e-ಸುದ್ದಿ, ಮಸ್ಕಿ
ತಾಲೂಕಿನ ವಟಗಲ್, ಪಾಮನಕಲ್ಲೂರು, ಅಂಕುಶದೊಡ್ಡಿ ಹಾಗೂ ಅಮೀನಗಡ ಗ್ರಾ.ಪಂ.ವ್ಯಾಪ್ತಿಯ 24 ಕ್ಕೂ ಹೆಚ್ಚು ಗ್ರಾಮಗಳಿಗೆ ಸರ್ಕಾರ ಹರಿ ನೀರಾವರಿ ಯೋಜನೆ ಮಾಡಲಿದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳೆ ಹೇಳಿದರು.
ಬೆಂಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ ಮಂಗಳವಾರ ನಂದವಾಡಗಿ ಹರಿ ನೀರಾವರಿ ಹಾಗೂ 5ಎ ಕಾಲುವೆ ಜಾರಿ ಸಂಬಂಧ ನಡೆದ ಯೋಜನೆ ವ್ಯಾಪ್ತಿಯ ರೈತರೊಂದಿಗೆ ಸಂವಾದ ನಡೆಸಿ ಮಾತನಾಡಿದರು. 5ಎ ಕಾಲುವೆ ಅನುಷ್ಟಾನ ಅಸಾಧ್ಯ. ಆ ಭಾಗದ ರೈತರ ಆಸೆಯಂತೆ ಹನಿ ನೀರಾವರಿ ಪದ್ದತಿ ಬದಲು ಹರಿ ನೀರಾವರಿ ಯೋಜನೆಗೆ ಸರ್ಕಾರ ಸಿದ್ಧವಿದೆ. ಈ ಯೋಜನೆಗೆ ವಟಗಲ್ ಸಬವೇಶ್ವರ ಏತ ನೀರಾವರಿ ಯೋಜನೆ ಎಂದು ನಾಮಕರಣ ಮಾಡಲು ಸಹ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವರು ತಿಳಿಸಿದರು.
ನೀರಾವರಿ ಯೋಜನೆಯಿಂದ ವಂಚಿತಗೊಂಡ ಮಸ್ಕಿ ತಾಲೂಕಿನ 4 ಗ್ರಾ.ಪಂ.ಗಳಿಗೆ 2.25 ಟಿ.ಎಂ.ಸಿ ನೀರು ಕೊಡಲಾಗುವದು. ನೀರಿನ ಸಾಧ್ಯತೆ ನೋಡಿಕೊಂಡು ಇನ್ನೂ ಹೆಚ್ಚು ನೀರು ಕೊಡುವ ಸಂಬಂಧ ಈಗಾಗಲೇ ವಿಧಾನಸೌಧದಲ್ಲಿ ಜಲ ಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಯೋಜನೆ ಸಿದ್ದಪಡಿಸಲಾಗಿದೆ. ಶೀಘ್ರ ಸರ್ಕಾರದಿಂದ ಆದೇಶ ಹೊರ ಬಿಳಲಿದೆ ಎಂದರು. ರೈತರು ಆತಂಕ ಪಡಬೇಕಾಗಿಲ್ಲ ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ ನನ್ನ ಕ್ಷೇತ್ರದ 4 ಗ್ರಾ.ಪಂ.ಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನಾನು ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ನೀರಾವರಿ ಯೋಜನೆ ಹೋರಾಟ ಸಮಿತಿಯ ಮುಖಂಡರೊಬ್ಬರು ಹಣಕೊಟ್ಟು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ನಾನು ಯಾರನ್ನು ಹಣ ಕೊಟ್ಟು ಕರೆಸಿಲ್ಲ. ರೈತರು ಸ್ವಂತ ಖರ್ಚಿನಲ್ಲಿ ಬಂದಿದ್ದಾರೆ ಎಂದು ಸ್ಪಷ್ಟ ಪಡಿಸಿದರು. ಬಸವತತ್ವ ಹೇಳುವ ಈ ಮುಖಂಡರು ಈ ರೀತಿ ಹೇಳಿಕೆ ನೀಡುವ ಮೂಲಕ ರೈತರಿಗೆ ಅವಮಾನ ಮಾಡುತ್ತಿದ್ದಾರೆ ಎಂದರು.
ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ, ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಸೇರಿದಂತೆ ಜಲ ಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
4 ಗ್ರಾ.ಪಂ.ಗಳ 500 ಕ್ಕೂ ಹೆಚ್ಚು ರೈತರು ಸಚಿವರೊಂದಿಗಿನ ಸಂವಾದದಲ್ಲಿ ಭಾಗವಹಿಸಿದ್ದರು.
One thought on “ವಟಗಲ್ ಬಸವೇಶ್ವರ ಹೆಸರಿನಲ್ಲಿ ಏತ ನೀರಾವರಿ ಯೋಜನೆ 4 ಗ್ರಾ.ಪಂ.ಗಳ ಹಳ್ಳಿಗಳಿಗೆ ಹರಿ ನೀರಾವರಿ- ರಮೇಶ ಜಾರಕಿಹೊಳೆ”
Comments are closed.