ಅಕ್ಕ ಅಂಗಕ್ಕೆ ಬೋಧಿಸಿದ ಅರಿವಿನ ಸೂತ್ರ

ಅಕ್ಕ ಅಂಗಕ್ಕೆ ಬೋಧಿಸಿದ ಅರಿವಿನ ಸೂತ್ರ

ಅಂಗ ಕ್ರಿಯಾ ಲಿಂಗವ ವೇಧಿಸಿ,
ಅಂಗ ಲಿಂಗದೊಳಗಾಯಿತ್ತು,
ಮನ ಅರಿವ ಬೆರಸಿ ಜಂಗಮ ಸೇವೆಯ ಮಾಡಿ,
ಮನ ಗಮದೊಳಗಾಯಿತ್ತು, ಭಾವ ಗುರುಲಿಂಗದೊಳಗೆ ಬೆರಸಿ,
ಮಹಾ ಪ್ರಸಾದವ ಭೋಗಿಸಿ, ಭಾವ ಗುರುಲಿಂಗದೊಳಗಾಯಿತ್ತು,
ಚೆನ್ನ ಮಲ್ಲಿಕಾರ್ಜುನಾ, ನಿಮ್ಮ ಒಲುಮೆಯಿಂದ ಸಂದಳಿದು ಸ್ವಯಲಿಂಗವಾದೆನಯ್ಯಾ ಪ್ರಭುವೆ

ಅಂಗ ಕ್ರಿಯಾಲಿಂಗವ ವೇಧಿಸಿ ಅಂಗ ಲಿಂಗದೊಳಗಾಯಿತ್ತು

ಅಂಗದ ಕಣ ಕಣದಲ್ಲಿ ಅರಿವೇ ತುಂಬಿದೆ. ಅಂಗಕ್ಕೆ ಅರಿವಿನ ಪರಿಚಯವಿಲ್ಲ.’ಬೊಟ್ಟಿಡಲೆಡೆ ತೆರೆಹಿಲ್ಲದ ಘನ’ ವೆಂದು ಪ್ರಭು ಹೇಳುತ್ತಾರೆ. ಅರಿವಿನ ಘನದ ಪರಿಚಯವಿಲ್ಲದ ನಿಮಿತ್ತ ಶಬ್ದ ಬಡಿದರೆ ಅಂಗ ಮಂಗನಂತೆ ಕುಣಿಯುತ್ತದೆ. ರೂಪ ನೋಡಿದರೆ ನಾಯಿಯಂತೆ ಜೊಲ್ಲು ಸುರಿಸುತ್ತದೆ. ರುಚಿಗೂ, ಸ್ಪರ್ಶಕ್ಕೂ, ವಾಸನೆಗೂ ತನ್ನ ಅರಿವಿನ ಕಟ್ಟಳೆಯನ್ನು ಮೀರಿ ರಕ್ಕಸನಂತೆ ವರ್ತಿಸುತ್ತದೆ. ಕುಡಿಯದಿದ್ದರೂ ಅಂಗ ಅರಿವಿನ ಸ್ವಾಧೀನದಲ್ಲಿ ವಿರಮಿಸದೆ ಕುಡಿದಂತೆ ವರ್ತಿಸುತ್ತದೆ. ಅಂಗಕ್ಕೆ ಬಯಕೆಗಳಾದಗಲೆಲ್ಲ ; ತನ್ನ ಪದವಿ ಪೀಠ, ಸ್ಥಾನಮಾನಗಳನ್ನೆಲ್ಲ ಮರೆತು ಶಬ್ದ, ಸ್ಪರ್ಶ, ರೂಪ, ರಸ, ವಾಸನೆಯ ರುಚಿಗಾಗಿ ಬಯಕೆ ಮಾಡಿದಡೆ ವಾಲುತ್ತದೆ.
ಅಂಗದ ಕಣ ಕಣದಲ್ಲಿರುವ ಅರಿವಿನ ಘನ ಲಿಂಗವಾಗಿ ಅಂಗಕ್ಕೆ ಪಾಠ ಮಾಡಿದರೂ ಅರಿವಿನ ಪರಿಚಯ ಅಂಗಕ್ಕೆ ಇಲ್ಲದ ನಿಮಿತ್ತ ತಾನು ಬಯಸಿದೆಡೆಯಲೆಲ್ಲಾ ವಾಲುತ್ತದೆ. ಕಳ್ಳ, ಸುಳ್ಳ, ಭ್ರಷ್ಟ, ವಿಷಯ ಲಂಪಟ, ಶ್ರಿಮಂತ,ಬಡವ, ಭಿಕ್ಷುಕ, ರಾಜಕಾರಣಿ, ಪೀಠಾಧಿಪತಿ, ಸ್ವಾಮಿ, ವೇಶ್ಯೆ ಎಂಬ ಹಣೆಪಟ್ಟಿಯನ್ನು ಅಂಗ ಕಟ್ಟಿ ಕೊಳ್ಳುತ್ತದೆ. ಸಹಜ ಅರಿವಿನ ಕ್ರಿಯೆಯಿಂದ ದೂರ ಉಳಿಯುತ್ತದೆ.
ಅಂಗ ಅಂಗದಲ್ಲಿರುವ ಅರಿವಿನ ಕ್ರಿಯೆಯನ್ನು ಭೇದಿಸಿ ಅಂಗದ ಕಣ ಕಣದಲ್ಲಿರುವ ಆ ಅರಿವೇ ತಾನಾಗುವ ಶಿಕ್ಷಣ ತನಗೆ ಸಿದ್ದಿಸಿದ ನಿಮಿತ್ತ ಅಂಗ ಲಿಂಗದೊಳಗಾಯಿತ್ತು. ಅಂಗವೇ ಲಿಂಗವಾಯಿತ್ತು. ಅರಿವಿನ ಅಂಗವಾಯಿತ್ತು ಎಂದು ಅಂಗದಲ್ಲಿ ಕ್ರಿಯಾನಿರತ ಅರಿವಿನ ಪರಿಚಯವನ್ನು ಓದುಗರಿಗೆ ವಚನದ ಒಂದು ಸಾಲಿನ ಸೂತ್ರದ ಮೂಲಕ ಮಾಡಿಸಿದ್ದಾರೆ ಶರಣೆ ಅಕ್ಕಮಹಾದೇವಿ.
ಮನ ಅರಿವ ಬೆರಸಿ, ಜಂಗಮ ಸೇವೆಯ ಮಾಡಿ, ಮನ ಜಂಗಮ ಲಿಂಗದೊಳಗಾಯಿತ್ತು
ಅಕ್ಕ ಮಹಾದೇವಿಯವರು ಈ ವಚನದಲ್ಲಿ ಅಂಗ, ಲಿಂಗ, ಮನ, ಅರಿವು, ಜಂಗಮ, ಭಾವ, ಗುರು,ಪ್ರಸಾದ ಎನ್ನುವ ಎಂಟು ಶಬ್ದಗಳನ್ನು ಬಳಸಿದ್ದಾರೆ. ಅಂಗದಲ್ಲಿ ಏಳೂ ಶಬ್ದಗಳು ಅಡಕವಾಗಿವೆ.
ಅಂಗದಲ್ಲಿರುವ ಮನ ಅಂಗದ ಅರಿವನ್ನು ಬೆರಸಿ ವಸ್ತುಗಳನ್ನು ನೋಡಿದರೆ ಕಣ್ಣಿನಲ್ಲಿ ಆವರಿಸಿರುವ ವಸ್ತುವಿನ ಭ್ತಮೆ ಕಳಚಿ ಬೀಳುತ್ತದೆ. ಕಣ್ಣು ವಸ್ತುವಿನ ಮೂಲ ನೋಡಿ ಮುಟ್ಟದಿರಲು ಅಂಗಕ್ಕೆ ಆದೇಶ ರವಾನಿಸುತ್ತದೆ..
ಉದಾ : ಮನ‌ ಅಂಗದ ಅರಿವನ್ನು ಬೆರಸದೆ ಆಙರಣವನ್ನು ನೋಡಿದರೆ ಆಭರಣದ ಡಿಸೈನ್ ಮತ್ತು ಬಣ್ಣಕ್ಕೆ ಕಣ್ಣು ಮರುಳಾಗಿ ಆಭರಣ ಪಡೆಯುವಂತೆ ಅಂಗಕ್ಕೆ ಆದೇಶ ನೀಡುತ್ತದೆ. ಆಭರಣ ಪಡೆಯಲು ಮನ ಅಂಗಕ್ಕೆ ಕಳ್ಳ, ಸುಳ್ಳ, ಭ್ರಷ್ಟ, ಲಂಚಕೋರ, ಪ್ರಾಮಾಣಿಕ ಎಂಬ ನಾನಾ ವೇಷ ಹಾಕಿ ಆಭರಣ ಪಡೆಯುತ್ತದೆ. ಅಂಗದ ಅರಿವಿನ‌ ಪಾಠ ಅಂಗಕ್ಕೂ ಅಂಗದ ಮನಕ್ಕೂ ರುಚಿಸುವುದಿಲ್ಲ. ಹೀಗಾಗಿ ಕಳ್ಳ, ಭ್ರಷ್ಟ, ಮುಂತಾದ ಹಣೆಪಟ್ಟಿಯನ್ನು ಕಟ್ಟಿಕೊಳ್ಳತ್ತದೆ. ಜನಕ್ಕೆ, ಕೊರ್ಟಿಗೆ, ಸರ್ಕಾರಕ್ಕೆ ಮನವನ್ನು ನೋಡಲು ಬರುವುದಿಲ್ಲ. ಮನ ಮಾಡಿದ ಅಪರಾಧಕ್ಕೆ ಅಂಗಕ್ಕೆ ಶಿಕ್ಷೆ ಕೊಡುತ್ತಾರೆ. ಮನದ ಹಗರಣ ದಿಂದಾಗಿ ಅರಿವಿನ ಅಂಗಕ್ಕೆ ಶಿಕ್ಷೆಯಾಗುತ್ತದೆ.
ಅಂಗದ ಮನವು ಅಂಗದ ಅರಿವನ್ನು ಬೆರಸಿ ಆಭರಣ ನೋಡಿದರೆ ಅದೊಂದು ಹಳದಿ ಬಣ್ಣದಿಂದ ಕೂಡಿದ ಲೋಹದ ಡಿಸೈನ್. ಡಿಸೈನ್, ಬಣ್ಣ, ಮತ್ತು ಲೋಹಕ್ಕೆ ಮರುಳಾಗಿ ಅದನ್ನು ಪಡೆಯಲು ಪ್ರಾಮಾಣಿಕವಾಗಿ ಹಗಲಿರುಳು ದುಡಿಯಬೇಕೆ ? ಕಳ್ಳನಾಗಿ ಮತ್ತೊಂದು ಅಂಗವನ್ನು ಕೊಂದು ಅಂಗದ ಮೇಲಿದ್ದ ಆಭರಣ ಪಡೆಯಬೇಕೆ ? ಭ್ರಷ್ಟಾಚಾರಿಯಾಗಿ ಲಂಚ ಪಡೆದು ಆಭರಣ ಕೊಳ್ಳಬೇಕೆ ? ಎನ್ನುವ ಅರಿವಿನ ಪಾಠ ಮನಕ್ಕೆ ಮನದಟ್ಡಾಗುತ್ತದೆ. ಆಗ ಮನ ಅರಿವಿನ ಸುಳಿವನ್ನು ಛಲದಿಂದ ಪಾಲಿಸಿ ಜಂಗಮವೆಂದು ಹೆಸರು ಪಡೆಯುತ್ತದೆ. ಅಂಗದ ಮೂಲಕ ಅರಿವಿನ ಸೇವೆಯ ಮಾಡಿದ ಮನ ಅರಿವಿನ ಅಂಗದೊಳಗೆ ಬೆರೆತು ಲಿಂಗಾಂಗವಾಗುತ್ತದೆ. ಜಂಗಮ ಲಿಂಗವಾಗುತ್ತದೆ.

ಭಾವ ಗುರುಲಿಂಗದೊಳಗೆ ಬೆರಸಿ, ಮಹಾಪ್ರಸಾದವ ಭೋಗಿಸಿ, ಭಾವ ಗುರು ಲಿಂಗದೊಳಗಾಯಿತ್ತು
ಅಂಗದೊಳಗಿದ್ದ ಭಾವ ಅಂಗವನ್ನು ಒಮ್ಮೆ ಅರುಳೊಸುತ್ತದೆ ಮತ್ತೊಮ್ಮೆ ಕೆರಳಿಸುತ್ತದೆ. ಉದಾಃ ಎಂಟ್ಹತ್ತು ದಿನಗಳಿಂದ ಉಪವಾಸವಿದ್ದ ಅಂಗವನ್ನು ಮತ್ತೊಂದು ಅಂಗ ಭಾವದಿಂದ ಮನೆಯಲ್ಲಿ ಕರೆದು ಊಟ ನೀಡಿ ತಾನು ದಾನಿಯಾಗಿ ಹಸಿದ ಅಂಗವನ್ನು ಆದರಿಸುತ್ತದೆ. ಹಸಿವಿನಿಂದ ಸಂತೃಪ್ತಿ ಹೊಂದಿದ ಅಂಗ ಊಟ ನೀಡಿದ ಅಂಗವನ್ನು ಭಾವದಿಂದ ಹೊಗುಳುತ್ತದೆ. ಅನ್ನದ ಹಸಿವು ತೀರಿದ ನಂತರ ಅಂಗಕ್ಕೆ ಆಭರಣದ ಹಸಿವು, ಆಭರಣ ಹೊತ್ತ ಅಂಗದೊಂದಿಗೆ ಭೋಗಿಸುವ ಹಸಿವು ಉಂಟಾಗುತ್ತದೆ. ಅನ್ನ‌ ನೀಡಿದ ಅಂಗ ಇದನ್ನು ಸಹಿಸುವುದಿಲ್ಲ. ಅಂಗದ ಭಾವ ದುರ್ಭಾವವಾಗಿ ವಿಷಯದ ಹಸಿವು ಹೊತ್ತು ಅಂಗವನ್ನು ಕೊಲೆ ಮಾಡುತ್ತದೆ. ಹಸಿದ ಅಂಗಕ್ಕೆ ಅನ್ನ ನೀಡಲು ಕಾರಣವಾದ ಅಂಗದ ಭಾವ, ನಿರಪರಾಧಿ ಅಂಗಕ್ಕೆ ಕೊಲೆಗಡುಕನ ಪಟ್ಟ ಕಟ್ಟುತ್ತದೆ. ಹಾಗೆಯೇ ನಿರಪರಾಧಿ ಅಂಗವನ್ನು ಕೊಲೆ ಮಾಡುತ್ತದೆ.
ಇಂತಹ ಅಂಗದ ಭಾವವನ್ನು ಅಂಗದಲ್ಲಿಯೇ ಇರುವ ಅರಿವೆಂಬ ಗುರುವಿನಲ್ಲಿ ಬೆರಸಿ ಅರಿವಿನಿಂದ ನೋಡಿದಾಗ ಅನ್ನದ ಹಸಿವು, ಆಭರಣದ ಹಸಿವು ತನ್ನಂತೆ ಇರುವ ಅಂಗದೊಂದಿಗೆ ಕೂಡಿ ಸುಖಿಸುವ ಮೂರು ವಿಧದ ಹಸಿವು ಅಂಗದ ಮನಕ್ಕೆ ಬರುತ್ತದೆ. ಇದಕ್ಕೆ ಕಾರಣವಾದದ್ದು ಭಾವ. ಅಂಗದ ಭಾವವನ್ನು ಅಂಗದ ಅರಿವೆಂಬ ಗುರುವಿನಲ್ಲಿ ಬೆರಸಿದಾಗ, ಗುರುವು ಈ ಮೂರು ಭಾವಗಳನ್ನು ಅರಿವಿನ ಪ್ರಸಾದದಿಂದ ಸ್ವೀಕರಿಸಿ ನಿರ್ಭಾವಗೊಳಿಸಿ ಗುತುಲಿಂಗವಾಗಿ ಉಳಿಯುತ್ತಾನೆ. ಈ ಪಾಠವನ್ನು ತಾನು ಭೇದಿಸಿಕೊಂಡು, ಭೋಗಕ್ಕೆ ಕಾರಣವಾದ ಅಂಗಕ್ಕೂ ಭೋದಿಸಿ ತನ್ನಂತೆ ಮಾಡಿಕೊಳ್ಳುತ್ತಾನೆ.
ಅನ್ನ ನೀಡಿದ ಅಂಗ ಜೇಲಿಗೆ ಹೋಗುವುದಿಲ್ಲ. ಭೋಗಕ್ಕೆ ಕಾರಣವಾದ ಅಂಗವೂ ಸಾಯುವುದಿಲ್ಲ. ಇದಕ್ಕೆ ಕಾರಣವಾದ ಅಂಗದೊಳಗಿದ್ದ ಭಾವ ಸತ್ತು ನಿರ್ಭಾವವಾಗುತ್ತದೆ. ಆ ಭಾವವೇ ಗುರುಲಿಂಗವಾಗುತ್ತದೆ.
ಚನ್ನ ಮಲ್ಲಿಕಾರ್ಜುನಾ ನಿಮ್ಮ ಒಲುಮೆಯಿಂದ ಸಂದಳಿದು ಸ್ವಯಂ ಲಿಂಗವಾದೆನೆಯ್ಯಾ
ಕಲ್ಯಾಣದ ಶರಣರ ಅನುಭಾವ ಗೋಷ್ಟಿಯಲ್ಲಿ ನಿಂತ ಅಕ್ಕಳನ್ನು ಅಲ್ಲಮಪ್ರಭು ನೀನು ಬೆತ್ತಲೆಯಾದದ್ದು ಯಾಕೆ ? ನಿನ್ನ ಅಂಗದ ಅರಿವಿನ ಅನುಭವವನ್ನು ಪಡೆದುಕೊಂಡ ಬಗೆ ಹೇಗೆ ? ಎಂಬುದನ್ನು ಹೇಳಿದರೆ ಮಾತ್ರ ಹೇಳಿದರೆ ಮಾತ್ರ ನಿನಗೆ ಇಲ್ಲಿ ಸ್ಥಾನ. ಇಲ್ಲದಿದ್ದರೆ ನಡೆಯಾಚೆ ಎನ್ನುವ ಪ್ರಭುವಿನ ಕಾಠಿಣ್ಯದ ನುಡಿಗೆ ಅಕ್ಕ ಮಹಾದೇವು ತನ್ನ ಸ್ವಾನುಭವದ ವಚನದ ಮೂಲಕಶರಣ ಸಮುಹಕ್ಕೆ ಉತ್ತರವಿತ್ತಿದ್ದಾಳೆ. ಹಾಗೆಯೇ ಪ್ರಪಂಚದ ಅಂಗಗಳಿಗೆ ಅರಿವಿನ ಸೂತ್ರಕೆಡುವ ಬಿತ್ತರಿಸಿದ್ದಾಳೆ. ತನ್ನ ಅಂಗದ ಅರಿವಿಗೆ ಚನ್ನಮಲ್ಲಿಕಾರ್ಜುನ ಎಂದು ನಾಮಕರಣ ಮಾಡಿ , ಸಾವ ಕೆಡುವ ಗಂಡನನ್ನು ಒಲೆಯೊಳಗಿಕ್ಕಿ ಒಲುಮೆಯಿಂದ ಅರಿವಿನ ಗಂಡನನ್ನು ಕೂಡಿದ್ದಾಳೆ. ಅಜ್ಞಾನದ ಸಂದಳಿದು ಸ್ವಯಂ ಅರಿವಿನ ಲಿಂಗವಾದ ಬಗೆಯನ್ನು ಅಕ್ಕ ವಚನದ ಮೂಲಕ ಪ್ರಭುವಿಗೆ ವಿವರಿಸಿದ್ದಾಳೆ.


ಬಸವರಾಜ ಸ್ವಾಮಿ, ರಾಯಚೂರು

——————————————————————————

ಶ್ರೀ ಬಸವರಾಜ ಸ್ವಾಮಿ. ರಾಯಚೂರಿನವರು. ಪ್ರತಿಷ್ಟಿತ

” ಸುದ್ದಿಮೂಲ” ಪತ್ರಿಕೆಯ ಸಂಪಾದಕರು. ನನ್ನಂತ ಅನೇಕರನ್ನು ಬೆಳಸಿದ ಪತ್ರಿಕೆ ಸುದ್ದಿಮೂಲ. ಆ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನೇಕ ಯುವಕರು ಇಂದು ನಾಡಿನ ಪ್ರಮುಖ ರಾಜ್ಯ ಮಟ್ಟದ ವಿಜಯವಾಣಿ, ಪ್ರಜಾವಾಣಿ, ವಿಜಯ ಕರ್ನಾಟಕ, ಕನ್ನಡ ಪ್ರಭ ಮುಂತಾದ ಪತ್ರಿಕೆ ಹಾಗೂ ಟಿ.ವಿ.ಗಳಲ್ಲಿ ವರದಿಗಾರರಾಗಿ, ಸ್ಥಾನಿಕ‌ ಸಂಪದಾಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸುದ್ದಿಮೂಲ ಪತ್ರಿಕೆಯನ್ನು ರಾಯಚೂರು ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗೂ ತಲುಪಿಸಿದ ಕೀರ್ತಿ ಶ್ರೀಬಸವರಾಜ ಸ್ವಾಮಿಯವರ ಹೆಗ್ಗಳಿಕೆಯಾಗಿದೆ. ಮನುಷ್ಯನ ಮೈಮೇಲೆ ಹರಕು ಬಟ್ಟೆ ಇದ್ದರೆ ಚಿಂತೆ ಇಲ್ಲ. ಕೈಯಲ್ಲಿ ಒಂದು ಪತ್ರಿಕೆ ಇರಲಿ ಎಂಬ ಸದಾಶಯ ಬಸವರಾಜ ಸ್ವಾಮಿಯವರದು. ಕೆಲ ವರ್ಷಗಳಿಂದ ಡಬ್ಬರಮೇಡುವಿನ ಶ್ರೀವಿದ್ಯಾನಂದ ಶರಣರ ಸಂಪರ್ಕ, ಬೆನಕನಳ್ಳಿಯ ಶ್ರೀ ದೇವಾನಂದ ಶರಣರ ಒಡನಾಡ ಬಸವರಾಜಸ್ವಾಮಿಯವರು ಆಧ್ಯಾತ್ಮದ ಉತ್ತುಂಗ ತಲುಪಿ ಶರಣರ ವಚನಗಳ ಸೂತ್ರಗಳಿಗೆ ವಾಖ್ಯಾನ ಬರೆದು‌ ಸಾಮಾನ್ಯರು ಅರಿಯುವಂತೆ ಮಾಡಿದ್ದಾರೆ. ಬಸವರಾಜ ಸ್ವಾಮಿಯವರು ನನ್ನನ್ನು ಪತ್ರಿಕೆಗೆ ಬರೆಯುವಂತೆ ಪ್ರೇರೆಪಿಸಿದ್ದಲ್ಲದೆ ನಾನ್ನಿಂದ ‌ಪತ್ರಿಕೆ ನಡೆಸುವಂತೆ ಮಾಡಿಸಿದವರು. ಇವರು ನನ್ನ ಅಂತರಗ ಗುರುಗಳು. ಇನ್ನೂ ಮುಂದೆ e-ಸುದ್ದಿ ಯಲ್ಲಿ‌ ವಚನ ವಿಶ್ಲೇಷಣೆ ಮಾಡಲಿದ್ದಾರೆ. ಬಸವರಾಜ ಸ್ವಾಮಿಯವರಿಗೆ ಶರಣು ಶರಣಾರ್ಥಿ🙏🙏

ವೀರೇಶ ಸೌದ್ರಿ, ಮಸ್ಕಿ

Don`t copy text!