ಮಂಗಳಗ್ರಹಕ್ಕೆ ಏಕಕಾಲದಲ್ಲಿ ಮೂರು ದೇಶಗಳ ಎಂಟ್ರಿ
ಕಳೆದ ಹತ್ತು ದಿನಗಳಲ್ಲಿ ಅರಬ್ ಎಮಿರೇಟ್ಸ್, ಚೀನಾ ಮತ್ತು ಅಮೆರಿಕ ದೇಶಗಳು ಮಂಗಳ ಗ್ರಹವನ್ನು ಅಮರಿಕೊಂಡಿವೆ. ಮೊದಲೆರಡು ದೇಶಗಳ ನೌಕೆಗಳು ಅಂಗಾರಕನ ಬರೀ ಪ್ರದಕ್ಷಿಣೆ ಹಾಕುತ್ತಿದ್ದರೆ ಅಮೆರಿಕದ ನಾಸಾ ನೌಕೆ ನಿನ್ನೆ ರಾತ್ರಿ ಮಂಗಳನ ನೆಲದ ಮೇಲೆ ಉರುಳು ಬಂಡಿಯನ್ನು ಸುರಕ್ಷಿತವಾಗಿ ಇಳಿಸಿದೆ. ಅಲ್ಲಿ ನೌಕೆಯನ್ನು ಇಳಿಸುವುದು ತುಂಬ ಕಷ್ಟ. ಬಹಳಷ್ಟು ಯಂತ್ರಗಳು ಅಲ್ಲಿ ಇಳಿಯುವ ಹಂತದಲ್ಲಿ ದುರಂತ ಕಂಡಿವೆ.
ಆದರೆ ಈಗ ಭಾರತೀಯ ಮೂಲದ ಸ್ವಾತಿ ಮೋಹನ್ ಎಂಬ ಯುವ ಮಹಿಳೆಗೆ ಭಾರೀ ಶ್ಲಾಘನೆ ಸಿಗುತ್ತಿದೆ. ನಾಸಾದ ಬಂಡಿಯನ್ನು ಈ ಬಾರಿ ಮಂಗಳನ ನೆಲಕ್ಕೆ ಇಳಿಸುವಲ್ಲಿ ಈ ಎಂಜಿನಿಯರ್ ಪಾತ್ರವೂ ಮುಖ್ಯವಾಗಿತ್ತೆಂಬ ವರದಿಗಳು ಬರತೊಡಗಿವೆ.
[ಎಂಟು ವರ್ಷಗಳ ಹಿಂದೆ ಇದೇ ನಾಸಾ ಸಂಸ್ಥೆಯ ಇನ್ನೊಂದು “ಕ್ಯೂರಿಯಾಸಿಟಿ” ಹೆಸರಿನ ನೌಕೆಯನ್ನು ಇದೇ ಮಂಗಳನಲ್ಲಿ ಇಳಿಸಲು ಇನ್ನೊಬ್ಬ ಭಾರತೀಯ ಮೂಲದ ಮಹಿಳೆ ಅನಿತಾ ಸೆನ್‌ಗುಪ್ತಾ ಹೆಸರು ಇನ್ನೂ ದೊಡ್ಡದಾಗಿ ಕೇಳಬಂದಿತ್ತು. ಅಷ್ಟೇ ಅಲ್ಲ, ಭೂಮಿಯ ಮೇಲೆ ಅತ್ಯಂತ ವೇಗವಾಗಿ ಚಲಿಸಬಲ್ಲ “ಹೈಪರ್‌ಲೂಪ್” ಎಂಬ ಕೊಳವೆಗಾಡಿಯ ನಿರ್ಮಾಣದಲ್ಲೂ ಅನಿತಾ ಭಾಗಿಯಾಗಿದ್ದರು. ಈಗ ಈಕೆ ಅದನ್ನೂ ಬಿಟ್ಟು, ಏರೋಸ್ಪೇಸ್ ಕಂಪನಿಯ ಪ್ರಧಾನ ಉತ್ಪಾದನಾ ಅಧಿಕಾರಿಯಾಗಿದ್ದಾರೆ.]
ಮಂಗಳಗ್ರಹಕ್ಕೆ ಇದೀಗ ಇಳಿದ ಗಾಡಿ ಅಲ್ಲಿ ಓಡಾಡುತ್ತ ಕಲ್ಲುಗಳನ್ನು ಸಂಗ್ರಹಿಸಿ ಒಂದೆರಡು ಕಡೆ ಪುಟ್ಟ ರಾಶಿಯನ್ನು ಪೇರಿಸಲಿದೆ. ಇನ್ನು ಏಳು ವರ್ಷಗಳ ನಂತರ ಮತ್ತೊಂದು ನೌಕೆ ಅದೇ ರಾಶಿಯ ಬಳಿ ಇಳಿದು, ಆ ಕಲ್ಲುಗಳನ್ನು ಎತ್ತಿ ಭೂಮಿಗೆ ರವಾನಿಸಲಿದೆ.
ಮೊದಲ ಬಾರಿಗೆ ಮನುಷ್ಯ ಯತ್ನದಿಂದ ಮಂಗಳನ ಕಲ್ಲು/ಮಣ್ಣು ಭೂಮಿಗೆ ಬರಲಿದೆ.
ಕಾದು ನೋಡೋಣ: ಅನಿತಾ, ಸ್ವಾತಿಯ ಹಾಗೆ ಭಾರತೀಯ ಮೂಲದ ಇನ್ನೊಬ್ಬ ವ್ಯಕ್ತಿ ಅಲ್ಲಿ ಮಿಂಚಲೂಬಹುದು.
[ನಮ್ಮ ಚಂದ್ರಯಾನ-2ರಲ್ಲಿ ಕೂಡ ಇಬ್ಬರು ಮಹಿಳೆಯರು ಭಾಗಿಯಾಗಿದ್ದರು. ಯೋಜನಾ ನಿರ್ದೇಶಕಿಯಾಗಿ ಎಮ್. ವನಿತಾ ಮತ್ತು ಕಾರ್ಯಾಚರಣೆಯ ನಿರ್ದೇಶಕಿಯಾಗಿ ರಿತು ಕರಿಧಾಳ್ ಇಡೀ ಯಾನದ ನೇತೃತ್ವ ವಹಿಸಿದ್ದರು. ದುರದೃಷ್ಟವಶಾತ್ ವಿಕ್ರಮ್ ಲ್ಯಾಂಡರ್ ಅಲ್ಲಿ ಮೆಲ್ಲಗೆ ಇಳಿಯುವ ಬದಲು ಧೊಪ್ಪನೆ ಬಿತ್ತು.[
ಇಲ್ಲಿ ಕೊಟ್ಟ ಚಿತ್ರದಲ್ಲಿ ಎಡಗಡೆ ಸ್ವಾತಿ ಮೋಹನ್ ಮತ್ತು ಬಲಗಡೆ ಅನಿತಾ ಸೆನ್‌ಗುಪ್ತಾ ಇದಾರೆ.
[ಮೂರು ದೇಶಗಳು ಮಂಗಳ ಗ್ರಹಶೋಧಕ್ಕೆ ಲಗ್ಗೆ ಹಾಕಿದ್ದರ ಬಗ್ಗೆ ಕಳೆದ ಗುರುವಾರ ಪ್ರಜಾವಾಣಿ ಪತ್ರಿಕೆಯ ನನ್ನ ಅಂಕಣದಲ್ಲಿ ಪ್ರಕಟವಾದ ಲೇಖನ ಇಲ್ಲಿದೆ].
–ನಾಗೇಶ ಹೆಗಡೆ