ಮಾತನಾಡಬೇಕಿದೆ
ಮಾತನಾಡಬೇಕಿದೆ
ಮಾತಾಡಬೇಕಿದೆ ಎನಗೆ
ನಿಮ್ಮ ಜೊತೆ ಮೌನ
ಮುರಿದು ಮಗ್ಗು ಬಿರಿದು
ಹೂ ಅರಳಿ ಪರಿಮಳ
ಸೂಸಿ ಘಮಿಘಮಿಸುವಂತೆ.
ಮಾತನಾಡಬೇಕಿದೆ ಎನಗೆ
ನಿಮ್ಮಮನಸಿನ ಜೊತೆಗೆ ಮನಬಿಚ್ಚಿ ಕಚ್ಚಿಹಿಡಿದ ನೋವುಗಳನ್ನೆಲ್ಲ ಚಚ್ಚಿ.. ಚೂರು ಚೂರು ಪುಡಿಮಾಡಿದಂತೆ
ಮಾತನಾಡಬೇಕಿದೆ ಎನಗೆ
ನಿಮ್ಮ ಹೃದಯದ ಜೊತೆಗೆ
ಹೃದಯ ತೆರೆದು ಮೃದು
ಮಧುರ ಭಾಷೆಯ ಮಂಜುಳ ನೀನಾದದ ಜುಳುಜುಳು ಹೊಳೆ…ಹರಿದಂತೆ…
ಮಾತನಾಡಬೇಕಿದೆ ಎನಗೆ
ನಿಮ್ಮ ಭಾವನೆಗಳ ಜೊತೆಗೆ
ಭಾವನೆಗಳಲ್ಲಿ ಮಿಂದು
ಮಡಿಯಾಗಿ ಶುಭ್ರ ಶ್ವೇತ
ವಸ್ತ್ರ ಧಾರೆಯಂತೆ…
ಮಾತನಾಡಬೇಕಿದೆ ಎನಗೆ
ನೆಟ್ಟ ನೋಟದಿ ಕಣ್ಣಲ್ಲಿ ಕಣ್ಣಿಟ್ಟು
ದುಃಖ ದುಮ್ಮಾನಗಳ ಬಿಟ್ಟು ಕಟ್ಟಿದ
ಸಿಟ್ಟು ಕಟ್ಟೆಳೆಗಳನ್ನು
ತೊರೆದುಬಿಟ್ಟು ಮುಕ್ತಳಾಗಿ
ಮುಕ್ತವಾಗಿ…
ಮಾತನಾಡಬೇಕಿದೆ ಎನಗೆ
ಬಣ್ಣ ಬಣ್ಣದ ಬದುಕಿನಲ್ಲಿ
ಬಣ್ಣ ಕಳೆದುಕೊಂಡ ಬಾಂಧವ್ಯದ ಶಬ್ದಗಳು…
ಬಿಳಚಿ ಹಾಸಿಗೆ ಹಿಡಿದು
ಸೊರಗಿ ಸೋತು ಹೂತು
ಹೋದ ಮಾತುಗಳಿಗೆ…
ಮತ್ತೆ ಪ್ರೀತಿ ಪ್ರೇಮದ
ರಂಗು ರಂಗಿನ ಬಣ್ಣ ತುಂಬಿ ನಿಮ್ಮ ಜೊತೆಗೆ ಎನಗೆ ಮನಬಿಚ್ಚಿ ಹುಚ್ಚರಂತೆ
ಮಾತನಾಡಬೇಕಿದೆ.. ನಿಮ್ಮ ಜೊತೆಗೆ ಎನಗೆ…
–ಶಾರದಾ ಅಂಬೇಸಂಗೆ, ಮುಂಬಯಿ
.