e-ಸುದ್ದಿ, ಮಸ್ಕಿ
ಪರಿಶಿಷ್ಟ ಜಾತಿಗಳಿಗೆ ಶೇ.15, ಮಾದಿಗ ಸಂಬಂದಿತ 53 ಉಪ ಜಾತಿಗಳಿಗೆ ಶೇ6, ಛಲವಾದಿ ಸಂಬಂಧಿತ 28 ಉಪ ಜಾತಿಗಳಿಗೆ ಶೇ5 ಇತರೇ ಸ್ಪಶ್ಯ ಜಾತಿಗಳಿಗೆ ಶೇ.3, ಅಲೆಮಾರಿ ಜನಾಂಗದವರಿಗೆ ಶೇ.1 ರಷ್ಟು ಮೀಸಲಾತಿಯನ್ನು ಹೆಚ್ಚಿಸುವಂತೆ ಹೋರಾಟ ಮಾಡಿದರು ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಮಾದಿಗ ಸಮುದಾಯದ ಮುಖಂಡರಾದ ದೊಡ್ಡಪ್ಪ ಮುರಾರಿ, ಸಿ.ದಾನಪ್ಪ ಮಲ್ಲಯ್ಯ ಬಳ್ಳಾ, ಹನುಮಂತಪ್ಪ ವೆಂಕಟಾಪೂರು ಅಸಮಾದಾನ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ದಲಿತ ಸಾಹಿತಿ ಸಿ.ದಾನಪ್ಪ ರಾಜ್ಯದಲ್ಲಿರುವ ಎಲ್ಲಾ ಪಕ್ಷಗಳು ಪರಿಶಿಷ್ಟ ಜಾತಿ ಜನರಿಗೆ ಅನ್ಯಾಯ ಮಾಡುತ್ತಿವೆ. ಚುನಾವಣೆ ಬಂದಾಗ ಮಾತ್ರ ಬೇಡಿಕೆ ಈಡೇರಿಸುವ ಮಾತನಾಡಿ ನಂತರ ಕಡೆಗಣೆಸುತ್ತಿದ್ದಾರೆ ಎಂದರು.
ಈಗಾಗಲೇ ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಮಾ.8 ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಾಗ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಆಯೋಗದವ ವರದಿಯನ್ನು ಅಂಗೀಕರಿಸುವ ಭರವಸೆ ನೀಡಿದ್ದರು. ಈಗ ಉಲ್ಟಾ ಹೊಡೆದು ಉಪ ಸಮಿತಿ ನೇಮಿಸುವ ಪ್ರಸ್ತಾಪವನ್ನು ಮುನ್ನಲೆಗೆ ತಂದು ವಿಳಂಬ ಮಾಡುತ್ತಿರುವದು ಕಂಡು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾ.30ರೊಳಗೆ ನಡೆಯುವ ಅಧಿವೇಶನದಲ್ಲಿ ನ್ಯಾ.ಸದಾಶಿವ ಆಯೋಗದವ ವರದಿಯ ಬಹಿರಂಗ ಚರ್ಚೆಗೊಳಪಡಿಸಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು.
ರಾಜ್ಯದಲ್ಲಿರುವ ಮೂರು ಪಕ್ಷದ ಮುಖಂಡರು ಜಾರಿಗೆ ತರಲು ಪ್ರಯತ್ನಿಸಬೇಕು. ಇಲ್ಲದಿದ್ದಲ್ಲಿ ಮಸ್ಕಿ ಉಪ ಚುನಾವಣೆಯಲ್ಲಿ ಮೂರು ಪಕ್ಷಗಳ ಮುಖಂಡರು ನಮ್ಮ ಕೇರಿಗೆ ಬರದಂತೆ ಜನರ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಮಲ್ಲಯ್ಯ ಬಳ್ಳಾ ಎಚ್ಚರಿಸಿದರು.
ಸುರೇಶ ಅಂತರಗಂಗಿ, ದುರುಗರಾಜ ವಟಗಲ್, ಸಿದ್ದು ಮುರಾರಿ, ವಸಂತ ಕುಮಾರ, ಅಶೋಕ ನಾಗರಬೆಂಚಿ, ಅಶೋಕ ಮುರಾರಿ, ಗಂಗಾಧರ ಮುರಾರಿ ಹಾಗೂ ಇತರರು ಇದ್ದರು.