ಶಿಕ್ಷಣ, ಅಧ್ಯಾತ್ಮ ಮತ್ತು ಸರಳ ಬದುಕಿನ ಅಪರೂಪದ ಸಂತ
– ಶ್ರೀ ಯಲ್ಲಪ್ಪ ಜಾಲಿಹಾಳ

ಶಿಕ್ಷಣ, ಸಂಸ್ಕಾರ, ಅಧ್ಯಾತ್ಮ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಸಾವಿರಾರು ಜನರ ಬದುಕಿಗೆ ಬೆಳಕಾದವರು ಶ್ರೀ ಯಲ್ಲಪ್ಪ ಜಾಲಿಹಾಳ ಅವರು.
ಯಲ್ಲಪ್ಪ ಜಾಲಿಹಾಳ ಧರ್ಮ ಪತ್ನಿ ಅನ್ನಪೂರ್ಣ ಮ್ಮ ನವರು ಇತ್ತೀಚಿಗೆ ನಿಧಾನರಾದ ನಂತರ ಗುರುಗಳು ಮಡದಿಯ ಅಗಲಿಕೆಯ ನೋವು ಕಾಡುತಿತ್ತು. ಇವರಿಗೆ ಮೂರು ಜನ ಮಕ್ಕಳು. ಶ್ರೀಶೈಲ ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತಿ ಹೊಂದಿದ್ದಾರೆ. ಇನ್ನೊಬ್ಬ ಪುತ್ರ ಚಂದ್ರಹಾಸ್ ಚಿತ್ರ ಕಲಾವಿದ ಕಲಬುರಗಿ ಯಲ್ಲಿ ನೇಲಿಸಿದ್ದಾರೆ. ಮಗಳು ಲತಾ ಬೆಂಗಳೂರಿನಲ್ಲಿ ವಾಸವಿದ್ದು ಯಲ್ಲಪ್ಪ ಗುರುಗಳು ಕೊನೆಯ ದಿನಗಳನ್ನು ಮಗಳ ಮನೆಯಲ್ಲಿ ಕಳೆಯುತ್ತಿದ್ದರು.
ವೃತ್ತಿಯಿಂದ ಶಿಕ್ಷಕರಾಗಿದ್ದ ಅವರು, ಸ್ವಯಂ ನಿವೃತ್ತಿ (VRS) ಪಡೆದುಕೊಂಡಿದ್ದರೂ ಜ್ಞಾನವನ್ನು ಹಂಚುವ ಕಾಯಕದಿಂದ ಎಂದಿಗೂ ನಿವೃತ್ತರಾಗಲಿಲ್ಲ.
ಮಸ್ಕಿಯಲ್ಲಿ ಸುಮಾರು 40 ವರ್ಷಗಳ ಕಾಲ ಸೈನಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ ಅವರು, ನೂರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರ ಮಾರ್ಗದರ್ಶನದಲ್ಲಿ ಬೆಳೆದ ಅನೇಕ ವಿದ್ಯಾರ್ಥಿಗಳು ವಿಜಯಪುರ ಮತ್ತು ಮಡಿಕೇರಿಯ ಸೈನಿಕ ಶಾಲೆಗಳಿಗೆ ಪ್ರವೇಶ ಪಡೆದು ಬದುಕು ಕಟ್ಟಿಕೊಂಡರು.
ಅವರಲ್ಲಿ ಹಲವರು ಭಾರತೀಯ ಸೇನೆಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದರೆ, ಇನ್ನೂ ಹಲವರು ವೈದ್ಯರು, ಎಂಜಿನಿಯರ್ಗಳಾಗಿ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ. ಇದು ಅವರ ಶೈಕ್ಷಣಿಕ ಸೇವೆಯ ಹೆಗ್ಗುರುತು.
ಯಲ್ಲಪ್ಪ ಸರ್ ಅವರು ಮಹಾಮನೆ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ, ವಚನಕಾರರ ವಿಚಾರಧಾರೆ, ತತ್ವಚಿಂತನೆ ಹಾಗೂ ಅನುಭಾವದ ಕುರಿತು ನಿರಂತರ ಚಿಂತನ-ಮಂಥನ ನಡೆಸುತ್ತಿದ್ದರು. ಕ್ರಮೇಣ ಅಧ್ಯಾತ್ಮದ ಆಳಕ್ಕಿಳಿದ ಅವರು, ಇಲಕಲ್ಲಿನ ವಿಜಯಮಹಾಂತೇಶ್ವರ ಶಾಖಾ ಮಠದ ಸ್ವಾಮೀಜಿಗಳಾಗಿ ಆಧ್ಯಾತ್ಮಿಕ ಬದುಕಿಗೆ ಕಾಲಿಟ್ಟರು. ಆದರೆ ಮುಂದೆ ಕಾವಿಯನ್ನು ತ್ಯಜಿಸಿ, ಬಿಳಿ ವಸ್ತ್ರಧಾರಿಯಾಗಿ ಸರಳ ಸಂತಜೀವನ ನಡೆಸಿದರು.
ಶಿಕ್ಷಕರಾಗಿ ಜ್ಞಾನ ದೀಪ ಬೆಳಗಿದವರು, ಅಧ್ಯಾತ್ಮಜೀವಿಯಾಗಿ ಅರಿವಿನ ಬೆಳಕು ಹರಡಿದವರು ಇಂದು ಲಿಂಗೈಕ್ಯರಾಗಿದ್ದಾರೆ.
ಅವರ ಬದುಕು ಸೇವೆಗೆ ಮಾದರಿ, ಅವರ ನೆನಪು ಸಮಾಜಕ್ಕೆ ಪ್ರೇರಣೆ. ಶ್ರೀ ಯಲ್ಲಪ್ಪ ಜಾಲಿಹಾಳ ಅವರಿಗೆ ಭಕ್ತಿಪೂರ್ವಕ ನಮನಗಳು.