ಕಡು ಬಡತನದಲ್ಲಿದ್ದ ಗ್ರಾಮವೊಂದು ಇಂದು. ಭಾರತದ ಶ್ರೀಮಂತ ಹಳ್ಳಿಗಳಲ್ಲೇ ಒಂದು.

ಕಡು ಬಡತನದಲ್ಲಿದ್ದ ಗ್ರಾಮವೊಂದು ಇಂದು.
ಭಾರತದ ಶ್ರೀಮಂತ ಹಳ್ಳಿಗಳಲ್ಲೇ ಒಂದು.

ಸುಮಾರು ಮೂರು ದಶಕಗಳ ಹಿಂದೆ ಆ ಹಳ್ಳಿ ಸುತ್ತ ಮುತ್ತಲ ಪ್ರದೇಶಗಳಲ್ಲಿಯೇ ಅಪರಾಧಗಳಿಗೆ ಕುಖ್ಯಾತಿ ಪಡೆದಿತ್ತು, ಕುಡುಕರು ಮತ್ತು ನಿರುದ್ಯೋಗಿಗಳಿಂದ ತುಂಬಿ ಹೋಗಿತ್ತು.

ಬರ ಪೀಡಿತ ಪ್ರದೇಶವಾಗಿದ್ದ ಆ ಗ್ರಾಮಕ್ಕೆ ಬರ ಎನ್ನುವುದು ಪೃಕೃತಿಯು ಹಾಕಿದ ದೊಡ್ಡ ಬರೆಯಾಗಿತ್ತು, ವ್ಯವಸಾಯವನ್ನೇ ನಂಬಿಕೊಂಡಿದ್ದ ಕುಟುಂಬಗಳು ಬರಗಾಲದಿಂದ ದಿಕ್ಕೆಟ್ಟು 1972 ರಲ್ಲಿ ತಮ್ಮ ಗ್ರಾಮವನ್ನು ತೊರೆದು ಪಟ್ಟಣಗಳಿಗೆ ಕೆಲಸವನ್ನರಸಿ ಗುಳೇ ಹೊರಟರು.

ಸರಿಯಾದ ರಸ್ತೆಯಿಲ್ಲದೆ ಚರಂಡಿ ವ್ಯವಸ್ಥೆಯಿಲ್ಲದೆ, ಏನೊಂದೂ ಮೂಲಸೌಕರ್ಯಗಳಿಲ್ಲದೆ, ಸರಕಾರಿ ಸೌಲಭ್ಯಗಳಿಂದ ವಂಚಿತಗೊಂಡಿದ್ದ ಆ ಗ್ರಾಮದ ಹೆಸರು ಹಿವರೇ ಬಜಾರ್.

ಹಿವರೇ ಬಜಾರ್ ಇರುವುದು ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯಲ್ಲಿ. 1989 ರ ಮುಂಚೆ ಇಂತಹ ದುಸ್ಥಿತಿಗೆ ತಲುಪಿದ್ದ ಗ್ರಾಮವೊಂದು ಇದೀಗ ದೇಶದ ಅತೀ ಶ್ರೀಮಂತ ಹಳ್ಳಿಗಳಲ್ಲಿ ಒಂದು ಎಂಬುವುದನ್ನು ನೀವು ನಂಬಲೇಬೇಕು.

ಹದಗೆಟ್ಟು ಹೋಗಿದ್ದ ಆ ಗ್ರಾಮದಲ್ಲಿ ಒಂದು ಪವಾಡವೇ ನಡೆದು ಹೋಗುತ್ತದೆ, ಆ ಒಬ್ಬ ವ್ಯಕ್ತಿಯಿಂದ ಇಡೀ ಗ್ರಾಮದ ಸಂಪೂರ್ಣ ಚೆಹರೆಯೇ ಬದಲಾಗುತ್ತದೆ, ಅವನ ಹೆಸರು ಪೋಪಟರಾವ ಪವಾರ, ಅವತ್ತಿನ ದಿನಗಳಲ್ಲಿ ಆ ಗ್ರಾಮದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಏಕಮಾತ್ರ ವ್ಯಕ್ತಿ ಅಂದರೆ ಅದು ಪೋಪಟರಾವರು ಮಾತ್ರ.

ಇವರು ತಮ್ಮ ಗ್ರಾಮದ ದುಃಸ್ಥಿತಿಯನ್ನು ಕಂಡು 1990 ರಲ್ಲಿ ಗ್ರಾಮಪಂಚಾಯತಿ ಚುನಾವಣೆಗೆ ಸ್ಪರ್ಧಿಸುತ್ತಾರೆ, ಗ್ರಾಮಸ್ಥರ ಸಹಾಯದಿಂದ ಚುನಾವಣೆಯಲ್ಲಿ ಗೆದ್ದು ಗ್ರಾಮಪಂಚಾಯತಿ ಅಧ್ಯಕ್ಷರಾಗುತ್ತಾರೆ. ಆಗಲೇ ನೋಡಿ ಆ ಗ್ರಾಮದ ಸುವರ್ಣಯುಗ ಆರಂಭವಾಗುತ್ತದೆ.

ಪಂಚಾಯತ್ ನ ಅಧ್ಯಕ್ಷರಾದ ಪೋಪಟರಾವರು ತಮ್ಮ ಗ್ರಾಮದ ಇಂದಿನ ಈ ದುಸ್ಥಿತಿಗೆ ಕಾರಣಗಳೇನು ಎನ್ನುವುದನ್ನ ಪಟ್ಟಿ ಮಾಡುತ್ತಾರೆ, ಯೋಜನೆಯೊಂದನ್ನು ಸಿದ್ಧಪಡಿಸುತ್ತಾರೆ.

ಪೋಪಟರಾವರು ಸರಕಾರದಿಂದ ಹೆಚ್ಚಿನ ಅನುದಾನ ಪಡೆದು ಗ್ರಾಮದಲ್ಲಿರುವ ನೈಸರ್ಗಿಕ ಮೂಲಗಳಾದಂತಹ ಕೆರೆ, ಬಾವಿಗಳನ್ನ ಪುನಶ್ಚೇತನಗೊಳಿಸುವಲ್ಲಿ ಮೊದಲ ಹೆಜ್ಜೆಯನ್ನಿಡುತ್ತಾರೆ.

ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟ ಪೋಪಟರಾವರು ತಮ್ಮ ಗ್ರಾಮದಲ್ಲಿ ನಾಲ್ಕನೇ ತರಗತಿವರೆಗೆ ಮಾತ್ರ ಇದ್ದ ಶಿಕ್ಷಣವನ್ನು 10 ನೇ ತರಗತಿವರೆಗೂ ಹೆಚ್ಚಿಸುವ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಕುಡುಕರ ಹಾವಳಿಯಿಂದ ಗ್ರಾಮದ ನೆಮ್ಮದಿಯೇ ಹಾಳಾಗಿರುವುದನ್ನು ಕಂಡು ಗ್ರಾಮದಲ್ಲಿ ತಲೆಯೆತ್ತಿದ್ದ ಒಟ್ಟು 22 ಸಾರಾಯಿ ಅಂಗಡಿಗಳನ್ನು ಮುಚ್ಚಿಸಿದ ಪೋಪಟರಾವರು ರೈತರಿಗೆ ಸಕಾಲಕ್ಕೆ ಸಾಲ ದಕ್ಕುವಂತೆ ಮಾಡುತ್ತಾರೆ.

ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗುವ ಕೊಳವೆ ಬಾವಿಯನ್ನು ನಿಷೇಧಿಸಿ, ತೆರೆದ ಬಾವಿಯ ನೀರಿನ ಬಳಕೆ ಮಾಡಿ ಎಂದು ಹಳ್ಳಿಗರಿಗೆ ಸಲಹೆ ನೀಡುವುದಲ್ಲದೆ ಗ್ರಾಮಸ್ಥರೊಂದಿಗೆ ಸೇರಿ ಕಾರ್ಯರೂಪಕ್ಕೆ ತರುತ್ತಾರೆ.

ಕಡಿಮೆ ನೀರಿನ ಬಳಕೆಯಿಂದ ಹೆಚ್ಚು ಹಣವನ್ನು ಪಡೆಯುವಂತಹ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡುತ್ತಾರೆ, ಮರಗಳನ್ನು ಕಡಿಯುವುದಕ್ಕೆ ಸಂಪೂರ್ಣ ಕಡಿವಾಣ ಹಾಕುವುದಲ್ಲದೆ, ಗ್ರಾಮದಲ್ಲಿ ಒಟ್ಟು 10 ಲಕ್ಷ ಮರಗಳನ್ನ ನೆಡುತ್ತಾರೆ.

ಮಳೆಕೊಯ್ಲಿಗೆ ಒತ್ತು ಕೊಟ್ಟು ಚೆಕ್ ಡ್ಯಾಂ ಗಳನ್ನು ಸ್ವತಃ ಗ್ರಾಮಸ್ಥರಿಂದಲೇ ನಿರ್ಮಿಸುತ್ತಾರೆ ಇದರಿಂದ 20 ಹೆಕ್ಟೇರ್ ನಷ್ಟು ಕೃಷಿಯಿಭೂಮಿಯಿದ್ದದ್ದು, 70 ಹೆಕ್ಟೇರ್ ಕೃಷಿಪ್ರದೇಶವಾಗಿ ಮಾರ್ಪಾಡಾಗುತ್ತದೆ.

1995 ರಲ್ಲಿ 100 ಅಡಿ ಆಳದಲ್ಲಿ 90 ತೆರೆದ ಬಾವಿಗಳು ಇದ್ದವು, ಇಂದು 15-40 ಅಡಿಯಾಳದ 294 ಬಾವಿಗಳು ಈ ಗ್ರಾಮದಲ್ಲಿ ನಿರ್ಮಾಣಗೊಂಡಿವೆ. ವಿಪರ್ಯಾಸವೆಂದರೆ ಅದೇ ಜಿಲ್ಲೆಯ ಇತರೆ ಗ್ರಾಮಗಳಲ್ಲಿ 200 ಅಡಿ ಕೆಳಗಿಳಿದರೂ ನೀರು ಸಿಗುವುದು ಕಷ್ಟ.

1972 ರ ನಂತರ ಬರಗಾಲದಿಂದ ಕಂಗೆಟ್ಟು ಊರನ್ನು ತೊರೆದು ಪಟ್ಟಣಗಳಿಗೆ ಗುಳೇ ಹೋಗಿದ್ದ ಹಿವರೆ ಬಾಜಾರ್ ನ ಗ್ರಾಮಸ್ಥರು ತಮ್ಮೂರಿನಲ್ಲಿ ಇಂತಹದ್ದೊಂದು ಪವಾಡ ನಡೆಯುತ್ತಿದೆ ಎಂದು ತಿಳಿದು ನಿಧಾನವಾಗಿ ವಾಪಸಾಗತೊಡಗಿದರು.

2011 -12 ರ ಗಣತಿ ಪ್ರಕಾರ 235 ಕುಟುಂಬಗಳು ಇಲ್ಲಿವೆ, ಸುಮಾರು 1250 ಮಂದಿಯಿದ್ದಾರೆ. ಇವರಲ್ಲಿ ಹತ್ತಾರು ಕೋಟ್ಯಾಧಿಪತಿಗಳಿದ್ದಾರೆ, 235 ಕುಟುಂಬಗಳ ಪೈಕಿ 60 ಕುಟುಂಬಸ್ಥರು ಮಿಲಿಯನೇರ್ ಗಳಾಗಿದ್ದಾರೆ.

1995 ರಲ್ಲಿ ತಲಾ ಆದಾಯ 830 ರೂಪಾಯಿ ಇತ್ತು, ಇಂದು ಈ ಗ್ರಾಮದಲ್ಲಿ ಪ್ರತಿಯೊಬ್ಬರೂ ತಿಂಗಳಿಗೆ ಸರಾಸರಿ 30,000 ರೂಪಾಯಿ ಆದಾಯ ಗಳಿಸುತ್ತಾರೆ.

ಪ್ರತಿ ರಸ್ತೆಯೂ ಕಾಂಕ್ರೀಟ್ ರಸ್ತೆಗಳಾಗಿವೆ, ಶಿಸ್ತು ಕಾನೂನಿನ ವ್ಯವಸ್ಥೆಯೂ ಸುವ್ಯವಸ್ಥಿತವಾಗಿದೆ, ಹೈನುಗಾರಿಕೆಗೂ ಉತ್ತೇಜನ ಕೊಟ್ಟು ಗ್ರಾಮವನ್ನು ನಂದನವನವನ್ನಾಗಿಸಿದ್ದಾರೆ.

ತಮ್ಮ ಹೊಲ ತೋಟಗಳಲ್ಲಿ ದುಡಿಯಲು ಹೊರಗಿನ ಕೂಲಿಕಾರರನ್ನು ಅವಲಂಬಿಸದೆ ಪ್ರತಿಮನೆಯಿಂದ ಕನಿಷ್ಠ ಇಬ್ಬರು ಮೂವರು ಕೃಷಿ ಕಾಯಕದಲ್ಲಿ ತೊಡಗಿದ್ದಾರೆ.

ಅಂದು ಒಬ್ಬನೇ ಒಬ್ಬ ವೈದ್ಯನಿರದ ಈ ಗ್ರಾಮದಲ್ಲಿ ಇಂದು 32 ಮಂದಿ MBBS ಮಾಡುತ್ತಿದ್ದಾರೆ.

ಹಿವರೇ ಬಾಜಾರ್ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ ಹಿವರೆ ಬಾಜಾರ್ ನ ಭಗೀರಥ ಎನಿಸಿಕೊಂಡ ಪೋಪಟರಾವ ಪವಾರರ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ 2020 ನೇ ಸಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿ ಕೊಟ್ಟು ಗೌರವಿಸಿದೆ.

ಹಿವರೆ ಬಾಜಾರ ನ ಯಶೋಗಾಥೆಯನ್ನು ಓದಿದ ನಂತರ ಪೋಪಟರಾವರಂತಹ ಒಬ್ಬ ವ್ಯಕ್ತಿಯನ್ನು ನಮ್ಮ ಗ್ರಾಮಪಂಚಾಯತಿಯಲ್ಲಿ ಅಧ್ಯಕ್ಷನ ಸ್ಥಾನದಲ್ಲಿ ನೋಡಬೇಕೆಂಬ ಆಸೆ ಸಹಜವಾಗಿ ನಮಗೆಲ್ಲರಿಗೂ ಹುಟ್ಟುತ್ತದೆ, ಆದರೆ ಪ್ರತಿ ಊರಿನಲ್ಲಿ ಪೋಪಟರಾವರಂತಹ ವ್ಯಕ್ತಿ ಹುಟ್ಟಬೇಕಲ್ಲ…? ಹುಟ್ಟಿದೂರಿನ ಬಗ್ಗೆ ಕಾಳಜಿಯಿರುವ ಇಂತಹ ವ್ಯಕ್ತಿಗಳು ಊರಿಗೆ ಒಬ್ಬರಿದ್ದರೆ ಸಾಕು ಈ ದೇಶ ಅದೆಲ್ಲಿಗೋ ಹೋಗಿಬಿಡುತ್ತೆ.

ಹಳ್ಳಿಗಳು ಅಭಿವೃದ್ಧಿಯಾಗದ ಹೊರತು ಈ ದೇಶದ ಪರಿಸ್ಥಿತಿ ಸುಧಾರಿಸುವುದಿಲ್ಲ. ಇಂತಹ ವ್ಯಕ್ತಿಯನ್ನು ನಮ್ಮ ಪ್ರತಿನಿಧಿಯನ್ನಾಗಿಸಿ ವ್ಯವಸ್ಥೆಯನ್ನು ಬದಲಾಯಿಸುವ ಎಲ್ಲ ಶಕ್ತಿಯೂ ನಮಗಿದೆ. ಆದರೆ ಚುನಾವಣೆಯಲ್ಲಿ ಸುರಿಯುವ ಹಣ ಮತ್ತು ಹೆಂಡದ ಹೊಳೆಯಲ್ಲಿ ಕೊಚ್ಚಿ ಹೋಗುವ ಜನರಿರುವ ತನಕ ಅದು ಸಾಧ್ಯವಿಲ್ಲ.

ಇನ್ನೇನು ಗ್ರಾಮಪಂಚಾಯತ್ ಚುನಾವಣೆಗಳು ಮುಗಿದಿವೆ.ಇಂತಹ ಸಮಯದಲ್ಲಿ ಹಿವರೇ ಬಜಾರ್ ಎಂಬ ಆದರ್ಶ ಗ್ರಾಮ ವೊಂದರ ಯಶೋಗಾಥೆಯನ್ನು ತಿಳಿಯುವುದು ಅವಶ್ಯಕವೆನಿಸಿತು.

ನಮ್ಮ ಊರುಗಳ ಪರಿಸ್ಥಿತಿಯನ್ನೊಮ್ಮೆ ನಮ್ಮ ಕಣ್ಣುಗಳ ಮುಂದೆ ತಂದುಕೊಂಡಾಗ ನಮ್ಮ ಗ್ರಾಮದ ಇಂದಿನ ಈ ದುಸ್ಥಿತಿಗೆ ಈಗ ಅಧಿಕಾರದಲ್ಲಿರುವ ನಾಲಾಯಕರ ಕಡೆಗೆ ಬೊಟ್ಟು ಮಾಡ್ತೀವಿ ಹೊರತು ಅಂತಹ ನಿಷ್ಪ್ರಯೋಜಕರನ್ನು ಅಧಿಕಾರದಲ್ಲಿ ಕೂರಿಸಲು ಬಳಸಿದ್ದು ಅದೇ ಶಾಹಿ ಹಚ್ಚಿದ ನಮ್ಮ ಬೊಟ್ಟು ಎಂಬುದನ್ನ ಮರೆತುಬಿಡ್ತೀವಿ. ತಪ್ಪು ನಮ್ಮದೇ ಅಲ್ಲವೇ.

ನಮ್ಮ ನಮ್ಮ ಊರುಗಳ ಅಭಿವೃದ್ಧಿಯ ಕೀಲಿ ಕೈ ನಮ್ಮ ಕೈಯಲ್ಲಿದೆ ದಯವಿಟ್ಟು ಅದನ್ನ ಕಳ್ಳರ ಕಿಸೆಯಲ್ಲಿ ಇಡಬೇಡಿ. ಅಭಿವೃದ್ಧಿಯ ಹೆಸರಲ್ಲಿ ದೋಚಿ ಬಿಡುತ್ತಾರೆ. 5 ವರ್ಷಗಳ ಹಿಂದೆ ಇದ್ದ ಪಂಚಾಯತಿ ಸದಸ್ಯನ ಬದಲಾದ ಸ್ವರೂಪ ನಿಮ್ಮ ಕಣ್ಣ ಮುಂದೆ ಕಾಣಿಸುತ್ತದೆ.

ಇನ್ನು ಚುನಾವಣೆಯಲ್ಲಿ ಜಾತಿ ನೋಡಿ ಓಟು ಹಾಕುವ ಬಹುದೊಡ್ಡ ವರ್ಗವೊಂದಿದೆ, ಜಾತಿ ನೋಡಿ ಮತ ಹಾಕೋದಕ್ಕೆ ನಾವೇನು ಬೀಗತನ ಮಾಡ್ತಿಲ್ಲ, ವ್ಯಕ್ತಿಯನ್ನ ಜಾತಿಯಿಂದ ಅಲ್ಲ ವ್ಯಕ್ತಿತ್ವದಿಂದ ಗುರುತಿಸೋಣ, ಪ್ರಾಮಾಣಿಕರಿಗೆ ಬೆಲೆ ಇಲ್ಲ ಅನ್ನೋದನ್ನ ಈ ಗ್ರಾಮಪಂಚಾಯತ್ ಚುನಾವಣೆ ಪ್ರತಿಸಲವೂ ಸಾಬೀತು ಮಾಡ್ತಿದೆ, ಇದು ಬದಲಾಗಬೇಕು.

ಮತವನ್ನಾಗಲಿ ಮಗಳನ್ನಾಗಲಿ ಅಯೋಗ್ಯರಿಗೆ ಕೊಡಬಾರದು ಅಂತ ಬೀಚಿ ಹೇಳ್ತಾರೆ, ಕೇವಲ ನೂರು ಐನೂರು ರೂಪಾಯಿಗಳಿಗೆ ನಮ್ಮನ್ನ ನಾವೇ ಮಾರಿಕೊಂಡು ಯೋಗ್ಯತೆಯಿಲ್ಲದ ನಾಲಾಯಕರನ್ನು ಆರಿಸಿ ತಂದು ನಾವು ಕಟ್ಟುವ ಕಂದಾಯವನ್ನ ಸರ್ಕಾರ ಕೊಡುವ ಅನುದಾನಗಳನ್ನ, ಪರೋಕ್ಷವಾಗಿ, ನಾವೇ ಗೆಲ್ಲಿಸಿದ ವ್ಯಕ್ತಿಯನ್ನ ಉದ್ಧಾರ ಮಾಡಲಿಕ್ಕಾಗಿ ಮೀಸಲಿಡ್ತಿದೀವಿ.

ಸಾಮಾನ್ಯ ಕಳ್ಳ ನಮ್ಮ ಹಣ ವಾಚು ಮೊಬೈಲು ಕದೀತಾನೆ, ಈ ರಾಜಕೀಯ ಕಳ್ಳ ನಮ್ಮ ಭವಿಷ್ಯ, ನಮ್ಮ ಕನಸು, ನಮ್ಮ ಕೆಲಸ, ನಮ್ಮ ಶಿಕ್ಷಣ, ಜೊತೆಗೆ ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ನಮ್ಮ ಖುಷಿಯನ್ನೇ ಕಸಿದುಕೊಳ್ಳುತ್ತಾನೆ. ವಿಪರ್ಯಾಸ ಏನೆಂದರೆ ಸಾಮಾನ್ಯ ಕಳ್ಳ ನಮ್ಮನ್ನ ಆಯ್ಕೆ ಮಾಡ್ತಾನೆ, ರಾಜಕೀಯ ಕಳ್ಳನನ್ನ ನಾವೇ ಆಯ್ಕೆ ಮಾಡ್ತೀವಿ.

ಕೊನೆಯಲ್ಲಿ ನಾವೆಲ್ಲ ಈ ಒಂದು ಮಾತನ್ನ ನೆನಪಿನಲ್ಲಿಡಬೇಕು. ನಾವು ಹಾಕುವ ಓಟಿನಿಂದ ನಮ್ಮ ಗ್ರಾಮ ಉದ್ದಾರವಾಗಬೇಕೇ ಹೊರತು ಗ್ರಾಮಪಂಚಾಯತಿಯ ಸದಸ್ಯನಲ್ಲ.

✍️

ಸಂತೋಷ ಚೌಡನ್ನವರ.
ದೊಡವಾಡ.

—————————————————————————-

ಈಗಾಗಲೇ ಗ್ರಾಮ ಪಂಚಾಯತ ಚುನಾವಣೆ ಮುಗಿದು ನಮ್ಮ ಗ್ರಾಮದವರೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಸದಸ್ಯರಾದವರು ಗ್ರಾಮದ ಅಭಿವೃದ್ಧಿ ಮಾಡಲಿ, ಮಾಡದಿದ್ದರೆ ಆಯ್ಕೆ ಮಾಡಿದ ಮತದಾರರು ಎಚ್ಚರಿಸುವಂತ ಪ್ರಜ್ಞೆ ಬೆಳಸಿಕೊಳ್ಳಲಿ ಎಂಬ ಸದಾಶಯ e-ಸುದ್ದಿ ತಂಡದ್ದು. ಪಂಚಾಯತಿ ಅಭಿವೃದ್ದಿ ಪಡಿಸಿದರೆ ಏನು ಸಾಧಿಸಬಹುದು ಎಂಬ ‌ನಿರ್ದಶನಕ್ಕಾಗಿ ಮಹಾರಾಷ್ಟ್ರ ದ  ಹಿವರೇ ಬಜಾರ್ ಗ್ರಾಮದ ಕುರಿತು ಪ್ರಕಟಿಸಿದ್ದೇವೆ. ಕರ್ನಾಟಕದ ಎಲ್ಲಾ ಪಂಚಾಯತಿ ಗಳು ಹಿವರೇ ಬಜಾರ್ ಗಳಾಗಲಿ

– ಸಂಪಾದಕ ವೀರೇಶ ಸೌದ್ರಿ, ಮಸ್ಕಿ 

Don`t copy text!