ಮನಸೆಳೆವ ಮಲ್ಲಿಗೆ

ಕವಿತೆ

ಮನಸೆಳೆವ ಮಲ್ಲಿಗೆ

ಎಲ್ಲರ ಮನವ ಸೆಳೆವ ಮುದ್ದು ಮಲ್ಲೆ
ಮೈ ಬಣ್ಣದಲ್ಲೆ ನೀ ಎಲ್ಲರ ಗೆಲ್ಲಬಲ್ಲೆ
ಮೆಲ್ಲ ಮೆಲ್ಲಗೆ ನಿನ್ನ ಕಂಪ ಹರಡುವೆಯಲ್ಲೆ
ಪರಿಮಳದುದಕದೊಳೆದ್ದು ಬಂದೆಯಲ್ಲೆ ||

ಜೇನಿಗಾಗಿ ಮಕರಂದವ ಹೊತ್ತುತಂದೆ
ಶುಭ್ರತೆಯ ಪ್ರತಿರೂಪವಾಗಿನಿಂದೆ
ಭ್ರಮರಗಳ ನಿನ್ನತ್ತ ಸೆಳೆಯಲೆಂದೆ
ಸುವಾಸನೆಯ ಸುತ್ತ ಬೀರುತನಿಂದೆ ||

ಹಸಿರೆಲೆಯ ಮಧ್ಯ ಎದ್ದು ಮೆರೆವವಳು
ಕುಸುರಿ ಕಲೆಯಲಿ ಅರಳಿದವಳು
ಮೃದು ಮನೋಹರ ಶ್ವೇತಾಂಬರಿ
ನಿರ್ಮಲ ಮನದ ಸುಂದರಿ ||

ರಸಿಕರ ಮನದ ರಾಣಿ ನೀ
ಮಧು ಮಂಚದ ಮಹಾರಾಣಿ
ಎಲ್ಲ ಕಾರ್ಯಕೂ ನೀ ಮೊದಲು
ಇರಲೆ ಬೇಕು ನಿನ್ನ ಘಮಲು ||

ಹೂಗೆ ಹೂವ ಸೇರಿ ನೇಯ್ದ
ಮೊಳದುದ್ದ ಮಲ್ಲೆ
ಮಾನಿನಿಯರ ಮುಡಿಯನೇರಿ
ಮುದ್ದು ನಗುವೆಯಲ್ಲೆ
ದೇವನಾ ಪಾದದಿ ಸ್ವರ್ಗ ಸೇರ ಬಲ್ಲೆ ||

ಸವಿತಾ ಎಮ್. ಮಾಟೂರು, ಇಲಕಲ್ಲ

 

Don`t copy text!