ಆನ್ ಲೈನ್ ಓಟಗಳೆದುರು ಕಾಣೆಯಾದ ಹೋರ್ಮಲ್ಲಯ್ಯೋ – ದೋಸ್ತರಾ ಹೋದ್ದೀನ್ ದಿನಗಳು
ಮೊದಲಿನಂತಿಲ್ಲ ನನ್ನೂರು.
ಅದರ ಚೆಹರೆಗಳೆಲ್ಲ ಸ್ಥಿತ್ಯಂತರವೋ ಇಲ್ಲವೇ ರೂಪಾಂತರವೋ ಆಗಿವೆಯೆಂಬ ಬಲಾಢ್ಯ ಗುಮಾನಿ. ಒಳಗಣ್ಣು ನೋಟದಲ್ಲಿ ಕಂಡಂತೆ ಇರುವ ಮುನ್ನೂರು ಮನೆಗಳಲ್ಲಿ ಮುನ್ನೂರೊಂದು ಮನಸುಗಳು. ನಮ್ಮೂರು ಮಾತ್ರವಲ್ಲ ಗ್ರಾಮಭಾರತದ ಎಲ್ಲಾ ಮನೆ, ಮನಗಳೆಲ್ಲವೂ ಮರ್ಕಟೋನ್ಮಾದದ ಜೋಕಾಲಿಯಲಿ ಒಂದೇ ಸಮನೆ ಜೀಕುತ್ತಲಿವೆ. ತಲುಪಬೇಕಾದ ಗಮ್ಯ ಗಂತವ್ಯಗಳ ಅರಿವಿಲ್ಲ. ಕಾಲಿಗೆ ಗಾಲಿ ಕಟ್ಟಿ ಕೊಂಡವನಂತೆ ಒಂದಿನ ಪೂರ್ತಿ ಊರೆಲ್ಲ ತಿರುಗಿ ಹುಡುಕಿದೆ. ಟೀವಿ, ಮೊಬೈಕ್ ಮತ್ತು ಮೊಬೈಲ್ ಫೋನುಗಳಿಲ್ಲದ ಮನೆಗಳೇ ಸಿಗಲಿಲ್ಲ.
ಅಷ್ಟಕ್ಕೂ ಅವು ಇರಬಾರದೆಂಬುದು ನನ್ನ ಉದ್ದೇಶವೂ ಆಗಿರಲಿಲ್ಲ. ಅದು ನನ್ನ ಹುಚ್ಚು ಮನಸಿನ ಪುಳಕಪ್ರಾಯದ ಕುತೂಹಲವಷ್ಟೇ. ಅದನ್ನು ಮೀರಿದ ಹುಟ್ಟೂರಿನ ನೆಲಧರ್ಮಪ್ರಜ್ಞೆ ಪ್ರಾಯಶಃ ಅಂತಹದ್ದೊಂದು ಹುಡುಕಾಟಕ್ಕೆ ಹಚ್ಚಿತ್ತು. ನನ್ನ ಪಾಲಿಗದು ವಿಸ್ಫೋಟಕ ಹುಡುಕಾಟ. ಸೋಜಿಗವೆಂದರೆ ನಾವು ಚುಕ್ಕೋಳಾಗಿದ್ದಾಗ ನಮ್ಮೂರಲ್ಲಿ ಸಣ್ಣದೊಂದು ಸೈಕಲ್ ಸಹಿತ ನೋಡಲು ಸಿಗುತ್ತಿರಲಿಲ್ಲ. ಅಂತಹ ಸಣ್ಣ ಊರಲ್ಲಿ ಈಗ ಬೈಕು, ಆಟೋ, ಕಾರು, ಜೀಪುಗಳಿಗೇನು ಕೊರತೆ ಇಲ್ಲ. ಮದುವೆ, ಮುಂಜಿ ಶುಭದ ಕ್ಷಣಗಳು ಸೇರಿದಂತೆ ಸೂತಕದ ಗಳಿಗೆಗಳಿಗೆ ಅವು ಚೌಕಾಸಿ ದರಗಳಲ್ಲಿ ಬಾಡಿಗೆಗೂ ದೊರಕಬಲ್ಲವು.
ಯಪ್ಪಾ! ವರ್ತಮಾನದ ನನ್ನೂರನ್ನು ನಾನರಿಯದೇ ಹೋದೆನೇ!? ಎಂಬ ಮೂಲಭೂತ ಮತ್ತು ಕೌತುಕದ ಪ್ರಶ್ನೆ ನನ್ನನ್ನು ಗಡಬಡಿಸಿ ಕಾಡತೊಡಗಿತು. ಹಂಗೇನಿಲ್ಲ ನನ್ನೂರು ನನಗರಿಯದೇ ಹೋದುದೇನಲ್ಲ. ಅದರ ಅಣುರೇಣು ತೃಣಕಾಷ್ಠಗಳಲ್ಲಿ ನನ್ನ ಭಾವಸಂವೇದನೆಗಳು ಜೀವಗೊಂಡಿವೆ. ಹಾಗೆಂದು “ಬಾಳ ಹಿಂದೆ ಬಾಳ ಚೆಂದವಿತ್ತು ಇಂದು ಇಲ್ಲ” ಎಂಬ ನಾಸ್ಟಾಲ್ಜಿಯಾ ಕೂಡಾ ನನ್ನದಲ್ಲ. ಈಗ ಇರುವುದನ್ನು ದ್ವೇಷಿಸುವ ಅಸಹಿಷ್ಣು ಉದ್ದೇಶವೂ ನನ್ನದಲ್ಲ. ಆದರೆ ಅದರ ‘ಜೀವಕಾಳು’ ಕಳೆದು ಹೋಗಿ ಸಂವೇದನೆ ರಹಿತ ದುಃಸ್ಥಿತಿ. ಅದಕೆ ಪ್ರಾಣವಾಯು ದೊರಕಬೇಕೆಂಬ ಪ್ರಾಣದುಸಿರಿನ ತೀವ್ರ ಹಂಬಲ. ನಮ್ಮೂರೇನು ಸಾಧಾರಣದ ಕಾಂಜಿ ಪೀಂಜಿ ಊರಲ್ಲ. ಮಹಾಜ್ಞಾನಿ ಮಡಿವಾಳಪ್ಪ ಬಾಳಿ ಬದುಕಿದ ಕಾಯಕಭೂಮಿ. ತತ್ವಪದಗಳ ಅಲ್ಲಮ ಜೀವಿಸಿದ ‘ಸಾಧುರ ಮ್ಯಾಳ’ದಂತಹ ಸುಸ್ಥಿರ ಬದುಕಿನ ಹಾದಿ ಹುಡುಕಿಕೊಟ್ಟ ನೆಲ ಕಡಕೋಳ.
ಊರ ತುಂಬೆಲ್ಲ ತಾಯ್ತನದ ತೂಗು ತೊಟ್ಟಿಲು. ಹಸುಗಂದನ ಹಾಲ್ಬೆಳ್ಳಿಯ ಬಟ್ಟಲು. ಅಷ್ಟಲ್ಲದೇ ಜೀವಪ್ರೀತಿ, ಕಕುಲಾತಿಗಳ ಹದುಳ ಹರಕೆಗಳೇ ತುಂಬಿ ತುಳುಕಿಸಿ, ನಿರ್ಮಲ ಪರಂಜ್ಯೋತಿ ಬೆಳಗಿದ್ದು ನನ್ನೂರು. ಆದರೀಗ ನಮ್ಮೆಲ್ಲರ ಹುಟ್ಟೂರಿನ ಹಳ್ಳಿಗಳು ಕೆಟ್ಟುಹೋಗಿವೆ. ಕಳ್ಳು ಬಳ್ಳಿಯಂತಹ ಅಂತಃಕರಣದ ಮನುಷ್ಯ ಸಂಬಂಧಗಳು ನಿಕಾಲೆಯಾಗಿವೆ. ಅದೇಕೋ ಥಟ್ಟಂತ ನೆನಪಾದವು ಮನೆಯಂಗಳದ ಅಂದಿನ ಹೊರಸುಗಳು. ನಡುಮನೆಯಲ್ಲಿ ಹಾಸಿದ ಕೌದಿಗಳು. ಬೆಳದಿಂಗಳ ರಾತ್ರಿಯಲಿ ಮಣ್ಣಿನ ಮಾಳಿಗೆ ಮೇಲೆ ಹಾಸಿದ ಈಚಲು ಚಾಪೆಗಳು. ಊಟ ಮಾಡಿದ ಮೇಲೆ ಅಗದೀ ಸೋಜಾಗಿ ಕುಂತು ಮಾತಾಡುತ್ತಿದ್ದ ದಿನಗಳು.
ಈಗಿನಂತೆ ಆಗ ಜನರ ಕೈಯಲ್ಲಿ ರೊಕ್ಕ ರುಪಾಯಿ ಇಷ್ಟು ಪ್ರಮಾಣದಲ್ಲಿ ಆಡ್ತಿರಲಿಲ್ಲ. ಹತ್ರುಪಾಯಿ ಸಾಲ ಹುಟ್ಟಬೇಕಂದ್ರ ಊರಿನ ಸಾವ್ಕಾರ ಮನಿಗೆ ತಿರುಗ್ಯಾಡಿ, ತಿರುಗ್ಯಾಡಿ ಅಂಗಾಲಿನ ಗೆರಿ ಸವೆದು ಹೋಗ್ತಿದ್ದವು. ರೊಕ್ಕ ರುಪಾಯಿಗಳು ದಕ್ಕುವ ದೆಸೆಯಿಂದ ಖರೇವಂದ್ರ ಈಗಿನ ಕಾಲವೇ ಛೊಲೋ ಅಂತ ಹೇಳಬೌದು. ಹಾಂ! ಅನ್ನೊದರೊಳಗ ಹತ್ತು ಸಾವಿರ ರುಪಾಯಿ ತಂದು ಬಿಡುವ ಕಾಲ ಇದು. ಆದರೆ ಆಗ ಅದೆಷ್ಟೇ ಬಡತನ ಇದ್ರೂ ‘ನೆಮ್ಮದಿ’ ಮಾತ್ರ ಬೇಕಾದಷ್ಟಿತ್ತು. ಆ ದೃಷ್ಟಿಯಿಂದ ಈಗಿನದು ಖರೇವಂದ್ರ ದುರಿತಕಾಲ.
ನಮ್ಮೂರಾಗ ಅರ್ಧಕ್ಕಿಂತಲೂ ಹೆಚ್ಚು ಮನೆಗಳಲ್ಲಿ ಅಂಡ್ರಾಯಿಡ್ ಫೋನುಗಳು, ನಾನು ಭೆಟ್ಟಿ ಕೊಟ್ಟಾಗ ಕೆತ್ತೇಬಾಜಿ ಕೆಲಸದಲ್ಲಿ ನಿರತಗೊಂಡಿದ್ದವು. ನಾನು ಅವರ ಮನೆಗೆ ಯಾಕೆ ಬಂದಿದ್ದೇನೆಂಬ ಖಬರಿಲ್ಲದ ಅವರೆಲ್ಲ ಮೊಬೈಲ್ ಲೋಕದ ಕಾರ್ಯನಿರತ ಸೆಲ್ ಫೋನ್ ಜೀವಿಗಳಾಗಿದ್ದರು. ಅವನು ಅಂದರೆ ನಾನು “ಸಾಹಿತಿ ಅದಕ್ಕೆ ತಲೆ ಕೆಟ್ಟವರ ತರಹ” ಅದೆಲ್ಲ ವಿಚಾರಸ್ತಿರಬಹುದೆಂದು ಭಾವಿಸಿದಂತಿತ್ತು. ನನ್ನನ್ನು ಕುರಿತು ಅಷ್ಟನ್ನು ಹೇಳಲೂ ಪುರುಸೊತ್ತಿರಲಿಲ್ಲವೆಂದರೆ.? ಯೋಚನೆ ಮತ್ತು ಊಹೆಯ ಸಂಲಗ್ನ ಕ್ರಿಯೆಯ ಮೊಬೈಲ್ ಡಿಪೆಂಡೆನ್ಸಿ ಎಂತಹದ್ದೆಂದು ನೀವೇ ನಿರ್ಧರಿಸಿರಿ. ಮೊಬೈಲ್ ಕಾಯಕ ನಿರತನಾದೊಡೆ ಗುರು ಲಿಂಗ ಜಂಗಮವ ಮರೆಯಬೇಕೆಂಬ ಮೊಬೈಲ್ ಮಾನವರು.
ದುರಂತವೆಂದರೆ ಮೊಬೈಲ್ ಜಗತ್ತು ಮತ್ತು ಜನಪ್ರತಿನಿಧಿ ರಾಜಕಾರಣ ನೆಮ್ಮದಿ ಹಾಳುಗೆಡುವಲ್ಲಿ ಮಹತ್ತರ ಪಾತ್ರವಹಿಸಿವೆ. ಅದನ್ನವರು ‘ಲೋಕಜ್ಞಾನ’ವೆಂದು ಭ್ರಮಿಸಿದ್ದಾರೆ. ಆದರೆ ಇದೆಲ್ಲದರ ನಡುವೆ ಸಣ್ಣದೊಂದು ಖುಷಿಯ ಸುದ್ದಿ ಇದೆ. ಅದೇನೆಂದರೆ ಇಂತಹ ಪುಟ್ಟದಾದ ನಮ್ಮೂರಲ್ಲಿ ಎರಡು ಯುಟ್ಯುಬ್ ಛಾನಲ್ಸ್ ತುಂಬಾ ಸೆನ್ಸಿಬಲ್ ಆಗಿ ಕಾರ್ಯ ನಿರ್ವಹಿಸುತ್ತಿವೆ. ಅವು ಸಧ್ಯಕ್ಕೆ ಸಗರನಾಡು ಸೀಮೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಜೀವಗನ್ನಡಿಯಾಗಿ ಆಗಾಗ ಸಣ್ಣಪುಟ್ಟ ವಿದ್ಯಮಾನಗಳನ್ನು ಲೈವ್ ಆಗಿ ಬಿತ್ತರಿಸುತ್ತವೆ.
ಅಂದಹಾಗೆ ಕಳೆದ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಇಷ್ಟು ಸಣ್ಣ ಹಳ್ಳಿಯಲ್ಲಿ ಹತ್ತು ಲಕ್ಷಕ್ಕೂ ಮಿಗಿಲು ಹಣದ ವಹಿವಾಟು ನಡೆಸಿದವು. ಪ್ರಜಾಪ್ರಭುತ್ವದ ಹಬ್ಬ ಎಂದು ಕರೆಸಿಕೊಳ್ಳುವ ಚುನಾವಣೆಗಳು ಜನರನ್ನು ಯಾವರೀತಿ ಭ್ರಷ್ಟಾಚಾರದ ಬಾವಿಗೆ ತಳ್ಳುತ್ತವೆ ಎಂದು ಗ್ರಹಿಸಬಹುದು. ಹಾಗಂತ ನಮ್ಮೂರ ಜನರೇನು ದಡ್ಡರಲ್ಲ. ನೂತನ ಸಂಸತ್ ಭವನ ಮತ್ತದರ ಸೆಂಗೋಲ್ ಎಂಬ ರಾಜದಂಡದ ಬಗ್ಗೆಯೂ ತಲಸ್ಪರ್ಶಿಯಾಗಿ ಮಾತಾಡಬಲ್ಲವರು. ಹೇಮಾಹೇಮಿ ರಾಜಕಾರಣಿಗಳ ಬಗ್ಗೆ ತಮ್ಮ ಹುಳಿಗರಸು ಭಾವಗಳ ಮೂಲಕ ಲೇವಡಿ ಮಾಡಬಲ್ಲವರು.

* * *
ಕೈಕೊಟ್ಟ ಹುಡುಗಿ ತಲೆಕೆಟ್ಟ ಹುಡುಗ ಅರ್ಥಾತ್ ಬಡವನ ಪ್ರೀತಿ ಬರಗಾಲ ರೀತಿ ” ಎಂಬ ಟ್ರೆಂಡಿಂಗ್ ಹೆಸರುಳ್ಳ ನಾಟಕಗಳ ಭರಾಟೆ. ನಮ್ಮೂರು ಮಾತ್ರವಲ್ಲ. ನಮ್ಮ ಭಾಗದ ಹಳ್ಳಿಗಳಲ್ಲಿ ವರ್ಷಕ್ಕೊಮ್ಮೆ ಪ್ರದರ್ಶನ ಕಾಣುವ ಕಂಪನಿಶೈಲಿ ನಾಟಕಗಳ ಹೆಸರಿನ ಸ್ಯಾಂಪಲ್ಲುಗಳೇ ಆಕರ್ಷಕ. ನಮ್ಕಡೆ ತಾವೇ ನಾಟಕ ಬರೆದು, ನಟಿಸಿ, ನಿರ್ದೇಶಿಸಿ, ಕೈಯಿಂದ ಖರ್ಚುಮಾಡುವ ಯಥೇಚ್ಛ ನಿದರ್ಶನಗಳು. ಖಾಯಷ್ ಪಟ್ಟು ದೂರದ ಡಾವಣಗೇರಿ, ಗದಗ, ಇಲಕಲ್, ಹಂಸನೂರುಗಳಿಂದ ಅಂದಚೆಂದದ ಕಲಾವಿದೆಯರನ್ನು ಜಿದ್ದಿಗೆ ಬಿದ್ದಂತೆ ಪತ್ರಿಕೆಗಳಲ್ಲಿ ಆಮಂತ್ರಿಸೋದೇ ಹೆಮ್ಮೆಯ ವಿಷಯ. ಅವರೋ “ಹಾಲಿವುಡ್ ತಾರೆಯರ ತರಹ ಫೋಜು” ಕೊಡುವುದೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವಷ್ಟು ಹಸಿ ಹಸಿಯಾದ ಹುಸಿ ಪ್ರತಿಷ್ಠೆ.
ಅದಕ್ಕೆ ಮುನ್ನ ಅರ್ಧಶತಮಾನದಷ್ಟು ಹಿಂದೆ ಜರುಗುತ್ತಿದ್ದ ‘ಪಾರಿಜಾತ’ ಸಣ್ಣಾಟಗಳ ಸೊಬಗು ಬಣ್ಣಿಸಲಸದಳ. ಆಗ ಅವರು ಕಂಡ ಊರ ಮುಖಂಡರ ಪಟ್ಟಿಯನ್ನೇ ಪರಿಮಳದ ಸ್ವರದಲ್ಲಿ ನುತಿಸುತ್ತಿದ್ದ ಅಭಿಮಾನದ ಚೆಲುವೆಯರು. ಅವರ ಕುರಿತು ನನ್ನ ನೆನಪಿನ ಭಾವಕೋಶದಲ್ಲಿ ಹತ್ತು ಹಲವು ರೋಚಕವಾದ ಕತೆಗಳಿವೆ. ಸವುಡು ಮಾಡಿಕೊಂಡು ಅದೆಲ್ಲ ಇನ್ನೊಮ್ಮೆ ಬರೆಯುವೆ. ಕೆಲವು ಹಳ್ಳಿಗಳಲ್ಲಿ ಇಂತಹ ರಾಧಾನಾಟಗಳು ವರ್ಷಕ್ಕೊಮ್ಮೆ ಜಾತ್ರೆಗಳಲ್ಲಿ ಕಡ್ಡಾಯದಂತೆ ಜರುಗುತ್ತಿದ್ದವು. ಬಯಲಾಟ, ನಾಟಕ ಪ್ರದರ್ಶನಕ್ಕಿಂತಲೂ ತಿಂಗಳುಗಟ್ಟಲೇ ಅವಕ್ಕೆ ನಡೆಸುವ ತಾಲೀಮುಗಳದ್ದೇ ಸಂಭ್ರಮೋಲ್ಲಾಸದ ಕಥನಗಳು. ಇದನ್ನೆಲ್ಲ ಕಣ್ಣು ಬಾಯಿ ತೆರಕೊಂಡು ಸಡಗರದಿಂದ ನೋಡುತ್ತಿದ್ದ ನನ್ನಂಥ ಸಿಂಬಳಬುರಕ ಹುಡುಗರು, ಬಾಸು ಮಿಯ್ಯಾನಂತಹ ಹೂಸುಬುರಕ ಡುಮ್ಮಣ್ಣಗಳು ಈಗ ಕಾಣುತ್ತಲೇ ಇಲ್ಲ.
* * *
ದೀಡು ಹರದಾರಿ ದೂರದ ಯಡ್ರಾಮಿಯ ಹೊಟೆಲುಗಳಲ್ಲಿ ಅವತ್ತು ಆಟಾಣೆಗೆ ಸಿಗುವ ಹಾಫ್ಕೇಟಿ ಚಹದ ಸೋವಿ ಜಮಾನಾ ಬಹಳ ಹಿಂದಿನದೇನಲ್ಲ. ನಾನು ಸರ್ಕಾರಿ ನೌಕರಿಗೆ ಸೇರಿದ ಮೇಲೂ ದೊರಕುತ್ತಿತ್ತು. ಆಗ ತುಂಬಾ ತುಟ್ಟಿ ಎನಿಸುವ ಹತ್ತು ಪೈಸೆಗೊಂದು ಚಾರ್ಮಿನಾರ್ ಸಿಗರೇಟು ಸಿಗುತ್ತಿತ್ತು. ಅದನ್ನೇ ಸೇದುತ್ತಿದ್ದ ನಮ್ಮೂರಲ್ಲಿ ಛೇರ್ಮನ್ ಎಂಥಲೇ ಖ್ಯಾತಿ ಪಡೆದಿದ್ದ ಮಾಲಿ ಹಳ್ಳೆಪ್ಪಗೌಡರೆಂದರೆ ಎಲ್ಲರಿಗೂ ಎಲ್ಲಿಲ್ಲದ ಗೌರವ. ಯಾಕೆಂದರೆ ಅವರು ಯಾವ ದಾಕ್ಷಿಣ್ಯಕ್ಕೂ ಒಳಗಾಗದ ಮಹಾ ನಿಷ್ಠುರವಾದಿ. ಆದರೆ ಆತ ಚಹ ಕುಡಿಯುತ್ತಿರಲಿಲ್ಲ ನಮ್ಮೂರಲ್ಲಿ ಕಾಫಿ ಕುಡಿಯುತ್ತಿದ್ದ ಏಕೈಕರು ಅವರು. ಆತ ನಮ್ಮನೆಗೆ ಬಂದಾಗೆಲ್ಲ ನಮ್ಮವ್ವ ಐದು ಪೈಸೆಯ ಕಾಫಿ ಬಿಲ್ಲೆ ತಂದು ಗಟ್ಟಿ ಹಾಲಿನಲ್ಲಿ ಕಾಫಿ ಮಾಡಿಕೊಡುತ್ತಿದ್ದುದು ನನಗಿನ್ನೂ ಪಕ್ಕಾ ನೆನಪಿದೆ. ನೀವೇನೇ ತಿಳಕೋರಿ ಅವುಮಾತ್ರ ಸಸ್ತಾ ದಿನಗಳು.
ನನಗೆ ತುಂಬಾ ಸ್ಪಷ್ಟವಾದ ನೆನಪುಗಳಿವೆ : ಧರ್ಮಸಿಂಗ್ ತಮ್ಮ ಮೊಟ್ಟಮೊದಲ ಸಲದ ಚುನಾವಣೆಗೆ ವೋಟು ಕೇಳಲು ಬಂದಾಗ ತುಂಬಾ ತೆಳ್ಳಗಿದ್ದರು. ಆಗ ನಮ್ಮೂರೊಳಕ್ಕೆ ಕಾರು ಜೀಪುಗಳು ಬರುತ್ತಿರಲಿಲ್ಲ. ಕಾರಣ ಅವು ಬರಲು ಅಕ್ಷರಶಃ ದಾರಿಯೇ ಇರಲಿಲ್ಲ. ಆಗಿನ್ನೂ ಹಿರೇಹಳ್ಳಕ್ಕೆ ಪೂಲ್ (ಸೇತುವೆ) ಕಟ್ಟಿರಲಿಲ್ಲ. ಹಿಂಗಾಗಿ ನಡಕೊಂಡೇ ಹಳ್ಳ ದಾಟಿ ಬರಬೇಕಿತ್ತು. ಧರ್ಮಸಿಂಗ್ ೧೯೭೨ ರ ಮೊದಲ ಚುನಾವಣಾ ಮತಯಾಚನೆಗೆ ಹಿರೇಹಳ್ಳ ದಾಟಿ ಬರುವಾಗ ತಮ್ಮ ಎಡಗೈಯಲ್ಲಿ ಪಾದರಕ್ಷೆಗಳನ್ನು ರಕ್ಷಿಸಿಕೊಂಡಿದ್ದ ನೆನಪುಗಳು ನನ್ನಲ್ಲಿನ್ನೂ ಹಸಿಹಸಿಯಾಗಿವೆ.
* * *
ಕಣದಲ್ಲಿಯ ಜೋಳದ ರಾಶಿಯ ಹಂತಿ ನಮಗೆಲ್ಲ ಸುಗ್ಗಿಯಹಬ್ಬ. ರಾತ್ರಿಯೆಲ್ಲ ಮುದಭರಿತ ಪದಗಳ ಪಲ್ಲವಿ ಅನುಪಲ್ಲವಿಯ ಆಹ್ಲಾದ. ಪದ ಮುಗಿದು “ಹೋರ್ಮಲ್ಲಯ್ಯೋ” ಎಂದು ಹುಲುಸುಗೊಳ್ಳುವುದರ ಖುಷಿಗೆ ಬೇರೊಂದು ಸಾಟಿಯಿರಲಿಲ್ಲ. ಹಂತಿಪದಗಳನ್ನು ಪಿಂಜಾರ ಗೂಡೇಸಾ ಮುತ್ಯಾ ಹಾಡುತ್ತಿದ್ದರೆ, ಮೊಹರಂ ಪದಗಳನ್ನು ನಮ್ಮ ಕಾಕಾ ಲಚಮಣ್ಣ ಹಾಡುತ್ತಿದ್ದ. ನಮಗ್ಯಾರಿಗೂ ಇದು ಸಾಮರಸ್ಯ, ಕೋಮುಸೌಹಾರ್ದತೆಯ ಸಂಕೇತ ಪಿಂಕೇತ ಎಂಬ ನೆನಪು ಸಹಿತ ಇರ್ತಿರಲಿಲ್ಲ. ಅಲೈ ದೇವರ ಪೂಜಾರಿ ಪಿಂಜಾರ ಗೂಡೇಸಾ ನಮ್ಮ ಕೊರಳಿಗೆ ಲಾಡಿಹಾಕಿ ನಮ್ಮನ್ನೆಲ್ಲಾ ಫಕೀರರನ್ನಾಗಿ ಮಾಡುತ್ತಿದ್ದ. ಅಲೈ ದೇವರಿಗೆ ಮೀಸಲು ಮಾಡುತ್ತಿದ್ದ ಚೋಂಗೆ ನೈವೈದ್ಯ, ಮಾದಲಿಯ ಮಧುರ ನೆನಪುಗಳು ಹಚ್ಚ ಹಸಿರಾಗಿವೆ. ಹಸೇನ್ ಹುಸೇನ್ಕೀ ದೋಸ್ತರಾ ಹೋದ್ದೀನ್ ಎಂಬ ಜೈಕಾರ ಹಾಕುವ ಪೀರಲ್ಹಬ್ಬದ ಸಂಭ್ರಮ ಈಗೆಲ್ಲಿ ಹೋಯಿತು.?
ಬಿಸಿರೊಟ್ಟಿ ಊಟಕ್ಕೆ ಕೈಗಾಣದ ಘಮ ಘಮಿಸುವ ಕುಸುಬೆ ಎಣ್ಣೆ. ರಾತ್ರಿಹೊತ್ತು ಕಣ್ಣಿಗೆ ತಂಪೆರೆವ ಔಡಲೆಣ್ಣೆ ಹಣತೆಯ ತಣ್ಣನೆಯ ದೀಪ. ಅದು ಮೆಲ್ಲ ಮೆಲ್ಲಗೆ ತಂಪರಳಿದಂತೆ ನೀಡುತ್ತಿದ್ದ ತಂಬೆಳಕು ನನಗಿನ್ನೂ ನಿನ್ನೆಯಷ್ಟೇ ಎಂಬಂತೆ ಕಣ್ಮನ ತುಂಬಿಕೊಂಡಿದೆ. ಅಂತಹದೇ ಪ್ರೀತಿ, ಕಕ್ಕುಲತೆ ತುಂಬಿದ ಬಿಳಿಜೋಳದ ಬಿಸಿಮುಟ್ಟಗಿ, ಎಳ್ಳುಹಚ್ಚಿದ ಸಜ್ಜಿರೊಟ್ಟಿ, ಕಡ್ಲಿಗುಗ್ಗರಿ, ಬ್ಯಾಳಿ ಹಾಕಿದ ಪುಂಡಿಪಲ್ಯ, ಸಪ್ಪಾನುಚ್ಚು, ಬದನಿಕಾಯಿ ಬರ್ತ… ಅಬ್ಬಬ್ಬಾ ಒಂದೆ ಎರಡೇ, ಜವಾರಿ ರುಚಿಯ ಹತ್ತಾರು ವ್ಯಂಜನಗಳು. ಒಂದಕ್ಕಿನ್ನ ಒಂದು ನನ್ನ ಜೀವಪ್ರೀತಿಯನ್ನು ಇವತ್ತಿಗೂ ಬಿಗಿದಪ್ಪಿಕೊಂಡಿವೆ. ಅಂತಹ ನನ್ನೂರಿನ ಬದಲಾವಣೆಗಳು ಹಂಚಿನ ಮೇಲಿನ ರೊಟ್ಟಿ ತಿರುವಿ ಹಾಕಿದಂತೆ ಮಗ್ಗಲು ಬದಲಿಸಿದ್ದು ಸಂವೇದನಾಶೀಲ ಮನಸಿನ ಮೇಲೆ ಭಯಂಕರ ಪರಿಣಾಮ ಬೀರಿವೆ.

