ಬಿಡುಗಡೆಯ ಭಾಗ್ಯ
ಮೊದಲ ಬಾರಿಗೆ ದೂರದ ದೆಹಲಿಯಲ್ಲಿರುವ ಮಗಳ ಬಳಿ ಹೋಗಲು ತನ್ನನ್ನು ರೈಲಿಗೆ ಬಿಡಲು ಬಂದ ಪತಿಯನ್ನು ಮತ್ತೊಮ್ಮೆ ಕಣ್ತುಂಬ ನೋಡಿದ ಆಕೆ ಆತನಿಗೆ ಕಾಳಜಿ ಮಾಡಿಕೊಳ್ಳಲು ಹೇಳುತ್ತಾ ತನ್ನ ಲಗೇಜ್ ನ್ನು ಕೈಗೆ ತೆಗೆದುಕೊಂಡು ಹಿಂತಿರುಗಿ ನೋಡದೆ ತನ್ನ ಸೀಟಿಗೆ ಹೋಗಿ ಕುಳಿತುಕೊಂಡಳು.
ಇನ್ನೇನು ಈತ ಕೈ ಬೀಸಬೇಕೆಂಬ ಹೊತ್ತಿಗೆ ರೈಲು ಹೊರಟೇಹೋಯಿತು. ಸಣ್ಣದಾಗಿ ಸಿಳ್ಳೆ ಹಾಕುತ್ತಾ ಸ್ಟೇಷನ್ ನಿಂದ ಹೊರಬಿದ್ದ ಆತ ಹೆಂಡತಿ ಮನೆಯಲ್ಲಿಲ್ಲದ ಈ ಹೊತ್ತಿನಲ್ಲಿ ಏನೆಲ್ಲಾ ಮಜಾ ಮಾಡಬಹುದು ಎಂಬುದನ್ನು ಯೋಜಿಸತೊಡಗಿದ.
ಪಾರ್ಕಿಂಗ್ ನಲ್ಲಿದ್ದ ಕಾರಿನ ಬಳಿ ಬಂದು ಕಾರಿನ ಡ್ರೈವಿಂಗ್ ಸೀಟಲ್ಲಿ ಕುಳಿತು ಗಾಡಿ ಶುರು ಮಾಡಿ ಮುಂದಕ್ಕೆ ಓಡಿಸಿದಾಗ ಥಟ್ಟನೆ ಆತನ ತಲೆಗೆ ಬಂದದ್ದು ಗಾಡಿಯನ್ನು ಏರುವಾಗ ತನ್ನ ಪತ್ನಿ ಕುಸುಮ ತನ್ನ ಎದೆಯ ಮೇಲೆ ಕೈ ಆಡಿಸಿ ಆರೋಗ್ಯದ ಕಾಳಜಿ ಮಾಡಿಕೊಳ್ಳಲು ಹೇಳಿದ್ದು. ಏಕೋ ಗೊತ್ತಿಲ್ಲ… ಆತನ ಅರಿವಿಗೆ ಬಾರದೆ ಆತನ ಕೈ ಆತನ ಎದೆಯ ಭಾಗವನ್ನು ಸವರಿತ್ತು. ಆತನ ಅಂಗಿಯ ಜೇಬಿನಲ್ಲಿ ಏನೋ ತಾಕಿದಂತಾಗಿ ಕೈ ಹಾಕಿ ನೋಡಿದರೆ ಪುಟ್ಟದೊಂದು ಕಾಗದ ಜೇಬಿನಲ್ಲಿ ಬೆಚ್ಚಗೆ ಕುಳಿತಿತ್ತು.
ಕಾರನ್ನು ಒಂದೆಡೆ ಸೈಡಿಗೆ ನಿಲ್ಲಿಸಿ ಲಗುಬಗೆಯಿಂದ ಕಾಗದವನ್ನು ತೆರೆದು ನೋಡಿದನಾತ.. ಪತ್ರದಲ್ಲಿನ ಕೈಬರಹ ಆತನ ಪತ್ನಿಯದ್ದೆ…. ಅರೆ ಇಷ್ಟೊತ್ತು ನನ್ನ ಜೊತೆ ಇದ್ದವಳು, ಅದೇಕೆ ಪತ್ರ ಬರೆದಳು ಎಂಬ ಕುತೂಹಲ ಆತನಿಗೆ ಆ ಪತ್ರವನ್ನು ಓದುವಂತೆ ಮಾಡಿತು.
ಪತ್ರದ ಒಕ್ಕಣೆ ಹೀಗಿತ್ತು
ನನ್ನ ಪ್ರೀತಿಯ!? ಯಜಮಾನರೇ
ಮೇಲಿನ ಒಕ್ಕಣೆ ನಿಮಗೆ ಆಶ್ಚರ್ಯ ತರಿಸಿರಬಹುದು. ಯಾವತ್ತಾದರೂ ಪ್ರೀತಿಯಿಂದ ನಡೆದುಕೊಂಡಿದ್ದರೆ ತಾನೆ! ಈ ಒಕ್ಕಣೆಗೊಂದು ಅರ್ಥ ಬರುವುದು. ಇನ್ನು ಯಜಮಾನರೇ ಎಂದು ಕರೆಯಲು ಕಾರಣ ನಾನ್ಯಾವತ್ತು ನಿಮ್ಮ ಬಾಳಸಂಗಾತಿ ಆಗಿರಲೇ ಇಲ್ಲ. ಸದಾ ನಿಮ್ಮ ಬೇಕು ಬೇಡಗಳನ್ನು ಪೂರೈಸುತ್ತಾ ನಿಮ್ಮ ಊಟ ಉಪಚಾರಗಳ ವ್ಯವಸ್ಥೆ ಮಾಡುತ್ತಾ, ನಿಮ್ಮ ಮನೆಯ (ಹೌದು ನಿಮ್ಮ ಮನೆಯೇ! ಏಕೆಂದರೆ ಮಾತಿಗೊಮ್ಮೆ ನನ್ನ ಮನೆಯಲ್ಲಿ ನನ್ನ ಮಾತೇ ನಡೆಯಬೇಕು ಎಂದು ಹೇಳಿ ಅಂತೆಯೇ ನಡೆಸಿಕೊಳ್ಳುತ್ತಿದ್ದಿರಲ್ಲವೇ) ತೊತ್ತಿನಂತೆ ವರ್ಷಗಳ ಕಾಲ ಜೀವನ ನಡೆಸಿದ್ದೇನೆ. ಅತ್ತೆ, ಮಾವ, ನೀವು ಮತ್ತು ಮಕ್ಕಳು ಹೀಗೆ ಎಲ್ಲರಿಗೂ ಬೇಕಾದದ್ದನ್ನ ಒದಗಿಸುವ ಯಂತ್ರವಾಗಿದ್ದೆ. ಯಾವತ್ತೂ ನನ್ನ ಮಕ್ಕಳು ಕೂಡ ನನಗೆ ನೀಡಬೇಕಾದ ಆದರವನ್ನು, ಪ್ರೀತಿಯನ್ನು ನೀಡಲೇ ಇಲ್ಲ ಕಾರಣ ನೀವೇ. ನನ್ನೆಡೆಗೆ ನೀವು ತೋರುವ ಅಸಡ್ಡೆ, ಅನಾದರಗಳನ್ನು ಕಂಡು ಬೆಳೆದ ಮಕ್ಕಳು ಕೂಡ ನನ್ನೊಂದಿಗೆ ಹಾಗೆಯೇ ನಡೆದುಕೊಂಡರು. ತಾಯಿ ಎಂದರೆ ಅವರ ಪಾಲಿಗೆ ಅವರಿಗೆ ಬೇಕಾಗುವ ಎಲ್ಲವನ್ನು ಪೂರೈಸುವ ಭಾವನೆಗಳಿಲ್ಲದ ಒಂದು ಯಂತ್ರ ಎಂದು.
ಇದರಲ್ಲಿ ನನ್ನ ತಪ್ಪು ಕೂಡ ಇದೆ…. ಒಳ್ಳೆಯ ಸೊಸೆಯಾಗುವ, ಒಳ್ಳೆಯ ಪತ್ನಿಯಾಗುವ, ಒಳ್ಳೆಯ ತಾಯಿಯಾಗುವ, ಉತ್ತಮ ಗೃಹಿಣಿಯಾಗುವ ಭರದಲ್ಲಿ ನನ್ನನ್ನು ನಾನು ಮರೆತೆ ಬಿಟ್ಟೆ. ನನಗೂ ಒಂದು ವ್ಯಕ್ತಿತ್ವವಿದೆ, ಆ ವ್ಯಕ್ತಿತ್ವಕ್ಕೊಂದು ಘನತೆ ಇದೆ ಎಂಬುದು ನನ್ನ ಅರಿವಿಗೆ ಬಾರದೆ ಹೋಯಿತು. ನನ್ನರಿವಿಗೆ ಬರುವ ಹೊತ್ತಿಗೆ ಕಾಲ ಮಿಂಚಿಹೋಗಿತ್ತು. ಅತ್ತೆ ಮಾವ ಕಾಲನ ತೆಕ್ಕೆಗೆ ಸೇರಿ ಹೋಗಿದ್ದಾರೆ. ಇದೀಗ ಮಕ್ಕಳು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ, ಅವರಿಗೆ ನನ್ನ ಅವಶ್ಯಕತೆ ಇಲ್ಲ. ನಿಮಗೆ ನಿಮ್ಮೆಲ್ಲ ಕೆಲಸಗಳನ್ನು ಪೂರೈಸಲು ನಾನು ಬೇಕಾಗಿರಬಹುದು… ಆದರೆ ಪತ್ನಿಯಾಗಿ ಎಂದೂ ಅಲ್ಲ ಎಂಬುದು ನನಗೆ ಗೊತ್ತು. ತಡವಾಗಿಯಾದರೂ ನನ್ನರಿವಿಗೆ ಬಂದದ್ದು ಇಷ್ಟು. ದೇವರು ನನಗೆ ಕೊಟ್ಟಿರುವುದು ಒಂದೇ ಜನ್ಮ ಈ ಒಂದು ಜನ್ಮದಲ್ಲಿಯೇ ನಾನು ನಿಮ್ಮೆಲ್ಲರ ಜೊತೆ ಬದುಕುತ್ತಲೇ ನನ್ನದೇ ಆದ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಂಡು ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕಾಗಿತ್ತು ಎಂದು. ಅಂತೆಯೇ ನಿಮ್ಮೆಲ್ಲರಿಂದ ದೂರವಾಗಿ ನನ್ನ ಸ್ನೇಹಿತೆಯ ಸಹಾಯದಿಂದ ನಾನು ದೂರದ ಊರೊಂದರ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಲು ಹೊರಟಿದ್ದೇನೆ. ಈ ಪತ್ರವನ್ನು ನೀವು ಓದುವ ವೇಳೆಗೆ ನಾನು ನನ್ನ ಪಯಣದ ಹಾದಿಯನ್ನು ಬದಲಿಸಿರುತ್ತೇನೆ. ನನ್ನನ್ನು ಹುಡುಕುವ ಪ್ರಯತ್ನ ಮಾಡಲೇಬೇಡಿ. ಮುಂದಿನ ಒಂದು ಜನ್ಮವಿದ್ದರೆ ಹೆಣ್ಣಿನ ನೋವು ಸಂಕಟಗಳನ್ನು ಅರಿತು ಬಾಳಿ ಎಂದಷ್ಟೇ ಹೇಳಬಯಸುವೆ.
ಇಂತಿ ನಿಮ್ಮವಳಾಗಿದ್ದ
?????
ಓದಿ ಮುಗಿಸಿದ ಆತ ತಲೆಯ ಮೇಲೆ ಕೈ ಹೊತ್ತ. ಇದುವರೆಗೂ ತನ್ನ ಜೀವನದಲ್ಲಿ ನಡೆದ ಎಲ್ಲ ಘಟನೆಗಳನ್ನು ನೆನಪಿಸಿಕೊಳ್ಳಲು ತಾನು ಅದೆಷ್ಟು ಕೃತಘ್ನ ನಾಗಿ ನಡೆದುಕೊಂಡೆ ಎಂಬುದರ ಅರಿವಾದಾಗ ತಂತಾನೇ ಆತನ ತಲೆ ತಗ್ಗಿತು.
–ವೀಣಾ ಹೇಮಂತ್ ಗೌಡ ಪಾಟೀಲ ಮುಂಡರಗಿ ಗದಗ

