ಟೂ ಬೈ ಥ್ರೀ ಬಿರಿಯಾನಿ

ಕವಿತೆ
ಟೂ ಬೈ ಥ್ರೀ ಬಿರಿಯಾನಿ

ಎರಡು ಪೊಟ್ಟಣ ಬಿರಿಯಾನಿ
ಬರಗೆಟ್ಟ ಮೂರು ಮನಸುಗಳು, ಮತ್ತು
ಕಾಳುಣಿಸಿದ, ಚೂರಿ ಮಸೆದ,
ಮಸಾಲೆ ಅರೆದ, ಒಲೆ ಹೊತ್ತಿಸಿದ
ಪೊಟ್ಟಣ ಕಟ್ಟಿದ ,ಹಣ ಪಡೆದ
ಎಷ್ಟೊಂದು ಅತೃಪ್ತ ಮನಸುಗಳನು
ಭ್ರಷ್ಟಗೊಳಿಸಿತ್ತೋ ಈ ಬಿರಿಯಾನಿ
ಪೊಟ್ಟಣದಿಂದ ಸೂಸುವ ಪರಿಮಳಕ್ಕೆ
ಬಲಿಯಾದ ಎರಡು ಎಳೆಯ ಮನಸುಗಳ
ಆದರ್ಶ ತಂದೆಯಾದ ನನಗೂ
ದಾರಕಂಟಿದ ರಕ್ತದ ಕಲೆ ಕಾಣದಷ್ಟು
ಕಣ್ಣುಗಳಿಗೆ ಪೊರೆ ಆವರಿಸಿದೆ

ಹಾವಾಡಿಗನ ಹಾವಿನ ಬುಟ್ಟಿಗಿಂತ
ದೊಡ್ಡ, ದುಂಡನೆಯ ಬುಟ್ಡಿಯೊಳಗೆ
ಬಣ್ಣ ಬಣ್ಣದ ಪುಠಾಣಿ ಮರಿಗಳ
ಕೊನೆಯಿಲ್ಲದ‌ ಚಿಲಿಪಿಲಿ
ನೀರಿಗೋ ಕೂಳಿಗೋ ಗೊತ್ತಾಗುವುದೇ ಇಲ್ಲ
ಗುಲಾಬಿ ಹಸಿರು ಕೆಂಪು ಬಣ್ಣದ ನವಿರು ಪುಕ್ಕಗಳ
ಬೆಣ್ಣೆಯಷ್ಟು ನಯವಾದ ಮರಿಗಳೆಂದರೆ
ಇಬ್ಬರಿಗೂ ಸಾಗರದಷ್ಟು ಮಮತೆ
ಕೊಂಡುತಂದು ನೇವರಿಸಿ‌ ಮುದ್ದಾಡಿ
ನುಚ್ಚು ನೀರುಣ್ಣಿಸುವಾಗಿನ ಮನಸ್ಸು
ಬಿರಿಯಾನಿ ಘಮಾಡಿಸಿದಾಗ
ವಾಯುವಿಹಾರಕ್ಕೆ ಹೋಗಿರುತ್ತದೆ

ಅವಸರದಿಂದ ಹೋಗುತ್ತಿರುವ
ಕುರಿಗಾಯಿಯ ತರುಬಿ
ಎಳೆಯ ಮುದ್ದಾದ ಮರಿಯನ್ನು
ಎದೆಗೊತ್ತಿಕೊಂಡು
ಮುದ್ದಿಸುವ ಪೋಜಿನಲ್ಲಿ ಸೆಲ್ಪೀ ತೆಗೆದು
ಫೇಸ್ ಬುಕ್ ಗೆ ಅಪ್‌ಲೋಡ್ ಮಾಡಿ
ಮಧ್ಯಾಹ್ನ ಮಟನ್ ಬಿರಿಯಾನಿಯ
ಫೋಟೋ‌ ವಾಟ್ಸಾಪ್ ಸ್ಟೇಟಸ್ ಗಿಟ್ಟು
ಕಮೆಂಟುಗಳ ಲೆಖ್ಖ ಹಾಕಿ ಸಂಭ್ರಮಿಸುತ್ತೇನೆ
ಬಂಗಾರ ಬಣ್ಣದ ಮೀನಿಗೆ
ಆರೋಗ್ಯ ಕೆಡದಷ್ಟು ಫುಡ್ ಹಾಕುವ ಮಗಳು
ಬರ್ಥಡೇಗೆ ಕೇಕ್ ಬದಲಿಗೆ ಫಿಶ್ ಫ್ರೈ ಬೇಡುತ್ತಾಳೆ

ಆಳುಗಳಿಗೆ ಒದ್ದು ಕೆಲಸ ಮಾಡಿಸಿಕೊಂಡು
ಅಂಥ ಪಾಪದ ಆಳುಗಳನ್ನು ಕರುಣಿಸಿದ
ದೇವರಿಗೆ ಪ್ರಾರ್ಥನೆ ಸಲ್ಲಿಸುವ ರಾಮ್
ಅಲ್ಲಾನಿಗೆ ಉಪವಾಸದ ಹರಕೆ ತೀರಿಸಲು
ಬಡ್ಡಿರೊಕ್ಕದಲ್ಲಿ ಖರೀದಿಸಿದ
ಖರ್ಜೂರ ತಿಂದು ರೋಜಾ ಮುರಿವ ಇಬ್ರಾಹಿಮ್
ಲಂಚದ ಹಣದಲ್ಲಿ ಏಸುವಿಗೆ ಮೋಂಬತ್ತಿ ಉರಿಸಿ
ನೆರೆಹೊರೆಯವರಿಗೆ ಬೈಬಲ್ ಹಂಚುವ ಅಬ್ರಹಾಮ್
ರವಿವಾರ ನಾನು ಮತ್ತು ನನ್ನ ಮಕ್ಕಳು
ಬಾಯಿ ಚಪ್ಪರಿಸುತ್ತ ಬಿರಿಯಾನಿ ತಿನ್ನುತ್ತ
ಡಿಸ್ಕವರಿ ಚಾನಲ್ ನೋಡುತ್ತಿರುವಾಗ
ಜಾಹೀರಾತಿನಂತೆ ಕಣ್ಮುಂದೆ ಹಾಯುತ್ತಾರೆ

ರವೀ ಹಂಪಿ

Don`t copy text!