ವೀರಹನುಮಾನರ ಸಾಹಿತ್ಯ ಸೇವೆ, ಚಿಂತನೆ ಎಲ್ಲರಿಗೂ ಮಾದರಿ – ಮಹಾಂತೇಶ ಮಸ್ಕಿ
e- ಸುದ್ದಿ ರಾಯಚೂರು
ಸಾಹಿತ್ಯ ಕ್ಷೇತ್ರದಲ್ಲಿ ವೀರ ಸಾಧನೆ, ಹನುಮಾನ ಅವರು ಸಲ್ಲಿಸಿದ ಸೇವೆ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅವರು ಹೊಂದಿರುವ ಅಪಾರ ಕಾಳಜಿ, ಸಮಾಜಮುಖಿ ಚಿಂತನೆಗಳು ಎಲ್ಲರಿಗೂ ಮಾದರಿಯಾಗಿವೆ ಎಂದು ಹಿರಿಯ ಸಾಹಿತಿ ಮಹಾಂತೇಶ ಮಸ್ಕಿ ಹೇಳಿದರು.
ಅವರು ನಗರದ ಪ್ರತಿಷ್ಠಿತ ತಾರಾನಾಥ ಶಿಕ್ಷಣ ಸಂಸ್ಥೆಯಿಂದ ಎಲ್ವಿಡಿ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ವೀರಹನುಮಾನ ಇವರಿಗೆ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅಭಿನಂದನಾ ನುಡಿಗಳನ್ನಾಡಿದರು.
ಸಾಹಿತ್ಯ ವೆಂಬುದು ಕೇವಲ ಅಕ್ಷರಗಳ ಅಭಿವ್ಯಕ್ತಿಯಲ್ಲ, ಅದು ಸಮಾಜದ ಚಿಂತನೆ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿಯಾಗಿದೆ. ಅಂತಹ ಸಾಹಿತ್ಯ ಕ್ಷೇತ್ರದಲ್ಲಿ ವೀರಹನುಮಾನ್ ಸಾಹಿತ್ಯ ಸೇವೆ, ಚಿಂತನೆ ಎಲ್ಲರಿಗೂ ಮಾದರಿಯಾಗಿದೆ ಎಂದರು.
ತಮ್ಮದೇ ಆದ ಛಾಪು ಮೂಡಿಸಿ ರಾಜ್ಯಮಟ್ಟದ ಗೌರವಕ್ಕೆ ಪಾತ್ರರಾಗಿರುವ ವೀರಹನುಮಾನ್ ಅವರ ಸಾಧನೆ ಯುವ ಸಾಹಿತಿಗಳಿಗೆ ಹಾಗೂ ಸಾಹಿತ್ಯಾಸಕ್ತರಿಗೆ ಪ್ರೇರಣಾದಾಯಕ. ಅವರ ಸಾಹಿತ್ಯ ಸೇವೆ ಇನ್ನಷ್ಟು ವಿಸ್ತಾರಗೊಳ್ಳಲಿ, ಅವರ ಲೇಖನಿಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೃತಿಗಳು ಮೂಡಿಬರಲಿ ಹಾಗೂ ಅವರ ಸಾಧನೆ ಮುಂದಿನ ಪೀಳಿಗೆಗೆ ಸದಾ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಸಾಹಿತಿ ವೀರಹನುಮಾನ್ ಅವರು ಇಂದು ನನ್ನ ಜೀವನದ ಸಾಹಿತ್ಯ ಪಯಣದಲ್ಲಿ ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಕ್ಷಣವಾಗಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನನಾದ ನನ್ನನ್ನು ಗುರುತಿಸಿ, ತಾರಾನಾಥ ಶಿಕ್ಷಣ ಸಂಸ್ಥೆಯಿಂದ ಅಭಿನಂದನಾ ಸಮಾರಂಭ ಆಯೋಜಿಸಿ ಗೌರವಿಸುತ್ತಿರುವುದು ನನ್ನ ಪಾಲಿಗೆ ಅವಿಸ್ಮರಣೀಯವಾಗಿದೆ ಎಂದರು.
ಸಂಸ್ಥೆಯ ಗೌರವಾಧ್ಯಕ್ಷರಾದ ಪಾರಸಮಲ್ ಸುಖಾಣಿ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಉತ್ತಮ ಪರಂಪರೆಯನ್ನು ಬೆಳೆಸುತ್ತಿದ್ದಾರೆ. ಅದೇ ರೀತಿ ಅಧ್ಯಕ್ಷ ಪವನ ಕುಮಾರ್ ಸುಖಾಣಿ ಅವರು ತಮ್ಮ ಸಾಹಿತ್ಯ ಸೇವೆ ಗುರುತಿಸಿ ಅಭಿನಂದನಾ ಸಮಾರಂಭ ಆಯೋಜಿಸಿದ್ದು, ಇಲ್ಲಿ ಗಣ್ಯರು ಆಡಿದ ಮಾತುಗಳು ತಮ್ಮ ಜವಾಬ್ದಾರಿ ಹೆಚ್ಚಿಸಿವೆ ಎಂದು ಹೇಳಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ, ಎಲ್ಲರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ನನ್ನ ಸಾಹಿತ್ಯ ಪಯಣದ ನಿಜವಾದ ಶಕ್ತಿ ಎಂದು ವೀರಹನುಮಾನ್ ಅವರು ಹೇಳಿದರು.
ತಾ.ಶಿ.ಸಂಸ್ಥೆಯ ಗೌರವಾಧ್ಯಕ್ಷ ಪಾರಸಮಲ್ ಸುಖಾಣಿ ಮಾತನಾಡಿ, ಒಬ್ಬ ಸಾಹಿತಿಯ ಸಾಧನೆ ಕೇವಲ ವೈಯಕ್ತಿಕ ಸಾಧನೆಯಾಗಿರದೆ, ಅದು ನಾಡು, ನುಡಿ ಮತ್ತು ಸಂಸ್ಕೃತಿಯ ಗೌರವವನ್ನು ಹೆಚ್ಚಿಸುವಂತದ್ದಾಗಿದೆ. ಸಾಹಿತ್ಯ ಸಾಧಕರಿಗೆ ಸಲ್ಲಿಸುವ ಗೌರವವು ವ್ಯಕ್ತಿಯೊಬ್ಬರಿಗೆ ಸಲ್ಲಿಸುವ ಸನ್ಮಾನ ಮಾತ್ರವಲ್ಲ, ಅದು ಸಾಹಿತ್ಯ ಸರಸ್ವತಿಗೆ ಸಲ್ಲಿಸುವ ಗೌರವವೂ ಹೌದು. ತಮ್ಮ ಬರವಣಿಗೆ, ಸಾಹಿತ್ಯಿಕ ಚಿಂತನೆ ಹಾಗೂ ಸಮಾಜಮುಖಿ ಅಭಿವ್ಯಕ್ತಿಗಳ ಮೂಲಕ ವೀರಹನುಮಾನ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದು ಅವರ ನಿರಂತರ ಪರಿಶ್ರಮ, ಸಾಹಿತ್ಯ ನಿಷ್ಠೆ ಮತ್ತು ಸೃಜನಶೀಲತೆಗೆ ಸಂದ ಗೌರವವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ.ಶಿ.ಸಂ.ಯ ಅಧ್ಯಕ್ಷ ಪವನಕುಮಾರ ಸುಖಾಣಿ ಮಾತನಾಡುತ್ತಾ, ಪ್ರತಿಭೆ ಮತ್ತು ಸಾಧನೆಯನ್ನು ಗುರುತಿಸಿ ಗೌರವಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಸಂಸ್ಥೆಯು ಶಿಕ್ಷಣದ ಜೊತೆಗೆ ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರನ್ನು ಗೌರವಿಸುತ್ತಾ ಬಂದಿದೆ.
ವೀರಹನುಮಾನ್ ಅವರ ಸಾಹಿತ್ಯ ಪಯಣ ಇನ್ನಷ್ಟು ಉಜ್ವಲವಾಗಲಿ, ಅವರ ಅನುಭವ ಮತ್ತು ಸಾಹಿತ್ಯಿಕ ಚಿಂತನೆಗಳು ಯುವಸಾಹಿತಿಗಳಿಗೆ ಮಾರ್ಗದರ್ಶನವಾಗಲಿ. ಕನ್ನಡ ಸಾಹಿತ್ಯದ ಸೇವೆಯಲ್ಲಿ ಅವರು ಇನ್ನೂ ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸಲಿ ಎಂದು ಹಾರೈಸಿದರು.
ವೇದಿಕೆಯ ಮೇಲೆ ತಾ.ಶಿ.ಸಂ.ಯ ಖಜಾಂಚಿ ಪುರುಷೋತ್ತಮ ದಾಸ್ ಇನ್ನಾಣಿ ಇವರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಬಾಪತಿ ಪಾಟೀಲ್ ವಕೀಲರು ಸ್ವಾಗತಿಸಿದರು. ಸದಸ್ಯರಾದ ಜಟ್ರಂ ಶ್ರೀನಿವಾಸ ಪ್ರಶಸ್ತಿ ಫಲಕ ವಾಚನ ಮಾಡಿದರು. ಕು. ಹರ್ಷಿತಾ ಪ್ರಾರ್ಥಿಸಿದರು. ಡಾ. ಅರುಣಾ ಹಿರೇಮಠ ಕಾರ್ಯಕ್ರಮ ನಿರೂಪಿಸಿದರೆ, ತಾ.ಶಿ.ಸಂ.ಯ ಸದಸ್ಯರಾದ ಸಚಿನ ಇನ್ನಾಣಿ ವಂದಿಸಿದರು.
ಕಾರ್ಯಕ್ರಮದಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರುಗಳು, ವಿಶೇಷ ಆಹ್ವಾನಿತರು, ಶಾಲಾ ಕಾಲೇಜುಗಳ ಮುಖ್ಯೋಪಾಧ್ಯಾಯರು, ಪ್ರಾಚಾರ್ಯರು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
