ಎದೆಗಾನದಳಲು

  • ಎದೆಗಾನದಳಲು

ಉಸಿರಿಗುಸಿರನು ಬೆಸೆದ ಜೀವಕೆ

ಭಾವ ವೀಣೆಯೆ ಸರಿಗಮ

ಹರಿದ ತಂತಿಯ ಎಳೆಯ ಮೇಲೆಯೆ

ಬಾಡಿ ಕುಳಿತಿದೆ ವನಸುಮ

 

ವಜ್ರಕಾಯಕೆ ಸಿಡಿಲ ಕವಚವು

ಮನಸು ಮೃದುಲತೆ ಹಂದರ

ಚಂದ್ರಿಕೆಯ ಆ ಸೊಬಗಿನೀಟಿಗೆ

ಗಾಯಗೊಂಡಿಹ ಚಂದಿರ

 

ಕನಸಿನಲೆಗಳ ಗೋರಿ ನಡುವೆಯೆ

ಭಾವದೊಲವಿನ ಅಂಬರ

ಮುರಿದ ಮನಸಿನ ಮುಳ್ಳ ಮೊನೆಯಲೆ

ಕುಕಿಲ ಕೋಗಿಲೆ ಇಂಚರ

 

ಕಾದ ಹೆಂಚಿನ ಮೇಲೆ ಸುರಿದಿಹ

ನೀರು ನಾಟ್ಯವನಾಡಿದೆ

ಉರಿಯ ಕಾವಿಗೆ ಹುರಿದ ಹೃದಯವೆ

ಆವಿಯಾಗಿ ಹೊರಟಿದೆ

 

ಭಾವ ಭಿತ್ತಿಯ ಇರುಳ ಹೆಗಲಿಗೆ

ಮಧು ಮಂಚವೆ ಒರಗಿದೆ

ಸರಿದ ಪರದೆಯ ಇಣುಕಿ ನೋಡಿದೆ

ಬಯಕೆ ತುಂಬ ಮುಗಿಲಿದೆ

-ನೀ.ಶ್ರೀಶೈಲ  ಹುಲ್ಲೂರು

Don`t copy text!