e-ಸುದ್ದಿ, ಮಸ್ಕಿ
ತಾಲೂಕಿನ 17 ಗ್ರಾ.ಪಂ.ಗಳ ಮತ ಎಣಿಕೆ ಬುಧವಾರ ಪಟ್ಟಣದ ದೇವನಾಂಪ್ರಿಯ ಅಶೋಕ ಸರ್ಕಾರಿ ಪದವಿ ಕಾಲೇಜಿನಲ್ಲಿ ಬೀಗಿ ಭದ್ರತೆಯಲ್ಲಿ ನಡೆಯಿತು.
ಬೆಳಿಗ್ಗೆ 8 ಗಂಟೆಗೆ 8 ಕೊಠಡಿಗಳಲ್ಲಿ 55 ಬೆಂಚುಗಳಲ್ಲಿ ಮತ ಎಣಿಕೆ ನಡೆಸಲಾಯಿತು. ಮತ ಎಣಿಕೆ ಕೇಂದ್ರದ ಮುಂದೆ ಅಭ್ಯರ್ಥಿಗಳ ಬೆಂಬಲಿಗರು ಅಧಿಕ ಸಂಖ್ಯೆಯಲ್ಲಿ ಸೇರಿದ್ದರಿಂದ ಮಸ್ಕಿ ಮುದಗಲ್ ರಸ್ತೆ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಪೊಲೀಸರು ಜನರನ್ನು ನಿಯಂತ್ರಿಸಲು ಹಲವು ಬಾರಿ ಲಾಠಿ ರುಚಿ ತೋರಿಸಿದರು.
ಸಂಜೆ 5 ಗಂಟೆಯಾದರು ಪೂರ್ಣ ಪ್ರಮಾಣದ ಮತ ಎಣಿಕೆ ಕಾರ್ಯ ಮುಗಿದಿರಲಿಲ್ಲ. ಪ್ರತಿ ಗ್ರಾ.ಪಂ.ಗಳ ಮೂರನೆ ಸುತ್ತಿನ ಮತ ಎಣಿಕೆ ಮುಗಿದ ನಂತರ ಫಲಿತಾಂಶ ಪ್ರಕಟ ಮಾಡುವ ನಿರ್ಧಾರ ಮಾಡಿರುವದರಿಂದ ಗೆದ್ದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಸಿಲು ಸಮಯ ಕಾಯುವಂತಾಯಿತು.
ಮತ ಎಣಿಕೆ ಕೇಂದ್ರದ ಎದುರುಗಡೆ ಗುಡ್ಡದಲ್ಲಿ ಸಾವಿರಾರು ಜನ ಗುಂಪು ಗುಂಪಾಗಿ ಜಮಾಯಿಸಿದ್ದರು. ಅಭ್ಯರ್ಥಿಗಳು ಗೆದ್ದು ವಿಕ್ಟರಿ ಚಿನ್ಹೆ ತೊರಿಸುತ್ತ ಮತ ಎಣಿಕೆ ಕೇಂದ್ರದಿಂದ ಹೊರ ಬರುತ್ತಿದ್ದಂತೆ ಅವರ ಬೆಂಬಲಿಗರು ಬಣ್ಣ ಎರಚಿ ಸಂಭ್ರಮಿಸುತ್ತಿದ್ದರು.
ಬಹುತೇಕ ಪಂಚಾಯತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಲ್ಲಿ ಎರಡು ಗುಂಪುಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಗೆದ್ದ ಗುಂಪಿನವರು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರನ್ನು ಭೇಟಿ ಮಾಡಿ ಖುಚಿ ಹಂಚಿಕೊಂಡರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಯದ್ದಲದಿನ್ನಿ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಕಾಂಗ್ರೆಸ್ ಮುಖಂಡ ಸಿದ್ದನಗೌಡ ಅವರನ್ನು ಭೇಟಿ ಮಾಡಿ ಸಂಭ್ರಮಿಸಿದರು.
ತಹಸೀಲ್ದಾರ ಬಲರಾಮ ಕಟ್ಟಿಮನಿ ಮೇಲ್ವಿಚಾರಣೆಯಲ್ಲಿ ಸಿಪಿಐ ದೀಪಕ್ ಬೂಸರಡ್ಡಿ, ಪಿಎಸ್‍ಐ ಸಣ್ಣ ವೀರೇಶ ಬೀಗಿ ಬಂದೋಬಸ್ತ ಏರ್ಪಡಿಸಿದ್ದರು.
—————————————–
ಆಯುಕ್ತ ಸಿದ್ದಲಿಂಗಯ್ಯ ಭೇಟಿ
ಮತ ಎಣಿಕೆ ಕೇಂದ್ರಕ್ಕೆ ಶಿಕ್ಷಣ ಇಲಾಖೆ ಆಯುಕ್ತ, ರಾಯಚೂರು ಜಿಲ್ಲಾ ಉಸ್ತುವಾರಿ ಅಧಿಕಾರಿ ಸಿದ್ದಲಿಂಗಯ್ಯ ಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು, ಡಿ.ಎಸ್.ಪಿ ಪರಮಾನಂದ ಗೊಡಕೆ ಸೇರಿದಂತೆ ಹಿರಿಯ ಅಧಿಕಾರಿಗಳು ಬೇಟಿ ನೀಡಿದರು.
———————————————
ಗಂಡ ಗೆದ್ದರೆ ಹೆಂಡತಿಗೆ ಸೋಲು
ಕನ್ನಾಳ ಪಂಚಾಯತಿಯಲ್ಲಿ ವಕೀಲ ಹರಿಶ್ಚಂದ್ರ ರಾಠೋಡ ಗೆದ್ದರೆ, ಹೆಂಡತಿ ಜಕ್ಕೆರ್‍ಮಡು ತಾಂಡದಲ್ಲಿ 100 ಮತಗಳ ಅಂತರದಲ್ಲಿ ಸೋತಿದ್ದಾಳೆ. ಹರಿಶ್ಚಂದ್ರ ರಾಠೋಡ ಸಹೋದರ ತಿಪ್ಪಣ್ಣ ಜಕ್ಕೆರಮಡು ತಾಂಡದಲ್ಲಿ ಗೆದ್ದು ಅಣ್ಣ ತಮ್ಮ ಇಬ್ಬರು ವಿಜಯಿ ಆಗಿದ್ದಾರೆ.
ಮಾರಲದಿನ್ನಿಯಲ್ಲಿ ವರದಿಗಾರ ವಿಠ್ಠಲ ಪರಾಭವಗೊಂಡಿದ್ದಾರೆ
————————- —————————
ಮತ ಎಣಿಕೆ ಕೇಂದ್ರಕ್ಕೆ ಬಿಜೆಪಿ, ಕಾಂಗ್ರೆಸ್ ಮುಖಂಡರ ಭೇಟಿ
ಮತ ಎಣಿಕೆ ಕೇಂದ್ರದ ಒಳಗಡೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಯದ್ದಲದಿನ್ನಿ, ಸಿದ್ದನಗೌಡ, ಗುಂಡಾ ಮಲ್ಲನಗೌಡ, ರಾಘವೇಂದ್ರ ಬಳಗಾನೂರು, ಬಿಜೆಪಿಯ ಮಾಜಿ ಶಾಸಕ ಪ್ರಸನ್ನ ಪಾಟೀಲ, ಪುರಸಬೆ ಸದಸ್ಯ ರವಿಗೌಡ ಪಾಟೀಲ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಶರಣಯ್ಯ ಸೊಪ್ಪಿಮಠ ಆಗಮಿಸಿ ತಮ್ಮ ತಮ್ಮ ಬೆಂಬಲಿಗರೊಂದಿಗೆ ಚರ್ಚೆ ಮಾಡುತ್ತಿರುವದು ಕಂಡು ಬಂದಿತು.
——————-