ಅಪಪ್ರಚಾರ ಮಾಡುತ್ತಿರುವ ಆಧುನಿಕ ಸಾಹಿತ್ಯ ಭಂಜಕರು

ವಚನ ಸಾಹಿತ್ಯದಲ್ಲಿ ಮಾಂಸಾಹಾರ”
ಅಪಪ್ರಚಾರ ಮಾಡುತ್ತಿರುವ ಆಧುನಿಕ ಸಾಹಿತ್ಯ ಭಂಜಕರು

ಎಡದ ಕೈಯಲಿ ಕತ್ತಿ | ಬಲದ ಕೈಯಲಿ ಮಾಂಸ ||
ಬಾಯಲಿ ಸುರೆಯ | ಗಡಿಗೆ ||
ಕೊರಳಲಿ | ದೇವರಿರಲು ||
ಅವರ ಲಿಂಗವೆಂಬೆ | ಸಂಗನೆಂಬೆ ||
ಕೂಡಲಸಂಗಮದೇವಾ ಅವರ | ಮುಖಲಿಂಗಿಗಳೆಂಬೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-66 / ವಚನ ಸಂಖ್ಯೆ-720)

ಕಲ್ಯಾಣದಲ್ಲಿ ಕ್ರಾಂತಿಯಾಗಿ ಸುಮಾರು 900 ವರ್ಷಗಳು ಕಳೆದಿವೆ. ವಿಶ್ವಮಟ್ಟದಲ್ಲಿ ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಬಗ್ಗೆ ಇಂದಿಗೂ ತುಲನಾತ್ಮಕ ಅಧ್ಯಯನ ನಡೀತಾ ಇದೆ. ಅಂದರೆ ಬಸವಣ್ಣನವರ ನಾಯಕತ್ವ ಎಂಥ ಮಹತ್ವದ್ದಾಗಿತ್ತು, ಎಂಥ ಶ್ರೇಷ್ಠ ಮಟ್ಟದ್ದಾಗಿತ್ತು ಎನ್ನುವುದನ್ನು ನಾವು ಅರಿತುಕೊಳ್ಳಬೇಕು. ಬಸವಣ್ಣನವರು ಸಾಮಾಜಿಕ, ಅರ್ಥಿಕ, ಸಾಂಸ್ಕೃತಿಕ, ಸಾಹಿತ್ಯಿಕ ಉನ್ನತ ಸಿದ್ಧಾಂತಗಳನ್ನು ಪ್ರತಿಪಾದಿಸಿ ಒಂದು ಅದ್ಭುತವಾದ ಪರಿವರ್ತನೆಗೊಂಡ ಸಮಾಜವನ್ನು ಎರಡೇ ಎರಡು ದಶಕಗಳಲ್ಲಿ ಕಟ್ಟಿ ನಿಲ್ಲಿಸಿದಂತಹ ಮಹಾನ್ ದಾರ್ಶನಿಕರು. ಇದು ಇಡೀ ವಿಶ್ವಕ್ಕೇ ಒಂದು ಮಾದರಿ ನಾಯಕತ್ವ. The leadership Theory or a Prototype Formula ಅಂದರೂ ತಪ್ಪಾಗಲಾರದು.

ಅವುಗಳಲ್ಲಿ ನನಗೆ ಶ್ರೇಷ್ಠವೆನಿಸಿದ ವಚನವನ್ನು ನೋಡಿದಾಗ ಬಸವಣ್ಣನವರ ವ್ಯಕ್ತಿತ್ವ ಎಂಥ ಮೇರುಶಿಖರಕ್ಕೇರಿತ್ತು ಎನ್ನುವ ಕಲ್ಪನೆ ನಮಗಾದೀತು.

ಚೆನ್ನಯ್ಯನ ಮನೆಯ | ದಾಸನ ಮಗನು ||
ಕಕ್ಕಯ್ಯನ ಮನೆಯ | ದಾಸಿಯ ಮಗಳು ||
ಇವರಿಬ್ಬರು ಹೊಲದಲು | ಬೆರಣಿಗೆ ಹೋಗಿ ||
ಸಂಗವ | ಮಾಡಿದರು ||
ಇವರಿಬ್ಬರಿಗೆ ಹುಟ್ಟಿದ | ಮಗ ನಾನು ||
ಕೂಡಲಸಂಗಮದೇವ | ಸಾಕ್ಷಿಯಾಗಿ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-36 / ವಚನ ಸಂಖ್ಯೆ-346)

ಶ್ರೇಣೀಕೃತ ಸಮಾಜದಲ್ಲಿ ಅತ್ಯಂತ ನಿಕೃಷ್ಠ ಸ್ಥಾನದಲ್ಲಿದ್ದವರು ಮಾದಾರ ಚೆನ್ನಯ್ಯ ಮತ್ತು ಡೋಹರ ಕಕ್ಕಯ್ಯ. ಇವರ ಮನೆಯ ದಾಸ ಮತ್ತು ದಾಸಿಯರು ಅಂದರೆ ಅವರಿಗಿಂತ ಕೆಳಗಿರುವಂಥವರು. ಇಂಥ ದಾಸ ದಾಸಿಯರು ಮದುವೆಯಾಗದೇ ಹುಟ್ಟಿದ ಮಗ ನಾನು ಕೂಡಲಸಂಗಮದೇವರ ಸಾಕ್ಷಿಯಾಗಿ ಅಂತ ಬಸವಣ್ಣನವರು ಹೇಳತಾರೆ ಮತ್ತು ಹಾಗೆ ಹೇಳಿಕೊಳ್ಳಲು ಧೈರ್ಯ ಬೇಕು. ಅಂದರೆ Dis-owning my own prestige. ನಿಕೃಷ್ಠರಲ್ಲಿ ನಿಕೃಷ್ಠರಿಗೆ ಹುಟ್ಟದವನು ಅಂತ ಬಸವಣ್ಣವರೇ ಹೇಳಿದಾಗ ಕೆಳವರ್ಗಕ್ಕೆ ದೂಡಲ್ಪಟ್ಟ ಜನರಿಗೆ ಒಂದು ರೀತಿಯ ಮಾನಸಿಕ ಧೈರ್ಯವನ್ನು ಸ್ಥೈರ್ಯವನ್ನು ತುಂಬುವ ಕೆಲಸಕ್ಕೆ ಕೈ ಹಾಕಿ ಅವರ ಮನಃಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗತಾರೆ. ಇಂಥ ಬದ್ಧತೆಗೆ ಯಾವಾಗಲೂ ಶರಣರು ಅಂಟಿಕೊಂಡಿದ್ದರು. ಇದು ಬಸವಣ್ಣನವರು ಹಾಕಿಕೊಟ್ಟ ಮಾನಸಿಕ ಭದ್ರ ಬುನಾದಿ “A Strong Psychological Foundation”. ಸರಳತೆಯಲ್ಲಿ ಇನ್ನೂ ಸರಳತೆಯ ವ್ಯಕ್ತಿತ್ವವನ್ನು ಮುಂದಿಟ್ಟುಕೊಂಡು ಹೋಗುವ ಒಂದು ದೊಢ್ಡ ಛಾಯಾಚಿತ್ರವನ್ನು ನಮ್ಮದುರಿಗೆ ನಿಲ್ಲಿಸತಾರೆ ಬಸವಣ್ಣನವರು. ಅಂದರೆ ಬಸವಣ್ಣನವರ ನಾಯಕತ್ವದ ದೊಡ್ಡ ಸಾಧನೆ ಅಂದರೆ ಗುರಿ ಮುಟ್ಟಲು ಯಾವ ಮಟ್ಟಕ್ಕೆ ಜನರಿಗೆ ಧೈರ್ಯ ತುಂಬಿ ಬಡಿದೆಬ್ಬಿಸತಾರೆ ಅನ್ನೋದು. ಇಂಥ ಮನಸ್ಥಿತಿಯನ್ನು ಹೊಂದಿದಂಥಾ ನಾಯಕ ಜಾಗತಿಕ ಮಟ್ಟದಲ್ಲಿ ಯಾರೂ ಕಾಣಲು ಸಾಧ್ಯವಿಲ್ಲ.

ಅಂಗದ ಮೇಲೆ ಲಿಂಗ ಕಟ್ಟಿಕೊಂಡವರೆಲ್ಲಾ ಲಿಂಗಾಯತರೇ ಅಥವಾ ಲಿಂಗಾಯತರ ಮನೆಯಲ್ಲಿ ಹುಟ್ಟಿದವರು ಲಿಂಗಾಯತರೇ ಎನ್ನುವುದನ್ನು ಆತ್ಮಾವಲೋಕನೆ ಮಾಡಿಕೊಳ್ಳಬೇಕಾಗಿದೆ. ಸನಾತನ ವೈದಿಕ ಪರಂಪರೆಯ ದಬ್ಬಾಳಿಕೆಯಿಂದ ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಗೆ ಬಸವಣ್ಣನವರು ಬೆಳದಿಂಗಳ ಬೆಳಕಾಗಿ ಬಂದರು.

ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು ||
ಮೊಗ್ಗು ಮಲ್ಲಿಗೆ | ಅರಳ್ಯಾವ ||
ಯಾಲಕ್ಕಿ ಗೊನೆ ಬಾಗಿ | ಹಾಲ ಸುರಿದಾವ ||

ಬಸವಣ್ಣನವರು ಬರುವುದನ್ನು ಕಂಡ ನಮ್ಮ ಜನಪದರು ಎಷ್ಟು ಸೊಗಸಾಗಿ ಹೇಳಿದ್ದಾರೆ. ಸಾವಿರಾರು ವರ್ಷಗಳ ಶ್ರೇಣೀಕೃತ ಸಮಾಜದ ವರ್ಗ, ವರ್ಣ ಮತ್ತು ಲಿಂಗಭೇದಗಳನ್ನು ಕಿತ್ತುಹಾಕಿ ಸರ್ವಕಾಲಿಕ ಸಮ-ಸಮಾಜವನ್ನು ಕಟ್ಟಿ ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ನಾಯಕನಾಗಿ ಬಸವಣ್ಣನವರು ಕಂಗೊಳಿಸುತ್ತಾರೆ. ಬಸವಣ್ಣವರ ನಾಯಕತ್ವದ ಮಾದರಿ ಎಲ್ಲ ಕಾಲಕ್ಕೂ ಮಾದರಿಯಾದ ನಾಯಕತ್ವ.

ಸಮಾಜದಲ್ಲಿ ಬದುಕಿರುವ ಎಲ್ಲ ಸಕಲ ಪ್ರಾಣಿಗಳ ಅಂತರಂಗ ಮತ್ತು ಬಹಿರಂಗಕ್ಕೆ ಪರಿಶುದ್ಧ ಪರಿಸರ ನಿರ್ಮಾಣವಾದಾಗ ಮಾತ್ರ ಉತ್ತಮ ಸಮಾಜದ ಕಲ್ಪನೆ ಸಿಗುತ್ತದೆ. ಎಲ್ಲರೂ ಜನ್ಮತಃ ಕೆಟ್ಟವರಾಗಿರುವುದಿಲ್ಲ ಮತ್ತು ಅವರಿಗೆ ಸಿಗುವ ಸಂಸ್ಕಾರ ಎಂತಹದ್ದು ಎನ್ನುವುದರ ಮೇಲೆ ಅವರ ಗುಣಾವಗುಣಗಳು ಮೈಗೂಡಿಸಿಕೊಂಡು ಬಂದಿರುತ್ತವೆ.

ಚಾಕೂ, ಚೂರಿ, ಮಾಂಸ, ಮದ್ಯವನ್ನು ಕೈಯಲ್ಲಿ ಹಿಡಿದುಕೊಂಡು ಅನಾಗರಿಕರಂತೆ ವರ್ತಿಸುವ ವಿಕೃತ ದೃಶ್ಯವನ್ನು ಕಂಡೊಡನೆ ಅಸಹ್ಯವಾಗುತ್ತದೆ. ಅವರ ಸಂಗವನ್ನೂ ಮಾಡಲು ನಾವು ಹಿಂದೇಟು ಹಾಕುತ್ತೇವೆ. ಆದರೆ ಬಸವಣ್ಣನವರು ಇಂಥ ದಾರಿ ತಪ್ಪಿದವರನ್ನೂ ಸನ್ಮಾರ್ಗಕ್ಕೆ ತರುವ ಪ್ರಯತ್ನವನ್ನು ಮಾಡಿ ಯಶಸ್ವಿಯಾಗುತ್ತಾರೆಂದರೆ ಅವರ ಅಗಾಧ ವ್ಯಕ್ತಿತ್ವದ ಪರಿಚಯ ನಮಗಾಗುತ್ತದೆ.

ಬಸವಾದಿ ಶರಣರು ಮತ್ತು 12 ನೇ ಶತಮಾನದ ಪುರೋಹಿತಶಾಹಿ ಮತ್ತು ವೈದಿಕ ವಿರೋಧಿ ಶರಣ ಸಂಕುಲದ ವಚನಕಾರರು ಯಾವುದೇ ಆಹಾರ ಪದ್ಧತಿಯನ್ನು ಹೀಯಾಳಿಸಿದ್ದು ಅಥವಾ ತುಚ್ಛೀಕರಿಸಿದ್ದು ವಚನಗಳಲ್ಲಿ ಮತ್ತು ಶರಣ ಸಿದ್ಧಾಂತದಲ್ಲಿ ಕಂಡು ಬರುವುದಿಲ್ಲ. ಬಸವಣ್ಣನವರು ಮಾಂಸಾಹಾರಿ ಜನರ ವಿರೋಧಿಯಾಗಿದ್ದರು ಎನ್ನಲು ಯಾವುದೇ ಆಧಾರಗಳು ಇಲ್ಲದಿದ್ದರೂ ತಮ್ಮ ತಮ್ಮ ಮೂಗಿನ ನೇರಕ್ಕೆ ಮಾಂಸಾಹಾರವನ್ನು ಸೇವಿಸುವುದರ ಬಗ್ಗೆ ಮತ್ತು ಪ್ರಾಣಿಗಳನ್ನು ಕೊಲ್ಲುವ ಬಗ್ಗೆ ಹೇಳಿರುವ ವಚನಗಳನ್ನು ತಿರುಚಿ ವಿಶ್ಲೇಷಣೆ ಮಾಡುತ್ತಿರುವುದನ್ನು ಇತ್ತೀಚಿನ ದಿನಗಳಲ್ಲಿ ನಾವು ಕಾಣಬಹುದು. ಮಾಂಸಾಹಾರಿಗಳಾದ ದಲಿತರ ಕೇರಿಗೆ ಹೋಗಿ ಅವರನ್ನು ಅಪ್ಪಿಕೊಂಡು ಅಪ್ಪ, ಬೊಪ್ಪ, ನನ್ನಯ್ಯ, ಚಿಕ್ಕಯ್ಯ ಎಂದು ಗೌರವಿಸಿದ ಬಸವಣ್ಣನವರ ಒಂದು ವಚನ ಇದೇ ಸಂದರ್ಭದಲ್ಲಿ ನೆನಪಾಗುತ್ತದೆ.

ಅಪ್ಪನು ನಮ್ಮ | ಮಾದಾರ ಚೆನ್ನಯ್ಯ ||
ಬೊಪ್ಪನು ನಮ್ಮ | ಡೋಹಾರ ಕಕ್ಕಯ್ಯ ||
ಚಿಕ್ಕಯ್ಯನೆಮ್ಮಯ್ಯ | ಕಾಣಯ್ಯ ||
ಅಣ್ಣನು ನಮ್ಮ | ಕಿನ್ನರಿ ಬೊಮ್ಮಯ್ಯ ||
ಎನ್ನನೇತಕ್ಕರಿಯರಿ? | ಕೂಡಲಸಂಗಯ್ಯ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-36 / ವಚನ ಸಂಖ್ಯೆ-349)

ಶ್ರೇಣೀಕೃತ ಸಮಾಜದ ಕೆಳವರ್ಗದ ಜನರು ಸಾಮಾನ್ಯವಾಗಿ ಮಾಂಸಾಹಾರಿಗಳು ಹಾಗೂ ಇದರಲ್ಲಿಯೂ ಅಪವಾದಗಳು ಇದ್ದೇ ಇವೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಬಸವಣ್ಣನವರ ದಿವ್ಯ ವ್ಯಕ್ತಿತ್ವವನ್ನು ಈ ವಚನದಲ್ಲಿ ನಾವು ಕಾಣಬಹುದು. ಅವರನ್ನೂ ಸಹ ಬಸವಣ್ಣನವರು ಅಪ್ಪಿಕೊಂಡರು ಒಪ್ಪಿಕೊಂಡರು ಮತ್ತು ಅವರಿಗೆ ಸಾಮಾಜಿಕ ಸಮಾನತೆಯನ್ನು ನೀಡುವಲ್ಲಿ ಯಶಸ್ವಿಯಾದರು.

21 ನೇ ಶತಮಾನದ ಬಹು ದೊಡ್ಡ ಕ್ರಾಂತಿಕಾರಿ ಕೊಡುಗೆ ಅಂದರೆ ಸಮೂಹ ಮತ್ತು ಸಂವಹನ ಮಾಧ್ಯಮ. ಇಂಥ ಕೆಲವು ದೂರದರ್ಶನ ವಾಹಿನಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ವಚನ ವಿದ್ವಾಂಸರಂತೆ ಪೋಸು ಕೊಡುವವರು ಬಸವಣ್ಣನವರು ಒಂದು ಸಂದರ್ಭದಲ್ಲಿ ಹೇಳಿದ ವಚನವನ್ನು ತಮ್ಮ ಮುಂದಿಟ್ಟುಕೊಂಡು ತಮ್ಮ ಮೂಗಿನ ನೇರಕ್ಕೆ ಸಮಾಜಕ್ಕೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ.

ಎಡದ ಕೈಯಲಿ ಕತ್ತಿ | ಬಲದ ಕೈಯಲಿ ಮಾಂಸ ||
ಬಾಯಲಿ ಸುರೆಯ | ಗಡಿಗೆ ||
ಕೊರಳಲಿ | ದೇವರಿರಲು ||
ಅವರ ಲಿಂಗವೆಂಬೆ | ಸಂಗನೆಂಬೆ ||
ಕೂಡಲಸಂಗಮದೇವಾ | ಅವರ ಮುಖಲಿಂಗಿಗಳೆಂಬೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-66 / ವಚನ ಸಂಖ್ಯೆ-720)

“ಎಂಬೆ” ಎನ್ನುವ ಪದ ಪ್ರಯೋಗವನ್ನು ನಾವು ಎರಡು ರೀತಿಯಲ್ಲಿ ವಿಶ್ಲೇಷಣೆ ಮಾಡಬಹುದು. ಒಂದು ಸಕಾರಾತ್ಮಕ ವಿಶ್ಲೇಷಣೆ ಇನ್ನೊಂದು ನಕಾರಾತ್ಮಕ ವಿಶ್ಲೇಷಣೆ.

ಸಕಾರಾತ್ಮಕವಾಗಿ ಯೋಚಿಸಿ ವಿಶ್ಲೇಷಣೆ ಮಾಡುವುದಾದರೆ, ಬದಲಾವಣೆಗೆ ಮನಃಪೂರ್ವಕವಾಗಿ ಒಪ್ಪಿಕೊಂಡು ಮದ್ಯ ಮಾಂಸಾಹಾರಗಳನ್ನು ತ್ಯಜಿಸಿ ಇಷ್ಟಲಿಂಗವನ್ನು ಕಟ್ಟಕೊಂಡವರು. ಬಸವಣ್ಣನವರು ಸಾಮಾಜಿಕವಾಗಿ ತಿರಸ್ಕಾರಗೊಂಡ ವೇಶ್ಯೆಯರು, ಕಳ್ಳರು ಮುಂತಾದವರನ್ನು ಮನವೊಲಿಸಿದಾಗ ಅವರೆಲ್ಲರೂ ತಮ್ಮ ಹಿಂದಿನ ಕಾಯಕವನ್ನು ತೊರೆದು ಸಮಾಜದ ಮುಖ್ಯಧಾರೆಗೆ ಬಂದರು. ಮದ್ಯ ಮಾಂಸಗಳ ಸೇವನೆಯಿಂದ ಇಷ್ಟಲಿಂಗ ಧರಿಸುವ ಪುಣ್ಯ ಇದೆಯೇ ಎನ್ನುವ ಪ್ರಶ್ನೆ ಕಾಡತೊಡಗಿ ಮಾನಸಿಕವಾಗಿ ಕುಗ್ಗಿ ಹೋದಂಥ ಜನರಿಗೆ ಅವರಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಿದವರು ಬಸವಣ್ಣನವರು. ಈ ವಚನದ ಮೂಲಕ ಅರಿವಿನ ಕುರುಹಾದ ಇಷ್ಟಲಿಂಗವನ್ನು ಕೊರಳಲ್ಲಿ ಧರಿಸಿದವರೆಲ್ಲರೂ ಸಹ ಲಿಂಗ ಸ್ವರೂಪಿಗಳು ಆದವರು, ಸಾಕ್ಷಾತ್ ಸಂಗಮನಾಥ ಆದವರು ಎಂದು ಹೇಳುವ ಮೂಲಕ ಅವರ ಎಲ್ಲ ದುಶ್ಚಟಗಳನ್ನು ಮತ್ತು ಕುಕೃತ್ಯಗಳನ್ನು ತ್ಯಜಿಸಲು ಸಹಾಯ ಹಸ್ತ ನೀಡಿದವರು ಬಸವಣ್ಣನವರು. ಪ್ರೀತಿಯ ಮತ್ತು ಆಧ್ಯಾತ್ಮಿಕ ತಂಗಾಳಿಯನ್ನು ಬೀಸಿ ಪ್ರತಿಯೊಬ್ಬರಲ್ಲೂ ಸಂಗಮನಾಥನನ್ನು ಕಂಡ ಬಸವಣ್ಣನವರ ಈ ವಚನ ಪರಿವರ್ತನೆಯ ಹಾದಿಯ ಒಂದು ಅದ್ಭುತ ವಚನ. ಒಂದು ವಿಷಯ ನಾವು ಗಮನಿಸಬೇಕಾದದ್ದು ಬಸವಣ್ಣನವರು ಮದ್ಯ ವ್ಯಸನಿಗಳನ್ನಾಗಲೀ, ಮಾಂಸಾಹಾರ ಸೇವಿಸುವವರನ್ನಾಗಲೀ ಸಮರ್ಥಿಸಿಕೊಂಡಿಲ್ಲ. ಅವರನ್ನು ಬದಲಾಯಿಸುವ ಇಚ್ಛಾಶಕ್ತಿ ಬಸವಣ್ಣನವರಲ್ಲಿತ್ತು ಎನ್ನುವುದು ಅನುಭೂತಿ ಚರಿತ್ರೆಯ ಮಹಾನ್ ನಿದರ್ಶನ.

ಇನ್ನೊಂದು “ಎಂಬೆ” ಎನ್ನುವ ಪದವೇ ವ್ಯಾಕರಣದಲ್ಲಿ ಬರುವಂತೆ ನಕಾರಾತ್ಮಕ ಚಿಂತನೆಗೆ ಎಳೆದೊಯ್ಯುತ್ತದೆ. ಇದು ವಿಶ್ಲೇಷಣಕಾರರ ಅಭಿವ್ಯಕ್ತಿಗೆ ಬಿಟ್ಟ ವಿಷಯ. ಅಂದರೆ ಸಾಮಾಜಿಕ ಕಳಕಳಿಯುಳ್ಳಂಥ ಬಸವಣ್ಣನವರು ಮದ್ಯ ಮಾಂಸಾಹಾರವನ್ನು ಒಪ್ಪಿಕೊಂಡಿಲ್ಲ ಅನ್ನುವ ಸಂದೇಶ. ಲಿಂಗನೆಂಬೆ, ಸಂಗನೆಂಬೆ, ಮುಖಲಿಂಗಿಗಳೆಂಬೆ ಇದು ಪ್ರಶ್ನೆಯ ಸಂಕೇತದ ರೂಪದಲ್ಲಿ ಬಳಸಿರುವುದು ವಿಶ್ಲೇಷಣೆಯ ಇನ್ನೊಂದು ಮುಖ. ಅವರ ಮನಃಪರಿವರ್ತನೆಗೆ ಈ ವಚನವನ್ನು ಬಳಸಿದ್ದಾರೆ ಬಸವಣ್ಣನವರು. ಇಷ್ಟಲಿಂಗವು ನಿರಾಕಾರ ಶಿವನ ಪಾರಮಾರ್ಥಿಕ ಅಭಿವ್ಯಕ್ತಿಯ ಸಂಕೇತ. ಅದನ್ನು ಕಟ್ಟಕೊಂಡ ಮಾತ್ರಕ್ಕೆ ಅವರು ಸಮಾಜದ ಮುಖ್ಯವಾಹಿನಿಗೆ ಸೇರಲಾರರು ಅಥವಾ ಇವೆಲ್ಲವನ್ನೂ ತ್ಯಜಿಸಲು ಮತ್ತು ಅವರ ವ್ಯಕ್ತಿತ್ವ ಬದಲಾವಣೆಯಾಗಲು ಬಸವಣ್ಣನವರು ಸಹಕಾರಿಯಾದರು ಎನ್ನುವುದಕ್ಕೆ “ಎಂಬೆ” ಎನ್ನುವ ಪದ ಪ್ರಯೋಗ ಮಾಡಿದ್ದಾರೆ ಬಸವಣ್ಣನವರು.

ಈ ವಚನದ ಆಶಯ ಬಹುದೊಡ್ಡ ನಿದರ್ಶನವನ್ನು ಹಂಚಿಕೊಳ್ಳುತ್ತದೆ. ಜಿಡ್ಡುಗಟ್ಟಿದ್ದ, ಶೋಷಿತ ಶ್ರೇಣೀಕೃತ ಸಮಾಜದಿಂದ ಬಿಡುಗಡೆಗೊಳಿಸಿ ಹೊಸ ಸಮ ಸಮಾಜವನ್ನು ನಿರ್ಮಿಸುತ್ತಿದ್ದ ಬಸವಣ್ಣವರಿಗೆ ಹೆಗಲು ಕೊಟ್ಟು ತಮ್ಮೆಲ್ಲ ಘನತೆ ಗೌರವವನ್ನು ಗಳಿಸುವುದಕ್ಕೆ ಉತ್ಸಾಹ ತೋರಿದ್ದುದನ್ನು ಈ ವಚನ ನಿರೂಪಿಸುತ್ತದೆ. ಶಿವಸ್ವರೂಪಿಗಳಾಗಿ ಬದಲಾಗಿ ಬದುಕು ಕಟ್ಟಿಕೊಳ್ಳುವುದನ್ನು ಕಂಡುಕೊಂಡರು ಎನ್ನುವುದು ಈ ವಚನದ ಸಾರ ಸಂಗ್ರಹ.

ವೈಯಕ್ತಿಕ ಮತ್ತು ತಮ್ಮ ತಮ್ಮ ಕೌಟುಂಬಿಕ ವಿಷಯವಾದ ಆಹಾರ ಪದ್ಧತಿಯನ್ನು ಬಸವಣ್ಣನವರು ಎಂದೂ ಟೀಕೆ ಮಾಡಿಲ್ಲ. ವಚನಗಳನ್ನು ಅಪಭ್ರಂಶ ಮಾಡಿ ತಿರುಚಿ ಹೇಳುವುದರ ಮೂಲಕ ಬಸವಣ್ಣನವರು ಮಾಂಸಾಹಾರವನ್ನು ವಿರೋಧಿಸಿಲ್ಲ ಎನ್ನುವುದನ್ನು ಹೇಳುತ್ತಾ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಅದರ ಅಡ್ಡ ಪರಿಣಾಮಗಳನ್ನು ಮಾತ್ರ ಬಸವಣ್ಣನವರು ವಿಶ್ಲೇಷಣೆ ಮಾಡಿದ್ದಾರೆ.

ಕೊಲುವನೇ | ಮಾದಿಗ ||
ಹೊಲಸು ತಿಂಬವನೇ | ಹೊಲೆಯ ||
ಕುಲವೇನೋ ಅವದಿರ | ಕುಲವೇನೋ ||
ಸಕಲ ಜೀವಾತ್ಮರಿಗೆ | ಲೇಸನೇ ಬಯಸುವ ||
ನಮ್ಮ ಕೂಡಲಸಂಗನ | ಶರಣರೇ ಕುಲಜರು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-55 / ವಚನ ಸಂಖ್ಯೆ-591)

ಈ ವಚನದ ಉದ್ದೇಶ ಮತ್ತು ಆಶಯ ಪ್ರಾಣಿಹಿಂಸೆ ಮತ್ತು ಮಾಂಸಾಹಾರ ಅತ್ಯಂತ ನಿಕೃಷ್ಠವಾದ್ದು ಎಂದು ಹೇಳುವುದು. ಕೊಲ್ಲುವುದು, ಬೇಡವಾದದ್ದನ್ನು ತಿನ್ನುವುದು ಸಮಾಜದಲ್ಲಿ ನಿಕೃಷ್ಠವಾದ್ದು ಎಂದು ಹೇಳುವುದರ ಮೂಲಕ ಮಾಂಸಾಹಾರವನ್ನು ವಿರೋಧಿಸಿದ್ದರು ಬಸವಣ್ಣನವರು. ಸಮಷ್ಠಿಯ ಜೀವರಾಶಿಗಳ ಉತ್ಥಾನವನ್ನು ಬಯಸಿದ ಬಸವಣ್ಣನವರು ಮಾಂಸಾಹಾರವನ್ನು ಸಮರ್ಥಿಸಿಕೊಂಡರು ಎನ್ನುವ ಕಲ್ಪನೆಯೆ ತಪ್ಪು. ಇದು ಇಂದಿನ ಅಪಪ್ರಚಾರ ಮಾಡುವ ಬುದ್ಧಿಜೀವಿಗಳ ಮತ್ತು ವಚನ ವಿಶ್ಲೇಷಣಾಕಾರರ ವಿಡಂಬನೆ ಅಲ್ಲದೇ ಮತ್ತೇನಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಸವಣ್ಣನವರು ಹೇಳುತ್ತಾರೆ:

ಕೊಲ್ಲೆನಯ್ಯಾ ಪ್ರಾಣಿಗಳ | ಮೆಲ್ಲೆನಯ್ಯಾ ಬಾಯಿಚ್ಛೆಗೆ ||
ಒಲ್ಲೆನಯ್ಯಾ | ಪರಸತಿಯರ ಸಂಗವ ||
ಬಲ್ಲೆನಯ್ಯಾ ಮುಂದೆ | ತೊಡಕುಂಟೆಂಬುದ ||
ಬಳ್ಳದ ಬಾಯಂತೆ | ಒಂದೆ ಮನ ಮಾಡಿ ||
ನಿಲ್ಲೆಂದು ನಿಲಿಸಯ್ಯಾ | ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-67 / ವಚನ ಸಂಖ್ಯೆ-736)

ಬಾಯಿ ಚಪಲಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದು ತಪ್ಪು ಮತ್ತು ಪರಸತಿಯರ ವ್ಯಾಮೋಹದಿಂದ ಮುಂದಾಗುವ ಅನಾಹುತಗಳ ಬಗ್ಗೆ ಎಚ್ಚರಿಸಿದ್ದಾರೆ. ಧಾನ್ಯಗಳನ್ನು ಅಳೆಯುವ ಸಾಧನವಾದ ಬಳ್ಳ ಅಥವಾ ಸೇರು ಇದಕ್ಕೆ ಇರುವುದೇ ಒಂದೇ ಬಾಯಿಯ ಹಾಗಿರಬೇಕು ಎನ್ನುತ್ತಾರೆ ಬಸವಣ್ಣನವರು. One-way traffic ಅಂತೀವಲ್ಲಾ ಹಾಗೆ. ಅಂದರೆ ಒಮ್ಮನದಿಂದ ಇರಬೇಕೆಂಬುದು ಬಸವಣ್ಣನವರ ಸದಾಶಯ.

ಬಾರತದ ಇತಿಹಾಸವನ್ನು ಒಮ್ಮೆ ನಾವು ಮೆಲುಕು ಹಾಕಿದರೆ, ಹಬ್ಬಗಳಲ್ಲಿ ಪ್ರಾಣಿಗಳ ಬಲಿ ಶತ ಶತಮಾನಗಳಿಂದ ನಡೆದು ಬಂದ ಪಿಡುಗು. ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿಕೊಟ್ಟು ಮಾಂಸಾಹಾರ ಸೇವಿಸಿ ಶಾಖಾಹಾರವನ್ನು ವೈಭವೀಕರಿಸುವ ಢಂಬಾಚಾರಿಗಳ ಬಣ್ಣವನ್ನು ಬಯಲಿಗೆಳೆದಿದ್ದಾರೆ ಬಸವಣ್ಣನವರು.

ಹಬ್ಬಕ್ಕೆ ತಂದ | ಹರಕೆಯ ಕುರಿ ||
ತೋರಣಕ್ಕೆ ತಂದ | ತಳಿರ ಮೇಯಿತ್ತು ||
ಕೊಂದಹರೆಂಬುದನರಿಯದೆ | ಬೆಂದ ಒಡಲ ಹೊರೆವುತ್ತಲದೆ ||
ಅದಂದೆ ಹುಟ್ಟಿತ್ತು | ಅದಂದೆ ಹೊಂದಿತ್ತು ||
ಕೊಂದವರುಳಿವರೆ | ಕೂಡಲಸಂಗಮದೇವಾ? ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-21 / ವಚನ ಸಂಖ್ಯೆ-129)

ಶಾಶ್ವತವಲ್ಲದ ಈ ಜೀವನದಲ್ಲಿ ಪ್ರಾಣಿಗಳ ಬಲಿಕೊಡುವುದು ಯಾವ ಧರ್ಮ? ಇಂತಹ ಅಮಾನವೀಯ ಕೃತ್ಯವನ್ನು ಯಾವ ದೇವರುಗಳು ಪುರಸ್ಕರಿಸುತ್ತವೆ? ನಮ್ಮಂತೆಯೇ ಎಲ್ಲ ಪ್ರಾಣಿಗಳಿಗೂ ತಮ್ಮದೇ ಆದ ಹಸಿವು ನಿದ್ರಾದಿಗಳು ಹುಟ್ಟಿನಿಂದಲೇ ಬಂದಿರುವಾಗ ಅವುಗಳ ಬಲಿ ಎಷ್ಟು ಸಮಂಜಸ ಎನ್ನುವುದನ್ನು ಬಸವಣ್ಣನವರು ತಮ್ಮ ವಚನಗಳಲ್ಲಿ ಟೀಕಿಸಿದ್ದಾರೆ.

ವ್ಯಷ್ಠಿ ಮತ್ತು ಸಮಷ್ಠಿಯ ಸರ್ವ ಜೀವ ಜಾತಿಯಲ್ಲಿ ದಯವನ್ನೇ ಬಯಸಿದ ಬಸವಾದಿ ಶರಣರು ಪ್ರಾಣಿಬಲಿಯನ್ನು ಖಂಡಿಸಿದ್ದಾರೆ. ಶರಣ ಸಿದ್ಧಾಂತದ ಮೂಲಮಂತ್ರವೇ ದಯೆ ಮತ್ತು ದಯೆಯಿಲ್ಲದ ಧರ್ಮ ಯಾವುದು? ಎನ್ನುವುದನ್ನು ಬಸವಣ್ಣನವರ ಈ ವಚನ ಸಾರಿ ಸಾರಿ ಹೇಳುತ್ತದೆ.

ದಯವಿಲ್ಲದ | ಧರ್ಮವದೇವುದಯ್ಯಾ? ||
ದಯವೇ ಬೇಕು | ಸರ್ವಪ್ರಾಣಿಗಳೆಲ್ಲರಲಿ ||
ದಯವೇ ಧರ್ಮದ | ಮೂಲವಯ್ಯಾ ||
ಕೂಡಲಸಂಗಯ್ಯನಂತಲ್ಲ | ದೊಲ್ಲನಯ್ಯಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-29 / ವಚನ ಸಂಖ್ಯೆ-247)

ಹೀಗೆ ಬಸವಣ್ಣನವರು ಹಾಗೂ ಅನೇಕ ಶರಣರು ಪ್ರಾಣಿಗಳಲ್ಲಿ ದಯೆ ಇರಬೇಕು ಹಾಗೂ ಮೂಢ ಭಕ್ತಿಯಿಂದ ಪ್ರಾಣಿಗಳನ್ನು ದಯೆ ಇಲ್ಲದೆ ಬಲಿ ಕೊಡಬಾರದು ಎಂದು ಹೇಳುತ್ತಾರೆ. ಹಾಗೆ ಈ ನಾಲಿಗೆಯ ಇಚ್ಛೆಗೆ ಮಧ್ಯ ಮಾಂಸವನ್ನು ತಿನ್ನುತ್ತಾರೆ. ಕಣ್ಣಿನ ಇಚ್ಛೆಗೆ ಪರರ ಸತಿಯನ್ನು ನೋಡುತ್ತಾರೆ. ಅವರನ್ನು ಕೂಡಲಸಂಗಮದೇವರು ಎಂದಿಗೂ ಮೆಚ್ಚುವುದಿಲ್ಲ ಎಂದು ಈ ಕೆಳಗಿನ ವಚನದಲ್ಲಿ ಹೇಳುತ್ತಾರೆ.

ಅಂಗದಿಚ್ಛೆಗೆ ಮದ್ಯ | ಮಾಂಸವ ತಿಂಬರು ||
ಕಂಗಳಿಚ್ಛೆಗೆ | ಪರವಧುವ ನೆರೆವರು ||
ಲಿಂಗ ಲಾಂಛನಧಾರಿಯಾದಲ್ಲಿ | ಫಲವೇನು ||
ಲಿಂಗಪಥವ | ತಪ್ಪಿ ನಡೆವವರು ||
ಜಂಗಮಮುಖದಿಂದ | ನಿಂದೆ ಬಂದಡೆ ||
ಕೊಂಡ ಮಾರಿಂಗೆ | ಹೋಹುದು ||
ತಪ್ಪದು | ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-19 / ವಚನ ಸಂಖ್ಯೆ-106)

ಮಾಂಸಾಹಾರದ ಹಿನ್ನೆಲೆಯಿಂದ ಬಂದಿದ್ದ ಹಲವಾರು ಶರಣ ಶರಣೆಯರು ಆ ಕುರಿತು ತಮ್ಮ ವಚನಗಳಲ್ಲಿ ಮಾಂಸಾಹಾರದ ವಿರುದ್ಧ ವಿವರಗಳನ್ನು ದಾಖಲಿಸಿದ್ದಾರೆ. ಅವರಲ್ಲಿ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆಯವರ ಈ ವಚನ ಉತ್ತಮ ನಿದರ್ಶನ.

ಕುರಿ ಕೋಳಿ | ಕಿರಿಮೀನು ತಿಂಬವರಿಗೆಲ್ಲ ||
ಕುಲಜ | ಕುಲಜರೆಂದೆಂಬರು ||
ಶಿವಗೆ ಪಂಚಾಮೃತವ | ಕರೆವ ಪಶುವ ತಿಂಬ ||
ಮಾದಿಗ | ಕೀಳು ಜಾತಿಯೆಂಬರು ||
ಅವರೆಂತು | ಕೀಳುಜಾತಿಯಾದರು? ||
ಜಾತಿಗಳು | ನೀವೇಕೆ ಕೀಳಾಗಿರೊ? ||
ಬ್ರಾಹ್ಮಣನುಂಡುದು | ಪುಲ್ಲಿಗೆ ಶೋಭಿತವಾಗಿ ||
ನಾಯಿ | ನೆಕ್ಕಿ ಹೋಯಿತು ||
ಮಾದಿಗರುಂಡುದು ಪುಲ್ಲಿಗೆ | ಬ್ರಾಹಣಗೆ ಶೋಭಿತವಾಯಿತು ||
ಅದೆಂತೆಂದಡೆ:
ಸಿದ್ದಲಿಕೆಯಾಯಿತು | ಸಗ್ಗಳೆಯಾಯಿತು ||
ಸಿದ್ದಲಿಕೆಯ ತುಪ್ಪವನು | ಸಗ್ಗಳೆಯ ನೀರನು ||
ಶುದ್ಧವೆಂದು ಕುಡಿವ | ಬುದ್ಧಿಗೇಡಿ ವಿಪ್ರರಿಗೆ ||
ನಾಯನರಕ | ತಪ್ಪದಯ್ಯಾ ||
ಉರಿಲಿಂಗಪೆದ್ದಿಗಳರಸ | ಒಲ್ಲನವ್ವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-868 / ವಚನ ಸಂಖ್ಯೆ-732)

ಶರಣೆ ಕಾಳವ್ವೆಯವರ ಈ ವಚನ ಅಂದು-ಇಂದಿಗೂ ಪ್ರಸ್ತುತವಾಗುವ, ಶ್ರೇಣೀಕೃತ ಸಮಾಜದಲ್ಲಿ ಕೀಳಾಗಿ ಕಂಡಂತವರ ಆಹಾರ ಪದ್ಧತಿಯನ್ನು ಕುರಿತಾದ ಮಾತನ್ನು ಬಿಂಬಿಸುತ್ತದೆ. ಇವರಲ್ಲಿಯೂ ಸಹ ಭೇದವನ್ನು ಕಾಣುವ ಮನಸ್ಸುಗಳನ್ನು ಶರಣೆ ಕಾಳವ್ವೆ ಪ್ರಶ್ನಿಸುತ್ತಾರೆ. ಶರಣೆ ಕಾಳವ್ವೆಯವರು “ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು” ಎಂದು ವ್ಯಂಗವಾಡುತ್ತಾರೆ. ಪ್ರಾಣಿಗಳ ಮೇಲಿನ ಚರ್ಮ ಹದ ಮಾಡಿ ಅದರಿಂದ ತುಪ್ಪ ಅಳೆಯುವ ಸಗ್ಗಳಿಕೆ (ಎಣ್ಣೆಯನ್ನು ಅಳೆಯುವ ಸಾಧನ) ಮತ್ತು ಸಿದ್ದಲಿಕೆ (ನೀರು ತುಂಬಿಸುವ ಚೀಲ) ಮಾಡುವ ದುಡಿಯುವ ವರ್ಗ ಗೌರವಕ್ಕೆ ಪಾತ್ರವಲ್ಲವೇ? ಎಂದು ಕೇಳುತ್ತಾರೆ. ಶರಣೆ ಕಾಳವ್ವೆಯವರು ಶ್ರೇಣೀಕೃತ ಸಮಾಜದಲ್ಲಿ ಕೆಳಮಟ್ಟದಲ್ಲಿದ್ದಂಥವರ ಕೌಟುಂಬಿಕ ಆಹಾರ ಸಂಸ್ಕೃತಿಯ ಹಿಂದಿರುವ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮಗ್ಗಲುಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಣೆ ಮಾಡಿದ್ದಾರೆ. ವೈಯಕ್ತಿಕ ಆಹಾರ ಪದ್ಧತಿಯನ್ನು ಹೀಯಾಳಿಸುವವರಿಗೆ ನಾಯ ನರಕ ತಪ್ಪುವುದಿಲ್ಲ ಎಂದು ಉರಿಲಿಂಗಪೆದ್ದಿಯವರ ಪುಣ್ಯಸ್ತ್ರೀ ಕಾಳವ್ವೆಯವರು ಎಚ್ಚರಿಸುತ್ತಾರೆ.

ವೇದ ಶಾಸ್ತ್ರಗಳನ್ನು ಅರಗಿಸಿ ಕುಡಿದಂಥವರು ಅರ್ಥವಿಲ್ಲದ, ಸಿದ್ಧಾಂತಗಳಿಲ್ಲದ, ಅನಾಗರೀಕವೆನಿಸಬಹುದಾದಂಥ ಯಜ್ಞ-ಯಾಗಾದಿಗಳ ಹೆಸರಿನಲ್ಲಿ ನಡೆಯುವ ಪ್ರಾಣಿ ಬಲಿಯನ್ನು ಬಸವಾದಿ ಶರಣರು ಧಿಕ್ಕರಿಸಿರುವುದನ್ನು ಈ ವಚನದಲ್ಲಿ ನಾವು ಕಾಣಬಹುದು.

ಮಾತಿನ ಮಾತಿಂಗೆ | ನಿನ್ನ ಕೊಂದಹರೆಂದು ||
ಎಲೆ ಹೋತೇ | ಅಳು ಕಂಡಾ ||
ವೇದವನೋದಿದವರ | ಮುಂದೆ ಅಳು ಕಂಡಾ ||
ಶಾಸ್ತ್ರವ ಕೇಳಿದವರ | ಮುಂದೆ ಅಳು ಕಂಡಾ ||
ನೀನತ್ತುದಕ್ಕೆ ತಕ್ಕುದ ಮಾಡುವ | ಕೂಡಲಸಂಗಮದೇವ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-53 / ವಚನ ಸಂಖ್ಯೆ-573)

ರೂಢಿಯೊಳಗಿದ್ದ ಅನೇಕ ಆಚರಣೆಗಳನ್ನು ಬಸವಣ್ಣನವರು ಪ್ರಶ್ನಿಸಿದ್ದರು. ಹೋತವನ್ನು ಸಾಂತ್ವನಗೊಳಿಸಲು ಪ್ರಯತ್ನ ಮಾಡಿದ್ದನ್ನು ಈ ವಚನದಲ್ಲಿ ನಾವು ಕಾಣಬಹುದು. ಎಲೆ ಹೋತೆ ಅಳು ಮತ್ತು ಪ್ರತಿಭಟನೆಯನ್ನು ಮಾಡು. ನಿನ್ನ ಈ ಆಕ್ರಂದನ ಕೂಡಲಸಂಗಮದೇವರಿಗೆ ಮುಟ್ಟಿದರೆ ನಿನ್ನ ಕೊಂದವರಿಗೆ ತಕ್ಕ ಶಾಸ್ತಿಯಾದರೂ ಆಗುತ್ತದೆ ಎಂದು ಮಮ್ಮಲ ಮರುಗುತ್ತಾರೆ.

ಜೇಡರ ದಾಸಿಮಯ್ಯನವರು ಮದ್ಯ ಮಾಂಸಾಹಾರಗಳನ್ನು ಎಷ್ಟು ಕಟುವಾಗಿ ಟೀಕಿಸಿದ್ದಾರೆ ಈ ವಚನದಲ್ಲಿ:

ಅಡಗ ತಿಂಬರು | ಕಣಿಕದ ಅಡಿಗೆಯಿರಲಿಕೆ ||
ಕುಡಿವರು ಸುರೆಯ | ಹಾಲಿರಲಿಕೆ ||
ಹಡದುಂಬ | ವೇಶಿಯನೊಲ್ಲದೆ ||
ಹೆರರ ಮಡದಿಗಳುಪುವ | ಸತ್ತ ನಾಯ ತಿಂಬ ||
ಹೆಡ್ಡಿಗರನೇನೆಂಬೆನೈ | ರಾಮನಾಥಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1275 / ವಚನ ಸಂಖ್ಯೆ-715)

“ಅಡುಗು ತಿಂಬರು ಕಣಕದದಡಿಗೆಯಿರಲ್ಕೆ, ಕುಡಿಯುವರು ಸುರೆಯ ಹಾಲಿರಲಿಕ್ಕೆ” ಎಂದು ಕಣಕ ಅಂದರೆ ಸಸ್ಯಾಹಾರ ಇದ್ದರೂ ಬಡವರ ಆಹಾರ ಕಸಿದುಕೊಳ್ಳುವ, ಹಾಲು ಹೈನು ಸಮೃದ್ಧವಾಗಿದ್ದರೂ ಸಹ ಅದನ್ನು ಬಿಟ್ಟು ಮಧ್ಯ ಸೇವಿಸುವುದನ್ನು ಖಂಡಿಸಿದ್ದಾರೆ ಶರಣ ಜೇಡರ ದಾಸಿಮಯ್ಯನವರು.
ಅದೆ ರೀತಿ ವ್ಯಕ್ತಿ ಸ್ವಾತಂತ್ರ್ಯದ ಮೂರ್ತಿರೂಪ ಅಕ್ಕ ಮಹಾದೇವಿಯವರೂ ಸಹ ಪ್ರಾಣಿಹಿಂಸೆಯನ್ನ ವಿರೋಧಿಸಿದ್ದಾರೆ. ಮಹಾದೇವಿಯಕ್ಕನ ಈ ವಚನ ಅರ್ಥಪೂರ್ಣ ಮತ್ತು ಈ ಲೇಖನಕ್ಕೆ ಪೂರಕವೂ ಆಗಿದೆ.

ಜಾಲಗಾರನೊಬ್ಬ ಜಲವ | ಹೊಕ್ಕು ಶೋಧಿಸಿ ||
ಹಲವು ಪ್ರಾಣಿಯ | ಕೊಂದು ನಲಿನಲಿದಾಡುವ ||
ತನ್ನ ಮನೆಯಲೊಂದು | ಶಿಶು ಸತ್ತಡೆ ||
ಅದಕ್ಕೆ ಮರುಗುವಂತೆ | ಅವಕೇಕೆ ಮರುಗ? ||
ಅದೆಂತೆದೆಡೆ:
ಸ್ವಾತ್ಮಾನಮಿತರಂ ಚೇತಿ ಭಿನ್ನತಾ | ನೈವ ದೃಶ್ಯತಾಂ ಸರ್ವಂ ||
ಚಿತ್‌ ಜ್ಯೋತಿರೇವತಿ | ಯಃ ಪಶ್ಯತಿ ಸ ಪಶ್ಯತಿ ||
ಎಂದುದಾಗಿ ಜಾಲಗಾರನ | ದುಃಖ ಜಗಕ್ಕೆಲ್ಲ ನಗೆಗೆಡೆ ||
ಇದು ಕಾರಣ | ಚೆನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿರ್ದು ||
ಜೀವಹಿಂಸೆ ಮಾಡುವ | ಮಾದಿಗರನೇನೆಂಬೆನಯ್ಯಾ? ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-807 / ವಚನ ಸಂಖ್ಯೆ-208)

ಎಂಬುದಾಗಿ ಪ್ರಶ್ನಿಸಿದ್ದಾರೆ ಅಕ್ಕ ಮಹಾದೇವಿಯವರು ಈ ವಚನದ ಮೂಲಕ. ಇಲ್ಲಿಯೂ ಸಹ ಮಾಂಸಾಹಾರವನ್ನ ವಿರೋಧಿಸಿದ್ದಾರೆ ಎನ್ನುವುದನ್ನು ನಾವು ಕಾಣಬಹುದು. ಜಾಲಗಾರರು, ಬೇಟೆಯಾಡುವವರು ಪಶು ಪ್ರಾಣಿಗಳನ್ನು ಬೇಟೆಯಾಡಿ ಕೊಂದು ಹಾಕಿ ತಿನ್ನುತ್ತಾನೆ. ಆದರೆ ತನ್ನದೇ ಮಗು ಸತ್ತಾಗ ಅಳುತ್ತಾನೆ, ಮರುಗುತ್ತಾನೆ, ಶೋಕ ವ್ಯಕ್ತಪಡಿಸುತ್ತಾನೆ. ಇದೇ ಕಕ್ಕುಲತೆ, ಮರುಕ, ಶೋಕ ತಾನು ಕೊಲ್ಲುವ ಪ್ರಾಣಿಗಳ ಮೇಲೆ ಏಕಿಲ್ಲ? ಎಂದು ಅಕ್ಕ ಮಹಾದೇವಿಯವರು ಖಂಡಿಸುತ್ತಾರೆ.

ಶರಣೆ ಅಕ್ಕಮ್ಮನವರೂ ಸಹ ತಮ್ಮ ವಚನದಲ್ಲಿ ಈ ರೀತಿ ಹೇಳುತ್ತಾರೆ.

ಅಡಗು ಸುರೆ | ಕಟಕ ಪಾರದ್ವಾರ ||
ಮುಂತಾದ ಇಂತಿವ | ಬೆರೆಸುವವರ ||
ನಾ ಬೆರೆಸೆನೆಂದು | ಅವರ ನಿರೀಕ್ಷಿಸೆನೆಂದು ||
ಮತ್ತಿದ ಮರೆದು | ಕೊಂಡು ಕೊಟ್ಟನೆಂದು ||
ತ್ರಿವಿಧದಾಸೆಯ ಕುರಿತು | ಮತ್ತವರ ಸಂಗವ ಮಾಡಿದೆನಾದೆಡೆ ||
ಲಿಂಗಕ್ಕೆ ಸಲ್ಲ | ಜಂಗಮಕ್ಕೆ ದೂರ ||
ಪ್ರಸಾದವಿಲ್ಲ ಆಚಾರವೇ | ಪ್ರಾಣವಾದ ||
ರಾಮೇಶ್ವರಲಿಂಗವಾದಡೂ | ವೃತಭ್ರಷ್ಠನೆಂದು ಬಿಡುವೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-832 / ವಚನ ಸಂಖ್ಯೆ-436)

ಮಾಂಸ ಮದ್ಯಗಳು ನರಕದ ದ್ವಾರವಿದ್ದಂತೆ. ಇಷ್ಟಲಿಂಗವನ್ನು ಅಂಗದ ಮೇಲೆ ಧರಿಸಿದವರು ಮಾಂಸ, ಮದ್ಯ, ಮೋಸ, ಪರಸ್ತ್ರೀ ಸಂಗದಲ್ಲಿ ತೊಡಬಾರದೆಂದು ಈ ವಚನದ ಮೂಲಕ ಶರಣೆ ಅಕ್ಕಮ್ಮ ಎಚ್ಚರಿಸುತ್ತಾರೆ.

12 ನೇ ಶತಮಾನದ ಬಸವಾದಿ ಶರಣರು ಸಸ್ಯಾಹಾರವನ್ನೇ ಪ್ರತಿಪಾದಿಸಿದಂತವರು. ಮಾಂಸಾಹಾರವನ್ನು ತಿರಸ್ಕರಿಸಿದವರು. ಅವರ ವಚನಗಳನ್ನು ಆಳವಾಗಿ ಅಭ್ಯಾಸ ಮಾಡಿ ವಾಸ್ತವತೆಯನ್ನು ಗಮನದಲ್ಲಿರಿಸಿಕೊಂಡು ವಿಮರ್ಶೆ ಮಾಡುವ ಅವಶ್ಯಕತೆಯಿದೆ. ಉದ್ದೇಶಪೂರ್ವಕವಾಗಿ ತಪ್ಪು ಕಲ್ಪನೆಯನ್ನು ಬಿಂಬಿಸುವ ವ್ಯವಸ್ಥಿತ ಜಾಲಗಳು ಹುಟ್ಟಿಕೊಂಡಿರುವ ಸ್ಪಷ್ಟ ನಿದರ್ಶನಗಳು ಕಾಣತಾ ಇದಾವೆ.
ದ್ವೇಷ ಅಸೂಯೆಗಳನ್ನು ಮನಸ್ಸಿನಲ್ಲಿ ಹೊತ್ತು ತಿರುಗುವುದರಿಂದ ಸಾಮಾಜಿಕ ನ್ಯಾಯ ಕ್ರಾಂತಿಗಳನ್ನು ಸಾಧಿಸಲು ಆಗುವುದಿಲ್ಲ ಎಂಬುದನ್ನು ಬಸವಣ್ಣವರೂ ಕಂಡುಕೊಂಡಿದ್ದರು.

ಕರ್ತರು ನಿಮ್ಮ | ಗಣಂಗಳು ||
ಎನ್ನ ತೊತ್ತು ಮಾಡಿ | ಸಲುಹಿದ ಸುಖವು ||
ಸಾಲೋಕ್ಯ | ಸಾಮಿಪ್ಯ ||
ಸಾರೂಪ್ಯ | ಸಾಯುಜ್ಯದಂತುಟಲ್ಲ ||
ಕೇಳಯ್ಯಾ | ಕೂಡಲಸಂಗನ ಶರಣರು ||
ತಮ್ಮ ಒಕ್ಕುದನಿಕ್ಕಿ | ಸಲಹಿದ ಸುಖವು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-45 / ವಚನ ಸಂಖ್ಯೆ-475)

ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಬಸವಣ್ಣನವರು ಮಾಡಿದ ಅಗಾಧ ಕೆಲಸದಲ್ಲಿ ಒಂದು ಎಲ್ಲರನ್ನೂ ಸರಿಸಮನಾಗಿ ಕಂಡಿದ್ದು, ಎರಡು ಇಡೀ ಸಮಾಜವನ್ನೇ ತಮ್ಮ ಮನೆಯಾಗಿಸಿಕೊಂಡಿದ್ದು. ಎಲ್ಲರೂ ಸೇರಿ ಬಸವಣ್ಣನನ್ನು ಸಾಕಿ ಸಲುಹಿದರು ಎನ್ನುವುದು. ಎಲ್ಲರನ್ನೂ ತಮ್ಮೊಡನೆ ಸೇರಿಸಿಕೊಂಡು ಮುಂದುವರೆಯದಿದ್ದರೆ ಸಮ ಸಮಾಜವನ್ನು ನಿರ್ಮಿಸುವ ಕಲ್ಯಾಣ ಕ್ರಾಂತಿ ಸಾಧ್ಯವೇ ಎನ್ನುವುದು ಬಸವಣ್ಣನವರ ಈ ಮಾತುಗಳೆ ನಿದರ್ಶನ.

ಸಂಗ್ರಹ ಮತ್ತು ಲೇಖನ :
ವಿಜಯಕುಮಾರ ಕಮ್ಮಾರ
ತುಮಕೂರು ,ಮೋಬೈಲ್ ನಂ : 9741 357 132 

ಈ-ಮೇಲ್ : vijikammar@gmail.com

Don`t copy text!