ಲಿಂಗಾಯತ ಅಲ್ಪ ಸಂಖ್ಯಾತ ಮಾನ್ಯತೆಗೆ ಸರಕಾರದ ಮೀನ ಮೇಷ ಏಕೆ ?
೧೨ ನೆಯ ಶತಮಾನದ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಮತೆ ಚಳುವಳಿ ಲಿಂಗಾಯತ ಧರ್ಮದ ಉದಯಕ್ಕೆ ಕಾರಣವಾಯಿತು.
ಭಾರತದ ಪ್ರಸ್ತುತ ಕಾನೂನು ಮತ್ತು ಸಾಂವಿಧಾನಿಕ ಚೌಕಟ್ಟಿನ ಪ್ರಕಾರ, ಲಿಂಗಾಯತ ಧರ್ಮಕ್ಕೆ ಇನ್ನೂ ಪ್ರತ್ಯೇಕ ಅಥವಾ ಸ್ವತಂತ್ರ ಧರ್ಮದ ಕಾನೂನುಬದ್ಧ ಮಾನ್ಯತೆ ಸಿಕ್ಕಿಲ್ಲ. ಕಾನೂನಿನ ದೃಷ್ಟಿಯಲ್ಲಿ ಲಿಂಗಾಯತರನ್ನು ಹಿಂದೂ ಧರ್ಮದ ಒಂದು ಭಾಗವೆಂದೇ ಪರಿಗಣಿಸಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದ ಪ್ರಮುಖ ಕಾನೂನು ಅಂಶಗಳು ಮತ್ತು ಬೆಳವಣಿಗೆಗಳ ವಿವರ ಒಮ್ಮೆ ನೋಡೋಣ:
೧. ಪ್ರಸ್ತುತ ಕಾನೂನು ಸ್ಥಿತಿಗತಿ
• ಸಾಂವಿಧಾನಿಕ ಮತ್ತು ವೈಯಕ್ತಿಕ ಕಾನೂನುಗಳು. ೧೯೫೫ರ ಹಿಂದೂ ವಿವಾಹ ಕಾಯ್ದೆ (Hindu Marriage Act) ಮತ್ತು ೧೯೫೬ರ ಹಿಂದೂ ಉತ್ತರಾಧಿಕಾರ ಕಾಯ್ದೆಗಳ ಅಡಿಯಲ್ಲಿ ಬೌದ್ಧ, ಜೈನ ಮತ್ತು ಸಿಖ್ಖರಂತೆ ಲಿಂಗಾಯತರನ್ನೂ ‘ಹಿಂದೂ’ ವ್ಯಾಖ್ಯಾನದ ಅಡಿಯಲ್ಲಿಯೇ ಸೇರಿಸಲಾಗಿದೆ.
ಬೌದ್ಧ, ಜೈನ ಮತ್ತು ಸಿಖ್ಖರಿಗೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಕಾಯ್ದೆಯಡಿ ಪ್ರತ್ಯೇಕ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಲಾಗಿದೆ. ಆದರೆ ಲಿಂಗಾಯತರಿಗೆ ಆ ಮಾನ್ಯತೆ ಇಲ್ಲ.
• ಜನಗಣತಿ ದಾಖಲೆಗಳು.೧೮೭೧ ಮತ್ತು ೧೮೮೧ರ ಬ್ರಿಟಿಷ್ ಕಾಲದ ಜನಗಣತಿಯಿಂದಲೂ ಲಿಂಗಾಯತರನ್ನು ಹಿಂದೂ ಧರ್ಮದ ಒಂದು ಪಂಗಡ ಅಲ್ಲವೆಂದು ದಾಖಲಿಸುತ್ತಾ ಬರಲಾಗಿದೆ.ಇದು ಲಿಂಗಾಯತರಿಗೆ ತಿಳಿದಿರಾ ಬೇಕು.
೨. ಸರ್ಕಾರ ಮತ್ತು ಸಮಿತಿಗಳ ಶಿಫಾರಸುಗಳು
• ನಾಗಮೋಹನ್ ದಾಸ್ ಸಮಿತಿ (೨೦೧೭-೨೦೧೮)
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಿತ್ತು. ವೀರಶೈವಪರ ಮತ್ತು ಲಿಂಗಾಯತ ಧರ್ಮದ ಪರ ತಜ್ಞರ ಅಹವಾಲುಗಳನ್ನು ಸ್ವೀಕರಿಸಿ
ನ್ಯಾಯಮೂರ್ತಿ ಶ್ರೀ ನಾಗಮೋಹನದಾಸ ಅವರು
ಲಿಂಗಾಯತ ಇದು ಒಂದು ಅವೈದಿಕ ಹಿಂದುಯೇತರ ಧರ್ಮವಾಗಿದೆ. ವೀರಶೈವ ಲಿಂಗಾಯತ ಧರ್ಮದ ಒಂದು ಭಾಗ ಎಂದು ಸ್ಪಷ್ಟವಾಗಿ ಶಿಫಾರಸ್ಸು ನೀಡಿದೆ. ಆದರೆ ರಾಜಕೀಯ ಒತ್ತಡಕ್ಕೆ ಮಣಿದು ಅಂದಿನ ಕಾಂಗ್ರೆಸ್ ಸರಕಾರವು ( ೨೦೧೮) ಬಸವ ತತ್ವದಲ್ಲಿ ನಂಬಿಕೆ ಇರುವ ಲಿಂಗಾಯತ ಮತ್ತು ವೀರಶೈವ ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಕೇಂದ್ರ ಅಲ್ಪ ಸಂಖ್ಯಾತ ಕಚೇರಿಗೆ ಕಳುಹಿಸಿಕೊಟ್ಟಿತು.
ಬಸವ ತತ್ವವನ್ನು ಪಾಲಿಸುವ ಲಿಂಗಾಯತ ಮತ್ತು ವೀರಶೈವ-ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಬಹುದು ಎಂದು ನಾಗಮೋಹನದಾಸ ವರದಿ ಆಧಾರಿತ ಅಂದಿನ ಕರ್ನಾಟಕ ಸರಕಾರ ತನ್ನ ನಿರ್ಣಯ ಕ್ಯಾಬಿನೆಟ್ ನೀಡಿತ್ತು.
• ಕರ್ನಾಟಕ ಸಚಿವ ಸಂಪುಟದ ನಿರ್ಣಯ. ೨೦೧೮ರ ಮಾರ್ಚ್ನಲ್ಲಿ ಕರ್ನಾಟಕ ಸರ್ಕಾರವು ಈ ಸಮಿತಿಯ ವರದಿಯನ್ನು ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಿತ್ತು.
• ಕೇಂದ್ರ ಸರ್ಕಾರದ ನಿರಾಕರಣೆ
ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಕಾಯ್ದೆ (೧೯೯೨) ಅಡಿಯಲ್ಲಿ ಯಾವುದೇ ಸಮುದಾಯವನ್ನು ಅಲ್ಪಸಂಖ್ಯಾತ ಧರ್ಮವೆಂದು ಘೋಷಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ಆದರೆ ೨೦೧೩ರಲ್ಲಿ ಮತ್ತು ನಂತರ ೨೦೧೮ರ ನವೆಂಬರ್ನಲ್ಲಿ ಕೇಂದ್ರ ಗೃಹ ಸಚಿವಾಲಯವು ಕರ್ನಾಟಕದ ಪ್ರಸ್ತಾವನೆಯನ್ನು ತಿರಸ್ಕರಿಸಿತು. ಲಿಂಗಾಯತರು ಹಿಂದೂ ಧರ್ಮದ ಭಾಗವಾಗಿದ್ದಾರೆ ಮತ್ತು ಅವರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಿದರೆ ಆ ಸಮುದಾಯದಲ್ಲಿರುವ ಪರಿಶಿಷ್ಟ ಜಾತಿ (SC) ವರ್ಗದವರು ಮೀಸಲಾತಿ ಸೌಲಭ್ಯ ಕಳೆದುಕೊಳ್ಳುತ್ತಾರೆ ಎಂಬ ಕಾರಣವನ್ನು ಕೇಂದ್ರ ಸರ್ಕಾರ ನೀಡಿತ್ತು.
ಆದರೆ ಅದೇ ೨೦೧೩ ರ ಕೇಂದ್ರ ಸರಕಾರವು ಜೈನ ಧರ್ಮದ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನದ ಬೇಡಿಕೆಗೆ ಅನುಗುಣವಾಗಿ ಮಾನ್ಯತೆ ನೀಡಿದ್ದು ವಿಪರ್ಯಾಸ.
೩. ನ್ಯಾಯಾಲಯದ ನಿಲುವು
• ಕರ್ನಾಟಕ ಸರ್ಕಾರ ನಾಗಮೋಹನ್ ದಾಸ್ ಸಮಿತಿ ರಚಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್, ಸಮಿತಿ ರಚಿಸಲು ಆಯೋಗಕ್ಕೆ ಅಧಿಕಾರವಿದೆ ಎಂದು ಆರಂಭದಲ್ಲಿ ಹೇಳಿತ್ತು.
• ೨೦೧೮ರ ಡಿಸೆಂಬರ್ನಲ್ಲಿ ಕೇಂದ್ರ ಸರ್ಕಾರವು ರಾಜ್ಯದ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದಾಗಿ ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ ನಂತರ, ಹೈಕೋರ್ಟ್ ಆ ಅರ್ಜಿಗಳನ್ನು ಇತ್ಯರ್ಥಪಡಿಸಿತು.
೪. *ಪರ ಮತ್ತು ವಿರೋಧದ ವಾದಗಳು
• ಪರ ವಾದ (ಸ್ವತಂತ್ರ ಧರ್ಮದ ಬೇಡಿಕೆ). ೧೨ನೇ ಶತಮಾನದಲ್ಲಿ ಬಸವಣ್ಣನವರು ವೈದಿಕ ಆಚರಣೆಗಳು, ವೇದ-ಪುರಾಣಗಳ ಪ್ರಾಬಲ್ಯ ಮತ್ತು ಜಾತಿ ವ್ಯವಸ್ಥೆಯನ್ನು ತಿರಸ್ಕರಿಸಿ ಇಷ್ಟಲಿಂಗ ಪೂಜೆ ಹಾಗೂ ವಚನ ಸಾಹಿತ್ಯದ ಆಧಾರದ ಮೇಲೆ ಸ್ವತಂತ್ರ ಧರ್ಮವನ್ನು ಸ್ಥಾಪಿಸಿದರು ಎಂದು ಅನೇಕ ಲಿಂಗಾಯತ ಸಂಘಟನೆಗಳು ಮತ್ತು ಹಲವು ಮಠಾಧೀಶರು ವಾದಿಸಿದ್ದರು.
ಇನ್ನೂ ಕೆಲ ವೀರಶೈವವಾದಿಗಳಿಗೆ ವೀರಶೈವ ಇದು ಸನಾತನ ಮತ್ತು ಹಿಂದೂ ಧರ್ಮದ ಭಾಗವೆಂದು ಅಹವಾಲು ಇಟ್ಟಿದ್ದರು.
ನಾನೂ ಕೂಡ ಲಿಂಗಾಯತ ಧರ್ಮದ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನದ ಬೇಡಿಕೆಗೆ ನನ್ನ ಸ್ಪಷ್ಟ ಹೇಳಿಕೆಗಳನ್ನು ಅಂದು ನ್ಯಾಯಮೂರ್ತಿ ಶ್ರೀ ನಾಗಮೋಹನದಾಸ ಅವರ ಸಮಿತಿ ಮುಂದೆ ಸಾದರಪಡಿಸಿದವನು.
ಆದರೆ ನಮ್ಮ ವಾದ ಬೇಡಿಕೆಗಳು ಕೆಲ ರಾಜಕಾರಣಿಗಳ ಸ್ವಾರ್ಥ ಮಠಾಧೀಶರ ಜಡತ್ವ ಮತ್ತು ಸಾಮಾಜಿಕ ಮುಖಂಡರ ನಿವೃತ್ತ ಅಧಿಕಾರಿಗಳ ಜಾಣ ಮೌನ ಲಿಂಗಾಯತ ಸ್ವತಂತ್ರ ಧರ್ಮ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನದ ಬೇಡಿಕೆ ಇವರ ಹಿತಾಸಕ್ತಿಗೆ ಬಲಿಯಾದವು.
ನ್ಯಾಯಮೂರ್ತಿ
ನಾಗಮೋಹನದಾಸ ವರದಿ ಶಿಫಾರಸ್ಸು ಆಧರಿಸಿ ಕರ್ನಾಟಕ ರಾಜ್ಯ ಸರ್ಕಾರದ ಅಲ್ಪ ಸಂಖ್ಯಾತ ಆಯೋಗವೂ ಕೂಡ ಕರ್ನಾಟಕದಲ್ಲಿ ಲಿಂಗಾಯತ ಧರ್ಮೀಯರಿಗೆ ರಾಜ್ಯದಲ್ಲಿ ಅಲ್ಪ ಸಂಖ್ಯಾತರೆಂದು ಅಧಿಸೂಚನೆ ಹೊರಡಿಸ ಬಹುದು ಎಂಬ ಸುತ್ತೋಲೆ ಹೊರಡಿಸಿದ್ದನ್ನೂ ನಾವು ಮರೆತಿದ್ದೇವೆ.
ಬೌದ್ಧ ಕ್ರೈಸ್ತ ಇಸ್ಲಾಂ ಜೈನ ಸಿಖ್ ಧರ್ಮೀಯರಂತೆ ಲಿಂಗಾಯತ ಧರ್ಮವು ಸಂಪೂರ್ಣ ಸ್ವತಂತ್ರ ಧರ್ಮ ಎಂಬುದು ನ್ಯಾಯ ಸಮ್ಮತ ಮತ್ತು ಕಾನೂನು ಸಮ್ಮತ.
ಬಸವ ಭಕ್ತರು ಈ ರಾಜಕೀಯ ಪಕ್ಷದ ಮುಖಂಡರ ನಂಬಿ ತಮ್ಮ ಸವಲತ್ತುಗಳನ್ನು ಕಳೆದುಕೊಂಡಿದ್ದು ಈ ಶತಮಾನದ ದೊಡ್ಡ ದುರಂತವೆಂದು ಹೇಳ ಬಹುದು.
ಇತ್ತೀಚೆಗೆ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಬೆಂಗಳೂರಿನಲ್ಲಿ ಅಕ್ಟೋಬರ್ 24 ರಂದು ಏರ್ಪಡಿಸಿದ ಬಸವ ತತ್ವ ಜಗದ ತತ್ವ ಎಂಬ ವಿಷಯದ ಮೇಲೆ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ
ನ್ಯಾಯಮೂರ್ತಿ ಶ್ರೀ ಸಿದ್ದಪ್ಪ ಕೆಂಪೇಗೌಡರು ಲಿಂಗಾಯತ ಸ್ವತಂತ್ರ ಧರ್ಮವಲ್ಲವೇ? ಎನ್ನುವ ಕರ್ನಾಟಕ ಅಲ್ಪ ಸಂಖ್ಯಾತರ ಇಲಾಖೆಯಿಂದ ನ್ಯಾಯಮೂರ್ತಿ ಶ್ರೀ ನಾಗಮೋಹನದಾಸ ಅವರ ಸಮಿತಿ ವರದಿ ಮತ್ತು ಅಲ್ಪ ಸಂಖ್ಯಾತ ಇಲಾಖೆ ಹೊರಡಿಸಿದ ಸುತ್ತೋಲೆಗಳನ್ನು ಓದಿ ನನಗೆ ಅತೀವ ನೋವು ಉಂಟಾಯಿತು. ಶ್ರೀ ಸಿದ್ದಪ್ಪ ಎನ್ ಕೆಂಪೇಗೌಡರು ಇವರಿಗೆ ಇಡಿ ಲಿಂಗಾಯತ ಧರ್ಮೀಯರು ಕೃತಜ್ಞತೆ ಸಲ್ಲಿಸಬೇಕು.
ನೋವಿನ ಸಂಗತಿ ಎಂದರೆ ಇಷ್ಟೆಲ್ಲಾ ಸತ್ಯ ಗೊತ್ತಿದ್ದರೂ ಆಡಳಿತ ಮತ್ತು ವಿರೋಧ ಪಕ್ಷಗಳು ಬಸವಣ್ಣನವರ ವಾರಸುದಾರರು ಎಂದು ಹೇಳಿಕೊಳ್ಳುವ ವಿರಕ್ತ ಪರಂಪರೆಯ ಮಠಾಧೀಶರು
ಲಿಂಗಾಯತ ಮಹಾಸಭೆಯ ಪರಮೋಚ್ಛ ಪದಾಧಿಕಾರಿಗಳು ಏಕೆ ಮೌನ ವಹಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ ಲಿಂಗಾಯತ ಅಲ್ಪ ಸಂಖ್ಯಾತ ಮಾನ್ಯತೆಗೆ ಮೀನು ಮೇಷ ಮಾಡುತ್ತಿರುವುದು ಏಕೆ? ಉತ್ತರ ಸಿಗದ ಲಿಂಗಾಯತರಿಗೆ ಕಾಡುವ ನೂರೆಂಟು ಪ್ರಶ್ನೆಗಳು …..
