ಸ್ತ್ರೀ

ಸ್ತ್ರೀ

ಸ್ತ್ರೀ ಸಹನೆಗೆ ಹೆಸರು
ಪ್ರೀತಿಗೆ ಉಸಿರು
ದಯೆ ಕರುಣೆಯ ಕಡಲು
ಮಮತೆ ಮಾತೆಯ ಒಡಲು.

ಮಾತೃಭೂಮಿ ಮಾತೃಭಾಷೆ
ಪ್ರಕೃತಿ ಮಾತೆ ಹೆಣ್ಣು
ಜೀವ ಜಲವ ಹೊತ್ತು ಹರಿವ
ನದಿಯೂ ಕೂಡ ಹೆಣ್ಣು

ಕೊಳೆಯ ಕಳೆದು ಭೂವಿಯ ತಣಿದು
ಕಲರವದಿ ಭಾವ ಉಲಿದು
ತಲ್ಲಣದಿ ಮೆಲ್ಲ ಹರಿದು
ಕಡಲ ಸೇರುತಿರುವೆ.

ಬಾಳಿಗೆ ಹಸಿರಾಗಿ
ಕಾಯಕದಿ ಹೆಸರಾಗಿ
ಮಮತೆ ಸಾರುತಿರುವೆ
ಒಳಗೆ ಕೋರಗುತಿರುವೆ

ಶತಮಾನದಿ ಬಂದ ಮೌಢ್ಯ
ಮೆಟ್ಟಿ ನಿಲ್ಲಬೇಕು
ಸಮಾನತೆಯ ಸಾಮ್ರಾಜ್ಯ
ಕಟ್ಟಿ ಮೆರೆಯಬೇಕು.

ಗೃಹದಿ ನೀನು ಗೃಹಿಣಿಯಾಗಿ
ಬಂಧಿಯಾಗಬೇಡಾ
ಹೊರಗೆ ಬಂದು ಕಣ್ಣು ತೆರದು
ಒಮ್ಮೆ ನೀನು ನೋಡಾ.

ನಿನ್ನ ಜ್ಞಾನ ಹರಿಯ ಬಿಟ್ಟು
ಬೇಡ ಅದಕೆ ಆಣೆಕಟ್ಟು
ಜಯಿಸು ಪಣವ ತೊಟ್ಟು
ಬಾಳು ಹೃದಯವಿಟ್ಟು

ಒಲವು ನೀಡೋ ಜೀವ ನೀನು
ಬಲಿಯಾಗಬೇಡಾ
ಕಾಮುಕರ ಕೊಚ್ಚಿ ನಿಲ್ಲು
ಕೊಲೆಯಾಗಬೇಡಾ.

ಇರುಳು ಕಳೆದು ಬೆಳಕು ಹರಿದು
ಸಂಘರ್ಷದಿ ಸಾಗಿ ಬಂದ
ಬಾಳು ಬೆಳಗಬೇಕು
ತಾಳ್ಮೆ ಹೊಳೆಯಬೇಕು

ಅಕ್ಕನಾ ಅರಿವಿನಾ ಮಾರ್ಗದಿ ನಡಿಬೇಕು
ಶರಣರ ನುಡಿಯಂತೆ ನಡೆದುತೋರಬೇಕು
ಎನ್ನ ತವನಿಧಿ ವಿಜಯಮಹಾಂತೇಶ
ನಿಮ್ಮ ಕೃಪಾಶೀರ್ವಾದವಲ್ಲದೆ ಇನ್ನೇನು ಬೇಕು.

ಸವಿತಾ ಮಾಟೂರು, ಇಲಕಲ್

Don`t copy text!