e-ಸುದ್ದಿ, ಮಸ್ಕಿ
ಪಟ್ಟಣ ಗ್ರಾ.ಪಂ. ನಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ ಪರಿಣಾಮ ಗ್ರಾಮ ಅಭಿವೃದ್ದಿಗಿಂತ ಸಾರ್ವಜನಿಕರಿಗೆ ತೆರಿಗೆ ಋಣಭಾರ ಹೆಚ್ಚಿಸಿದೆ. ಅದಕ್ಕಾಗಿ ಬಹುತೇಕರು ತೆರಿಗೆ ಕಟ್ಟದೆ ಮುಂದೇ ನೋಡೋಣ ಎನ್ನುವ ತಂತ್ರ ಹೂಡಿದ್ದು ಪುರಸಭೆ ಆದಾಯಕ್ಕೆ ಕೊಕ್ಕೆ ಬಿದಿದ್ದೆ.
ಕಳೆದ 6 ವರ್ಷಗಳಿಂದ ಪುರಸಭೆಯಾದಾಗ ಸರ್ಕಾರದಿಂದ ಸಾಕಷ್ಟು ಅನುದಾನ ಬರುತ್ತದೆ. ಪಟ್ಟಣ ಅಭೀವೃದ್ದಿಯಾಗುತ್ತದೆ ಎಂದು ಕನಸು ಕಂಡವರು ಈಗ ಭ್ರವನಿರಸನರಾಗಿದ್ದಾರೆ.
ಆರಂಭದಲ್ಲಿ ಒಂದು ವರ್ಷ ಪುರಸಭೆಗೆ ಪೌರ ಸದಸ್ಯರು ಇರಲಿಲ್ಲ. ಆಡಳಿತಾಧಿಕಾರಿ ಮೇಲೆ ಆಡಳಿತ ನಡೆಯಿತು. ನಂತರ ಪುರಸಭೆಗೆ ಚುನಾವಣೆ ನಡೆದು ಸದಸ್ಯರು ಆಯ್ಕೆಯಾಗಿ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾದರು. ಆಡಳಿತ ನಡೆಸಿದ ಪೌರ ಸದಸ್ಯರು ಪಟ್ಟಣದ ಅಭಿವೃದ್ಧಿಗಾಗಿ ತೆರಿಗೆ ಹೆಚ್ಚಳ ನಿರ್ಧಾರ ಮಾಡಿದರು. ಆದರೆ ಗ್ರಾ.ಪಂ. ತೆರಿಗೆಗೂ. ಪುರಸಭೆ ತೆರಿಗೆಗೂ ಅಜಗಜಾಂತರ ಹೆಚ್ಚಳವಾಗಿದ್ದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿತು.
ಬ್ಯಾಂಕ್‍ಗಳಲ್ಲಿ ಸಾಲ ಪಡೆಯುವವರು, ನಿವೇಶನ ಕೊಂಡುಕೊಳ್ಳುವವರು ಅನಿವಾರ್ಯವಾಗಿ ಪ್ರಭಾವಿಗಳಿಂದ ಒತ್ತಡ ಹಾಕಿಸಿ ತಾತ್ಕಲಿಕ ತೆರಿಗೆ ಕಟ್ಟಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು.
ಮಸ್ಕಿ ಪುರಸಭೆಯಾಗುವ ಮುಂಚೆ, ಲಿಂಗಸುಗೂರು, ಸಿಂಧನೂರು, ಇಳಕಲ್ಲ, ಕುಷ್ಟಗಿ ನಗರಗಳಲ್ಲಿ ತೆರಿಗೆ ದರ ಒಂದು ಅಂದಾಜಿನಲ್ಲಿದ್ದರೆ ಮಸ್ಕಿ ಪಟ್ಟಣದ ತೆರಿಗೆ ಇತರ ಪಟ್ಟಣಗಳಿಗಿಂತ 50 ಪಟ್ಟು ಹೆಚ್ಚಳ ಮಾಡಿರುವುದೇ ತೆರಿಗೆ ಸಂಗ್ರಹಕ್ಕಿರುವ ದೊಡ್ಡ ಅಡ್ಡಿಯಾಗಿದೆ.
ಪೆಡಂಭೂತವಾದ ಕಸ ವಿಲೇವಾರಿಃ ಪಟ್ಟಣದಲ್ಲಿ ನಿತ್ಯ ಸಂಗ್ರಹವಾಗುವ ಕಸ ವಿಲೇವಾರಿ ಮಾಡುವುದಕ್ಕೆ ಸೂಕ್ತ ಜಾಗವಿಲ್ಲದೇ ಪಟ್ಟಣದ ಪರಿಸರ ಹಾಳಾಗಿ ಹೋಗಿದೆ.
ಮಸ್ಕಿ ಪಟ್ಟಣದಲ್ಲಿ ಸುಮಾರು 35 ಸಾವಿರ ಜನಸಂಖ್ಯೆ ಹೊಂದಿದ್ದು ಪ್ರತಿ ದಿನ 5 ಟನ್ ಹಸಿ ಹಾಗೂ ಒಣ ಕಸ ಸಂಗ್ರಹಣೆಯಾಗುತ್ತದೆ. ಸಂಗ್ರಹವಾಘುವ ಕಸವನ್ನು ಎಲ್ಲಿ ವಿಲೇವಾರಿ ಮಾಡಬೇಕೆಂಬುದೆ ಪುರಸಭೆಯ ಸಿಬ್ಬಂದಿಗೆ ತಲೇ ನೋವಾಗಿದೆ. ಸರ್ಕಾರದ ನಿರ್ಲಕ್ಷ್ಯ: ಮಸ್ಕಿ ಪಟ್ಟಣಕ್ಕೆ ಕಸ ವಿಲೇವಾರಿ ಘಟಕಕ್ಕೆ ಸ್ಥಳವನ್ನು ಒದಗಿಸುವಂತೆ ಪುರಸಭೆ ಆಡಳಿತ ಮಂಡಳಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಪುರಸಭೆಯ ಆಡಳಿತ ಮಂಡಳಿ ಸದಸ್ಯರಲ್ಲಿ ಇಚ್ಛಾ ಶಖ್ತಿ ಕೊರತೆಯಿಂದ ಜಾಗ ಗೊತ್ತು ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಸಭೆ ಸಿಬ್ಬಂದಿ ಇತ್ತಿಚಿಗೆ ಖಾಸಗಿ ಜಮೀನಿನ ಮಾಲೀಕರೊಬ್ಬರು ಜಾಗದಲ್ಲಿ ಕಸವನ್ನು ಹಾಕುತ್ತಿದ್ದರು. ಕಸ ಹಾಕಬೇಡಿ ಎಂದು ಹಲವು ಬಾರಿ ಮನವಿ ಮಾಡಿದ್ದರು. ಆದರೆ ಪುರಸಭೆಯವರು ಮಾತ್ರ ಅಲ್ಲಿಯೇ ವಿಲೇವಾರಿ ಮಾಡುತ್ತಿದ್ದರು. ಇದರಿಂದ ಬೇಸತ್ತ ಜಮೀನಿನ ಮಾಲೀಕ ಕಸವಿಲೇವಾರಿ ವಾಹನಗಳನ್ನು ತಡೆದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದರು.
———————
ಪುರಸಭೆಯಾಗಿ 6 ವರ್ಷವಾಗುತ್ತಿದೆ. ಕಸ ವಿಲೆವಾರಿ ಘಟಕ ನಿರ್ಮಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ಆದರೆ ಅಧಿಕಾರಿಗಳು ಮಾತ್ರ ಇಂದು ನಾಳೆ ಎನ್ನುತ್ತಲೇ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಅಲ್ಲದೇ ಕಸ ಎಲ್ಲೇಂದರಲ್ಲಿ ಹರಡುತ್ತಿರುವುದರಿಂದ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಸರ್ಕಾರ ಕೂಡಲೇ ಕಸವಿಲೇವಾರಿ ಘಟಕ ನಿರ್ಮಿಸಬೇಕು
-ಅಶೋಕ ಮುರಾರಿ ಕರವೇ ತಾಲೂಕು ಅಧ್ಯಕ್ಷ ಮಸ್ಕಿ
——————-
ಪಟ್ಟಣದ ಸ್ವಚ್ಛತೆ ಹಾಗೂ ಜನರ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯ. ಕಸವಿಲೇವಾರಿ ಘಟಕಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇನ್ನು 15 ದಿನಗಳವೊಳಗಾಗಿ ಘಟಕ ನಿರ್ಮಾಣಕ್ಕೆ ಅನುಮತಿ ಸಿಗಬಹುದು. ಒಂದು ವೇಳೆ ವಿಳಂಭವಾದರೆ. ಖಾಸಗಿ ಜಾಗವನ್ನು ಬಾಡಿಗೆಗೆ ತೆಗೆದುಕೊಂಡು ತಾತ್ಕಾಲಿಕವಾಗಿ ಕಸ ವಿಲೇವಾರಿ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು
-ವಿಜಯಲಕ್ಷ್ಮೀ ಬಸನಗೌಡ ಪೊಲೀಸ್ ಪಾಟೀಲ್, ಪುರಸಭೆ ಅಧ್ಯಕ್ಷೆ ಮಸ್ಕಿ.