ಹೆಣ್ಣು ಹೆಣ್ಣಾದೊಡೆ

ಹೆಣ್ಣು ಹೆಣ್ಣಾದೊಡೆ

ಜಗತ್ತಿನ ಸಕಲ ಜೀವಚರಗಳು ಎಲ್ಲವೂ ಸೃಷ್ಟಿಯ ಅಗಾಧತೆಯಲ್ಲಿ ಒಂದಿಲ್ಲ ಒಂದು ಅಗೋಚರವಾದ ಶಕ್ತಿಯನ್ನು ಹೊಂದಿವೆ. ಅವೆಲ್ಲವುಗಳಿಗೂ ತಮ್ಮದೇ ಆದ ನಡವಳಿಕೆ,ಕ್ರಿಯೆ ಪ್ರತಿಕ್ರಿಯೆ ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾಗಿವೆ ಆದರೆ ಎಲ್ಲವುಗಳಲ್ಲಿ ಏಕತೆಯನ್ನು ಕಾಣುವುದು ಎಂದರೆ ಒಂದು ಮಾತ್ರ. ಅದು ಸ್ವತಂತ್ರವಾಗಿ ಇರುವ ಬಯಕೆ. ಬೀಸುವ ಗಾಳಿ, ಹರಿಯುವ ನದಿ,ವಿಶಾಲವಾದ ಭೂಮಿ, ನಿರಭ್ರ ಆಗಸ ಎಲ್ಲವುಗಳಿಗೆ ಒಂದೇ ಇರುವಂತೆ ಸ್ವಾತಂತ್ರ್ಯ ಕೂಡ ಎಲ್ಲ ಜೀವಿಗಳಲೂ ಒಂದೇ ಆಗಿದೆ ಆದರೂ ಈ ಜಗತ್ತು ಬೆಳೆದಂತೆ ಮಾನವ ಸಂಕುಲವು ತನ್ನದೇ ಆದ ಸಂಸ್ಕೃತಿ ಧರ್ಮ ಸಮಾಜವೆಂಬ ಚೌಕಟ್ಟುಗಳಲ್ಲಿ ಒಂದು ವ್ಯವಸ್ಥೆ ಶಿಸ್ತು ಹಾಗೂ ನೈತಿಕತೆಯ ಅಡಿಪಾಯ ಹಾಕಲು ಮುಂದಾದಾಗ ಅನೇಕ ಕಟ್ಟುಪಾಡುಗಳು ಬೆಳೆದುಬಂದವು ಎನ್ನಬಹುದು. ಬೆಳೆಯ ಜೊತೆಗೆ ಕಳೆಯೂ ಬೆಳೆಯುವಂತೆ ಇವುಗಳೊಂದಿಗೆ ಶೋಷಣೆಯ ವಿವಿಧ ಮುಖಗಳು ಸಮಾಜದ ಕ್ರೂರ, ಹೀನ ಮುಖಗಳು ಇದರೊಂದಿಗೆ ಬೆಳೆದುಬಂದವು. ಸ್ವಾತಂತ್ರ್ಯ ಎನ್ನುವುದು ಕೂಡ ಒಂದು ಸೀಮೆಗೆ ಒಳಪಟ್ಟಿತು. ದೈಹಿಕವಾಗಿ ಬಲಶಾಲಿಯಾದ ಪುರುಷನಿಂದ ಕಾನೂನು ಕಟ್ಟಳೆಗಳ ನಿರ್ಮಿತಿ ಆಯ್ತು. ಹೀಗಾದಾಗ ಅದು ಪುರುಷಪ್ರಧಾನವೇ ಆಗಿರಲು ಸಾಧ್ಯ. ಶತಶತಮಾನಗಳು ಕಳೆದರೂ ಇಂದಿಗೂ ಕೂಡ ಪುರುಷಪ್ರಧಾನವಾದ ಈ ಸಮಾಜದಲ್ಲಿ ಸ್ತ್ರೀ ಸಂಕುಲದ ಕೂಗೆಲ್ಲವೂ ನಾಲ್ಕು ಗೋಡೆಗಳಲ್ಲಿ ಬಂಧಿತವಾಗಿದೆ. ಆದರೆ ಇವೆಲ್ಲವುಗಳಿಗೆ ವ್ಯತಿರಿಕ್ತವಾಗಿ ಹನ್ನೆರಡನೆಯ ಶತಮಾನವು ಬಸವ ಎಂಬ ಬೆಳಕಿನಡಿಯಲ್ಲಿ ಹೆಣ್ಣು-ಗಂಡು ಮೇಲು-ಕೀಳು ಎಂಬೆಲ್ಲ ಅಸಮಾನತೆಗಳನ್ನು ತೊಡೆದು ಹಾಕಿ ಹೆಣ್ಣನ್ನು ಕೂಡ ಸ್ವತಂತ್ರವಾಗಿ ಧಾರ್ಮಿಕ ಸಾಮಾಜಿಕ ವೈಚಾರಿಕವಾಗಿ ಅಭಿವ್ಯಕ್ತಿ ಸುವಂತೆ ಉಸಿರಾಡುವಂತೆ ಮಾಡಿದ್ದು ಐತಿಹಾಸಿಕ ದಾಖಲೆ. ಏಕಕಾಲದಲ್ಲಿ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ವೈಚಾರಿಕ ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಬದುಕಿನ ವಿವಿಧ ಮುಖಗಳನ್ನು ಮುಕ್ತವಾಗಿ ಸ್ವತಂತ್ರವಾಗಿ ಅಭಿವ್ಯಕ್ತಿಸಿದ ಶರಣರು ವಚನಗಳ ಮೂಲಕ ಬದುಕನ್ನು ಅಕ್ಷರ ರೂಪದಲ್ಲಿ ಜಗತ್ತಿಗೆ ಅರ್ಪಿಸಿದ ಕಾಲವೇ 12ನೇ ಶತಮಾನ. ಅಂದಿನ ಶರಣರ ನೇರ,ನಿಷ್ಠುರ ಹಾಗೂ ಸ್ಪಷ್ಟವಾದ ನುಡಿಗಳು ವಚನಗಳಲ್ಲಿ ಬಿಂಬಿತವಾಗಿವೆ. ಪುರಾತನ ಕಾಲದಿಂದಲೂ ಬೇರೂರಿದ ನಂಬಿಕೆಗಳಾದ ಧರ್ಮಶಾಸ್ತ್ರಗಳ ನಂಬಿಕೆಗಳಾದ ಹೆಣ್ಣು ಹೊನ್ನು ಮಣ್ಣು ಎಂಬವು ಮಾಯೆ, ಇವು ಸಾಧನೆಗೆ ಅಡ್ಡಿ ಮಾಡುವವು ಎಂಬುದನ್ನು ಶರಣರು ಸಾರಾಸಗಟಾಗಿ ತಿರಸ್ಕರಿಸಿದರು. ಈ ಸಂಪ್ರದಾಯದ ಬೇರುಗಳಿಗೆ ಕೊಡಲಿಪೆಟ್ಟು ಹಾಕಿ ವೈಚಾರಿಕತೆಯ ಬೆಳಗನ್ನು ಬೆಳಗಿದರು.

ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು, ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೇ, ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೇ, ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು ಮಣ್ಣಿಂಗೆಯು ಲಿಂಗಕ್ಕೆಯೂ ವಿರುದ್ಧವೇ ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೇ, ಇಂದ್ರಿಯಗಳನ್ನು ಬಿಟ್ಟು ಲಿಂಗವನೊಲಿಸಬೇಕೆಂಬರು ಇಂದ್ರಿಯಗಳಿಗೆಯು ಲಿಂಗಕ್ಕೆಯೂ ವಿರುದ್ಧವೇ,ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು ಜಗಕ್ಕೆಯು ಲಿಂಗಕ್ಕೆಯೂ ವಿರುದ್ಧವೇ ಇದುಕಾರಣ ಪರಂಜ್ಯೋತಿ ಪರಮ ಕರುಣಿ ಪರಮ ಶಾಂತನೆಂಬಲಿಂಗವು ಕೋಪದ ಮುನಿಸನರಿದಡೆ ಕಾಣಬಹುದು ಮರೆದಡೆ ಕಾಣಬಾರದು ಅರಿವಿನಿಂದ ಕಂಡೊದಗಿದ ಸುಖವು ಮಸಣಯ್ಯಪ್ರಿಯ ಗಜೇಶ್ವರಾ.

ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ

ಶರಣೆ ಮಸಣಮ್ಮನ ವಚನ ಸ್ಪಷ್ಟವಾಗಿ ನಿರೂಪಿಸುವುದು ಏನೆಂದರೆ ಶತಮಾನಗಳವರೆಗೆ ಯಾವುದು ಧರ್ಮ ಆಧ್ಯಾತ್ಮಗಳ ಬೇರುಗಳು ಎಂಬ ಭ್ರಾಂತಿಗಳಾಗಿದ್ದವೋ ಅವುಗಳನ್ನು ಖಡಾಖಂಡಿತವಾಗಿ ತಿರಸ್ಕರಿಸಲಾಗಿದೆ. ಹೊನ್ನು, ಹೆಣ್ಣು,ಮಣ್ಣುಗಳು ಸಾಧನೆಗೆ ಅಡ್ಡಿಯಲ್ಲ. ಹಾಗೆಯೆ ಅಂಗ, ಇಂದ್ರಿಯ, ಈ ಜಗತ್ತು ಯಾವವೂ ಅಡ್ಡಿ ಅಲ್ಲ ಆದರೆ ಅರಿವಿನ ಕಂಗಳಿಂದ ಅವುಗಳನ್ನು ದೈವತ್ವದೆಡೆಗೆ ಕೊಂಡೊಯ್ಯುವ ನಿರಂತರ ಪ್ರಯತ್ನ ಸಾಧಕನಿಗೆ ಇರಬೇಕಷ್ಟೇ.

ಯಾವ ಬೀಜ ಬೀಳುವಲ್ಲಿ ಮೊಳೆ ಮುಖ ಹಿಂಚು ಮುಂಚುಂಟೆ, ನೀ ಮರೆದಲ್ಲಿ ನಾನರಿದಲ್ಲಿ ಬೇರೊಂದೊಡಲುಂಟೆ ಮೂಲ ನಷ್ಟವಾದಲ್ಲಿ ಅಂಕುರ ನಿಂದಿತ್ತು ಕೂಟಕ್ಕೆ ಸತಿ-ಪತಿ ಎಂಬ ನಾಮವಲ್ಲದೆ ಅರಿವಿಂಗೆ ಬೇರೊಂದೊಡಲುಂಟೆ ಮಾರಯ್ಯಪ್ರಿಯಅಮರೇಶ್ವರ ಲಿಂಗವನರಿಯಬಲ್ಲಡೆ

ಆಯ್ದಕ್ಕಿ ಲಕ್ಕಮ್ಮ

ಬೀಜ ಹೇಗೆ ಬಿತ್ತಿದ್ದರೂ ಮೊಳಕೆ ಮೇಲೆ ಒಡೆಯುವಂತೆ, ಹೆಣ್ಣು-ಗಂಡುಗಳೆಂಬ ಹೆಸರುಗಳು ಕೇವಲ ತೋರಿಕೆಗೆ ಮಾತ್ರ ಅರಿವಿನ ಒಡಲಿಗೆ ಯಾವುದೇ ಭೇದವಿಲ್ಲ ಎಂದು ಇಷ್ಟೊಂದು ನೇರವಾಗಿ ಖಂಡಿಸಿ ಹೇಳಬೇಕಾದರೆ ಅದರ ಹಿಂದಿರುವ ಸ್ವತಂತ್ರ ಅಭಿವ್ಯಕ್ತಿಯ ಪ್ರಬಲಶಕ್ತಿಯ ಅರಿವಾಗುವದು.

ಗಂಡು ಮೋಹಿಸಿ ಹೆಣ್ಣು ಹಿಡಿದರೆ ಅದು ಒಬ್ಬರ ಒಡವೆ ಎಂದು ಅರಿಯಬೇಕು ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾವುದೆಂದರಿಯಬೇಕು ಈ ಎರಡರ ಉಭಯ ಕಳೆದು ಸುಖಿ ತಾನಾಗಬಲ್ಲಡೆ ನಾಸ್ತಿನಾಥನು ಪರಿಪೂರ್ಣನೆಂಬೆ

ಗೊಗ್ಗವ್ವೆ

ಪುರುಷ ಪ್ರಧಾನ ಸಮಾಜದಲ್ಲಿ ಆಯ್ಕೆಯ ಸ್ವಾತಂತ್ರ್ಯ ಕೇವಲ ಗಂಡಿಗೆ ಮಾತ್ರವೇ ಹೆಣ್ಣಿಗೆ ಏಕಿಲ್ಲ ಈ ಗಂಡು ಹೆಣ್ಣೆಂಬ ಭಾವವನ್ನು ಮೀರಿದಾಗ ಮಾತ್ರ ನಿಜವಾದ ಸ್ವತಂತ್ರ ಸುಖಿ ಎಂಬ ಭಾವವನ್ನು ವ್ಯಕ್ತಪಡಿಸುವ ಗೊಗ್ಗವ್ವೆ ತಲತಲಾಂತರಗಳಿಂದ ಬಂದ ಪುರುಷ ದಬ್ಬಾಳಿಕೆಗೆ ಮಾಡುವ ಪ್ರಶ್ನೆ ಇಂದಿಗೂ ಪ್ರಸ್ತುತ. ಇಂದಿಗೂ ಜಗತ್ತಿನಲ್ಲಿ ಎಲ್ಲೆಡೆ ಇರುವ ಹೆಣ್ಣಿನ ಒಳ ದನಿಯಿದಾಗಿದೆ .

ತಲೆಯಮೇಲೆ ತಲೆಯುಂಟೆ ಹಣೆಯಲ್ಲಿ ಕಣ್ಣು ಉಂಟೆ ಗಳದಲ್ಲಿ ವಿಷವುಂಟೆ,ದೇವರಿಗೆಂದೊಡಲುಂಟೆ, ತಂದೆಯಿಲ್ಲದವರುಂಟೆ, ತಾಯಿಯಿಲ್ಲದವರುಂಟೆ,ಎಲವೋ ನಿನ್ನ ಹಣೆಯಲ್ಲಿನೇಸರ ಮೂಡದೆ , ಶಂಭುಜಕ್ಕೇಶ್ವರನಲ್ಲದೆ ಉಳಿದ ದೈವಗಳುಂಟೆ

ಸತ್ಯಕ್ಕ

ಎಂಥ ಅದ್ಭುತ ಸಾಮಾನ್ಯರಲ್ಲಿ ಅಸಾಮಾನ್ಯ ವೈಚಾರಿಕತೆ. ಕಸಹೊಡೆವ ಕಾಯಕದ ಸತ್ಯಕ್ಕ ಬೇರುಬಿಟ್ಟಿದ್ದ ನಂಬಿಕೆಯಾದ ಕಾಲ್ಪನಿಕ ಪೌರಾಣಿಕ ಶಿವನ ಸ್ವರೂಪ ವನ್ನೆ ಪ್ರಶ್ನಿಸುತ್ತಾಳೆ, ವಿಮರ್ಶೆ ಗೆ ಒಳಪಡಿಸುತ್ತಾಳೆ. ತಲೆ ಮೇಲೆ ಗಂಗೆ, ತ್ರಿನೇತ್ರ, ಕಂಠದಲ್ಲಿ ವಿಷವುಂಟೆ, ದೇವರಿಗೆ ದೇಹವುಂಟೆ, ತಂದೆತಾಯಿಲ್ಲದೆ ಹುಟ್ಟಲುಂಟೆ ಎಂದು ಅಜ್ಞಾನವನ್ನು ಮೂಢತೆಯನ್ನು ಪ್ರಶ್ನಿಸುತ್ತಾ ಲಿಂಗವಲ್ಲದೆ ಅನ್ಯ ದೈವವುಂಟೆ ಎಂಬ ತ್ರಿಕಾಲಸತ್ಯದೆಡೆಗೆ ಗಮನ ಸೆಳೆವ ಸತ್ಯಕ್ಕಳ ಪ್ರಶ್ನೆ ಇಂದಿಗೂ ಕೂಡ ಪ್ರಸ್ತುತ. ಆದರೆ ಆ ನಿಷ್ಟುರ ನೇರ ನುಡಿ ಸ್ವತಂತ್ರ ಅಭಿವ್ಯಕ್ತಿಯ
ಗೆ ನಿದರ್ಶನ ವಾಗಿದೆ.

ಗಂಡ ಗಂಡರ ಎದೆಯ ಮೆಟ್ಟಿ ನಡೆದವರುಂಟೆ,
ಗಂಡ ಗಂಡ ಚಲ್ಲಣವ ಮಾಡಿ ಉಟ್ಟವರುಂಟೆ, ಗಂಡ ಗಂಡ ರೆ ಚರ್ಮವ ಹೊದ್ದವರುಂಟೆ, ಗಂಡ ಗಂಡರ ಹೊದ್ದವರುಂಟೆ ಗಂಡ ಗಂಡರ ತುರು ಬಿದವರುಂಟೆ,
ಗಂಡ ಗಂಡರ ಭಸ್ಮವ ಮಾಡಿ ಹೂಸಿದವರುಂಟೆ,
ಗಂಡ ಗಂಡರಿಗೆ ಗಂಡನ ಕಣ್ಣು ಕಾಲಲ್ಲದೆ ಗಂಡ ಗಂಡರಿಗೆ ಗಂಡನ ಶಿರ ಕರದಲ್ಲದೆ ಗಂಡುವೇಷವೆಂಬುದು ನಿಮ್ಮ ಶಕ್ತಿರೂಪು ಗಂಡರಿಗೆ ಗಂಡನು ನಡೆಯಿತ್ತೆ ಬಟ್ಟೆ ಎಂಬುದು ನಿಮಗೆ ಸಂದಿತ್ತು
ಶಂಭು ಜಕ್ಕೇಶ್ವರ ಶರಣ ಜಗದೊಳಗೊಬ್ಬನೇ ಗಂಡನು

ಸತ್ಯಕ್ಕ

ಇಲ್ಲಿ ಗಂಡರ ಗಂಡ ಎಂಬುದು ಬಲಿಷ್ಠ ತೆಯ ಸಂಕೇತ.ಇಂತಹ ಬಲಿಷ್ಠವಾದವರನ್ನು ಸೋಲಿಸಿ ತೊಟ್ಟವರುಂಟೆ, ಹೊದ್ದವರು ಉಂಟೆ, ತುರು ಬಿದವರುಂಟೆ ಎಂದು ಕೇಳುತ್ತಾ ಅವರು ಶಕ್ತಿವಂತರು ನಿಜ ಆದರೆ ಅವರು ಹೆಣ್ಣಿಗಿಂತ ಹೇಗೆ ಭಿನ್ನವಾಗಿದ್ದಾರೆ ಅವರಿಗೆ ಕಾಲಲ್ಲಿ ಕಣ್ಣಿದೆಯೆ ಕರದಲ್ಲಿ ಶಿರವಿದೆಯೆ, ಗಂಡು ಎಂಬುದು ಶಕ್ತಿಯ ಸಂಕೇತ ಮಾತ್ರ ಎಂಬ ವೈಜ್ಞಾನಿಕ ಸತ್ಯವನ್ನು ಬಿಚ್ಚಿಡುತ್ತ ಸ್ವಾತಂತ್ರ್ಯದ ಅಭಿವ್ಯಕ್ತಿಯನ್ನು ಮಾಡುವಳು ಕಸಹೊಡೆವ ಕಾಯಕದ ಸತ್ಯಕ್ಕ. ಇದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹಿಡಿದ ನಿದರ್ಶನ.

ಪಾರ್ವತಿಯ ರೂಪವ ಕಂಡು ಪರಶಿವನ ಸಂಗನಿಸ್ಸಂಗವಾಗಿ ತಾಯಿ ಮಗನ ಅಂಗದಿಂದ ತನುವಳಿದು ನಿರಾಭಾರ ರೂಪವನೆಯ್ದಿ ಬಸವನ ಅನುಭವದಿಂದ ವಿವರವ ಕಂಡು ವಿಚಾರ ಪತ್ನಿಯಾದೆನಯ್ಯಾ ಸಂಗಯ್ಯಾ

ನೀಲಾಂಬಿಕೆ

ಈ ವಚನದಲ್ಲಿ ಅಭಿವ್ಯಕ್ತವಾದ ವಿಚಾರ ಪತ್ನಿಯಾದೆನಯ್ಯಾ ಎಂಬ ನೀಲಾಂಬಿಕೆಯವರು ವಚನವಂತೂ ಸಮಸ್ತ ಸ್ತ್ರೀ ಸಂಕುಲದ ಮನದಾಳದ ಅವ್ಯಕ್ತ ಆಶಯ ಎಂದಿಗೂ ಈಡೇರದ ಅಭಿಲಾಷೆಯಾಗಿದೆ. ಬಸವ ಎಂಬ ಮಹಾ ಸೂರ್ಯನ ಮಡದಿಯಾಗಿ ತನ್ನ ದೀಪದ ಬೆಳಗನ್ನೂ ಗುರುತಿಸಿಕೊಂಡ ಶರಣೆ ನೀಲಾಂಬಿಕೆ ಒಬ್ಬ ವಿಚಾರ ಪತ್ನಿಯಾಗಿ ಬೆಳಗಿದ್ದು ಐತಿಹಾಸಿಕ ಜಾಗತಿಕ ಸ್ವಾತಂತ್ರ್ಯದ ಅಭಿವ್ಯಕ್ತಿಯಾಗಿದೆ. ಇಂದಿಗೂ ಕೂಡ ಹೆಣ್ಣನ್ನು ಒಂದು ಸೀಮಿತ ಚೌಕಟ್ಟುಗಳಲ್ಲಿ ಕಾಣಬಯಸುವ ಪುರುಷ ಪ್ರಧಾನ ವ್ಯವಸ್ಥೆಗೆ ಇದು ನುಂಗಲಾರದ ತುತ್ತು ಹೆಣ್ಣನ್ನು ಕೂಡ ಅವಳ ವ್ಯಕ್ತಿತ್ವಕ್ಕೆ ಅವಳ ಆಶಯಗಳಿಗೆ ಗೌರವಿಸುವದನ್ನು ಸಮಾಜದಲ್ಲಿ ಕಾಣುವದು ತುಂಬಾ ಅಪರೂಪ. ನೀಲಾಂಬಿಕೆಯ ಮತ್ತೊಂದು ವಚನದಲ್ಲಿ ಬಸವಂಗೆ ನಾನು ಶಿಶುವಾದೆನು ಬಸವನೆನ್ನ ಶಿಶುವಾದನು ಎಂಬ ಭಾವ ಎಲ್ಲ ಭೇದಗಳನ್ನು ಅಳಿಸಿಹಾಕುವ ನಿರ್ಮಲವಾದ ಶಿಶು ಭಾವ ಶಿಶು ಸಂಬಂಧ ಅಧ್ಯಾತ್ಮದ ಶಿಖರಪ್ರಾಯವಾದ ಭಾವವಲ್ಲದೆ ಸರ್ವತಂತ್ರಸ್ವಾತಂತ್ರ್ಯದ ಅನುಭೂತಿಯು ಕೂಡ ಆಗಿದೆ.

ಎನ್ನ ಕರಣಂಗಳ ಲಿಂಗದಲಿ ಕಟ್ಟುವೆ ಗುರು-ಲಿಂಗ-ಜಂಗಮದ ಕಾಲ ಕಟ್ಟುವೆ ವ್ರತ ಭ್ರಷ್ಟರ ನಿಟ್ಟೊರಸುವೆ ಸುಟ್ಟು ತುರತುರನೆ ತೂರುವೆ ನಿರ್ಭೀತ ನಿಜಲಿಂಗದಲ್ಲಿ

ಕಾಲಕಣ್ಣಿಯ ಕಾಮಮ್ಮ
ಗುರುಲಿಂಗ ಜಂಗಮರನ್ನು ತನ್ನ ಅಂತರ್ಯದಲ್ಲಿ ಕಂಡು ಅವುಗಳನ್ನು ಮೀರಿ ನಿಲ್ಲುವ ವ್ರತ ಭ್ರಷ್ಟರಿಗೆ ಸುಟ್ಟು ತುರತುರನೆ ತೂರುವೆ ನಿರ್ಭೀತ ನಿಜಲಿಂಗದಲ್ಲಿ ಎಂದು ಹೇಳುವ ನುಡಿ ಅವಳ ನಿಷ್ಠುರವಾದ ಸ್ವತಂತ್ರ ಅಭಿವ್ಯಕ್ತಿಗೆ ನಿದರ್ಶನವಾಗಿದೆ.

ಅಕ್ಕನ ವಚನಗಳಲ್ಲಿನ ಸ್ವಾತಂತ್ರ್ಯದ ಅಭಿವ್ಯಕ್ತಿ ಅದರ ಹಿಂದಿನ ಆಶಯ ವಿಭಿನ್ನವಾಗಿದೆ. ಸ್ವಾತಂತ್ರ್ಯದ ಪರಿಭಾಷೆ ಎಲ್ಲರಲ್ಲೂ ಒಂದೇ ಆಗಿರುವಾಗ ಅಕ್ಕಳಲ್ಲಿ ಅದು ಹೇಗೆ ಭಿನ್ನವಾಗಿದೆ ಎಂಬ ಅನಿಸಿಕೆ ತಲೆದೋರಬಹುದು ಆದರೆ ವಚನಗಳ ಸಂಪೂರ್ಣ ಅಧ್ಯಯನಗೈದು ಅದರ ಆಳದಲ್ಲಿ ಜಾಲಾಡಿದಾಗ ಅದರ ಮೂಲ ವಿಭಿನ್ನವಾಗಿರುವದು ತೋರುವುದು.

ರತ್ನದ ಸಂಕೋಲೆಯಾದಡೆ ತೊಡರಲ್ಲವೆ, ಮುತ್ತಿನ ಬಲೆಯಾದಡೆ ಬಂಧನವಲ್ಲವೆ,ಚಿನ್ನದ ಕತ್ತಿಯಲ್ಲಿ ತಲೆಹೊಯ್ದಡೆ ಸಾಯದಿರ್ಪರೆ, ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ ಜನನ-ಮರಣ ಬಿಡುವುದೇ ಚೆನ್ನಮಲ್ಲಿಕಾರ್ಜುನ

ಶ್ರೀಮಂತಿಕೆ ಆಡಂಬರ ಪ್ರತಿಷ್ಠೆಗಳನ್ನು ಹೊದ್ದುಕೊಂಡು ತೋರಿಕೆಯ ಒಣ ಡಂಬಾಚಾರ ಗಳಲ್ಲಿ ಮಹಲುಗಳಲ್ಲಿ ಬದುಕುವ ಈ ಭವದ ಬದುಕೇ ಅಕ್ಕಳಿಗೆ ಚಿನ್ನದ ಸಂಕೋಲೆಗಳಲ್ಲಿ ಬಂಧಿಯಾದಂತೆ, ಚಿನ್ನದ ಕತ್ತಿಯಿಂದ ಇರಿದುಕೊಂಡರೆ ಸಾಯದೆ ಬದುಕುವರೇ ಹಾಗೆಯೇ ಈ ಜಗತ್ತಿನ ಸಂಸಾರದ ವಿಷಯಾದಿಗಳಲ್ಲಿ ಬಳಲುವದು ಅಲ್ಲದೆ ತೋರಿಕೆಯ ಭಕ್ತಿಯಲ್ಲಿ ಸಿಲುಕಿದರೆ ಜನನ-ಮರಣ ಬಿಡುವುದೇ ಅವರಿಗೆ ಸಾವಿ ಲ್ಲವೇ ಅವರು ಅಮರ ಆಗಬಲ್ಲರೇ ಎಂದು ಕೇಳುವ ವಚನದಲ್ಲಿ ಆಧ್ಯಾತ್ಮದ ಗೌಪ್ಯತೆಗಳು ಸೂಕ್ಷ್ಮವಾಗಿ ಇದ್ದರೂ ಕೂಡ ಅಕ್ಕನ ವಸ್ತುನಿಷ್ಠ ಸ್ವತಂತ್ರವಾದ ಅಭಿವ್ಯಕ್ತಿಯ ಪ್ರಶ್ನೆಯಾಗಿಯೇ ಗೋಚರಿಸುವುದು.

ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ ಸಮುದ್ರದ ತಡಿಯಲ್ಲಿ ಮನೆಯ ಮಾಡಿ ನೊರೆತೆರೆಗಳಿಗಂಜಿದೊಡೆಂತಯ್ಯ ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದಡೆಂತಯ್ಯಾ ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯ ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು

ಇದು ನಿಜವಾದ ಸ್ವತಂತ್ರವಾದ ಅಭಿವ್ಯಕ್ತಿ ಆಗಿದೆ. ಈ ಜಗವೆಂಬ ಸಂತೆಯಲ್ಲಿ ಬದುಕಬೇಕಾದ ಅನಿವಾರ್ಯತೆ ಇರುವಾಗ ಅದಕ್ಕೆ ತಕ್ಕಂತೆ ಬದುಕಬೇಕು ಅದನ್ನು ಎದುರಿಸುವ ದೃಢತೆ ಧೈರ್ಯವಿರಬೇಕು ಯಾವುದಕ್ಕೂ ಕಿವಿಗೊಡದೆ ಸಮಾಧಾನದಿಂದ ಬದುಕಬೇಕು ಎನ್ನುವುದು ಎಲ್ಲರಿಗೂ ಕಾಲಾತೀತ ಸೀಮಾತೀತ ಆದ ಸದೃಢವಾದ ಸತ್ಯವಾದ ಮನೋಸ್ಥೈರ್ಯದ ವಿಚಾರ ಆಗಿದೆ.

ಹೆದರದಿರು ಮನವೆ ಬೆದರದಿರು ತನುವೇ ನಿಜವನರಿತು ನಿಶ್ಚಿಂತ ನಾಗಿರು.
ಫಲವಾದ ಮರನ ಕಲ್ಲಲ್ಲಿ ಇಡುವುದೊಂದು ಕೋಟಿ ಎಲವದ ಮರನ ಇಡುವರೊಬ್ಬರ ಕಾಣೆ
ಭಕ್ತಿಯುಳ್ಳವರ ಬೈವರೊಂದು ಕೋಟಿ ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ ನಿಮ್ಮ ಶರಣರ ನುಡಿಯೆ ಎನಗೆ ಗತಿ ಸೋಪಾನ ಚೆನ್ನಮಲ್ಲಿಕಾರ್ಜುನ

ತುಂಬಿದ ಮರಕ್ಕೆ ಜನ ಕಲ್ಲು ಒಗೆಯುವರು ಬರಡು ಮರಕ್ಕೆ ಯಾರು ಒಗೆಯರು. ಇದು ಸಹಜವಾದ ಜಗತ್ತಿನ ನಡೆ. ಹಾಗೆಯೇ ಭಕ್ತಿ ಇದ್ದವರನ್ನು ಜ್ಞಾನಿಯಾದವರನ್ನು,ಉಳ್ಳವರನ್ನು ಎಲ್ಲರೂ ಪೀಡಿಸುವರು ಇಲ್ಲದವರನ್ನು ಯಾರೂ ಪೀಡಿಸರು ಆದ್ದರಿಂದ ಅಕ್ಕಳ ಭಕ್ತಿ ಮಾರ್ಗದಲ್ಲಿ ಎದುರಿಸಿರಬಹುದಾದ ಕಷ್ಟ-ಕಾರ್ಪಣ್ಯಗಳಿಗೆ, ನೋವುಗಳಿಗೆ ಎದೆಗುಂದದೆ ತನ್ನ ಗಮ್ಯದತ್ತ ನಡೆದ ಅಕ್ಕ ಚೆನ್ನಮಲ್ಲಿಕಾರ್ಜುನನ ಸಾಂಗತ್ಯದಲ್ಲಿ ಆತನ ಬೆಳಗಿನಲ್ಲಿ ಸ್ವತಂತ್ರವಾಗಿ ನಡೆದದ್ದು ಜಗತ್ತಿಗೆ ಸ್ವತಂತ್ರದ ನಡೆಯಾಗಿ ತೋರುವುದು ಆದರೆ ಅಂತರಂಗದಲ್ಲಿ ಅವಳು ತಾನಲ್ಲದ ನಡೆ ನಡೆದದ್ದು ಒಂದು ವಿಪರ್ಯಾಸವೆ ಸರಿ.

ಹೆಣ್ಣು ಹೆಣ್ಣಾದೊಡೆ ಗಂಡಿನ ಸೂತಕ, ಗಂಡು ಗಂಡಾದೊಡೆ ಹೆಣ್ಣಿನ ಸೂತಕ, ಮನದ ಸೂತಕ ಹಿಂಗಿದೊಡೆ ತನುವಿನ ಸೂತಕಕ್ಕೆ ತೆರಹುಂಟೆ ಮೊದಲಿಲ್ಲದ ಸೂತಕಕ್ಕೆ ಮರುಳಾಯಿತು ಜಗವೆಲ್ಲ ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯ ಎಂಬ ಗರುವಂಗೆ ಜಗವೆಲ್ಲ ಹೆಣ್ಣು ನೋಡಾ ಅಯ್ಯಾ

ಹೆಣ್ಣಿಗೆ ಗಂಡು ಮಾಯೆ ಗಂಡಿಗೆ ಹೆಣ್ಣು ಮಾಯೆ ಮನದ ಮಾಯೆ ತನುವಿನ ಹರಿದಾಗ ಅಂಗ ಭಾವವನ್ನು ಹರಿದಾಗ ಬಹಿರಂಗದ ಭಾವಗಳು ಕೂಡ ಮಾಯವಾಗುವದು ಆದರೆ ಜಗತ್ತಿಗೆ ತೋರುವ ದೃಷ್ಟಿಯೇ ಬೇರೆ.ಈ ಜಗತ್ತಿಗೆಲ್ಲ ಚೆನ್ನಮಲ್ಲಿಕಾರ್ಜುನ ಒಬ್ಬನೇ ಗಂಡು ಜಗವೆಲ್ಲಾ ಹೆಣ್ಣು ನೋಡ ಎನ್ನುವ ಶರಣಸತಿ ಲಿಂಗಪತಿ ಭಾವದ ವಿಶಾಲ ಭಾವ ನೆಲೆಗೊಂಡ ಮೇಲೆ ಹೆಣ್ಣು-ಗಂಡು ಎಂಬ ಅಂಗಿಕ ಭಾವಕ್ಕೆ ಅತೀತವಾದ ಆತ್ಮಭಾವ ಜಾಗೃತವಾದ ಭಾವ ಅಕ್ಕಮಹಾದೇವಿಯ ವಚನಾಂತರಂಗದಲ್ಲಿ ತೋರುವದು. ಆದರೆ ಜಗದ ಕಣ್ಣಿಗೆ ಸ್ವತಂತ್ರವಾದ ಮನೋಭಾವ ಆಗಿ ತೋರುವುದರಲ್ಲಿ ಆಶ್ಚರ್ಯ ವಿಲ್ಲ.

ಅನೇಕ ಶರಣರು ಬಳಸಿಕೊಂಡ ಅಂಕಿತನಾಮಗಳು ಅವರ ಸ್ವತಂತ್ರವಾದ ಅಭಿವ್ಯಕ್ತಿಗೆ ಸಾಕ್ಷಿಯಾಗಿವೆ ಸೂಳೆಸಂಕವ್ವೆಯ ನಿರ್ಲಜ್ಜೇಶ್ವರ, ಕಾಲಕಣ್ಣಿಯ ಕಾಮಮ್ಮಳ ನಿರ್ಭೀತ ನಿಜಲಿಂಗ , ಬೋಂತಾದೇವಿಯ ಬಿಡಾಡಿ ಎಂಬ ವಚನಾಂಕಿತಗಳು ಅವರ ನಿರ್ಭೀತ, ಸ್ವತಂತ್ರಮನೋ ಭೂಮಿಕೆಗೆ ಹಿಡಿದ ಕನ್ನಡಿ ಆಗಿವೆ.
ಹೀಗೆ ಜಗ ಹಿಂದೆಂದೂ ಕಾಣದ ಸ್ವತಂತ್ರವಾದ ನಿರ್ಮಲವಾದ ಗಾಳಿ ಬೆಳಕನ್ನು ಅನುಭವಿಸಿದ ಆದರಿಸಿದ ಅಪರೂಪದ ಯುಗ ಅದುವೇ ಬಸವಯುಗ.

ಸುನಿತಾ ಮೂರಶಿಳ್ಳಿ
ಧಾರವಾಡ
೯೯೮೬೪೩೭೪೭೪

Don`t copy text!