ನಾನು ಹೆಣ್ಣು ನಾನೇ ಹೆಣ್ಣು

 

ನಾನು ಹೆಣ್ಣು ನಾನೇ ಹೆಣ್ಣು

ಹೆಣ್ಣು ಕುಟುಂಬಕ್ಕೆ ಒಳ್ಳೆಯ ಮಗಳಾಗಿ,ಸೊಸೆಯಾಗಿ, ಅತ್ತೆಯಾಗಿ, ಮಮತೆಯ ಕರುಣಾಮೂರ್ತಿ ತಾಯಾಗಿ,ವಿದ್ಯೆಗೆ ಸರಸ್ವತಿ,ಸಂಪತ್ತಿಗೆ ಲಕ್ಷ್ಮೀ,ಶಕ್ತಿಗೆ ಪಾರ್ವತಿ.ಹೆಣ್ಣು ಆದಿಶಕ್ತಿ ,ಪರಾಶಕ್ತಿ ಎಂದು ಹೊಗಳುತ್ತದೆ ಜಗತ್ತು.ಇಂಥಹ ಎಲ್ಲ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಹೆಣ್ಣು ಕುಲದಲ್ಲಿ ಹುಟ್ಟಿದ್ದು ಸಾರ್ಥಕವೆನಿಸುತ್ತದೆ. ಹೆಣ್ಣು ಸಂಸಾರದ ಕಣ್ಣು, ಒಂದು ಸುಂದರ ಸುಖಿ ಕುಟುಂಬಕ್ಕೆ ಕಾರಣೀಕರ್ತಳಾದ ಹೆಣ್ಣಿನ ಪಾತ್ರ ಹಿರಿಯದು.ತಂದೆಗೆ ಯುವರಾಣಿಯಾಗಿ,ಶಾಲೆಯಲ್ಲಿ ಶಿಕ್ಷಕರ ಆದರ್ಶ ವಿದ್ಯಾರ್ಥಿಯಾಗಿ ಪತಿಯ ಮನಮೆಚ್ಚಿದ ಮಡದಿಯಾಗಿ,ಅತ್ತೆಗೆ ಮುದ್ದಿನ ಸೊಸೆಯಾಗಿ, ಮೈದುನಂದರಿಗೆ ಒಲವಿನ ಸ್ನೇಹಿತೆಯಾಗಿ,ಒಳ್ಳೆಯ ಶಿಕ್ಷಕಿಯಾಗಿ, ಮಕ್ಕಳಿಗೆ ಆದರ್ಶ ತಾಯಿಯಾಗಿದ್ದು ನನ್ನ ಸೌಭಾಗ್ಯವೇ ಸರಿ.ಸಂಚಿ ಹೊನ್ನಮ್ಮ ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವಿರಿ ಕಣ್ಣು ಕಾಣದಾ ಗಾವಿಲರಾ ಎಂದು ಹೇಳಿದ್ದಾಳೆ.ಹೆಣ್ಣು ಪುರುಷರಿಗಿಂತ ಯಾವುದರಲ್ಲೂ ಕಡಿಮೆಯೇನಿಲ್ಲ ಪ್ರತಿಯೊಂದು ಕ್ಷೇತ್ರದಲ್ಲೂ ಮುಂದಿರುವಳು.ಕಿತ್ತೂರು ಚನ್ನಮ್ಮ,ಝಾನ್ಸಿ ಲಕ್ಷ್ಮೀ ಬಾಯಿ ಬ್ರಿಟೀಷರ ವಿರುದ್ಧ ಹೋರಾಡಿದ ಕೆಚ್ಚೆದೆಯ ಮಹಿಳೆಯರಲ್ಲವೇ ಶೂರತನಕ್ಕೆ ಹೆಸರಾದ ಹೆಣ್ಣು ಅಬಲೆಯೇ? ಧರಣಿಯ ಗುಣಹೊಂದಿದವಳು,ಕರುಣೆಗೆ ಕಡಲಾದವಳು,ಭುವಿಯಿಂದ ಬಾನೆಡೆಗೆ ಹಾರಾಡಿದವಳು,ಮಂದ ಮಾರುತವನು ಜೀವನದಿ ಸೂಸುವವಳು,ಒಮ್ಮತ ಭಿನ್ನಮತ,ತಪ್ಪು ಒಪ್ಪುಗಳನ್ನು ತಿದ್ದಿಕೊಂಡು ಹೊಂದಿಕೊಂಡು ಹೋಗುವ ಗುಣಹೊಂದಿದ ನಾನು ಹೆಣ್ಣು ನಾನೇ ಹೆಣ್ಣು.

+ಪ್ರೇಮಾ ಕುಂಬಾರ ಸಂಕೇಶ್ವರ

Don`t copy text!