ಒಂದು ಮೊಟ್ಟೆಯ ಕವಿತೆ
ಥತ್ ಸೂಳೆಮಗನ ಪ್ರೀತಿಯಿದು
ಇನ್ನಷ್ಟು ಬೇಗನೇ ಆಗಬಾರದಿತ್ತೇನು?
ತುಸುವಾದರೂ ಕೂದಲಿದ್ದರೆ ಡೈ ಮಾಡಿಕೊಂಡು
ಹೋಗಿ ಪ್ರೊಪೋಜ್ ಮಾಡಬಹುದಿತ್ತು
ವಯಸ್ಸು ಜಾರುವ ಮೊದಲೇ ತಲೆ ನುಣ್ಣಗಾಗಿ ಜಾರಿದೆ
ಏನಾದರಾಗಲಿ, ನಲವತ್ತರಲ್ಲಿ ಪ್ರೀತಿಯಾಗಲೇಬಾರದು!
ಏನು ಹೇಳಬೇಕು ಅವಳಿಗೆ?
ಮಾತೆತ್ತಿದರೆ ‘ನಿನ್ನ ಮಗಳನ್ನು ಯಾವ ಕಾಲೇಜಿಗೆ
ಸೇರಿಸಿದ್ದಿ, ನಿನ್ನ ಮಗನಿಗೆ ಕೆಲಸ ಸಿಕ್ಕಿತೇ?’
ಎಂದು ಬರೀ ಮಕ್ಕಳ ಬಗ್ಗೇ ಕೇಳುತ್ತಾಳಲ್ಲ
ಅವಳಿಗೆ ನನ್ನ ಪ್ರೀತಿಯ ಬಗ್ಗೆ ಯಾವಾಗ ಹೇಳುವುದು?
ಏನಾದರಾಗಲಿ, ನಲವತ್ತರಲ್ಲಿ ಪ್ರೀತಿಯಾಗಲೇಬಾರದು!
ಇಂಪ್ರೆಸ್ ಮಾಡಲು ಇರುವ ಕೂದಲಿಗೆ ಬಣ್ಣ ಹಚ್ವಿದರೆ
‘ಏನಪ್ಪಾ ಏನಿವತ್ತು ವಿಶೇಷ? ಅಮ್ಮನ್ನ ಎಲ್ಲಿಗಾದರೂ
ಕರೆದೊಯ್ಯುತ್ತೇನು?’ ಕೇಳುತ್ತಾಳೆ ಮಗಳು
ಕೊಂಕಳಿಗೆ ತುಸು ಫರ್ಫ್ಯೂಮ್ ಲೇಪಿಸಿದರೆ
ಮಗ’ ಏನಪ್ಪಾ ವೆಡ್ಡಿಂಗ್ ಆ್ಯನಿವರ್ಸರಿಯಾ’ ಅನ್ನುತ್ತಾನೆ
ಏನಾದರಾಗಲಿ, ನಲವತ್ತರಲ್ಲಿ ಪ್ರೀತಿಯಾಗಲೇಬಾರದು!
ಏನು ಹೇಳಿ ಒಪ್ಪಿಸಬೇಕಿವಳ?
ನನ್ಮನ್ನಷ್ಟೇ ಅಲ್ಲ ನನ್ನ ಹೆಂಡತಿ,
ಮಕ್ಕಳಿಗೂ ಹೊಂದಿಕೊಳ್ಳಬೇಕೆಂದು
ಕೇಳಿಕೊಳ್ಳಲೇನು? ಇರುವ ಬೀಪಿ, ಶುಗರ್ರುಗಳ ಬಗ್ಗೆ
ಹೇಳಿಕೊಳ್ಳಬೇಕಾ? ಮುಚ್ಚಿಡಬೇಕಾ?
ಏನಾದರಾಗಲಿ, ನಲವತ್ತರಲ್ಲಿ ಪ್ರೀತಿಯಾಗಲೇಬಾರದು!
ಅವಳನ್ನು ಹಿಂದಿನಿಂದ ಫಾಲೋ ಮಾಡಲಾಗುವುದಿಲ್ಲ
ಸ್ವಲ್ಪಹೊತ್ತು ನಡೆಯುತ್ತಲೇ ಎಲ್ಲರೂ ಕೇಳುತ್ತಾರೆ
‘ಅಂಕಲ್ ಬಸ್ ಸ್ಟ್ಯಾಂಡಿಗೆ ಬಿಟ್ಟು ಬರಲಾ?’
ಅವಳಿಗೆಂತಲೇ ಗುಲಾಬಿ ಹಿಡಿದುಕೊಂಡರೆ
ಪಕ್ಕದ ಮನೆಯ ಹುಡುಗಿ ನಕ್ಕು ಕಿತ್ತುಕೊಳ್ಳುತ್ತಾಳೆ
ಏನಾದರಾಗಲಿ, ನಲವತ್ತರಲ್ಲಿ ಪ್ರೀತಿಯಾಗಲೇಬಾರದು!
ಮಧ್ಯರಾತ್ರಿ ಅವಳ ನೆನಪಾಗಿ ಎದ್ದು ಕುಳಿತರೆ
ಓಡಿಬಂದ ಮಗ ಬಿಪಿ ಪರೀಕ್ಷಿಸುತ್ತಾನೆ
ಮಗಳು ತಲೆಗೆ ಅಮೃತಾಂಜನ್ ತಿಕ್ಕುತ್ತಾಳೆ
ಗೊರಕೆಯಲ್ಲಿವಳು ‘ಚಹ ಬೇಕೇ?’ ಎಂದು ಕೇಳುತ್ತಾಳೆ
ನಾನು ಎದೆಹಿಡಿದುಕೊಂಡು ಮಲಗಿಬಿಡುತ್ತೇನೆ
ಏನಾದರಾಗಲಿ, ನಲವತ್ತರಲ್ಲಿ ಪ್ರೀತಿಯಾಗಲೇಬಾರದು!
ಓಡಿಹೋದ ಮಗಳ ಕಂಪ್ಲೇಂಟ್ ಕೊಡಲು
ಸಹೋದ್ಯೋಗಿ ಸ್ಟೇಷನ್ನಿಗೆ ನನ್ನನೇ ಕರೆದೊಯ್ಯುತ್ತಾನೆ
ದಾರಿತಪ್ಪಿದ ಮಗನಿಗೆ ಬುದ್ದಿಹೇಳಲು ಹಳೆಯ ಗೆಳತಿ
ಮನೆಗೆ ನನ್ನನೇ ಆಹ್ವಾನಿಸುತ್ತಾಳೆ
ನನಗೋ ನನ್ನನೇ ಸಂಭಾಳಿಸಲಾಗುತ್ತಿಲ್ಲ
ಏನಾದರಾಗಲಿ, ನಲವತ್ತರಲ್ಲಿ ಪ್ರೀತಿಯಾಗಲೇಬಾರದು!
ರವಿವಾರವೂ ಬಿಟ್ಟಿರಲಾಗದೆ, ಭೇಟಿಗಾಗಿ ಹೊರಟರೆ
ಮಗ ಕಿರಾಣಿ ಲಿಸ್ಟ್ ಕೊಡುತ್ತಾನೆ, ಮಗಳು
ಕಾಸ್ಮೆಟಿಕ್ಸ್ ತರಲು ಹೇಳುತ್ತಾಳೆ, ಇವಳೋ
ಅರ್ಧ ಲೀಟರ್ ಮೊಸರು, ನಿಂಬೆ ನೆನಪಿಸುತ್ತಾಳೆ
ಚಡಪಡಿಕೆಯಲ್ಲಿ ಮನಸಿರದೆ ದಾರಿ ಬದಲಿಸುತ್ತೇನೆ
ಏನಾದರಾಗಲಿ, ನಲವತ್ತರಲ್ಲಿ ಪ್ರೀತಿಯಾಗಲೇಬಾರದು!
ಇಪ್ಪತ್ತರಲ್ಲಿ ಇವಳ ಆಳದಲ್ಲಿ ಇಳಿದಾಗಲೂ
ಸಿಕ್ಕದ ಸುಖ, ನೆಮ್ಮದಿ ಸಂತೋಷಗಳು
ಅವಳು ಬರುವುದ ಕಂಡರೆ ಸಿಕ್ಕುತ್ತವೆ
ಮನಸ್ಸು ಅರಳುತ್ತದೆ ಮಲ್ಲಿಗೆಯಾಗುತ್ತದೆ
ಈ ನೋಟ ಸಾಕು ಮತ್ತೇನೂ ಬೇಡ ಅನ್ನಿಸುತ್ತದೆ
ಏನಾದರಾಗಲಿ, ನಲವತ್ತರಲ್ಲಿ ಪ್ರೀತಿಯಾಗಲೇಬಾರದು!
ಯಾರಿಂದಲೂ ಓದಲಾಗದ, ಯಾರ ಕೈಗೂ ಸಿಕ್ಕದ
ಪ್ರೇಮಪತ್ರ ಬರೆವ ಕಲೆ ಸಿದ್ದಿಸಿದೆ ಈಗೀಗ
ಕಣ್ಣು ತೆರೆದೇ ಕನಸು ಕಾಣುತ್ತೇನೆ, ನಿಂತಲ್ಲಿಯೇ
ಅವಳಿರುವಲ್ಲಿಗೆ ಭೇಟಿ ಕೊಡುತ್ತೇನೆ
ನಲವತ್ತರಲ್ಲೇ ಕ್ವಾರಂಟೈನ್ ಮಾಡಿಬಿಟ್ಟಿದೆ ವಿಧಿಯು
ಏನಾದರಾಗಲಿ, ನಲವತ್ತರಲ್ಲಿ ಪ್ರೀತಿಯಾಗಲೇಬಾರದು!
-ರವೀ ಹಂಪಿ