ನಿಜ ಜಂಗಮ ಷಣ್ಮುಖ ಶಿವಯೋಗಿ

ನಿಜ ಜಂಗಮ ಷಣ್ಮುಖ ಶಿವಯೋಗಿ

ಶರಣ ಭೂಮಿಯಾದ ಕಲಬುರ್ಗಿಯು ಹಲವಾರು ಶರಣರು ಸಂತರು, ಕವಿಗಳು, ಸಾಹಿತಿಗಳನ್ನು ನಾಡಿಗೆ ಅರ್ಪಿಸಿದ ಪುಣ್ಯ ಭೂಮಿಯಾಗಿದೆ. ಕಡಕೋಳ ಮಡಿವಾಳಪ್ಪ, ಶರಣಬಸಪ್ಪ, ಖೈನೂರಿನ ಕೃಷ್ಣಪ್ಪ, ಚನ್ನೂರಿನ ಜಲಾಲಸಾಬ್ ಹೀಗೇ ಇನ್ನೂ ಅನೇಕರು ಇಲ್ಲಿ ಆಗಿ ಹೋಗಿದ್ದಾರೆ. ಅಖಂಡೇಶ್ವರರ ಕೃಪಾಶೀರ್ವಾದದಿಂದ ಸಗರನಾಡಿನ ಜೇವರ್ಗಿಯಲ್ಲಿ 1639 ರಲ್ಲಿ ಶಿವರಾತ್ರಿಯ ದಿನದಂದು ಜನಿಸಿದ ಷಣ್ಮುಖ ಶಿವಯೋಗಿಗಳು ಬಸವೋತ್ತರ ಯುಗದ ಶರಣರಲ್ಲೇ ಅಗ್ರಪಂಕ್ತಿಯಲ್ಲಿ ನಿಲ್ಲುವರು. ಇವರ ತಾಯಿ ದೊಡ್ಡಮಾಂಬೆ ಹಾಗೂ ತಂದೆ ಮಲ್ಲಶೆಟ್ಟೆಪ್ಪ. ಇವರು ಎರಡು ವರ್ಷ ದವರಿದ್ದಾಗಿಂದಲೂ ಮಠದತ್ತಲೇ ಓಡುತ್ತಿದ್ದು ಅಲ್ಲಿ ಅಖಂಡೇಶ್ವರರ ಸನ್ನಿಧಿಯಲ್ಲಿ ಅಪೂರ್ವ ವಾದ ಆನಂದವನ್ನು ಅನುಭವಿಸುತ್ತಿದ್ದರು. ಐದನೇ ವರ್ಷಕ್ಕೆ ಅಖಂಡೇಶ್ವರ ಗುರುಗಳ ಹತ್ತಿರ ಅವರ ವಿದ್ಯಾಭ್ಯಾಸ ಪ್ರಾರಂಭವಾಯಿತು. ಅವರ ಬಾಲ್ಯ ಅಚ್ಚರಿಯಾಗುವ ರೀತಿಯಲ್ಲಿ ಅಸಾಮಾನ್ಯವಾದ ಅನುಭವಗಳಿಂದ ಕೂಡಿತ್ತು. ಬೆಳೆಯ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಇವರ ಭಕ್ತಿ ಭಾವದೊಂದಿಗಿನ ಅನುಸಂಧಾನ, ಧ್ಯಾನ ಯೋಗದ ಹಂಬಲ ಐದು ವರ್ಷದವರಿದ್ದಾಗಲೇ ಕಾಣತೊಡಗಿದ್ದವು. ಅಪೂರ್ವ ವಿದ್ವತ್ತು, ಪಾಂಡಿತ್ಯ ಹೊಂದಿದ ಶಿವಯೋಗಿಗಳು ಎಂಟು ವರ್ಷದವರಿದ್ದಾಗಲೇ ಪ್ರವಚನಗಳನ್ನು ಪ್ರಾರಂಭಿಸಿದ್ದು ಅಚ್ಚರಿಯ ಸಂಗತಿ. ಅಧ್ಯಯನದಲ್ಲಿ ಅವರಿಗಿರುವ ಅಪಾರವಾದ ಆಸಕ್ತಿ ಶ್ರದ್ಧೆಯನ್ನು ಕಂಡುಕೊಂಡ ಅಖಂಡೇಶ್ವರರು ಅವರಿಗೆ ವಚನಗಳ ಕಟ್ಟು, ಬಸವಪುರಾಣ ಹಾಗೂ ಕೆಲವು ಕಾವ್ಯಗಳು, ಉಪನಿಷತ್ತುಗಳು ಎಲ್ಲವನ್ನೂ ಒದಗಿಸಿದರು. ಅವರನ್ನು ಒಬ್ಬ ಸಮರ್ಥವಾದ ಜಂಗಮರಾಗಿ ಶಿವಯೋಗಿಯಾಗಿ ಬೆಳೆದು ನಿಲ್ಲುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುವರು. ಆದ್ದರಿಂದ ಶಿವಯೋಗಿಗಳು ಮುಂದೆ ಅವರ ಹೆಸರನ್ನೆ ತಮ್ಮ ವಚನಗಳ ಅಂಕಿತನಾಮವನ್ನಾಗಿ ಆರಿಸಿಕೊಳ್ಳುತ್ತಾರೆ.

ಇವರು 717 ವಚನ, 41 ಚೌಪದಿಗಳುಳ್ಳ ಜೋಗುಳ ಪದ, 7 ಷಟ್ಪದಿಯುಳ್ಳ ಪಂಚಸಂಜ್ಞೆಗಳ ಪದ ಹಾಗೂ ಭಾಮಿನಿ ಷಟ್ಪದಿಯಲ್ಲಿ ನಿರಾಳ ಸದ್ಗುರು ಸ್ತೋತ್ರ ಇವೆಲ್ಲವನ್ನೂ ರಚಿಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿರುವರು. ಷಣ್ಮುಖ ಸ್ವಾಮಿಗಳು ತಮ್ಮ ಗ್ರಂಥಕ್ಕೆ ‘ತೂರ್ಯ ನಿರಾಲಂಬ ಶರಣನ ಅರುಹಿನ ಷಟಸ್ಥಲ ವಚನ ‘ ಎಂದು ಹೆಸರಿಟ್ಟಿದ್ದಾರೆ. ಈ ಪದ ಅವರ ಅನುಭಾವಿಕ ನೆಲೆಯನ್ನು ಅಭಿವ್ಯಕ್ತಗೊಳಿಸುತ್ತದೆ. ಇವರು ಷಟಸ್ಥಲ ಕ್ಕನುಗುಣವಾಗಿ ವಚನಗಳನ್ನು ಸಂಯೋಜಿಸಿದ್ದು ಎಲ್ಲವೂ 12ನೇ ಶತಮಾನದ ಬಸವಾದಿ ಶರಣರ ಪ್ರಭಾವಲಯದಲ್ಲಿ ಉಲ್ಲೇಖಿತವಾಗಿವೆ. ಇವರ ವಚನಗಳಲ್ಲಿ ಅನುಭಾವ, ತತ್ವ, ಸಾಹಿತ್ಯ ಮೂರೂ ಮುಪ್ಪುರಿಗೊಂಡಿವೆ. ಷಟಸ್ಥಲವು ಕೇವಲ ಸಾಧನಾ ಪಥ ಆಗಿರದೆ ಒಂದು ಸಿದ್ಧಾಂತವಾಗಿ ವಚನಗಳಲ್ಲಿ ಸ್ಪಷ್ಟತೆಯನ್ನು ಪಡೆದಿದೆ. ಶರಣನ ನಿಲುವು ಅನುಭಾವಿಯ ಇರುವು ಎಲ್ಲವೂ ಇಲ್ಲಿ ವ್ಯಕ್ತವಾಗಿವೆ. ಬಸವಣ್ಣನವರ ಬಗೆಗಿನ ಅವರ ಅಗಾಧವಾದ ಪ್ರೀತಿ, ಪ್ರೇಮ,ಭಕ್ತಿ ಅನೇಕ ವಚನಗಳಲ್ಲಿ ವ್ಯಕ್ತವಾಗಿದೆ.

ಬಸವನ ನಾಮವು ಕಾಮಧೇನು ಕಾಣಿರೊ,
ಬಸವನ ನಾಮವು ಕಲ್ಪವೃಕ್ಷ ಕಾಣಿರೋ,
ಬಸವನ ನಾಮವು ಚಿಂತಾಮಣಿ ಕಾಣಿರೋ, ಬಸವನ ನಾಮವು ಪರುಷದಖನಿ ಕಾಣಿರೋ,
ಇಂತಪ್ಪ ಬಸವ ನಾಮಾಮೃತವ ಎನ್ನ ಜಿಹ್ವೆಯ ತುಂಬಿ ಹೊರಸೂಸಿ ಮನವ ತುಂಬಿತ್ತು
ಆ ಮನತುಂಬಿ ಹೊರಸೂಸಿ ಭಾವ ತುಂಬಿತ್ತು ಭಾವ ತುಂಬಿ ಹೊರಸೂಸಿ ಸಕಲ ಕರಣೇಂದ್ರಿಯಗಳ ತುಂಬಿತ್ತು ಕರಣೇಂದ್ರಿಯಗಳು ತುಂಬಿ ಹೊರಸೂಸಿ ಸರ್ವಾಂಗದ ರೋಮಕುಳಿಗಳನ್ನೆಲ್ಲಾ ವೇಧಿಸಿತ್ತಾಗಿ ನಾನು ಬಸವಾಕ್ಷರವೆಂಬ ಹಡಗನ್ನೇರಿ ಬಸವಾ ಬಸವಾ ಬಸವಾ ಎಂದು ಭವಸಾಗರವ ದಾಂಟಿದೆ ನಯ್ಯಾ ಅಖಂಡೇಶ್ವರಾ

ಎಂದು ಬಸವ ಎಂಬ ನಾಮದಿಂದ ಭವಸಾಗರವ ದಾಟಿದೆ ಎಂದು ಭಕ್ತಿಪರವಶರಾಗಿ ಕೊಂಡಾಡುತ್ತಾರೆ.

ಭಕ್ತಿ, ಜ್ಞಾನ, ವೈರಾಗ್ಯ, ಜಪ, ತಪ, ಅನುಷ್ಠಾನ ಗಳಿಂದ ಯೋಗದ ತೂರ್ಯಾತೀತ ಅನುಭವಗಳನ್ನು ಕೂಡ ವಚನಗಳಲ್ಲಿ ಉಲ್ಲೇಖಿಸಿದ್ದಾರೆ.
ಭಾವತೀವ್ರತೆ ಯಿಂದ ಕೂಡಿದ್ದು ಕಾವ್ಯದ ಲಯ ಕೂಡಾ ಅವರ ವಚನಗಳಲ್ಲಿ ತುಂಬ ಸುಂದರವಾಗಿ ಅಭಿವ್ಯಕ್ತವಾಗಿದೆ.

ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ, ಇಂದ್ರಿಯಗಳೆಂಬ ಶಾಖೆಗೆ ಹಾರಿ,ವಿಷಯಗಳೆಂಬ ಹಣ್ಣು ಫಲಗಳ ಗ್ರಹಿಸಿ, ಭವದತ್ತ ಮುಖವಾಗಿ ಹೋಗುತ್ತಿದೆ ನೋಡಾ.
ಈ ಮನವೆಂಬ ಮರ್ಕಟನ ನಿಮ್ಮ ನೆನಹೆಂಬ ಪಾಶದಲ್ಲಿ ಕಟ್ಟಿ ಎನ್ನನುಳುಹಿಕೊಳ್ಳಯ್ಯಾ ಅಖಂಡೇಶ್ವರಾ

ಈ ವಚನದಲ್ಲಿ ಭಾವತೀವ್ರತೆ ಜೊತೆಗೆ ಕಾವ್ಯದ ಲಯವೂ ಮೇಳೈಸಿದೆ.

ಇವರು ಪುರಾಣ ಪ್ರವಚನಗಳ ಮೂಲಕ ಸಾಮಾಜಿಕ ಆಧ್ಯಾತ್ಮಿಕ ವಿಷಯಗಳನ್ನು ಚರ್ಚಿಸುವುದಲ್ಲದೆ ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ತಡೆಯುವ ಹಾಗೂ ಮೌಢ್ಯಗಳನ್ನು ದೂರ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದರು.

ಕುಷ್ಠರೋಗಿಯನ್ನು ಗುಣಮುಖರನ್ನಾಗಿ ಮಾಡಿದ್ದು ,ಮೂಕನಿಗೆ ಬಾಯಿ ಬರುವಂತೆ ಮಾಡಿದ್ದು, ಮೊಸಳೆ ಬಾಯಿಂದ ಭಕ್ತನನ್ನು ರಕ್ಷಿಸಿದ್ದು ಹೀಗೆ ಸಾಕಷ್ಟು ಪವಾಡಗಳು ಇವರ ಚರಿತ್ರೆಯಲ್ಲಿ ಕಂಡುಬರುವ ವು.

ಮತ್ತೊಂದು ಅಲೌಕಿಕವಾದ ಘಟನೆ ಇಲ್ಲಿ ಕಂಡುಬರುವುದು.
ಒಂದು ದಿನ ವೃದ್ಧನೊಬ್ಬ ಒಂದು ಎತ್ತಿನ ಜೊತೆಗೆ ಬಂದು ಇಬ್ಬರನ್ನು ನೋಡಿಕೊಳ್ಳುವಿರಾ ಎಂದು ಶಿವಯೋಗಿಗಳಿಗೆ ಕೇಳಿ ಮಾತು ತೆಗೆದುಕೊಂಡು ತಾನು ಅದೃಶ್ಯ ಆಗುವನು. ಆದರೆ ಆ ಎತ್ತು ಮಾತ್ರ ಅಲ್ಲಿಯೆ ಇರುವದು. ಅದು ಒಂದು ದಿನ ಅಖಂಡೇಶ್ವರ ಗದ್ದುಗೆ ಪಕ್ಕದಲ್ಲೇ ಬಿದ್ದು ಒದ್ದಾಡುತ್ತಿದ್ದು ಶಿವಯೋಗಿಗಳ ಪಾವನ ಹಸ್ತದಿಂದ ಎದ್ದು ಓಡಾಡಲು ಶುರು ಮಾಡಿತು. ಅದು ನಿತ್ಯ ಅಖಂಡೇಶ್ವರ ಪೂಜೆ ಸಮಯದಲ್ಲಿ ಮಾತ್ರ ತಪ್ಪದೆ ಗದ್ದುಗೆ ಮುಂದೆ ಬಂದು ನಿಲ್ಲುತ್ತಿತ್ತು. ನಂತರ ಅಲ್ಲಿಯೆ ಸುತ್ತಲೂ ಓಡಾಡಿಕೊಂಡಿರುತ್ತಿತ್ತು. ಎಲ್ಲರೂ ಅದನ್ನು ಪೂಜ್ಯ ಭಾವನೆಯಿಂದ ನೋಡುತ್ತಿದ್ದರು. ಶಿವಯೋಗಿಗಳು ಇದನ್ನು ಮಾತ್ರ ಸುಮ್ಮನೆ ಏಕೆ ಬಿಡಬೇಕೆಂದು ಅದಕ್ಕೆ ಹೊಲದಲ್ಲಿ ದುಡಿಸಲು ಹೇಳುವರು. ಆದರೆ ಯಾರೂ ಅದರಿಂದ ದುಡಿಸಲು ಒಪ್ಪದಾದಾಗ ಅದಕ್ಕೆ ಏನಾದರೂ ಕಾಯಕ ಕೊಡೋಣ ಎಂದು ಕಂತೆ ಭಿಕ್ಷೆ ಎತ್ತಲು ಕಳಿಸುವರು. ಅದರ ಕಾಲಿಗೆ ಜಂಗನ್ನು ಕಟ್ಟಿ , ನಿತ್ಯ ಅದರ ಕೊರಳಿಗೆ ಒಂದು ಜೋಳಿಗೆ ಹಾಕಿ ಬೆನ್ನು ತಟ್ಟಿ ಕಂತೆ ಭಿಕ್ಷೆ ತೆಗೆದುಕೊಂಡು ಬಾ ಎಂದು ಕಳಿಸುತ್ತಿದ್ದರು. ಅದು ಭಕ್ತರ ಮನೆಗಳ ಮುಂದೆ ಹೋಗಿ ನಿಂತೊಡನೆ ಆ ಜಂಗಿನ ಶಬ್ದಕ್ಕೆ ತಾಯಂದಿರು ಹೊರ ಬಂದು ಭಿಕ್ಷೆ ನೀಡುತ್ತಿದ್ದರು. ಹೀಗೇ ನಾಲ್ಕಾರು ಮನೆಗೆ ಹೋಗಿ ಮರಳಿ ಬರುತ್ತಿತ್ತು. ಶಿವಯೋಗಿಗಳೆ ಬಂದು ಅದರ ಕೊರಳಿಂದ ಜೋಳಿಗೆ ತೆಗೆದು ಒಂದಿಷ್ಟು ಅದಕೆ ಉಣ್ಣಲು ಕೊಟ್ಟು ಉಳಿದದ್ದನ್ನು ದಾಸೋಹಕ್ಕೆ ಸೇರಿಸುತ್ತಿದ್ದರು. ಇದು ಒಂದು ಅಚ್ಚರಿ ಎಂದು ಎಷ್ಟೋ ಜನ ಅದನ್ನು ನೋಡಲೆಂದೆ ಬರುತ್ತಿದ್ದರು. ಒಂದಿನ ಕೆಲವು ಸೇರಲಾರದ ಉಂಡಾಡಿಗಳು ಅದಕೆ ಮಧ್ಯ ಉಣಿಸಿ ಅದರ ಮೇಲೆರಗುವರು . ಅದು ಎಲ್ಲರೊಂದಿಗೆ ಹೋರಾಡಿ ರಕ್ತ ಸಿಕ್ತವಾಗಿ ಪ್ರಸಾದವೆಲ್ಲಾ ಚೆಲ್ಲಾಪಿಲ್ಲಿ ಆಗಿ ಶಿವಯೋಗಿಗಳ ಮುಂದೆ ಬಂದು ನಿಂತಾಗ, ಅದರ ಮೂಕ ಭಾಷೆಯನ್ನು , ವೇದನೆಯನ್ನು ಅರ್ಥ ಮಾಡಿಕೊಂಡ ಶಿವಯೋಗಿಗಳು ಗದ್ಗದಿತರಾಗುತ್ತಾರೆ. ಅದು ಅಖಂಡೇಶ್ವರರ ಗದ್ದುಗೆ ಪಕ್ಕ ಹೋಗಿ ಮಲಗಿದ್ದು ಮುಂದೆ ಏಳಲೇ ಇಲ್ಲ. ಅಲ್ಲೇ ಮೂಲೆಯಲ್ಲಿ ಅದರ ಸಮಾಧಿಯನ್ನೂ ನೆರವೇರಿಸುವರು.

ಹೀಗೆ ಕಾಯಕ ದಾಸೋಹಗಳನ್ನು ಉಸಿರಾಗಿಸಿಕೊಂಡ ಶಿವಯೋಗಿಗಳು ಜಂಗಮ ದೀಕ್ಷೆಯ ನಂತರ ಎಷ್ಟೋ ದಿನಗಳ ವರೆಗೆ ಬಸವಾದಿ ಶರಣರ ತತ್ವಗಳನ್ನೇ ಹೆಗಲಿಗೇರಿಸಿ ಅವನ್ನು ಪ್ರಸಾರ ಮಾಡುತ್ತಾ ಮಾನವೀಯತೆಯ ಮಮತೆಯ ಹರಿಕಾರರಾಗಿ ಸಾಗುತ್ತಾರೆ. ಕಾಯಕವಿಲ್ಲದೆ ಪ್ರಸಾದವನ್ನೂ ಸ್ವೀಕರಿಸುವದಿಲ್ಲವೆಂದು ಜೀವವಿರುವವರೆಗೂ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಸುತ್ತಲೆಲ್ಲೆಡೆ ಚಿಕ್ಕ ಕೌಲಗಿ, ಹಿರೇ ಕೌಲಗಿ, ಕೊಳಕೂರು, ತಾಂಬಾಳ, ಕಲ್ಲುಕುಟಿಕೆ,
ಹಾಗೂ ಇನ್ನೂ ಅನೇಕ ಕಡೆ ಚರ ಜಂಗಮರಾಗಿ ಧರ್ಮ,ಜಾತಿ,ಭಾಷೆಗಳನು ಮೀರಿ ತತ್ವ ಪ್ರಸಾರ ಮಾಡುವರು. ಕೊಳಕೂರು ಅವರ ಅತ್ಯಂತ ಪ್ರೀತಿಯ ತಾಣ. ನಿಸರ್ಗದ ಮಡಿಲಲ್ಲಿರುವ ಜೇವರಗಿ ಪಕ್ಕದಲ್ಲೆ ಇರುವ ಕೊಳಕೂರಿನಲ್ಲಿ ಅವರು ಕೆಲವು ದಿನ ತಪೋನಿಷ್ಟರಾಗಿ ಮಂತ್ರ,ಹಠ, ಲಯ, ರಾಜಯೋಗ, ಅಷ್ಟಾಂಗಯೋಗ, ತಾರಕಯೋಗ, ಶಾಂಭವಿ ಚಕ್ರ, ಮೊದಲಾದವೆಲ್ಲವನ್ನೂ ಪ್ರಾಯೋಗಿಕ ನೆಲೆಯಲ್ಲಿ ಸಾಧನೆಗೈದು ಶಿವಯೋಗದಲ್ಲೇ ಪರಿಪೂರ್ಣ ತೆಯನ್ನು ಕಾಣುವರು. ನಂತರ ಜೇವರಗೀಯಲ್ಲೇ ಗುರುಗಳ ಅಪೇಕ್ಷೆಯಂತೆ ಪೀಠಾಧಿಪತಿಗಳಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳುವರು. ಶಾಲೆಯನ್ನು ತೆರೆದು ಅಸ್ಪೃಶ್ಯರ ಮಕ್ಕಳಿಗೂ ಶಿಕ್ಷಣ ಸವಲತ್ತುಗಳನ್ನು ಒದಗಿಸುವರು. ಜನರ ಮೌಢ್ಯತೆಗಳನ್ನು ಕಳೆಯಲು ತುಂಬಾ ಶ್ರಮಿಸುವರು.

ಸತ್ಯದ ಮನೆಯಲ್ಲಿ ಶಿವನಿರ್ಪನಲ್ಲದೆ ಅಸತ್ಯದ ಮನೆಯಲ್ಲಿ ಶಿವನಿರ್ಪನೆ ? ಇಲ್ಲಿಲ್ಲ ನೋಡಿರೋ ಅಖಂಡೇಶ್ವರಲಿಂಗವನೊಲಿಸಬೇಕಾದಡೆ ಸತ್ಯವ ಸಾಧಿಸಬೇಕು ಕಾಣಿರೋ

ಎಂದು ಸತ್ಯವೆಂಬ ಕೂರಲಗನೆ ಹಿಡಿದು ಭವಸಂಸಾರವನ್ನು ದಾಟಿದರು.

ಸಕಲ ವಿಸ್ತಾರದೊಳಗೆಲ್ಲ ಲಿಂಗವ ತೋರಿದ
ಆ ಲಿಂಗದೊಳಗೆ ಎನ್ನ ತೋರಿದ
ಎನ್ನೊಳಗೆ ತನ್ನ ತೋರಿದ
ಮಹಾಗುರುವಿಂಗೆ
ನಮೋನಮಃ ಎಂಬೆನಯ್ಯಾ ಅಖಂಡೇಶ್ವರಾ

ಎಂದು ಸಕಲ ಸೃಷ್ಟಿಯ ಚರಾಚರದಲ್ಲೂ ಲಿಂಗವನ್ನೇ ಕಂಡು, ಅದನ್ನೇ ತಮ್ಮ ಅಂತರಂಗದಲ್ಲೂ ಕಂಡು ಅರಿವಿನ ಜ್ಯೋತಿಗೂ ಅದಕೆ ಮಾರ್ಗ ದರ್ಶಿಸಿದ ಅಖಂಡೇಶ್ವರರಿಗೂ ನಮಿಸುವರು. ಹೀಗೆ ಎಲ್ಲೆಲ್ಲೂ ಲಿಂಗಚೇತನವನ್ನೇ ಕಂಡ ಅವರು ಜಂಗಮ ಸಮಾಜಕ್ಕಾಗಿಯೆ ಸಂಪೂರ್ಣವಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು.

ಜಂಗಮಕ್ಕೆ ಮಾತಾಪಿತರಿಲ್ಲ,
ಜಂಗಮಕ್ಕೆ ಜಾತಿಬಂಧುಗಳಿಲ್ಲ,
ಜಂಗಮಕ್ಕೆ ನಾಮರೂಪಗಳಿಲ್ಲ,
ಜಂಗಮಕ್ಕೆ ಸೀಮೆಸಂಗಗಳಿಲ್ಲ,
ಜಂಗಮಕ್ಕೆ ಕುಲಗೋತ್ರಗಳಿಲ್ಲ,
ಜಂಗಮಕ್ಕೆ ಮಲಮಾಯೆಗಳಿಲ್ಲ ನೋಡಾ ಅಖಂಡೇಶ್ವರಾ

ಎಂದು ನಿಸ್ಸೀಮ ಜಂಗಮತತ್ವದ ತಿಳುಹನ್ನು ಅರುಹುವರು.

ಒಮ್ಮೆ ಕಲಬುರ್ಗಿ ಜಿಲ್ಲೆಯಲ್ಲಿ ಭೀಕರ ಬರಗಾಲ ತಲೆದೋರಿತು. ಸ್ವಾಮಿ ಗಳು ಮುಂದೆ ಬಂದು ಉಳ್ಳವರಿಂದ ಧಾನ್ಯ ದಿನಸಿ ಪಡೆದು ಇಲ್ಲದವರಿಗೆ ಹಂಚಿದರು. ಅದರಲ್ಲೂ ಚಿತ್ತಾಪುರದ ಹತ್ತಿರ ಬೆಳಗುಂಪಿ ಗ್ರಾಮ ಕ್ಷಾಮದ ಕ್ರೂರ ಹಿಡಿತಕ್ಕೆ ಸಿಲುಕಿ ನಿರ್ನಾಮವಾಗುವ ಸ್ಥಿತಿಗೆ ಬಂದಿತು. ಊರ ಹಿರಿಯರು ಜೇವರಗಿಗೆ ಓಡಿ ಬಂದರು. ಸ್ವಾಮಿಗಳು ಆ ಕೂಡಲೇ ಅಲ್ಲಿ ಹೊರಟು ದಾರಿಯುದ್ದಕ್ಕೂ ಧಾನ್ಯ ಸಂಗ್ರಹಿಸುತ್ತಾ ಪಾದಯಾತ್ರೆ ಮಾಡುತ್ತಾ ಬೆಳಗುಂಪಿವರೆಗೂ ಬಂದು ಅಲ್ಲಿ ಒಂದು ದಾಸೋಹ ಕೇಂದ್ರವನ್ನು ಸ್ಥಾಪಿಸುವರು. ಅಲ್ಲಿನ ಭೀಕರತೆ ಕಂಡು ಮನಕರಗಿ ಅನುಷ್ಟಾನ ಕೈಗೊಂಡು ತೀವ್ರವಾದ ಯೋಗಶಕ್ತಿಯ ಕಂಪನದಿಂದ ಧಾರಾಕಾರವಾಗಿ ಮಳೆ ಸುರಿಯಲು ಸುರಪುರದಿಂದ ಹಿಡಿದು ಬೀದರ, ಕಲಬುರ್ಗಿವರೆಗೆ ಹಿಂದೆಂದೂ ಕಾಣದ ಬೆಳೆ ಕಂಡು ಬಂದಿತು. ಹೀಗೆ ಷಣ್ಮುಖ ಶಿವಯೋಗಿಗಳು ಬಸವ ಆಶಯಗಳನ್ನೆ ಹಾಸಿ ಹೊದ್ದು ಅವನ್ನು ಪುನರ್ ಸ್ಥಾಪಿಸಲು ಬದುಕು ಪೂರ್ತಿ ಸವೆಸಿ ಬಸವೋತ್ತರ ಯುಗದ ಶರಣ ಸಂಕುಲದಲ್ಲೇ ಶಿಖರಪ್ರಾಯರಾಗಿ ಕಂಗೊಳಿಸುವರು. ಅವರ ಜಂಗಮ ಕಾರ್ಯಗಳಿಗೆ ಮನದುಂಬಿ ಸುರಪುರದ ರಾಜಸಭೆಯಲ್ಲಿ ಅವರನ್ನುಒತ್ತಾಯಪೂರ್ವಕವಾಗಿ ಒಪ್ಪಿಸಿ ಕರೆತಂದು ಸಕಲ ರಾಜ ಗೌರವನಿತ್ತು ಕಳುಹುವರು. ಆದರೂ ಶೋಷಿತರ ಪರವಾಗಿ ಹೋರಾಟದ ಮಾರ್ಗದಲ್ಲಿ ಅವರು ಸಾಕಷ್ಟು ಪುರೋಹಿತಶಾಹಿಗಳ ವಿರೋಧಕ್ಕೂ ಕೂಡಾ ಒಳಗಾಗುತ್ತಾರೆ. ಒಂದು ದಿನ ಸಂಗಾವಿಯ ಸಂಗಪ್ಪ ಎಂಬಾತ ಸ್ವಾಮಿಗಳನ್ನು ರಾಜಗುರು ಗೌರವ ದಕ್ಕಿದ್ದಕ್ಕೆ ಪ್ರಸಾದವನ್ನ ಸ್ವೀಕರಿಸಲು ಬರಬೇಕೆಂದು ಒತ್ತಾಯಿಸಿ ಕರೆದುಕೊಂಡು ಹೋಗಿ ವಿಷಪ್ರಾಶನ ಮಾಡುವನು. ಅದನ್ನು ಸೇವಿಸಿ ನಂತರ ತಮ್ಮ ದಿವ್ಯ ದೃಷ್ಟಿ ಯಿಂದ ಕಂಡು ಹಠಯೋಗದಿಂದ ಅದೆಲ್ಲವನ್ನೂ ಅರಗಿಸಿಕೊಳ್ಳುವರು ಆದರೆ ಅಷ್ಟೊತ್ತಿಗಾಗಲೆ ಅವರ ಜಠರದ ಒಳಭಾಗವೆಲ್ಲಾ ಸುಟ್ಟು ಹೋಗಿತ್ತು. ನಂತರದ ದಿನಗಳಲ್ಲಿ ಕೇವಲ ಹಣ್ಣು, ಹಾಲು ಸೇವನೆ ಅದೂ ಒಂದು ಹೊತ್ತು ಮಾತ್ರ ತೆಗೆದುಕೊಳ್ಳ ಹತ್ತಿದರು.

ಎಚ್ಚರವಿರಬೇಕು ನಡೆನುಡಿಯಲ್ಲಿ ಮಚ್ಚರವಿರಬೇಕು ಭವಸಂಸಾರದಲ್ಲಿಹುಚ್ಚನಾಗಿರಬೇಕು ಜನರ ಕಣ್ಣಿನಲ್ಲಿ ಮನ ಅಚ್ಚೊತ್ತಿದಂತಿರಬೇಕು ಲಿಂಗದಲ್ಲಿ ಇಂತೀ ಗುಣವುಳ್ಳಾತನೇ ಅಚ್ಚಶರಣನು ನೋಡಾ ಅಖಂಡೇಶ್ವರಾ

ಎಂದು ಅವರ ಮನಸು ಪದೆಪದೆ ಎಚ್ಚರಿಸುತ್ತಿತ್ತು.

ಮಠದ ಉಸ್ತುವಾರಿ ನೋಡಲು ಒಬ್ಬ ಮರಿಯನ್ನು ಆಯ್ಕೆ ಮಾಡಿ ಎಲ್ಲ ಜವಾಬ್ದಾರಿ ಗಳನ್ನೂ ವಹಿಸಿಕೊಟ್ಟು ನಿಶ್ಚಿಂತೆಯಿಂದ ಮತ್ತೆ ಅಂತರ್ಮುಖಿ ಆಗುವರು.

ಕಾಲಿಲ್ಲದೆ ನಡೆಯಬಲ್ಲಡೆ ಶಿವಯೋಗಿಯೆಂಬೆನಯ್ಯ
ಕೈಯಿಲ್ಲದೆ ಮುಟ್ಟಬಲ್ಲಡೆ ಶಿವಯೋಗಿಯೆಂಬೆನಯ್ಯ
ಕಣ್ಣಿಲ್ಲದೆ ನೋಡಬಲ್ಲಡೆ ಶಿವಯೋಗಿಯೆಂಬೆನಯ್ಯ
ಕಿವಿಯಿಲ್ಲದೆ ಕೇಳಬಲ್ಲಡೆ
ಶಿವಯೋಗಿಯೆಂಬೆನಯ್ಯ
ನಾಲಿಗೆಯಿಲ್ಲದೆ ಸವಿಯಬಲ್ಲಡೆ ಶಿವಯೋಗಿಯೆಂಬೆನಯ್ಯನಾಸಿಕವಿಲ್ಲದೆ ವಾಸಿಸಬಲ್ಲಡೆ ಶಿವಯೋಗಿಯೆಂಬೆನಯ್ಯ
ಮನವಿಲ್ಲದೆ ನೆನೆಯಬಲ್ಲಡೆ ಶಿವಯೋಗಿಯೆಂಬೆನಯ್ಯ
ತಾನಿಲ್ಲದೆ ಕೂಡಬಲ್ಲಡೆ ಶಿವಯೋಗಿಯೆಂಬೆನಯ್ಯ
ಇಂತಿ ಭೇದವನರಿಯದೆ ವೇಷವ ಧರಿಸಿ ತಿರುಗುವರೆಲ್ಲರೂ ಭವರೋಗಿಗಳೆಂಬೆನಯ್ಯಾ ಅಖಂಡೇಶ್ವರಾ

ಎಂದು ಇಂದ್ರಿಯ ಮುಖೇನ ಈ ಜಗತ್ತನ್ನು ಭಾವಿಸದೆ ಇಂದ್ರಿಯಾತೀತವಾಗಿ ಬೆಳೆದು, ನಿರಾಲಂಬ,ನಿರಾಮಯ,ನಿರಾಭಾರಿ ಜಂಗಮನಾಗಿ ತಾ ಎಂಬುದನೂ ಮೆಟ್ಟಿ ನಿಲುವಾತನೆ ಶಿವಯೋಗಿ ಎಂದು ಶಿವಯೋಗಿಯ
ಸ್ವರೂಪವನ್ನು ಬಿಚ್ಚಿಡುವರು.

ನೋಡಲಿಲ್ಲದ ಬಯಲು
ಸೂಡಲಿಲ್ಲದಬಯಲು,
ಕೂಡಲಿಲ್ಲದ ಬಯಲು,
ನಾಮವಿಲ್ಲದ ಬಯಲು,
ಸೀಮೆಯಿಲ್ಲದ ಬಯಲು ,
ಕಾರ್ಯವಿಲ್ಲದ ಬಯಲು,
ಕಾರಣವಿಲ್ಲದ ಬಯಲು,
ಅಖಂಡೇಶ್ವರನೆಂಬ
ಬಯಲಿನ ಬಯಲು
ಮಹಾ ಬಯಲೊಳಗೆ ನಾನೆತ್ತ ಹೋದೆನೆಂದರಿಯೆ

ಆದಿಯಿಲ್ಲದ ಬಯಲು, ಅನಾಯಿಲ್ಲದ ಬಯಲು, ಶೂನ್ಯ ವಿಲ್ಲದ ಬಯಲು, ನಿಶೂನ್ಯವಿಲ್ಲದ ಬಯಲು , ಸುರಾಳವಿಲ್ಲದ ಬಯಲು,
ನಿರಾಳವಿಲ್ಲದ ಬಯಲು ,
ಅಖಂಡೇಶ್ವರನೆಂಬ ಬಯಲಿನ ಬಯಲ ಮಹಾಘನ ಬರಿಯ ಬಯಲೊಳಗೆ , ಸಾವಯವಿಲ್ಲದ ಬಯಲು , ನಿರವಯವಿಲ್ಲದ ಬಯಲು
ಎಚ್ಚರವಡಗಿ ನಾನೆತ್ತ ಹೋದೆನೆಂದರಿಯೆನು .,….

ಎಂದು ಬರೆಯುತ್ತಾ ಆ ಬಯಲನ್ನೇ ತಮ್ಮ ಅಂತರಂಗದಲ್ಲಿ ಅನುಭವಿಸುತ್ತಾ ಬಯಲಲ್ಲಿ ಬಯಲಾಗುವರು. 1711 ರಲ್ಲಿ ಬಯಲಾದ ಆ ಜೇವರಗಿಯ ದಿವ್ಯ ಜ್ಯೋತಿ ಸದಾ ಸ್ಮರಣೀಯ.

ಸುನಿತಾ ಮೂರಶಿಳ್ಳಿ, ಧಾರವಾಡ
9986437474.

Don`t copy text!