ ಈಯತ್ತೆ ಸಹಿತ. ಆದರೆ ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂಬಂತೆ ಅವರು ಅಧ್ಯಯನ, ಅನುಭವಗಳಿಂದ ಗಳಿಸಿದ ಜ್ಞಾನದ ಹರವು ಮತ್ತು ಅರಿವು ಅಪರಂಪಾರ. ಪಂಪ, ಕುಮಾರವ್ಯಾಸನಿಂದ ಕುವೆಂಪು ಬೇಂದ್ರೆವರೆಗೂ ಅನನ್ಯ ಕಾವ್ಯಾಭ್ಯಾಸ ಮಾಡಲು ಅಷ್ಟು ಅಕ್ಷರಾಭ್ಯಾಸ ಅವರಿಗೆ ಸಾಕಿತ್ತು.
ಶುಭ್ರ ಶ್ವೇತವಲ್ಲದ ಮಾಸಲು ಬಣ್ಣಕ್ಕಿಳಿದ ಬಿಳಿಯಂಗಿ ಧೋತರದ ಉಡುಪಿನ ಧುತ್ತರಗಿಯವರಿಗೆ ಉಂಡುಡಲು ಇದ್ದುದು ಯಥೇಚ್ಛ ಬಡತನ. ತಲೆತುಂಬಾ ತಿದ್ದಿತೀಡಿ ಹಿಂದಕ್ಕೆ ಬಾಚಿದ ಬೆಳ್ಳಿಕೂದಲು. ಒಪ್ಪ ಓರಣದ ಕಪ್ಪು ಮಾರಿ. ಸೂಳೀಬಾವಿಯ ಪರಿಸರದ ಪ್ರಭಾವ ಮೀರದೆ ಅವರು ಸೇದುತ್ತಿದ್ದ ಬೀಡಿಗಳ ಲೆಕ್ಕ ಇಡಲಾಗುತ್ತಿರಲಿಲ್ಲ. ಅವರ ಕೈ ಕುಲುಕಿದರೂ ಸಾಕು ಧೂಮ್ರವಲಯದ ಘಾಟಿನ ಘಮಲು. ಒಮ್ಮೊಮ್ಮೆ ಅದು ಯಥಾರ್ಥತೆ ಮತ್ತು ಜವಾರಿತನದ ಪ್ರೀತಿ ಪರಾಮಳಿಕೆಯ ಪಾರಮ್ಯದಂತೆ ಭಾಸವಾಗುತ್ತಿತ್ತು. ಅವರ ಕಡು ಕಪ್ಪನೆಯ ಶರೀರದಲ್ಲಿ ಕಡು ಬಿಳುಪಿನ ತಾಯ್ತನದ ಜೋಗುಳವಿತ್ತು. ಅದರಿಂದ ಕುಮಾರವ್ಯಾಸನಿಂದ ಕುವೆಂಪುವರೆಗಿನ ಕಾವ್ಯ ಓದಿ ಆರ್ಜಿಸಿಕೊಂಡ ಜ್ಞಾನ ಸಂಪನ್ನ. ಅದು ರಂಗವಾತ್ಸಲ್ಯದ ವಾರಿಧಿಯೇ ಆಗಿರುತ್ತಿತ್ತು.
ತೊಂಬತ್ತರ ದಶಕದಲ್ಲಿ ಚಿತ್ರದುರ್ಗ ಮಠದ ಕುರುಬರಹಟ್ಟಿಯ ಕುಮಾರಸ್ವಾಮಿ ಮನೆಯ ಅಟ್ಟದಲ್ಲಿ ತಿಂಗಳೊಪ್ಪತ್ತು ತಂಗಿದ್ದರು. ಕನ್ನಡ ರಂಗಭೂಮಿಯ ಮಹತ್ವದ “ದೇವಿಮಹಾತ್ಮೆ” ಎಂಬ ನಾಟಕ ರಚನೆಗಾಗಿ ಅವರ ವಾಸ್ತವ್ಯ. ನಾನು ವಾರಕ್ಕೊಮ್ಮೆ ಅವರ ಭೆಟ್ಟಿಗೆ ಬಜಾಜ್ ಸ್ಕೂಟರಿನಲ್ಲಿ ದಾವಣಗೆರೆಯಿಂದ ಹೋಗುತ್ತಿದ್ದೆ. ಹಾಗೆ ಹೋಗುವಾಗ ನೈವೇದ್ಯದಂತೆ ಅವರಿಗೆ ಪ್ರಿಯವಾದ ಬ್ರಾಂಡಿನ ಪೇಯಸಮೇತ ಹೋಗುವುದೇ ಖುಷಿ. ದಿನಕ್ಕೆ ನಾಕೈದು ಕಟ್ಟು ಗಣೇಶ ಬೀಡಿಗಳ ಬಲಿ. ಗಂಟೆಗೊಂದು ಕಪ್ ಚಹವಿದ್ದರೆ ಸಾಕು, ಲಾಂಗ್ ಬುಕ್ಕಿನಲ್ಲಿ ರಂಗನಾಟಕ ಬರವಣಿಗೆಯ ಸುಲಲಿತ ಪಯಣ.
ನಾಟಕದ ಪ್ರತಿಯೊಂದು ಪಾತ್ರ ಆಹ್ವಾಹಿಸಿಕೊಂಡು ಬರೆಯುವಲ್ಲಿ ಅವರಿಗೆ ತಪಸ್ಸಿನಂತಹ ಶ್ರದ್ಧೆ. ನಾಟಕಗಳ ಆತ್ಮಗಳನ್ನು ಕಾವ್ಯಮಯ ಪದಗಳಲ್ಲಿ ಅದ್ದಿ ಬರೆದ ಗದ್ಯಗಂಧಿ ಕವಿ ಅವರು. ಅಂತೆಯೇ ಅವು ಮಾನವೀಯ ಪ್ರೀತಿ ಗುಣಗಳನ್ನು ಮೆರೆಯುತ್ತವೆ. ಅವಿಭಜಿತ ಕುಟುಂಬ ಪ್ರೀತಿ, ಸಾಮರಸ್ಯ, ಶೋಷಣೆ ವಿರುದ್ದದ ಹೋರಾಟ, ಸಮಾಜಮುಖಿಯಾದ ಸಹೃದಯ ಚಿಂತನೆಗಳು ಅವರ ನಾಟಕಗಳ ಹೂರಣ. ವಿಶೇಷವಾಗಿ ಉತ್ತರ ಕರ್ನಾಟಕದ ಬಿಸುಪು, ಮೊಗಲಾಯಿ ನೆಲದ ಉಮೇದು ಉಲ್ಲೇಖನೀಯ. ಕೆಲವು ನಾಟಕಗಳಲ್ಲಂತೂ ಸ್ಥಳೀಯ ಪುರಾಣೇತಿಹಾಸಗಳ ಪ್ರಾಶಸ್ತ್ಯ.
ಖರೇ ಖರೇ ಹಕೀಕತ್ ಅಂದರೆ ನಿತ್ಯದ ಬದುಕು ಸಾಗಿಸಲಿಕ್ಕಾಗಿಯೂ ನಾಟಕ ಬರೆಯಬೇಕಾಗಿತ್ತು. ಅಂತೆಯೇ ಅವರು ತಮ್ಮ ಬದುಕಿನ ಜೀವಧ್ವನಿಯನ್ನೇ ನಾಟಕದ ‘ನಾದ‘ ಆಗಿಸುವಲ್ಲಿ ಚತುರರು. ಮಲಮಗಳು ನಾಟಕ ಅದಕ್ಕೆ ಸೂಕ್ತ ನಿದರ್ಶನ. ಧುತ್ತರಗಿಯವರೊಂದಿಗೆ ರಂಗಸಾಹಿತ್ಯದ ಚರ್ಚೆ ಮಾಡುತ್ತಿದ್ದರೆ ಅವರ ಗಹನ ಅಧ್ಯಯನದ ಆಳಗಲ ವೇದ್ಯವಾಗುತ್ತಿತ್ತು. ಅವರು ನನ್ನನ್ನು ಮಲ್ಕಾಜಿ ಅಂತಲೇ ಕರಿತಿದ್ರು. ಈ ಹಿಂದೊಮ್ಮೆ ಮೂರು ದಿವಸ ಡಾವಣಗೇರಿಯ ನಮ್ಮನೆಯಲ್ಲಿದ್ದರು. ಆಗ ನಮ್ಮ ರಂಗಸಂವಾದದ ಜತೆ ನನ್ನ ಪತ್ನಿ ಮಾಡಿದ ಹೋಳಿಗೆಯ ಸವಿರುಚಿ ಸಂಭ್ರಮಿಸಿದ್ದರು. ಅಷ್ಟೊತ್ತಿಗಾಗಲೇ ಅವರ ಕೈಗೆ ಬೆತ್ತ ಬಂದಿತ್ತು.
ಗೋಕಾಕ ಬಸವಣ್ಣೆಪ್ಪನವರ ಶಾರದಾ ಸಂಗೀತ ನಾಟಕ ಮಂಡಳಿ ಅಭಿನಯಿಸುತ್ತಿದ್ದ ಧುತ್ತರಗಿ ಕವಿಗಳ ಸಂಪತ್ತಿಗೆ ಸವಾಲ್ ನಾಟಕ ನೋಡಲು ವರನಟ ರಾಜಕುಮಾರ ಆಗಮಿಸುತ್ತಾರೆ. ನಾಟಕಕ್ಕೆ ರಾಜ್ ಮನಸೋಲುತ್ತಾರೆ. ಅಂತೆಯೇ ಅದನ್ನು ಸಿನೆಮಾ ಮಾಡುವ ಸಂಕಲ್ಪ ಮಾಡುತ್ತಾರೆ. ಆದರೆ ನಿರ್ಮಾಪಕರು ನಾಟಕದ ಕವಿಯನ್ನೇ ಮರೆತು ಕಂಪನಿಯದೇ ಹಕ್ಕುಸ್ವಾಮ್ಯ ಎಂಬ ತಪ್ಪು ಮಾಹಿತಿಯಿಂದಾಗಿ ಕೋರ್ಟಿನಲ್ಲಿ ಧುತ್ತರಗಿ ಕವಿಗಳ ಮೂಲ ನಾಟಕಕ್ಕೆ ಜಯ ಲಭಿಸುತ್ತದೆ.
ತರುವಾಯ ಸಿನೆಮಾ ನಿರ್ಮಾಣದ ಎಲ್ಲಾ ಸ್ತರಗಳಲ್ಲಿ ಧುತ್ತರಗಿ ಹೆಸರು ದಾಖಲಾಗುತ್ತದೆ. ಆ ಮೂಲಕ ಡಾ. ರಾಜಕುಮಾರ ಅವರು ಧುತ್ತರಗಿ ಕವಿಗಳಿಗೆ ಹೆಚ್ಚು ಹತ್ತಿರವಾಗುತ್ತಾರೆ. ಈ ಸಿನೆಮಾ ಕನ್ನಡವೂ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹೀಗೆ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಚಲನಚಿತ್ರವಾಗಿ ಯಶಸ್ಸು ಗಳಿಸುತ್ತದೆ.
ಇವರ ಚಿಕ್ಕ ಸೊಸೆ ಎಂಬ ಇನ್ನೊಂದು ನಾಟಕ
‘ಸೊಸೆತಂದ ಸೌಭಾಗ್ಯ’ ಎಂಬ ಹೆಸರಿನಲ್ಲಿ ವರ್ಣರಂಜಿತ ಪ್ರಥಮ ಸಿನೆಮಾಸ್ಕೋಪ್ ಚಲನಚಿತ್ರವಾಗಿ ಹಣ ಮತ್ತು ಹೆಸರು ಮಾಡಿತು. ಹುಬ್ಬಳ್ಳಿಯ ಎಸ್.ಡಿ. ಅಂಕಲಗಿ ಸೋದರರು ಈ ಸಿನೆಮಾ ನಿರ್ಮಿಸಿದರು. ಧುತ್ತರಗಿ ಅವರ ನಾಟಕಗಳಿಂದ ಸಿನೆಮಾ ನಿರ್ಮಾಪಕರು, ನಿರ್ದೇಶಕರು ಸಿರಿವಂತರಾದರೆ ಹೊರತು ಧುತ್ತರಗಿ ಕವಿಗಳು ಮಾತ್ರ ಸಣ್ಣದೊಂದು ಮನೆ ಕಟ್ಟಿಕೊಳ್ಳುವಷ್ಟು ಸ್ಥಿತಿವಂತರಾಗಲಿಲ್ಲ. ಅವರಿಗೆ ಸರಸ್ವತಿ ಅರ್ಥವಾದಷ್ಟು ಲಕುಮಿ ‘ಅರ್ಥ’ವಾಗಿರಲಿಲ್ಲ. ಪ್ರಾಯಶಃ ಅವರು ವ್ಯವಹಾರಿಕವಾಗಿರಲಿಲ್ಲ. ಹೀಗಾಗಿ ಆರ್ಥಿಕ ಬಡತನ ಅವರ ಬದುಕಿನುದ್ದಕ್ಕೂ ಬದುಕಿತ್ತು. ಅದರೆ ಉಸಿರಿನ ತುಂಬಾ ರಂಗಸಂಸ್ಕೃತಿಯ ದಿವ್ಯತೆ ತುಂಬಿ ತುಳುಕಿತ್ತು. ಉಲ್ಲೇಖಿಸಲೇ ಬೇಕಾದ ಮತ್ತೊಂದು ಸಂಗತಿ ಎಂದರೆ ಬೆಳ್ಳನೆ ಬೆಳಗಾಯಿತು ಎಂಬ ಸಂಗೊಳ್ಳಿ ರಾಯಣ್ಣ ಸಿನೆಮಾದ ಹಾಡು ಬರೆದವರು ಧುತ್ತರಗಿ ಕವಿಗಳು. ಅದನ್ನು ಹಾಡಿದವರು ಹಿಂದಿ ಚಿತ್ರಪ್ರಪಂಚದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್. ಇದು ಅನೇಕರಿಗೆ ಗೊತ್ತಿಲ್ಲ.
ಆ ಕಾಲದ ಹೆಸರಾಂತ ಕಲಾವಿದೆ ಸರೋಜಮ್ಮ, ಧುತ್ತರಗಿಯವರ ಎರಡನೇ ಹೆಂಡತಿ. ಅವರ ಮೊದಲ ಪತ್ನಿ ಶಾಂತಮ್ಮ ತನ್ನ ನಾಲ್ಕು ಮಕ್ಕಳನ್ನು ಅಗಲಿದಾಗ ಧುತ್ತರಗಿ ಅವರ ಜೀವನದ ಅರ್ಧ ಆಯಸ್ಸು ಕಳೆದಿತ್ತು. ಪ್ರಾಯಶಃ ಅದು ಮಲಮಗಳು ಎಂಬ ಹೃದಯ ವಿದ್ರಾವಕ ನಾಟಕ ಹುಟ್ಟಿಕೊಂಡ ಕಾಲಘಟ್ಟ ಇದ್ದೀತು. ಇವರ ಹೊಸ ನಾಟಕವೊಂದಕ್ಕೆ ರಂಗನಾಯಕಿಯಾಗಿ ಬರುವ ಮೂಲಕ ಚಿತ್ರದುರ್ಗ ಮೂಲದ ಸರೋಜಮ್ಮ, ಧುತ್ತರಗಿಯವರ ರಂಗಬಾಳಿನ ಬೆಳಕಾಗುತ್ತಾರೆ. ಕೆಲವು ಕಾಲ ತ್ರಿಪುರ ಸುಂದರಿ ನಾಟ್ಯ ಸಂಘ ಮತ್ತು ಶ್ರೀ ಮೆದಕೇರಿ ಅವರ ಸಹಭಾಗಿತ್ವದಲ್ಲಿ ವಿಜಯ ಮಹಾಂತೇಶ್ವರ ನಾಟಕ ಮಂಡಳಿ ಕಟ್ಟಿ ನಡೆಸುತ್ತಾರೆ. ತದನಂತರ ಶ್ರೀ ಸಿದ್ಧಲಿಂಗೇಶ್ವರ ವಿಜಯ ನಾಟಕ ಸಂಘವನ್ನು ಇಪ್ಪತ್ತು ವರುಷಗಳ ಕಾಲ ರಂಗಸಂಗಾತಿ ಸರೋಜಮ್ಮನವರ ಸಹಕಾರದೊಂದಿಗೆ ಮುನ್ನಡೆಸುತ್ತಾರೆ. ಪಿ. ಬಿ. ಧುತ್ತರಗಿ ಅವರಿಗೆ ಕರ್ನಾಟಕ ಸರ್ಕಾರ ರಂಗಭೂಮಿ ಸೇವೆಗೆ ನೀಡುವ ಅತ್ಯುನ್ನತ ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿ ಪ್ರಾಪ್ತವಾಗಿವೆ.
೨೦೦೭ ರ ನವೆಂಬರ್ ೧ ರಂದು ಅತ್ತ ಸೂಳೀಭಾವಿಯಲ್ಲಿ ವಯೋಸಹಜ ಅನಾರೋಗ್ಯದಿಂದ ಧುತ್ತರಗಿ ಕವಿ ತೀರಿಹೋದರು. ಇತ್ತ ಅದೇ ದಿವಸ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಪತ್ನಿ ಸರೋಜಮ್ಮ ಅವರಿಗೆ ಕರ್ನಾಟಕ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸತ್ಕರಿಸುತ್ತಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಸರೋಜಮ್ಮ ಸೂಳೀಬಾವಿಗೆ ಧಾವಿಸಿದರು.
–ಮಲ್ಲಿಕಾರ್ಜುನ ಕಡಕೋಳ
9341010712





