ಹೆಣ್ಣು ಅಬಲೆಯಲ್ಲ, ಅವಳೊಂದು ಮಹಾಶಕ್ತಿ..
ಪ್ರತಿವರ್ಷ ಸಾಂಕೇತಿಕವಾಗಿ ವಿಶ್ವದಾದ್ಯಂತ ಕ್ರಿಯಾಶೀಲವಾಗಿ ಎಲ್ಲರೂ ಆಚರಿಸುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯು ಎಂದಿನಂತೆ ಈ ವರ್ಷವೂ ಆಚರಿಸುತ್ತಿದ್ದೇವೆ.
ನಾಗರಿಕ ಸಮಾಜ ಮುಂದುವರಿಯಲು ಮಹಿಳೆಯರ ಪಾತ್ರ ಬಹುಮುಖ್ಯವಾದದ್ದು.
ಹೌದು, ಆದರೆ ಶತಮಾನದಿಂದ ಆಚರಿಸಿಕೊಂಡು ಬರುತ್ತಿರುವ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಣೆಯಿಂದ ನಾವೇನು ಪಡೆದುಕೊಂಡು ಬದಲಾಗಿದ್ದೇವೆ. ಹೆಣ್ಣು ಮಾಯೆಯಲ್ಲ, ಹೆಣ್ಣು ದೇವತೆ, ಹೆಣ್ಣು ಜೀವ ರತ್ನ ಎಂದು ಕರೆಯುವ ಈ ಸಮಾಜದಲ್ಲಿ ಮಹಿಳೆಗೆ ನಾವೆಷ್ಟು ಸುರಕ್ಷಿತಳು? ಎಂದು ಯೋಚಿಸಿದಾಗ ನಮ್ಮತನ ಅರಿವಾಗುತ್ತದೆ.
ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಎನ್ನುವುದು ಇನ್ನೂ ಮರೀಚಿಕೆಯಾಗಿಯೇ ಉಳಿದಿರುವುದು ಅಕ್ಷರಶಃ ಸತ್ಯ ಎನಿಸುತ್ತದೆ.
ಶತ – ಶತಮಾನಗಳಿಂದ ಅನಿಷ್ಟ ಪದ್ಧತಿ, ಲಿಂಗ ತಾರತಮ್ಯ, ಮೌಢ್ಯ ಸಂಪ್ರದಾಯಕ್ಕೆ ಬಲಿಯಾಗುತ್ತಿರುವ ಹೆಣ್ಣು ಗಂಡಿನ ದೌರ್ಜನ್ಯ, ಶೋಷಣೆಗಳಿಂದ ಜರ್ಜಿತಳಾಗಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.
ಹೌದು, ಈಗ ಕಾಲ ಬದಲಾಗಿದೆ. ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಹೆಣ್ಣು ಬಾಹ್ಯಾಕಾಶಕ್ಕೂ ಜಿಗಿದು ಬಂದಿದ್ದಾಳೆ. ‘ಎಷ್ಟು ಓದಿದರೇನು ಒಲೆಯ ಊದಲೇಬೇಕು’ ಎನ್ನುವುದನ್ನು ಗಟ್ಟಿಯಾಗಿ ಪ್ರತಿಭಟಿಸಿ ತನ್ನ ಸಮಾನತೆ ಸ್ವಾತಂತ್ರ್ಯ ಹಕ್ಕಿನ ಪರವಾಗಿ ದನಿಯಾಗಿದ್ದಾಳೆ. ಆತ್ಮಸ್ಥೈರ್ಯ ಮೂಲಕ ಇಡೀ ಜಗತ್ತೇ ಗೆಲ್ಲಬಹುದು ಎನ್ನುವುದನ್ನು ಸರಳವಾಗಿ ಕಲಿತುಕೊಂಡಿದ್ದಾಳೆ. ಈ ಬದಲಾದ ಪರಿಸ್ಥಿತಿ, ಮಹಿಳೆಯ ಧೈರ್ಯ, ಸಾಹಸ, ಸಾಧನೆ ಎಲ್ಲವೂ ಹೆಣ್ಣಿನ ಘನತೆ ಹೆಚ್ಚಿಸಿದರೆ, ಮತ್ತೊಂದೆಡೆ ಅಸಮಾನತೆ, ಹಿಂಸೆ, ಶೋಷಣೆಗಳಿಗೆ ಒಳಗಾಗಿ ಮತ್ತೆ ಮತ್ತೆ ಕುಗ್ಗುತ್ತಿದ್ದಾಳೆ, ಇದು ದುರ್ದೈವ ಅನ್ನಬಹುದೇನೋ! ಹೆಣ್ಣಿನ ಸಾಮರ್ಥ್ಯ,
ಆಕೆಯ ಬೆಳವಣಿಗೆಯೇ ಪುರುಷಾಧಿಪತ್ಯ ಸಮಾಜಕ್ಕೆ ಮುಳುವಾಯಿತೇನೋ ಎನ್ನುವ ಆತಂಕ ಸಹಜವಾಗಿ ಕಾಡುತ್ತದೆ.
ಹೆಣ್ಣು ಜಗದ ಕಣ್ಣು, ಜೀವ ರತ್ನ ಎಂದೆಲ್ಲ ಹೇಳುತ್ತಾ ಮಹಿಳೆಯ ಸಾಮರ್ಥ್ಯ, ಸೌಂದರ್ಯ ಗುರುತಿಸುವ ಪುರುಷರು ಮಹಿಳಾ ಸ್ವಾತಂತ್ರ್ಯ ಹಾಗೂ ಸಬಲೀಕರಣಕ್ಕಾಗಿ ಹಿಂಜರಿಯುತ್ತಾರೆ. ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ಹೆಣ್ಣನ್ನು ಕೀಳಾಗಿಸಿಕೊಂಡು ನಾನೇ ಸುಪೀರಿಯರ್ ಎಂದು ಹೇಳುವ ಸಂಕುಚಿತ ಮನೋಭಾವದ ಗಂಡಸರು ಮಹಿಳಾ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿದ್ದಾರೆ.
ಇನ್ನೂ ಸ್ತ್ರೀ ವಿರೋಧಿ ನಿಲುವನ್ನು ಸಮರ್ಥಿಸಿಕೊಂಡು ಪುರುಷ ಪ್ರಧಾನ ಸಮಾಜಕ್ಕೆ ಜೈ ಎಂದು ಹೋಗುವ ವಿದ್ಯಾವಂತ ಮಹಿಳೆಯರು ಈ ಸಾಲಿನಲ್ಲಿ ನಿಲ್ಲುತ್ತಾರೆ. ಅನಿಷ್ಟ ಆಚರಣೆಗಳಿಗೆ ಅವಿದ್ಯಾವಂತ ಮಹಿಳೆಯರು ಅಷ್ಟೇ ಅಲ್ಲದೇ ಸುಶಿಕ್ಷಿತರು, ಪ್ರಜ್ಞಾವಂತರು ಶೋಷಣೆಗೆ ಒಳಗಾಗುತ್ತಿರುವುದು ಸ್ತ್ರೀ ಜಾಗೃತಿಯ ವಿರೋಧಿ ಧೋರಣೆಯೂ ಹೌದು??
ಮಹಿಳೆಯ ಸ್ವತಂತ್ರ ದೃಷ್ಟಿಕೋನವೂ ಸಾಮಾಜಿಕ ಸಮಾನತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಹೆಚ್ಚಿಸುತ್ತದೆ. ಆದರೆ ಮಹಿಳೆಗೆ ಸಂಕುಚಿತ ದೃಷ್ಟಿಕೋನದಿಂದ ನೋಡುವ ಗಂಡು ಮಹಿಳಾ ವಿರೋಧಿಯಾಗಿ ಸ್ತ್ರೀ ಸ್ವಾತಂತ್ರ್ಯವನ್ನು ತುಳಿಯುವಂತೆ ಭಾಸವಾಗುತ್ತದೆ. ಇತ್ತೀಚೆಗೆ ಮಹಿಳಾ ದೌರ್ಜನ್ಯ ಅತಿಯಾಗಿ ದಾಖಲೆಯ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಪ್ರತಿ ಹೆಜ್ಜೆಗೂ ತಪ್ಪು ಹುಡುಕುವ ಗಂಡು ಮಹಿಳೆಯನ್ನು ಹಲವು ರೀತಿಯಲ್ಲಿ ದೌರ್ಜನ್ಯಕ್ಕೆ ಒಳಪಡಿಸಿ ದೈಹಿಕವಾಗಿ, ಮಾನಸಿಕವಾಗಿ ಘಾಸಿಗೊಳಿಸುವ ಅತ್ಯಾಚಾರ, ಕಿರುಕುಳ, ಆಸಿಡ್ ದಾಳಿ, ಜೀವ ಹತ್ಯೆ, ಮರ್ಯಾದೆ ಹತ್ಯೆ …ಇಂಥ ಹೀನ ಜೀವವಿರೋಧಿ ಸಂಸ್ಕೃತಿ ಹಿಂದೆಂದಿಗಿಂತಲೂ ಈಗ ಮಿತಿಮೀರಿದೆ. ಮಹಿಳೆಯ ವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಬೇಕಾದ ಸಮಾಜ ಹೆಣ್ಣಿಗೆ ಅಭಿವ್ಯಕ್ತಿ ಹಕ್ಕು, ವಸ್ತ್ರಸಂಹಿತೆ ಸೇರಿದಂತೆ ಹಲವು ಕಟ್ಟುಪಾಡುಗಳಿಗೆ ಗುರಿಯಾಗಿಸಿದೆ.
ಸರ್ಕಾರದ ದಾಖಲೆಗಳ ಪ್ರಕಾರ ಅತ್ಯಾಚಾರ, ಕೊಲೆ ಸೇರಿದಂತೆ ಅನೇಕ ಮಹಿಳಾ ದೌರ್ಜನ್ಯ ಪ್ರಕರಣಗಳ ಅಂಕಿ ಅಂಶಗಳು ನೋಡಿದರೆ ಈ ದೇಶ ಮಹಿಳೆಯರ ಸುರಕ್ಷತೆಯಲ್ಲಿ ವಿಫಲವಾಗಿದೆ ಎನ್ನುವುದು ಗೊತ್ತಾಗುತ್ತದೆ. ಇಡೀ ದೇಶವೇ ತಲ್ಲಣಗೊಳಿಸಿದ ದೆಹಲಿಯ ಗ್ಯಾಂಗ್ ರೇಪ್ ಪ್ರಕರಣ, ಕರ್ನಾಟಕದಲ್ಲಿ ದಾನಮ್ಮ, ಆಶಿಫಾ, ಹೈದ್ರಾಬಾದ್ ನಲ್ಲಿ ಪ್ರಿಯಾಂಕಾ ಅತ್ಯಾಚಾರ ಕೊಲೆ, ಹತ್ರಾಸ್ ಘಟನೆ ಸೇರಿದಂತೆ ದೇಶದಲ್ಲಿ ನೂರಾರು ದೌರ್ಜನ್ಯ ಪ್ರಕರಣಗಳು ದಿನನಿತ್ಯವೂ ವರದಿಯಾಗಿ ಈ ಸಮಾಜವನ್ನು ಮತ್ತಷ್ಟು ಕುಗ್ಗಿಸುತ್ತಿವೆ.
ಮನುಷ್ಯತ್ವ ಇಲ್ಲದವರು ಸಂಬಂಧ, ವಯಸ್ಸು ಎನ್ನದೇ ಹೆಣ್ಣಿನ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ಹೆಣ್ಣನ್ನು ಎಲ್ಲಾ ರೀತಿಯಲ್ಲಿ ಶೋಷಣೆಗೆ ಒಳಪಡಿಸುತ್ತಿದ್ದಾರೆ. ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ, ಅಪ್ರಾಪ್ತ ಬಾಲಕಿ, ಯುವತಿ, ವಿಧವೆಯರಿಗೆ ಅಪಹರಿಸುವುದು, ಅತ್ಯಾಚಾರ ಹತ್ಯೆ ಪ್ರಕರಣಗಳು, ತಂದೆ, ಅಣ್ಣತಮ್ಮರಿಂದಲೇ ಮರ್ಯಾದೆಗಾಗಿ ಹೆಣ್ಣಿನ ಕೊಲೆ ಮಾಡಿರುವ ಘಟನೆಗಳು ಮಾನವ ಸಮಾಜ ತಲೆತಗ್ಗಿಸುವಂತಿವೆ.
ಇನ್ನೂ ಮರ್ಯಾದೆಗೆ ಹೆದರಿಕೊಂಡು ಹೇಳಿಕೊಳ್ಳಲು ಸಾಧ್ಯವಾಗದೆ ನಾಲ್ಕು ಗೋಡೆಗಳ ಮಧ್ಯೆ ಕಮರಿಹೋದ ಪೈಶಾಚಿಕ ಕೃತ್ಯಗಳಂತೂ ಲೆಕ್ಕವೇ ಇಲ್ಲ. ಇಂತಹ ಅಮಾನವೀಯ ಘಟನೆಗಳು ನಿರಂತರವಾಗಿ ದಾಖಲಾಗುತ್ತಿದ್ದರೂ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಿದ್ದು ಬೆರಳೆಣಿಕೆಯಷ್ಟು. ಈ ರೀತಿಯ ಅನೇಕ ಘಟನೆಗಳು ನಮ್ಮ ಸುತ್ತಲೂ ನಡೆದಿರುತ್ತವೆ, ಆದರೂ ಅದನ್ನು ಪ್ರತಿರೋಧ ಮಾಡುವವರ ಸಂಖ್ಯೆ ಕೂಡ ತೀರ ಕಡಿಮೆ. ಹಾಗಾಗಿ ಹೆಣ್ಣನ್ನು ಕೇವಲ ಭೋಗದ ವಸ್ತುವನ್ನಾಗಿ ಗುರುತಿಸುವ ಮಟ್ಟಿಗೆ ನಾವು ಇಳಿಯಬಾರದು. ಹೆಣ್ಣು ತಾಯಿಯಾಗಿ, ತಂಗಿಯಾಗಿ, ಅಕ್ಕವಾಗಿ, ಸೊಸೆಯಾಗಿ, ಅತ್ತೆಯಾಗಿ ,ಸ್ನೇಹಿತೆಯಾಗಿ, ಹೆಂಡತಿಯಾಗಿ ಪುರುಷನ ಎಲ್ಲಾ ಸಾಹಸ, ಯಶಸ್ಸಿಗೆ ಕಾರಣೀಭೂತಳಾಗಿ ಬೆನ್ನೆಲುಬಾಗಿ ನಿಲ್ಲುವ ಹೆಣ್ಣು ಗಂಡಿನಷ್ಪೇ ಬಲಿಷ್ಠಳು ಹೌದು. ‘ಹೆಣ್ಣು ಅಬಲೆಯಲ್ಲ, ಹೆಣ್ಣು ಮಹಾಶಕ್ತಿ’ ಎನ್ನುವ ಕುವೆಂಪು ಅವರ ಮಾತು ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಮಹಿಳಾ ದಿನಾಚರಣೆ, ಮಹಿಳಾ ಗೋಷ್ಠಿಗಳು, ಅಮ್ಮಂದಿಯರ ದಿನ ಸೇರಿದಂತೆ ಹಲವು ದಿನಗಳಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಂಡು ಸಾಂಕೇತಿಕವಾಗಿ ಆಚರಿಸಿದರೆ ಅಷ್ಟೇ ಸಾಲದು. ಜಾತಿ ಲಿಂಗ ಧರ್ಮ ಎಲ್ಲವನ್ನೂ ಮೀರಿ ಮನುಷ್ಯತ್ವದ ನೆಲೆಯಲ್ಲಿ ಒಗ್ಗೂಡಿ ಸಂಘಟಿತರಾಗುವುದು ಮುಖ್ಯವಾಗಿದೆ. ವಿವಿಧ ಮಹಿಳಾ ದೌರ್ಜನ್ಯ ಪ್ರಕರಣ ಕಡಿವಾಣಕ್ಕೆ ಅಗತ್ಯವಾದ ಅಪರಾಧ ಕಾನೂನು ಕ್ರಮಗಳ ಬಗ್ಗೆ ಚರ್ಚಿಸಿ ಜಾಗೃತಿ ಮೂಡಿಸೋಣ.
ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಮಹಿಳಾ ರಕ್ಷಣೆಗಾಗಿ ಪೂರಕವಾದ ಸುರಕ್ಷತೆಯನ್ನು ಬಯಸೋಣ, ಮಹಿಳಾಪರ ಚಿಂತಕರು, ಸಂಘಟನೆಗಳು , ಹೋರಾಟಗಾರರು, ಕವಿ, ಬರಹಗಾರರನ್ನು ಈ ದಿಸೆಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಏನಾದರೂ ಹೊಸ ಕ್ರಮಗಳು ಸಿಗಬಹುದೆ? ನಿರೀಕ್ಷಿಸೋಣ, ಬನ್ನಿ ಬದಲಾಗೋಣ,
ಹೆಣ್ಣಿನ ಘನತೆಯ ಬದುಕಿಗೆ ಗೌರವಿಸೋಣ.
– ಬಾಲಾಜಿ ಕುಂಬಾರ ಚಟ್ನಾಳ
ಬೀದರ್
Cell: 9739756216