ಸಕ್ಕರೆ ಬೊಂಬೆ


ಸಕ್ಕರೆ ಬೊಂಬೆ

ಅಕ್ಕರೆ ಮಾತಿನ
ಸಕ್ಕರೆ ಬೊಂಬೆಯು
ಪಕ್ಕಕೆ ಹತ್ತಿರ ಕುಳಿತಿಹಳು
ದಕ್ಕಿಸಿ ಕೊಳ್ಳಲು
ಪುಕ್ಕಟೆ ನಗುವಲಿ
ಮಿಕ್ಕಿದ ಜಾಣ್ಮೆಯ ಮೆರೆಯುತಲಿ

ನಿದಿರೆಯೆ ಬಾರದ
ಚದುರುವ ಕನಸಲಿ
ಅದರವ ಚುಂಬಿಸಿ ನಡೆದಿಹಳು
ಮದಿರೆಯ ಸುಖವನು
ಮಧುರತೆ ಒಲವಲಿ
ಕದಲದೆ ನಿಂತಿಹ ಬಿಂಬದಲಿ

ಒಲವಿನ ಗಂಧದ
ಚಲುವಲಿ ಮಿಂದಿಹ
ಬಲೆಯಲಿ ಸೆಳದಿಹ ಸುಂದರಿಯ
ಅಲರಿಕೆ ಪರಿಮಳ
ಕಲೆಯಲಿ ಪಸರಿಸಿ
ಮಾಲೆಯ ಹೆಣೆಯುತ ಕರೆದಿಹಳು

ತೆಕ್ಕೆಗೆ ಸೆಳೆಯಲು
ಸೊಕ್ಕಿದ ತನುವನು
ಬೆಕ್ಕಿನ ಹಾಗೆಯೆ ಹವಣಿಸುತ
ಹೆಕ್ಕುವ ಸುಳ್ಳನು
ಲೆಕ್ಕವೆ ಇಲ್ಲದೆ
ಕಕ್ಕುತ ಕುಳಿತಿಹ ಮೋಹನನ

-ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಬಿಜಾಪುರ

Don`t copy text!