ಕಾಯಕಯೋಗಿ ಸಿದ್ಧರಾಮ

ಕಾಯಕಯೋಗಿ ಸಿದ್ಧರಾಮ

ಕಾಯಕಯೋಗಿ ಸಿದ್ಧರಾಮ ಜಯಂತಿ 

ಪಾಶ್ಚಾತ್ಯರ ಪ್ರಭಾವಕ್ಕೊಳಗಾಗಿ ನವ ನಾಗರಿಕತೆಯನ್ನು ರೂಢಿಸಿಕೊಂಡಾಗಲೂ , ಶಾಸನಗಳ ಬಲದಿಂದಲೂ,ಆಚರಣೆಗೆ ತರಲಾಗದ ಅಸ್ಪೃಶ್ಯತೆಯ ನಿವಾರಣೆ, ಸ್ತ್ರೀ ಸ್ವಾತಂತ್ರ್ಯ, ಸಾಮಾಜಿಕ ಸಮಾನತೆ ಮೊದಲಾದ ಸುಧಾರಣೆಗಳನ್ನು ೧೨ ನೆಯ ಶತಮಾನದಲ್ಲಿಯೇ ಜಾರಿಗೆ ತಂದವರು ಬಸವಾದಿ ಶರಣರು. ಆ ಕಾಲದಲ್ಲಿಯೇ ಶರಣರು ಸಮಾಜದಲ್ಲಿ ಅಸಮಾನತೆ, ಅನ್ಯಾಯ, ಅಸ್ಪೃಶ್ಯತೆ,ಅನಾಚಾರ ಯಾವುದಕ್ಕೂ ಅವಕಾಶ ಇರದಂತೆ ಮಾಡಿದ್ದರು.ಸರ್ವಸಮಾನತೆ,ಕಾಯಕನಿಷ್ಠೆ, ದಾಸೋಹ ಭಾವಗಳೆ ಆ ಸಮಾಜದ ಮಂತ್ರಗಳಾಗಿದ್ದವು.ಈ ಕಾರಣಕ್ಕಾಗಿಯೇ ಆ ಕಾಲವನ್ನು ಕರ್ನಾಟಕದ ಧಾರ್ಮಿಕ, ರಾಜನೈತಿಕ,ಸಾಮಾಜಿಕ, ಸಾಂಸ್ಕೃತಿಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹದ್ದಾಗಿದೆ.ಅಂತಹ ಕಲ್ಯಾಣ ರಾಜ್ಯ ನಿರ್ಮಾತೃಗಳಲ್ಲಿ ಭಕ್ತಿ ಭಂಡಾರಿ ಬಸವಣ್ಣ, ಶೂನ್ಯ ಸಿಂಹಾಸನಾಧೀಶ್ವರ ಅಲ್ಲಮಪ್ರಭು, ಅವಿರಳ ಜ್ಞಾನಿ ಚೆನ್ನಬಸವಣ್ಣ, ವೈರಾಗ್ಯನಿಧಿ ಅಕ್ಕಮಹಾದೇವಿ, ವೀರಗಣಾಚಾರಿ ಮಡಿವಾಳ ಮಾಚಿದೇವ ಪ್ರಮುಖರಾದವರು. ಇಂತಹ ನಿರ್ಮಾತೃಗಳ ಸಾಲಿನಲ್ಲಿ ನಿಲ್ಲುವ ಇನ್ನೊಬ್ಬ ಶಿವಶರಣ ಕಾಯಕಯೋಗಿ ಸಿದ್ಧರಾಮ.

‘ ಶಿವಸಿದ್ಧಕುಲ ಚಕ್ರೇಶ’ ‘ ಶಿವಕೀರ್ತಿ ಶರಧಿಣಿ’ ‘ ಜಂಗಮ ಜ್ಯೋತಿ’ ‘ ನರರೂಪಿ ರುದ್ರ’ ‘ಕರ್ಮಯೋಗಿ’ ‘ ಕಾಯಕಯೋಗಿ’ ‘ ಶಿವಯೋಗಿ’ ಮುಂತಾದ ಬಿರುದುಗಳಿಂದ ಗುರುತಿಸಿಕೊಂಡವ ಶರಣ ಸಿದ್ಧರಾಮೇಶ್ವರ.ಕಾರ್ಯವಿಸ್ತಾರ ಮತ್ತು ಧರ್ಮ ಪ್ರಚಾರಕ್ಕಾಗಿ ಬಸವಣ್ಣನವರಿಂದ ನಿರ್ಮಿತವಾದ ‘ಶೂನ್ಯ ಸಿಂಹಾಸನ’ ಕ್ಕೆ ಅಲ್ಲಮಪ್ರಭುಗಳು ಮತ್ತು ಚೆನ್ನಬಸವಣ್ಣ ನವರ ತರುವಾಯ ೩ ನೆಯ ಜಗದ್ಗುರುವಾಗಿ ನೇಮಿತವಾಗಿ ಗೌರವಿಸಲ್ಪಟ್ಟವರು.ಶೂನ್ಯ ಸಿಂಹಾಸನಾಧೀಶ್ವರ ಅಲ್ಲಮಪ್ರಭುಗಳು ಇವರನ್ನು ‘ ವಡ್ಡ ಸಿದ್ಧರಾಮ’ ಎಂದು ಕರೆದರೆ,ಶರಣ ಸೊಡ್ಡಳ ಬಾಚರಸ ‘ ಯೋಗಿಗಳ ಯೋಗಿ ಶಿವಯೋಗಿ ಸೊಡ್ಡಳ ಸಿದ್ಧರಾಮನೊಬ್ಬನೆ ಯೋಗಿ ‘ ಎಂದು ಸಿದ್ಧರಾಮನನ್ನು ಹೊಗಳುತ್ತಾನೆ.ಹೀಗೆ ತನ್ನ ಸಮಕಾಲೀನ ಶರಣರಿಂದ ತನ್ನ ಕಾಯಕ ಮತ್ತು ಯೋಗ ಸಾಧನೆಯಿಂದ ಹೊಗಳಿಸಿಕೊಂಡವ ಸಿದ್ಧರಾಮ.

ಕಾಯಕಯೋಗಿ ಸಿದ್ಧರಾಮನನ್ನು ಕುರಿತು ಅನೇಕ ಶಾಸನಗಳಲ್ಲಿ, ಕಾವ್ಯಗಳಲ್ಲಿ ಪ್ರಸ್ತಾಪವಿದೆ.’ಶಿವಶರಣರಲ್ಲಿ ಶಾಸನೋಕ್ತಿಗಳಲ್ಲಿ ಸಿದ್ಧರಾಮ ಶಿವಯೋಗಿ ಕುರಿತು ದೊರೆತಿರುವಷ್ಟು ಮತ್ತಾರು ಶಿವಶರಣರ ಬಗ್ಗೆ ದೊರೆತಿಲ್ಲದಿರುವದು ಗಮನಾರ್ಹ’ ಎಂದು ಸಂಶೋಧನಾಕಾರರು ಅಭಿಪ್ರಾಯ ಪಡುತ್ತಾರೆ. ದೇವಗಿರಿಯ ಯಾದವರು, ಗೋವೆಯ ಕದಂಬರು, ವಿಜಯನಗರದ ಸಂಗಮ ಅರಸರ ಆಳ್ವಿಕೆಯ ಕಾಲದಲ್ಲಿನ ಸುಮಾರು ೧೧೯೦ ರಿಂದ ೧೫೧೮ ರ ವರೆಗಿನ ಕಾಲಘಟ್ಟಕ್ಕೆ ಸಂಬಂಧಿಸಿದಂತೆ ಸುಮಾರು ೨೨ ಶಾಸನಗಳಲ್ಲಿ ಶಿವಯೋಗಿ ಸಿದ್ಧರಾಮನ ಪ್ರಸ್ತಾಪವಿದೆ.ಅದರಲ್ಲಿ ಕಟನೂರು,ಬುಡಸಿಂಗಿ,ಫಡೇಕನೂರು, ಗುಂಡಕರ್ಜಗಿ ಶಾಸನಗಳು ಸಿದ್ಧರಾಮನನ್ನು ಮುಕ್ತಕಂಠದಿಂದ ಹೊಗಳಿದರೆ, ಉಳಿದ ಶಾಸನಗಳು ಸಿದ್ಧರಾಮನ ವಿಷಯವನ್ನು ಪ್ರಸ್ತಾಪ ಮಾಡುತ್ತವೆ. ಕವಿ ರಾಘವಾಂಕ ಸಿದ್ಧರಾಮನನ್ನು ಕುರಿತು “ಸಿದ್ಧರಾಮ ಚಾರಿತ್ರ್ಯ” ಕೃತಿಯನ್ನು ರಚಿಸಿದ್ದಾನೆ. ಹರಿಹರ ಕವಿ ಸಿದ್ಧರಾಮನನ್ನು ಕುರಿತು ರಗಳೆ ಬರೆದಿರಬಹುದು ,ಅದನ್ನು ಆಕರವಾಗಿಟ್ಟುಕೊಂಡು ರಾಘವಾಂಕ ಸಿದ್ಧರಾಮ ಚಾರಿತ್ರ್ಯ ಕೃತಿ ಬರೆದಿರುವ ಸಾಧ್ಯತೆಗಳಿವೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಕರ್ಮಯೋಗಿ ಸಿದ್ಧರಾಮೇಶ್ವರರು ಜನಿಸಿದ್ದು ಮಹಾರಾಷ್ಟ್ರದ ಸೊನ್ನಲಿಗೆ ( ಇದು ಮೂಲತಃ ಸುವರ್ಣಗಿರಿ ಆಗಿದ್ದು ತರುವಾಯ ಸೊನ್ನಲಿಗೆ ಆಗಿ ಇಂದು ಸೊಲ್ಲಾಪುರ ಆಗಿದೆ) ಯಲ್ಲಿ. ತಂದೆ ಕೂಡು ಒಕ್ಕಲಿಗ ಕುಲದ ಮುದ್ದಣ್ಣಗೌಡ ಅಥವಾ ಮೊರಡಿ ಮುದ್ದಯ್ಯ.ತಾಯಿ ಸುಗ್ಗಲಾದೇವಿ.ಹುಟ್ಟಿದ ಮಗುವಿಗೆ ತಂದೆ ತಾಯಿಗಳು ‘ ಧೂಳಿಮಾಕಾಳ’ ಎಂದು ತಮ್ಮ ಮನೆದೇವರ ಹೆಸರಿಡುತ್ತಾರೆ.ಹುಟ್ಟಿನಿಂದಲೇ ಮುಗ್ಧನಾಗಿದ್ದ ಬಾಲಕನಿಗೆ ತಂದೆ ತಾಯಿ ದನಕಾಯುವ ಕೆಲಸ ಹಚ್ಚುತ್ತಾರೆ. ಒಪ್ಪಿಸಿದ ಕೆಲಸ ನಿಷ್ಠೆಯಿಂದ ಮಾಡುತ್ತಿದ್ದ ಬಾಲಕ ಚಿಕ್ಕವನಿದ್ದಾಗಲೇ ಶ್ರೀಶೈಲ ಮಲ್ಲಿಕಾರ್ಜುನನ ಬಗ್ಗೆ ಅಪಾರ ಭಕ್ತಿ ಬೆಳೆಸಿಕೊಳ್ಳುತ್ತಾನೆ.ನೆವಣಿ ಹೊಲದಲ್ಲಿ ದನ ಮೇಯಿಸುತ್ತಿದ್ದ ಬಾಲಕ ಶ್ರೀಶೈಲಕ್ಕೆ ಹೊರಟ ಯಾತ್ರಿಕರ ಜೊತೆ ಸೇರಿ ತಾನು ಶ್ರೀಶೈಲಕ್ಕೆ ತೆರಳುತ್ತಾನೆ.ಅಲ್ಲಿ ಮಲ್ಲಿಕಾರ್ಜುನನ ದರ್ಶನ ಪಡೆದು ಕೆಲವು ದಿನ ಅಲ್ಲಿಯೇ ವಾಸಗೈಯುತ್ತಾನೆ.

ಒಂದು ಕಾಲದಲ್ಲಿ ಶ್ರೀಶೈಲ ಯೋಗ ಸಾಧಕರಿಗೆ, ಸಿದ್ಧಿ ಸಾಧಕರಿಗೆ ಕೇಂದ್ರ ಸ್ಥಳವಾಗಿತ್ತು. ಕಾಳಾಮುಖ, ಕಾಪಾಲಿಕ,ಪಾಶುಪತ ಶೈವರು ಅಲ್ಲಿ ವಾಸಿಸುತ್ತಿದ್ದರು.ಬಹುತೇಕ ಸಿದ್ಧರಾಮನು ಶ್ರೀಶೈಲದಲ್ಲಿದ್ದಾಗಲೇ ಯೋಗ ಸಿದ್ಧಿಯನ್ನು ಪಡೆದುಕೊಂಡು ಶಿವಯೋಗಿ ಆಗಿರುವ ಸಾಧ್ಯತೆಗಳಿವೆ. ಯೋಗಗಳಲ್ಲಿ ಹಠಯೋಗ,ಪಾತಂಜಲಿ ಯೋಗ,ರಾಜಯೋಗ, ಪೂರ್ಣಯೋಗ,ಮಂತ್ರಯೋಗ,ಕುಂಡಲಿನಿ ಯೋಗ, ದೃಷ್ಟಿಯೋಗ ಮುಂತಾದ ಹಲವಾರು ಪ್ರಕಾರಗಳಿದ್ದು ,ಇವೆಲ್ಲವುಗಳ ಪರಿಪೂರ್ಣತೆ, ಸಾರ್ಥಕತೆ ಶಿವಯೋಗದಲ್ಲಿ ಆಗುತ್ತದೆ. ಇದೊಂದು ಸಹಜ ಯೋಗ ಆಗಿದ್ದು ಶಿವತತ್ವದ ಅಭಿವ್ಯಕ್ತಿಯಿಂದ ಲಿಂಗಾಂಗ ಸಾಮರಸ್ಯದ ಆನಂದಾನುಭೂತಿಯನ್ನು ಮಾಡಿಕೊಳ್ಳುವುದು ಶಿವಯೋಗದ ಅಂತಿಮ ಗುರಿ.ಶಿವಯೋಗವು ಶಿವತತ್ವದ ಅಭಿವ್ಯಕ್ತಿಯಿಂದ ಎಲ್ಲ ಯೋಗಗಳನ್ನು ಮೀರಿ ನಿಂತದ್ದು .ಶಿವಯೋಗದಿಂದ ಜೀವನಿಗೆ ಪಶುಭಾವ ಅಳಿದು ಪತಿಭಾವ ಬರುತ್ತದೆ. ಇಂತಹ ಶಿವಯೋಗವನ್ನು ಸಿದ್ಧಿಸಿಕೊಂಡ ಸಿದ್ದರಾಮೇಶ್ವರರು ಮಹಾಶಿವಯೋಗಿ ಗಳಾಗುತ್ತಾರೆ.

ಶ್ರೀಶೈಲದಿಂದ ಮತ್ತೆ ಸೊನ್ನಲಿಗೆಗೆ ಮರಳುವದರಲ್ಲಿ ಮುಗ್ಧ ಧೂಳಿಮಾಕಾಳ ಶಿವಯೋಗಿ ಸಿದ್ಧರಾಮನಾಗಿ ಪರಿವರ್ತನೆ ಹೊಂದಿರುತ್ತಾನೆ.ಚೆನ್ನಮಲ್ಲಿಕಾರ್ಜುನನ ಬಗ್ಗೆ ಅಪಾರ ಭಕ್ತಿ ಹೊಂದಿರುತ್ತಾನೆ. ಮೊದಲಿಗೆ ಇಷ್ಟಲಿಂಗದ ಮಹತ್ವವನ್ನು ಅರಿಯದ ಸಿದ್ಧರಾಮ ಸ್ಥಾವರ ಲಿಂಗದ ಬಗ್ಗೆ ಭಕ್ತಿ ಬೆಳೆಸಿಕೊಂಡು ಸೊನ್ನಲಿಗೆಯಲ್ಲಿ ಕಪಿಲಸಿದ್ಧ ಮಲ್ಲಿಕಾರ್ಜುನ ಲಿಂಗವನ್ನು ಪ್ರತಿಷ್ಟಾಪಿಸಿ ,ದೇವಾಲಯ ನಿರ್ಮಾಣ ಮಾಡುತ್ತಾನೆ. ಅಲ್ಲಿ ನಿತ್ಯ ಲಿಂಗಾಭೀಷೇಕ,ನೈವೇದ್ಯ ಸಮರ್ಪಣೆ, ದಾನ,ಉತ್ಸವಗಳನ್ನು ಸಾಂಗವಾಗಿ ನೇರವೆರಿಸುತ್ತಾನೆ.ಆ ದೇವಸ್ಥಾನದ ಆವರಣಕ್ಕೆ ” ಯೋಗ ರಮಣೀಯ ಕ್ಷೇತ್ರ ” ಎಂದು ಹೆಸರು ಬರುತ್ತದೆ.

ಸಿದ್ಧರಾಮ ಕೇವಲ ದೈವಭಕ್ತನಾಗಿರದೆ ಮಾನವೀಯತೆಯ ಸಾಕಾರಮೂರ್ತಿಯೂ ಆಗಿರುತ್ತಾನೆ. ಹೀಗಾಗಿ ಶಿಲ್ಪಿ ಸಿದ್ಧರಾಮ ತನ್ನ ಕಾಯಕವನ್ನು ಕೇವಲ ದೇವಾಲಯ ನಿರ್ಮಾಣಕ್ಕೆ ಮಾತ್ರ ಸೀಮಿತಗೊಳಿಸಲಿಲ್ಲ.ಜೊತೆಗೆ ಸಮಾಜೋಧಾರ್ಮಿಕ ಕಾರ್ಯಕ್ಕಾಗಿ ತನ್ನ ಬದುಕನ್ನು ಮೀಸಲಿಟ್ಟ. ಭೂಮಿಯ ಮೇಲಿನ ಸಕಲ ಜೀವರಾಶಿಗಳಿಗೆ ಅನುಕೂಲವಾಗಲೆಂದು, ಅವುಗಳಿಗೆ ನೀರು, ಅನ್ನದ ಕೊರತೆ ಆಗದಿರಲೆಂದು ಬಯಸುತ್ತಾನೆ. ಕೇವಲ ಅದರ ಬಗ್ಗೆ ಕನಸು ಕಾಣದೆ ಕಾರ್ಯಪ್ರವೃತ್ತನಾಗುತ್ತಾನೆ.” ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು ಆನುಗೊಂಬನಿತು ಕಾಯಕಂ ನಡೆಯುತಿರಬೇಕು” ಎಂಬ ತನ್ನ ವಚನವನ್ನು ತನ್ನ ಬದುಕಿನ ನಿತ್ಯ ಮಂತ್ರವನ್ನಾಗಿ ಮಾಡಿಕೊಂಡು ಸೊನ್ನಲಿಗೆಯಲ್ಲಿ ಕೆರೆ, ಕಟ್ಟಿ,ಬಾವಿ,ಹೂದೋಟ,ಚೌಕ, ಛತ್ರ ನಿರ್ಮಾಣ ಮಾಡುತ್ತಾನೆ. ಸೊನ್ನಲಿಗೆಯಲ್ಲಿ ತ್ರಿಪುರಾಂತಕ ಕೆರೆಯನ್ನು ನಿರ್ಮಾಣ ಮಾಡುತ್ತಾನೆ. ಸೊನ್ನಲಿಗೆಯ ಅರಸ ನನ್ನಿದೇವಯ್ಯನ ಪತ್ನಿ ಚಾಮಲಾದೇವಿ ಸಿದ್ಧರಾಮ ಶ್ರೀಶೈಲದಿಂದ ಮರಳಿ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ತೊಡಗಿದಾಗ ದೇವಾಲಯ ಮತ್ತು ಕೆರೆ ಕಟ್ಟೆ ನಿರ್ಮಾಣಕ್ಕೆ ಅಗತ್ಯವಾದ ಭೂಮಿ, ಧನ ದಾನ ಮಾಡಿ ಅವರ ಆಶೀರ್ವಾದ ಪಡೆಯುತ್ತಾಳೆ. ತನ್ನ ಏಳು ಜನ ಸೋದರರಿಗೆ ಅವರನ್ನು ಗುರುವಾಗಿ ಸ್ವೀಕರಿಸಲು ತಿಳಿಸುತ್ತಾಳೆ. ಜೊತೆಗೆ ಗೆಳೆಯ ಮತ್ತು ಶಿಷ್ಯನಾದ ಹಾವಿನಹಾಳ ಕಲ್ಲಯ್ಯ ಮತ್ತು ಇತರ ಶಿಷ್ಯರು ಈ ಕಾರ್ಯದಲ್ಲಿ ಕೈ ಜೋಡಿಸುತ್ತಾರೆ. ಪರಿಣಾಮವಾಗಿ ಕುಗ್ರಾಮವಾಗಿದ್ದ ಸೊನ್ನಲಿಗೆಯು ಪ್ರಸಿದ್ಧ ಪಟ್ಟಣವಾಗಿ ಭೂಕೈಲಾಸ ಎನಿಸಿಕೊಳ್ಳುತ್ತದೆ.

ಕೆರೆ ಕಟ್ಟೆ ಬಾವಿಗಳನ್ನು ನಿರ್ಮಿಸಿದ ಸಿದ್ಧರಾಮ ‘ ತಾನು ಕಟ್ಟಿಸಿದ ಕೆರೆಯ ನೀರು, ತನ್ನ ಮನದ ಸರ್ವ ಜೀವ ದಯಾಪರ ತತ್ವಗಳು ಎಂದಿಗೂ ಬತ್ತಿ ಹೋಗುವುದಿಲ್ಲ ‘ ಎಂದು ಪ್ರತಿಜ್ಞೆ ಮಾಡುತ್ತಾನೆ. ಇವುಗಳ ಜೊತೆಗೆ ಬಡವರಿಗೆ, ನಿರ್ಗತಿಕರಿಗೆ ಸಹಾಯ, ಬಡ ಹೆಣ್ಣುಮಕ್ಕಳ ಮದುವೆಗೆ ಸಹಾಯ, ಕಷ್ಟದಲ್ಲಿದ್ದವರಿಗೆ ಸಹಾಯ ಮುಂತಾದ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ.ಸಾಮಾಜಿಕ ಹೊಣೆಗಾರಿಕೆ ಹೊತ್ತು ನಿರಂತರವಾದ ಕಾರ್ಯ ಸಾಧನೆಗಳ ಮೂಲಕ ತನ್ನ ಸಾಮಾಜಿಕ ಕಲ್ಯಾಣದ ಕನಸನ್ನು ಸಾಕಾರಗೊಳಿಸಿಕೊಳ್ಳುತ್ತಾನೆ.ಅಂತೆಯೇ ಸದಾ ಜೀವಪರ ತತ್ವಗಳನ್ನು ರೂಢಿಸಿಕೊಂಡು ಸಮಾಜಕ್ಕೆ ತನ್ನನ್ನು ಅರ್ಪಿಸಿಕೊಳ್ಳುತ್ತಾನೆ.

ಸಿದ್ಧರಾಮನ ಸಾಮಾಜಿಕ ಕಲ್ಯಾಣ ಕಾರ್ಯದ ವಿಷಯ ಕಲ್ಯಾಣವನ್ನು ತಲುಪುತ್ತದೆ. ಈತನ ಸಾಮಾಜಿಕ ಸೇವೆ, ಪರೋಪಕಾರ ಗುಣಗಳನ್ನು ಮೆಚ್ಚಿದ ಅಲ್ಲಮಪ್ರಭುಗಳು, ಈತ ಕೇವಲ ಕ್ರೀಯಾಯೋಗಿ ಆಗಿದ್ದಾನೆ, ಇವನನ್ನು ಆಧ್ಯಾತ್ಮಿಕತೆಯತ್ತ ಹೊರಳಿಸಬೇಕು.ಈತನಿಗೆ ಇಷ್ಟಲಿಂಗ ಪೂಜೆಯ ಮಹತ್ವವನ್ನು ತಿಳಿಸಿ ಸ್ಥಾವರಲಿಂಗದ ಪೂಜೆಯನ್ನು ತೊರೆಯುವಂತೆ ಮಾಡಬೇಕೆಂದು ನಿರ್ಧರಿಸಿ ಸೊನ್ನಲಿಗೆಗೆ ಪ್ರಯಾಣ ಬೆಳೆಸುತ್ತಾನೆ. ಕೆರೆ, ಕಟ್ಟೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ ಸಿದ್ಧರಾಮನಿಗೆ ‘ವಡ್ಡ ಸಿದ್ಧರಾಮ’ ಎಂದು ಕರೆದು,

ಅನ್ನವನ್ನಿಕ್ಕಿ ನನ್ನಿಯ ನುಡಿದು ಅರವಟ್ಟಿಗೆಯನಿಕ್ಕಿ ಕೆರೆಯ ಕಟ್ಟಿಸಿದರೆ

ಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೇ ಶಿವನ ನಿಜವು ಸಾಧ್ಯವಾಗದು

ಗುಹೇಶ್ವರನ ಅರಿದ ಶರಣಂಗೆ ಆವ ಫಲವು ಇಲ್ಲ

ಎಂದು ಲೌಕಿಕ ಕೆರೆ ಕಟ್ಟಿದರೆ ಸ್ವರ್ಗ ಸಿಗಬಹುದು ಆದರೆ ಶಿವನ ನಿಜವು ಅರಿಯಲಾಗದು ಎನ್ನುತ್ತಾನೆ.ಅದಕ್ಕಾಗಿ ಪ್ರಪಂಚದ ಕೆರೆಯನ್ನು ಬಿಟ್ಟು ಪಾರಮಾರ್ಥಿಕ ಕೆರೆಯನ್ನು ನಿನ್ನ ಅಂತರಂಗದಲ್ಲಿ ಕಟ್ಟು.ಪ್ರಪಂಚಕಿಂತ ಪಾರಮಾರ್ಥ ಮಿಗಿಲು.ಆ ಕೆರೆಯಲ್ಲಿ ಪರಮಾನಂದದ ನೀರು ತುಂಬಿ ,ಅರವಟ್ಟಿಯನಿಟ್ಟು ಆನಂದಾಮೃತ ಪಾನ ಮಾಡಿದವರು ಮತ್ತೆಂದು ಅನ್ನ ನೀರಿನ ದಾಹಕ್ಕೆ ಒಳಗಾಗರು ಎಂದು ತಿಳಿಸುತ್ತಾನೆ.

ಆದರೆ ಕರ್ಮದ ಆದರ್ಶವನ್ನು ನಂಬಿದ್ದ ಸಿದ್ಧರಾಮ

ಕಾಯ ಸೋನೆ ಅರಿತಲ್ಲದೆ ಹಣ್ಣಿನ ರಸ ಚಿನ್ನ ತೋರದು

ಕಾಯಕರ್ಮವ ಮಾಡಿ ಜೀವಜ್ಞಾನವರತು

ತ್ರಿವಿಧ ಭಾವ ಶುದ್ಧವಾಗಿಯಲ್ಲದೇ ಮೇಲ‌ ಕಾಣಲಿಲ್ಲ

ಕಪಿಲಸಿದ್ಧ ಮಲ್ಲಿಕಾರ್ಜುನ ಲಿಂಗವೇ

ಕಾಯಕದ ಮೂಲಕವೇ ಜ್ಞಾನವನ್ನು ಪಡೆಯಬೇಕು.ಅದರಿಂದಲೇ ತ್ರಿವಿಧ ಭಾವ ಶುದ್ಧವಾಗುವದು ಎಂದು ಅಲ್ಲಮನಿಗೆ ಕರ್ಮ ಸಿದ್ಧಾಂತದ ಮಹತ್ವವನ್ನು ಅರುಹಿ ಕರ್ಮಸಿದ್ಧಾಂತದ ಮೇಲ್ಮೈಯನ್ನು ಸಾಧಿಸುತ್ತಾನೆ.ಕೊನೆಗೆ ಸಿದ್ಧರಾಮ ಇಷ್ಟಲಿಂಗ, ಸ್ಥಾವರಲಿಂಗ ಗಳಲ್ಲಿನ ಬೇಧವನ್ನರಿಯದೆ ಎರಡರಲ್ಲೂ ಸಮಾನತೆಯನ್ನು ಕಲ್ಪಿಸಿಕೊಂಡು ಪ್ರಶ್ನೆ ಕೇಳಿದಾಗ ಪ್ರಭುದೇವರು ,

ದೇಹದೊಳಗೆ ದೇವಾಲಯವಿದ್ದು ಮತ್ತೆ ಬೇರೆ ದೇವಾಲಯವೇಕಯ್ಯಾ?

ಗುಹೇಶ್ವರಾ ನೀನು ಕಲ್ಲಾದರೆ ನಾನೇನಪ್ಪೆನಯ್ಯಾ

ಮತ್ತೆ ಕಲ್ಲು ಮನೆಯ ಮಾಡಿ,ಕಲ್ಲು ದೇವರ ಮಾಡಿ ಕಲ್ಲು ಕಲ್ಲಮೇಲೆ

ಕೆಡೆದರೆ ದೇವರೆತ್ತಹೋದರೋ? ಲಿಂಗಪ್ರತಿಷ್ಠೆ ಮಾಡಿದವಗೆ

ನಾಯಕ ನರಕ ಗುಹೇಶ್ವರಾ

ಎಂದು ಸ್ಥಾವರ ಲಿಂಗದ ಪೂಜೆಯನ್ನು ನಿರಾಕರಿಸಿ ಇಷ್ಟಲಿಂಗದ ಪೂಜೆಯ ಮಹತ್ವವನ್ನು ಅರಹುತ್ತಾರೆ.ಇದರಿಂದ ಇಷ್ಟಲಿಂಗ ಮತ್ತು ಸ್ಥಾವರಲಿಂಗಗಳಲ್ಲಿನ ಬೇಧದ ಅರಿವು ಸಿದ್ಧರಾಮನಿಗೆ ಆಗುತ್ತದೆ. ಆಗ ಸಿದ್ಧರಾಮ,

ಅಯ್ಯಾ ನಿಮ್ಮ ಕರಸ್ಥಲದ ಘನವನುಪಮಿಸಬಲ್ಲವರಿಲ್ಲವಯ್ಯಾ

ನಿಮ್ಮ ಮಹಿಮೆಯನರಿವರೆ ನಾನೇತರೊಳಗೇನಯ್ಯಾ

ಆ ಇಷ್ಟಲಿಂಗದೊಳಗೆ ಮುಟ್ಟದ ಶರಣನೊಳಗೆ ಹುಟ್ಟಿದ

ಕರಸ್ಥಲವೆಷ್ಟೆಂಬುದ ತಿಳುಹಿ ಎನ್ನನುಳುಹಿಕೊಳ್ಳಾ

ಕಪಿಲಸಿದ್ಧ ಮಲ್ಲಿಕಾರ್ಜುನ

ನಾನು ಇಷ್ಟಲಿಂಗದ ಮಹತ್ವವನ್ನು ತಿಳಿಯದವ ತನಗೆ ಇಷ್ಟಲಿಂಗದ ಅರಿವನ್ನು ತಿಳಿಸು ಎಂದು ಮನಪರಿವರ್ತನೆಗೊಂಡ ಸಿದ್ಧರಾಮ ಕೇಳಿದಾಗ ಪ್ರಭುದೇವ ಕಲ್ಯಾಣದ ಬಸವಣ್ಣನೇ ಇಷ್ಟಲಿಂಗದ ಸವಿಸ್ತಾರವನ್ನು ಅರಿತವನೆಂದು ತಿಳಿಸಿ ಆತನನ್ನು ಕಲ್ಯಾಣಕ್ಕೆ ಆಹ್ವಾನಿಸುತ್ತಾನೆ. ಪ್ರಭುವಿನ ಆಹ್ವಾನವನ್ನು ಸಮ್ಮತಿಸಿ ಸಿದ್ಧರಾಮ ಕಲ್ಯಾಣಕ್ಕೆ ತೆರಳುತ್ತಾನೆ.

ಅಣ್ಣನ ಗುರು ಲಿಂಗ ಜಂಗಮ ಪ್ರೇಮವನ್ನು ಸಿದ್ಧರಾಮನಿಗೆ ಅರುಹಲು ಅಣ್ಣ ಇಷ್ಟಲಿಂಗ ಪೂಜೆಗೆ ಕುಳಿತಾಗಲೆ ಪ್ರಭುಗಳು ಸಿದ್ಧರಾಮನೊಂದಿಗೆ ಅಣ್ಣನ ಮಹಾಮನೆಗೆ ಆಗಮಿಸುತ್ತಾರೆ. ಅಣ್ಣ ಪೂಜೆ ಬಿಟ್ಟು ಬರದಾಗ ಅವನನ್ನು ತೆಗಳುತ್ತಾರೆ.ಅಣ್ಣ ಸರ್ವವೂ ಜಂಗಮರಿಗೆ ಸೇರಿದ್ದು ಎಂದಾಗ ಅಲ್ಲಮರು ಅಣ್ಣನ ಗುರು ಲಿಂಗ ಜಂಗಮ ಪ್ರೇಮವನ್ನು ಸಿದ್ಧರಾಮನಿಗೆ ತಿಳಿಸುತ್ತಾರೆ. ಸಿದ್ಧರಾಮರು ಇಷ್ಟಲಿಂಗ ದೀಕ್ಷಿತರಾಗಿ,ಷಟಸ್ಥಲ ರಹಸ್ಯಗಳನ್ನು ತಿಳಿದು ವೀರವಿರಕ್ತರಾಗಿ,ಅನುಪಮ ಶಕ್ತಿ ಸಂವರ್ಧಕನಾಗಬೇಕೆಂದು ಬಯಸುತ್ತಾರೆ. ಆಗ ಸಿದ್ಧರಾಮನ ನೈತಿಕ ಬ್ರಹ್ಮಚರ್ಯ, ಸತ್ಯಶೀಲ ಚಾರಿತ್ರ್ಯನಿಷ್ಠೆ ಜ್ಞಾನ ವೈಶ್ಯಾಲತೆ ಕಂಡು ಆನಂದದಿಂದ ಪ್ರಭುಗಳು ಚೆನ್ನಬಸವಣ್ಣನಿಂದ ಲಿಂಗದೀಕ್ಷೆಯನ್ನು ನೀಡಿಸಿ ,ನಿರಂಜನ ಪಟ್ಟಾಭಿಷೇಕ ನೆರವೇರಿಸುತ್ತಾರೆ. ತನಗೆ ಲಿಂಗ ದೀಕ್ಷೆಯನ್ನಿತ್ತ ಚೆನ್ನಬಸವಣ್ಣನನ್ನು ಕುರಿತು ಸಿದ್ಧರಾಮ ಅತ್ಯಂತ ಗೌರವದಿಂದ

ಶುದ್ಧವನರಿದೆ ಚೆನ್ನಬಸವಣ್ಣ ನಿಮ್ಮಿಂದೆ,ಸಿದ್ದವನರಿದೆ ಚೆನ್ನಬಸವಣ್ಣ ನಿಮ್ಮಿಂದೆ

ಪ್ರಸಿದ್ಧವನರಿದೆ ಚೆನ್ನಬಸವಣ್ಣ ನಿಮ್ಮಿಂದೆ,ಚೆನ್ನಬಸವಣ್ಣ ಗುರುವಾಗಿ ಬಂದು

ಎನ್ನ ಜನ್ಮಕರ್ಮವ ನಿವೃತ್ತಿ ಮಾಡಿದನು,ಬದುಕಿದೆನಯ್ಯ

ಗುರುವೆ ಕಪಿಲಸಿದ್ಧ ಮಲ್ಲಿಕಾರ್ಜುನ

ಎಂದು ಸ್ತುತಿ ಮಾಡುತ್ತಾನೆ.ನಂತರ ಕಲ್ಯಾಣದಲ್ಲಿ ಅನುಭವ ಮಂಟಪದ ಗೋಷ್ಠಿಗಳಲ್ಲಿ ಭಾಗವಹಿಸಿ ಶರಣರ ಜೊತೆಗೆ ವಚನಗಳನ್ನು ರಚನೆ ಮಾಡುತ್ತಾನೆ. ಕಲ್ಯಾಣ ಕ್ರಾಂತಿಯ ತರುವಾಯ ಸಿದ್ಧರಾಮ ಮತ್ತೆ ಸೊನ್ನಲಿಗೆಗೆ ಆಗಮಿಸುತ್ತಾನೆ.ಆಗ ಬಿಜ್ಜಳನ ತಮ್ಮ ಕರ್ಣದೇವ ಇವರ ಹಿರಿತನದಲ್ಲಿಯೇ ತನ್ನ ರಾಜ್ಯಾಭಿಷೇಕ ನಡೆಯಬೇಕೆಂದು ಹಠಮಾಡಿದಾಗ ಅಲ್ಲಿಗೆ ತೆರಳದೆ ಇಲ್ಲಿಂದಲೇ ಆತನಿಗೆ ಆಶೀರ್ವದಿಸಿ ಚೆನ್ನಾಗಿ ರಾಜ್ಯ ಆಳೆಂದು ಉಪದೇಶಿಸುತ್ತಾರೆ.ಕೊನೆಗೆ ಸೊನ್ನಲಿಗೆಯಲ್ಲಿಯೇ ಶಿವಯೋಗ ಸಮಾಧಿ ಹೊಂದುತ್ತಾರೆ.

ಕೃತಿಗಳು

ಸಿದ್ಧರಾಮೇಶ್ವರರು ‘ಯೋಗಿನಾಥ’ ಎಂಬ ಅಂಕಿತದಲ್ಲಿ ‘ ಬಸವ ಸ್ತೋತ್ರ ತ್ರಿವಿಧಿ’,’ ಮಿಶ್ರಸ್ತೋತ್ರ ತ್ರಿವಿಧಿ’,ಮತ್ತು ‘ಅಷ್ಟಾವರಣ ಸ್ತೋತ್ರ ತ್ರಿವಿಧಿ’ ಎಂಬ ಮೂರು ತ್ರಿವಿಧಿಗಳನ್ನು ರಚಿಸಿದ್ದಾರೆ.ಬಸವಸ್ತೊತ್ರ ತ್ರಿವಿಧಿಯಲ್ಲಿ ೧೨೬,_ಮಿಶ್ರಸ್ತೋತ್ರ ತ್ರಿವಿಧಿಯಲ್ಲಿ ೧೦೯ ಮತ್ತು ಅಷ್ಟಾವರಣ ಸ್ತೋತ್ರ ತ್ರಿವಿಧಿಯಲ್ಲಿ ೧೪೪ ಪದ್ಯಗಳಿವೆ. ತ್ರಿವಿಧಿಯಲ್ಲಿ ಅವರು ಸಿದ್ಧರಾಮನಾದ ನಾನು ಕೆರೆ ಕಟ್ಟೆ ಬಾವಿಗಳನ್ನು ನಿರ್ಮಿಸಿ ಕರ್ಮಯೋಗಿ ಆಗಿ ಯೋಗಿನಾಥ ಎಂದು ಹೆಸರಾಗಿದ್ದರು ಪಾರಮಾರ್ಥಿಕ ತತ್ವವನ್ನು ಅರಿಯದೆ ಜನನ ಮರಣದ ಬಂಧನದಲ್ಲಿ ಸಿಲುಕಿ ಭವಿಯಾಗಿದ್ದೆ .ಪ್ರಭುದೇವರ ಸಹವಾಸ, ಇಷ್ಟಲಿಂಗ ದೀಕ್ಷೆಯನ್ನು ನೀಡಿದ ಚೆನ್ನಬಸವಣ್ಣನ ಕಾರುಣ್ಯದಿಂದ ಷಟಸ್ಥಲ ತತ್ವೋಪದೇಶದ ರಹಸ್ಯ ಅರಿತು ಜೀವನ್ಮುಕ್ತನಾದೆನು .ಅನೇಕರಿಗೆ ಅನುಗ್ರಹ ಮಾಡುವ ಅಧಿಕಾರ ಪಡೆದೆನೆಂದು ಹೇಳಿಕೊಳ್ಳುತ್ತಾನೆ.

ವಚನಗಳು

ಇತರ ಶರಣರಂತೆ ಸಿದ್ಧರಾಮನು ಸಹ ವಚನಗಳ ರಚನೆ ಮಾಡುತ್ತಾನೆ. ಈತ ತನ್ನ ಒಂದು ವಚನದಲ್ಲಿ ” ಅರವತ್ತೆಂಟು ಸಾವಿರ ವಚನಗಳ ಹಾಡಿಹಾಡಿ ಸೋತಿತೆನ್ನ ಮನ ” ಎಂದು ಹೇಳಿಕೊಳ್ಳುತ್ತಾನೆ.ಆದರೆ ಅಷ್ಟು ವಚನಗಳನ್ನು ಬರೆದುದರ ಬಗ್ಗೆ ವಿದ್ವಾಂಸರು ಸಂದೇಹವನ್ನು ವ್ಯಕ್ತಪಡಿಸುತ್ತಾರೆ. ಈತನ ೧೧೬೨ ವಚನಗಳು ದೊರೆತಿವೆ. ” ಕಪಿಲಸಿದ್ಧ ಮಲ್ಲಿಕಾರ್ಜುನ ” ಸಿದ್ಧರಾಮನ ವಚನಾಂಕಿತ.ಜೊತೆಗೆ ಕೆಲವು ವಚನಗಳಲ್ಲಿ ‘ ಕಪಿಲಸಿದ್ಧ ಮಲ್ಲೇಶದೇವರು’ ‘ ಕಪಿಲಸಿದ್ಧ ಮಲ್ಲಿನಾಥ’ ಕಪಿಲಸಿದ್ಧ ಮಲ್ಲ’ ‘ ಯೋಗಿನಾಥ’ ಎಂದು ಸಹ ಬಳಸಿದ್ದಾನೆ.

ವಚನ ಎನ್ನುವದು ಸಿದ್ಧರಾಮನ ಪಾಲಿಗೆ ಕೇವಲ ಅಭಿವ್ಯಕ್ತಿಯ ಮಾಧ್ಯಮವಲ್ಲ. ಅದು ಕಪಿಲಸಿದ್ಧ ಮಲ್ಲಿಕಾರ್ಜುನನ್ನು ಅರಿಯಲು ನೆರವಾದ ಸಾಧನ.ಆದ್ಯರ ಆಜ್ಞೆ.ಸಿದ್ಧರಾಮನ ವಚನಗಳಲ್ಲಿ ವಯಕ್ತಿಕ ಬದುಕಿನ ಸಂಗತಿಗಳಿಗಿಂತ ಧರ್ಮತತ್ವ ಜಿಜ್ಞಾಸೆ,ಸಾಮಾಜಿಕ ಕಳಕಳಿ ಪ್ರಧಾನವಾಗಿದೆ.

ಇತರ ಶರಣರಂತೆ ಸಿದ್ಧರಾಮನು ಸಹ ವೈಚಾರಿಕ ಮನೋಭಾವ ಉಳ್ಳವನು.ಜನತೆಯ ನಡುವಿನ ಅಮಾನವೀಯ ಪಾರಂಪರಿಕ ನಂಬಿಕೆಗಳನ್ನು ತಿದ್ದಿ ಸಾಮಾಜಿಕ ಪರಿವರ್ತನೆ ಮಾಡಲು ಬಯಸಿದವ.ಅದಕ್ಕಾಗಿಯೇ

ಮನದಲ್ಲಿ ಸಂಕಲ್ಪ ವಿಕಲ್ಪಂಗಳು ನೋಡಯ್ಯಾ

ಮನಸಿನ ಕಾರ್ಯವೆ ಪುಣ್ಯ ಪಾಪ ನೋಡಯ್ಯಾ

ಮನಃಕಾರ್ಯಂ ಜಗದ್ಬೇದಂ ಎಂಬುದು ಹುಸಿಯಲ್ಲ ನೋಡಾ

‌ಕಪಿಲಸಿದ್ಧಮಲ್ಲಿಕಾರ್ಜುನ

ಪಾಪ ಪುಣ್ಯಗಳು ಬೇರೆಲ್ಲಿಯೂ ಇಲ್ಲ ನಮ್ಮ ಮನಸ್ಸಿನ ಗುಣಗಳನ್ನು, ಕಾರ್ಯಗಳನ್ನು ಆಧರಿಸಿ ಅವು ನಿರ್ಧರಿತವಾಗುತ್ತವೆ. ಅದೇ ಜಗತ್ತಿನ ಬೇಧಕ್ಕೆ ಕಾರಣ ಎಂದು ಹೇಳಿ ಪಾರಂಪರಿಕ ನಂಬಿಕೆಗಳನ್ನು ನಿರಾಕರಿಸಿ ವಾಸ್ತವ ಜಗತ್ತಿನತ್ತ ಜನತೆಯನ್ನು ಹೊರಳಿಸುತ್ತಾನೆ.

ಅಂತೆಯೇ ಸಮಾಜದಲ್ಲಿ ಬೇರುಬಿಟ್ಟಿದ್ದ ಅನಿಷ್ಟ ಪದ್ಧತಿ ಜಾತಿಕುಲವನ್ನು ಆಧರಿಸಿ ತಾರತಮ್ಯ ಮಾಡುವುದು. ಜಾತಿ ರಹಿತ ಸಮಾಜ ನಿರ್ಮಿಸ ಹೊರಟ ಶರಣರು ಈ ಬೇಧವನ್ನು ಸಾರಾಸಗಟಾಗಿ ತಳ್ಳಿಹಾಕಿದರು. ಇದಕ್ಕೆ ಸಿದ್ಧರಾಮನು ಹೊರತಲ್ಲ.

ಕುಲಜನಾಗಿ ನಾನೇವೆನಯ್ಯಾ ?

ಕುಲದ ಬಳಿಯ ದೇವನಲ್ಲ,ಮನದ ಬಳಿಯ ದೇವನೈಸೆ

ಆವ ಯೋನಿಜನಾದಡೇನು ?

ನೀನೊಲಿದವನೆ ಕುಲಜನಯ್ಯಾ

ಕಪಿಲಸಿದ್ಧ ಮಲ್ಲಿಕಾರ್ಜುನ

ಎನ್ನುವ ಮೂಲಕ ಶುದ್ಧ ಮನಸ್ಸಿಗೆ ಆದ್ಯತೆ ಕೊಟ್ಟು ಯಾರು ದೇವನೊಲಿಸಿಕೊಳ್ಳುವವರು,ಲಿಂಗಾಂಗ ಸಾಮರಸ್ಯವನ್ನು ಸಾಧಿಸುವವರೋ ಅವರೇ ಕುಲಜರು.ಶ್ರೇಷ್ಠ ಕುಲದಲ್ಲಿ ಹುಟ್ಟಿದ ಮಾತ್ರಕ್ಕೆ ಶ್ರೇಷ್ಠರಾಗುವದಿಲ್ಲ. ಹುಟ್ಟಿನಿಂದ ಬಂದ ಕುಲವು ಮುಖ್ಯವಲ್ಲ.ನಮ್ಮ ಕಾರ್ಯ ಸಾಧನೆಗಳಿಂದ ಶ್ರೇಷ್ಠತೆಯನ್ನು ಸಂಪಾದಿಸಬೇಕು. ನಮ್ಮ ಮನಸ್ಸಿನ ಶುದ್ಧತೆ, ಸನ್ನಡತೆ ,ಲಿಂಗ ಸಾಕ್ಷಾತ್ಕಾರ ಮುಖ್ಯ.ಶುದ್ಧ ಮನಸ್ಸಿನಲ್ಲಿ ದೇವರು ಸದಾ ನೆಲಸಿರುತ್ತಾನೆ ಎನ್ನುವ ಮೂಲಕ ಇಲ್ಲಿಯವರೆಗೆ ಯಾರು ನಾವು ಕುಲಜರು, ಮೇಲ್ಜಾತಿಯವರು ಎಂದು ಬೀಗುತ್ತಾ ಜನರನ್ನು ಶೋಷಣೆ ಮಾಡುತ್ತಿದ್ದರೊ ಅವರಿಗೆ ನಿಜವಾದ ಕುಲದ ತಿಳುವಳಿಕೆ ನೀಡಿ ಶೋಷಿತ ಜನರಲ್ಲಿ ಮನಸ್ಥರ್ಯ ತುಂಬುತ್ತಾನೆ.

ಸಮಾಜದಲ್ಲಿ ಆಚರಣೆಯಲ್ಲಿದ್ದ ಮತ್ತೊಂದು ಅನಿಷ್ಟ ಪದ್ಧತಿ ಲಿಂಗ ತಾರತಮ್ಯ. ಹೆಣ್ಣುಮಕ್ಕಳನ್ನು ಪಂಚಮ ಸ್ಥಾನದಲ್ಲಿಟ್ಟು ನೀಡಲಾಗುತ್ತಿತ್ತು. ಅದನ್ನು ಸಿದ್ಧರಾಮ ವಿರೋಧಿಸಿ ಮಹಿಳೆಯರಿಗೆ ಗೌರವದ ಸ್ಥಾನ ಕಲ್ಪಿಸಿಕೊಡುತ್ತಾನೆ.

ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತು

ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತು

ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತು

ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತು

ಅದು ಕಾರಣ ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ

ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ ನೋಡಾ

ಎಂದು ಗಂಗೆ ,ಸರಸ್ವತಿ, ಲಕ್ಷ್ಮೀ ಎಲ್ಲವೂ ಹೆಣ್ಣು. ಹೀಗಿರುವಾಗ ಹೆಣ್ಣನ್ನು ಕನಿಷ್ಠವಾಗಿ ಕಾಣುವುದು ತಪ್ಪು. ಹೆಣ್ಣು ಕೇವಲ ಹೆಣ್ಣಲ್ಲ ಅಂತರಾತ್ಮದ ಅರಿವಿನ ಪ್ರತಿರೂಪ ಎಂದು ಹೆಣ್ಣಿಗೆ ಗೌರವದ ಸ್ಥಾನ ನೀಡಿ ತಾರತಮ್ಯ ತೊಡೆದು ಹಾಕುತ್ತಾನೆ.ಹೆಣ್ಣು ಸಂಸಾರ ಸಾಧನೆಗೆ ತೊಡಕು ಎಂದವರಿಗೆ ಹೆಣ್ಣು ಅರಿವಿನ ಮಾರ್ಗದರ್ಶಿ ಎಂದು ತಿಳಿಸುತ್ತಾನೆ

ಲಿಂಗಾಯತ ಧರ್ಮದಲ್ಲಿ ಜಂಗಮ ಎನ್ನುವದು ಜ್ಞಾನದ ಸಂಕೇತ. ಜಂಗಮ ಒಂದೆಡೆ ನಿಲ್ಲದೆ ಸದಾ ಸಂಚರಿಸುತ್ತಾ ಧರ್ಮ ಪ್ರಚಾರ ಸಮಾಜ ಸುಧಾರಣೆ ಮಾಡಬೇಕು. ಆದರೆ ಕೆಲವು ಜಂಗಮರು ಇದಕ್ಕೆ ವಿರುದ್ಧವಾಗಿ ವರ್ತಿಸಿದಾಗ ಸಿದ್ಧರಾಮ ಅದನ್ನು ನಿರ್ಭಿಡೆಯಿಲ್ಲದೆ ಖಂಡಿಸುತ್ತಾನೆ.

ಭೂಷಣವುಳ್ಳ ಜಂಗಮವ ಭೂಪಾಲ ಪೂಜಿಸುವ

ವೇಷವುಳ್ಳ ಜಂಗಮವ ವೇಶಿ ಪೂಜಿಸುವಳು

ವೇಷಧಾರಿ ಜಂಗಮವ ಲೋಕವೆಲ್ಲ ಪೂಜಿಸುವುದು

ಜ್ಞಾನವುಳ್ಳ ಜಂಗಮವನಾರು ಪೂಜಿಸರು ನೋಡಾ

ಕಪಿಲಸಿದ್ಧ ಮಲ್ಲಿಕಾರ್ಜುನ

ಇಲ್ಲಿ ವೇಷಡಂಭಕ ಜಂಗಮರ ಜೊತೆಗೆ ಅವರನ್ನು ಆರಾಧಿಸುವವರನ್ನು ಸಿದ್ಧರಾಮ ವಿರೋಧಿಸುತ್ತಾನೆ.ಸಮಾಜದಲ್ಲಿ ನೆಲೆಯೂರಿದ್ದ ಜಾತಿ ತಾರತಮ್ಯ,ಲಿಂಗ ತಾರತಮ್ಯ,ವೇಷಡಂಬಕತನ,ಅಮಾನವೀಯ ನಂಬಿಕೆಗಳನ್ನು ಖಂಡಿಸುವ ಮೂಲಕ ಸಿದ್ಧರಾಮ ಸಾಮಾಜದ ಬಗ್ಗೆ ಕಳಕಳಿ ತೋರುತ್ತಾನೆ.ಶುದ್ಧ, ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಾನೆ.

ಹೀಗೆ ಮುಗ್ಧನಾಗಿದ್ದ ಧೂಳಿಮಾಕಾಳ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನದಿಂದ ‘ಕರ್ಮಯೋಗಿ ಸಿದ್ಧರಾಮ’ನಾಗುತ್ತಾನೆ.ಅಲ್ಲಮಪ್ರಭುಗಳ ಹಿತೋಪದೇಶದಿಂದ ಅನುಭವ ಮಂಟಪದ ಸದಸ್ಯನಾಗಿ ಶಿವಶರಣರ ಪಾಲಿಗೆ ‘ಸಿದ್ಧರಾಮಣ್ಣ’ನಾಗುತ್ತಾನೆ.ಚೆನ್ನಬಸವಣ್ಣನಿಂದ ಲಿಂಗದೀಕ್ಷೆ ,ಷಟಸ್ಥಲ ಜ್ಞಾನ ಪಡೆದು ‘ಮಹಾಶಿವಯೋಗಿ’ ‘ ನಿರಂಜನ ಪ್ರಣವ ಸ್ವರೂಪಿ’ ‘ ಶೂನ್ಯ ಸಿಂಹಾಸನದ ಜಗದ್ಗುರು’ ಆಗುತ್ತಾನೆ. ಚೆನ್ನಬಸವಣ್ಣನ ತರುವಾಯ ಅಧಿಕಾರ ಸ್ವೀಕರಿಸಿ ಜಗದ್ವಂದ್ಯ ಆಗುತ್ತಾನೆ. ಜನಪದರಿಂದ ” ಎಪ್ಪತ್ತೆಳೂರು ಅಯ್ಯನವರು” ಎಂದು ಸ್ತುತಿ ಮಾಡಿಸಿಕೊಂಡ ಸಿದ್ಧರಾಮ ಪ್ರಾತಸ್ಮರಣೀಯ ಶರಣನಾಗಿದ್ದಾನೆ..

 

ಡಾ.ರಾಜೇಶ್ವರಿ ವೀ.ಶೀಲವಂತ, ಬೀಳಗಿ 

 

 

 

Don`t copy text!