ಜ.4ರಂದು ಸಿಂಧನೂರಿನಲ್ಲಿ ಕುರುಬ ಜನಾಂಗದ ಬೃಹತ್ ಸಮಾವೇಶ
ಎಸ್‍ಟಿ ಮೀಸಲಾತಿ ನಮ್ಮ ಹಕ್ಕು-ಎಂ.ಈರಣ್ಣ
e- ಸುದ್ದಿ ಮಾನ್ವಿ:
‘ರಾಜ್ಯದ ಕುರುಬ ಜನಾಂಗವನ್ನು ಪರಿಶಿಷ್ಟ ಪಂಗಡ ಮೀಸಲಾತಿಗೆ ಒಳಪಡಿಸಲು ಒತ್ತಾಯಿಸಿ ಜ.4ರಂದು ಸಿಂಧನೂರಿನಲ್ಲಿ ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಕುರುಬರ ವಿಭಾಗೀಯ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಕುರುಬರ ಎಸ್‍ಟಿ ಹೋರಾಟ ಸಮಿತಿಯ ವಿಭಾಗೀಯ ಅಧ್ಯಕ್ಷ ಎಂ.ಈರಣ್ಣ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್.ಟಿ.ಮೀಸಲಾತಿ ನಮ್ಮ ಹಕ್ಕಾಗಿದೆ. ಕುರುಬರು ಮೂಲತಃ ಬುಡಕಟ್ಟ ಜನಾಂಗದವಾರಾಗಿದ್ದು, ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಜೇನುಕುರುಬ, ಕಾಡುಕುರುಬ, ಗೊಂಡ, ರಾಜಗೊಂಡ, ಕುರುಬ ಜಾತಿಗಳು ಪರಿಶಿಷ್ಟ ಪಟ್ಟಿಯಲ್ಲಿವೆ. ಕೊಡಗು ಜಿಲ್ಲೆಯಲ್ಲಿ ಮಾತ್ರ ಕುರುಬರನ್ನು ಎಸ್.ಟಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದ್ದರಿಂದ ಕೂಡಲೇ ಸರ್ಕಾರ ರಾಜ್ಯದಲ್ಲಿ ಎಸ್.ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಕುರುಬರನ್ನು ಎಸ್.ಟಿ ಮೀಸಲಾತಿ ವ್ಯಾಪ್ತಿಗೆ ಸೇರಿಸಬೇಕು’ ಎಂದು ಒತ್ತಾಯಿಸಿದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಬಸವಂತಪ್ಪ ಮಾತನಾಡಿ, ‘ ಜ.4ರಂದು ಸಿಂಧನೂರಿನಲ್ಲಿ ಸಮಾಜದ ಸ್ವಾಮೀಜಿಗಳು, ಜನಪ್ರತಿನಿಧಿಗಳ ನೇತೃತ್ವದಲ್ಲಿ ನಡೆಯುವ ಕುರುಬರ ಸಮಾವೇಶದಲ್ಲಿ ಸುಮಾರು 1ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ 5-6ಸಾವಿರ ಜನರು ಭಾಗವಹಿಸುವರು. ಎಸ್‍ಟಿ ಮೀಸಲಾತಿ ಸೌಲಭ್ಯ ಪಡೆಯುವುದರಿಂದ ಜನಾಂಗದ ಮಕ್ಕಳಿಗೆ ಉನ್ನತ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಹೆಚ್ಚಿನ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗಲಿದೆ’ ಎಂದರು.
ಕುರುಬರ ಎಸ್.ಟಿ.ಮೀಸಲಾತಿ ಹೋರಾಟ ಸಮಿತಿಯ ತಾಲ್ಲೂಕು ಅಧ್ಯಕ್ಷ ಆರ್.ಸತ್ಯನಾರಾಯಣ ಮುಷ್ಟೂರು, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಶ್ರೀನಿವಾಸ ಸೀಕಲ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಶಿವಶಂಕರಗೌಡ ಬಾಗಲವಾಡ, ಮಲ್ಲಯ್ಯ ನಸಲಾಪುರ, ಬಸವರಾಜ ವಡ್ಲೂರು, ಗಾದಿಲಿಂಗಪ್ಪ ಇದ್ದರು.
100%