ಗುರುವಿನ ಮಹತ್ವ

ಗುರುವಿನ ಮಹತ್ವ

ದೊಣ್ಣೆಯ ಕರದಲಿ
ಬೆಣ್ಣೆಯ ಮನದಲಿ
ತಣ್ಣನೆ ಸಹನೆಯ ಭಾವದಲಿ
ಮಣ್ಣಿನ ಹಲಗೆಯ
ಸುಣ್ಣದ ಬಳಪವ
ಬಣ್ಣದ ಮಾತಿನ ಮೋಡಿಯಲಿ

ಅಕ್ಷರ ಕಲಿಸುತ
ದಕ್ಷರ ಮಾಡಲು
ಮೋಕ್ಷಕೆ ಕಾಂತಿಯ ಬೀರುತಲಿ
ಲಕ್ಷದಿ ಸೆಳೆಯುತ
ಅಕ್ಷಯ ವಿಷಯವ
ಸೂಕ್ಷ್ಮದ ಭಾಷೆಯ ಬಳಸುವನು

ನೀತಿಯ ಹೇಳುತ
ಪ್ರೀತಿಯ ತೋರುವ
ಮೂರ್ತಿಯ ಮಾಡುವ ಗುರುವಿನಲಿ
ಮಾತಿನ ಸವಿಯಲಿ
ಭೀತಿಯ ಸರಿಸುವ
ಕೀರ್ತಿಯ ಬೆಳಗುವ ತೇಜದಲಿ

ತಜ್ಞರ ಮಾಡಲು
ಮಗ್ನದಿ ಕಲಿಸುವ
ವಿಘ್ನವನೆಲ್ಲ ಕಡೆಗಣಿಸಿ
ಆಜ್ಞೆಯ ಬೋಧನೆ
ಅಗ್ನಿಯ ತೆರದಲಿ
ಸರ್ವಜ್ಞ ತಾನಾಗಿ ನಿಲ್ಲುತಲಿ

-ಶ್ರೀಮತಿ ಗಿರಿಜಾ ಮಾಲಿ ಪಾಟೀಲ ವಿಜಯಪುರ

Don`t copy text!