ಮಸ್ಕಿ ಪುರಸಭೆ ವ್ಯಾಪ್ತಿಯಲ್ಲಿ ಕಾಮಗಾರಿ ಕಳಪೆ ಸಾಬಿತು, ಲ್ಯಾಂಡ್ ಆರ್ಮಿ ವಿರುದ್ಧ ಕ್ರಮಕ್ಕೆ ಕರವೇ ಆಗ್ರಹ

ಮಸ್ಕಿ ಪುರಸಭೆ ವ್ಯಾಪ್ತಿಯಲ್ಲಿ ಕಾಮಗಾರಿ ಕಳಪೆ ಸಾಬಿತು, ಲ್ಯಾಂಡ್ ಆರ್ಮಿ ವಿರುದ್ಧ ಕ್ರಮಕ್ಕೆ ಕರವೇ ಆಗ್ರಹ
e-ಸುದ್ದಿ, ಮಸ್ಕಿ
ಮಸ್ಕಿ ಪುರಸಭೆ ವ್ಯಾಪ್ತಿಯಲ್ಲಿ ಕರ್ನಾಟಕ ರೂರಲ್ ಇನ್‍ಫ್ರಾಸ್ಟ್ರಕ್ಚರ್ ಡೆವೆಲಪ್‍ಮೆಂಟ್ ಲಿಮಿಟೆಡ್ ಸಂಸ್ಥೆಯವರು 5 ಕೋಟಿ ಅನುದಾನದಲ್ಲಿ ನಿರ್ವಹಿಸಿರುವ ಕಾಮಗಾರಿಗಳು ಕಳಪೆಯಾಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಮಸ್ಕಿ ತಾಲೂಕು ಅಧ್ಯಕ್ಷ ಅಶೋಕ ಮುರಾರಿ ರಾಯಚೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಮಸ್ಕಿ ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದ ವಿಶೇಷ ಅನುಧಾನದಲ್ಲಿ ಸುಮಾರು 5 ಕೋಟಿ ರೂಪಾಯಿಗಳ ವೆಚ್ಚದಲ್ಲಿ 27 ಕಾಮಗಾರಿಗಳನ್ನು ನಿರ್ವಹಿಸಲು ಕರ್ನಾಟಕ ರೂರಲ್ ಇನ್‍ಫ್ರಾಸ್ಟ್ರಕ್ಚರ್ ಡೆವೆಲಪ್‍ಮೆಂಟ್ ಲಿಮಿಟೆಡ್ ಸಂಸ್ಥೆಯವರಿಗೆ ಕಾಮಗಾರಿಗಳ ಗುತ್ತಿಗೆ ವಹಿಸಲಾಗಿದೆ. ಆದರೆ ಸದರಿಯವರು ನಿರ್ವಹಿಸಬೇಕಾದ ಕಾಮಗಾರಿಗಳನ್ನು ಸ್ಥಳೀಯರಿಗೆ ಮಾಡಲು ಕೊಟ್ಟಿದ್ದಾರೆ ಅಲ್ಲದೆ ಕಾಮಗಾರಿಯನ್ನು ಅಭಿಯಂತರರ ಅನುಪಸ್ಥಿತಿಯಲ್ಲಿ ಅಂದಾಜು ಪತ್ರಿಕೆಯ ನಿಯಮಗಳನ್ನು ಉಲ್ಲಂಘನೆ ಮಾಡಿ ನಿರ್ವಹಿಸಿದ್ದರ ಪರಿಣಾಮ ಕಾಮಗಾರಿಗಳು ಪೂರ್ಣಗೊಂಡು ಎರಡು ತಿಂಗಳುಗಳಲ್ಲಿ ಸಂಪೂರ್ಣ ಹಾಳಾಗಿವೆ ಎಂದು ಆರೋಪಿಸಿದ್ದಾರೆ.
ಕಾಮಗಾರಿಗಳನ್ನು ಸೂಕ್ತ ಗುಣ ಮಟ್ಟದಿಂದ ಮಾಡದೆ ಬೇಕಾಬಿಟ್ಟಿಯಾಗಿ ನಿರ್ವಹಿಸುತ್ತಿದ್ದಾರೆಂದು ಕರ್ನಾಟಕ ರಕ್ಷಣಾ ವೇದಿಕೆ ಪುರಸಭೆ ಅಧಿಕಾರಿಗಳಿಗೆ ದೂರ ಸಲ್ಲಿಸಿದ್ದರು. ಪುರಸಭೆಯ ಅಧಿಕಾರಿಗಳು ಕಾಮಗಾರಿ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಕಾಮಗಾರಿಗಳು ಕಳಪೆಯಾಗಿ ನಿರ್ವಹಿಸಿರುವುದು ಕಂಡು ಬಂದಿರುತ್ತದೆ ಎಂದು ಪುರಸಭೆಯ ಮುಖ್ಯಾಧಿಕಾರಿಗಳು ಲ್ಯಾಂಡ್ ಆರ್ಮಿಯ ಹಿರಿಯ ಅಧಿಕಾಗಳು ಗಮನಕ್ಕೆ ತಂದರೂ ಸಹ ಇದುವರೆಗೆ ಯಾವುದೇ ರೀತಿಯ ಕ್ರಮ ಜರುಗಿಸಿರುವುದಿಲ್ಲ. ಸರ್ಕಾರದ ಅನುಧಾನವನ್ನು ಸಮರ್ಪಕವಾಗಿ ಬಳಕೆ ಮಾಡದೆ ದುರ್ಬಳಕೆ ಮಾಡುತ್ತಿರುವ ಲ್ಯಾಂಡ್ ಆರ್ಮಿ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಅಶೋಕ ಮುರಾರಿ ಒತ್ತಾಯಿಸಿದ್ದಾರೆ.

Don`t copy text!