e-ಸುದ್ದಿ, ಮಸ್ಕಿ
ಮಹಿಳೆಯರು ಹೆಚ್ಚು ಹೆಚ್ಚು ಶಿಕ್ಷಣ ಪಡೆದುಕೊಂಡಾಗ ಮಾತ್ರ ಸಮಾಜದಲ್ಲಿ ಅವಕಾಶಗಳು ಲಭ್ಯವಾಗುತ್ತವೆ ಎಂದು ಪುರಸಭೆಯ ಅಧ್ಯಕ್ಷೆ ವಿಜಯಲಕ್ಷ್ಮೀ ಬಸನಗೌಡ ಪಾಟೀಲ ಹೇಳಿದರು.
ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಸನ್ ರೈಸ್ ಮಹಿಳಾ ಪದವಿ ಕಾಲೇಜು ಆಡಳಿತ ಮಂಡಳಿ ಸೋಮವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತಗೊಳಿಸುವ ವ್ಯವಸ್ಥೆ ಇತ್ತು ಈಗ ಕಾಲ ಬದಲಾಗಿದೆ. ಮಹಿಳೆಯರು ಎಲ್ಲಾ ರಂಗದಲ್ಲಿ ಮುಂದೆ ಬರುತ್ತಿದ್ದಾರೆ ಎಂದು ಆಶವಾದ ವ್ಯಕ್ತಪಡಿಸಿದರು.
ಪತ್ರಕರ್ತ ವೀರೇಶ ಸೌದ್ರಿ ವಿಶೇಷ ಉಪನ್ಯಾಸ ನೀಡಿ ರಾಜಕೀಯದಲ್ಲಿ ಈಗ ಮಹಿಳೆಯರಿಗೆ 33 % ಮೀಸಲಾತಿಗಾಗಿ ಹೋರಾಟ ನಡೆದಿದೆ. 12ನೇ ಶತಮಾನದಲ್ಲಿ ಬಸವಾದಿ ಪ್ರಮಥರು ಮಹಿಳೆಯರನ್ನು ಸಮಾನ ದೃಷ್ಟಿಯಿಂದ ನೊಡಿದ್ದಲ್ಲದೆ ಅನುಭವ ಮಂಟಪದಲ್ಲಿ ಸರಿ ಸಮಾನದ ಸ್ಥಾನ ಮಾನ ನೀಡುವ ಮೂಲಕ ಆದರ್ಶ ಪ್ರಾಯರಾಗಿದ್ದರೆ ಎಂದರು.
ಮಹಿಳೆ ಸುಸಂಕೃತಳಾದರೆ ಕುಟುಂಬ ಮತ್ತು ಸಮಾಜ ಕೂಡ ಸದೃಢವಾಗುತ್ತದೆ. ಮಹಿಳೆ ಅಚ್ಚುಕಟ್ಟಾಗಿ ಮನೆಯನ್ನು ನಡೆಸಿದಂತೆ ಸಮಾಜದಲ್ಲಿ ಆಕೆಗೆ ಸಿಕ್ಕಿರುವ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾಳೆ ಎಂದರು.
ಸಂಸ್ಥೆಯ ಅಧ್ಯಕ್ಷ ರುದ್ರಯ್ಯಸ್ವಾಮಿ ಬಳಗಾನೂರು ಮಾತನಾಡಿ ಗ್ರಾಮೀಣ ಭಾಘದ ವಿದ್ಯಾರ್ಥಿನಿಯರಿಗೆ ನಮ್ಮ ಕಾಲೇಜಿನಲ್ಲಿ ವಿಶೇಷ ಅವಕಾಶ ಕಲ್ಪಿಸಲಾಗುವದು ಎಂದು ತಿಳಿಸಿದರು.
ಮಸ್ಕಿ ತಾಲೂಕು ಪ್ರಾಚಾರ್ಯರ ಸಂಘದ ಅಧ್ಯಕ್ಷ ಪಂಪಾಪತಿ ಗುತ್ತೇದಾರ, ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸಪ್ಪ ತನಿಖೆದಾರ, ಪ್ರಕಾಶ ಧಾರಿವಾಲ, ಸುನಿಲ್ ಆರ್,ಬಿ. ಪ್ರಚಾರ್ಯ ಜಗದೀಶಯ್ಯ ಬಾಡದಮಠ ಮಾತನಾಡಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಅವರ ಪಾಲಕರನ್ನು ಸನ್ಮಾನಿಸಿ ಗೌರವಿಸಲಾಯಿತರು.