e-ಸುದ್ದಿ ಮಸ್ಕಿ
ರಾಜ್ಯದಲ್ಲಿ ಕರೊನಾ ಎರಡನೇ ಅಲೆ ತಡೆಗಟ್ಟುವುದಕ್ಕಾಗಿ ಸರ್ಕಾರ ವಾರಾಂತ್ಯದ ಲಾಕ್‍ಡೌನ್ ಜಾರಿ ಮಾಡಿರುವುದರಿಂದ ಬೆಳಿಗ್ಗೆ 6ರಿಂದ 10 ಗಂಟೆಯವರಗೆ ಹಾಲು, ತರಕಾರಿ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ನಡೆಯಿತು. 10ಗಂಟೆ ನಂತರ ಜನರು ಎಲ್ಲಾ ವಹಿವಾಟುಗಳನ್ನು ಸ್ಥಗಿತಗೊಳಿಸಿ ವೀಕೆಂಡ್ ಕಪ್ರ್ಯೂಗೆ ಸ್ಪಂದನೆ ನೀಡಿದರು.
ಮಸ್ಕಿ ಪಟ್ಟಣದಲ್ಲಿ ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಪೊಲೀಸ್ ಹಾಗೂ ಪುರಸಭೆ ಇಲಾಖೆಯ ಅಧಿಕಾರಿಗಳು ವ್ಯಾಪಾರಸ್ಥರ ಹಾಗೂ ಸಂಘ ಸಂಸ್ಥೆಗಳ ಸಭೆ ನಡೆಸಿ ಜಾಗೃತಿಯನ್ನು ಮೂಡಿಸಿದ್ದರು. ಸರ್ಕಾರ ಶನಿವಾರ ಮತ್ತು ಭಾನುವಾರದ ವಾರಾಂತ್ಯದ ಲಾಕ್ ಡೌನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಜನರು ಸಹ ತಮ್ಮ ಮನೆಗಳಿಗೆ ಬೇಕಾದ ಅಗತ್ಯ ದಿನಸಿ ಹಾಗೂ ಹಾಲು, ತರಕಾರಿಗಳನ್ನು ಖರೀದಿಸಿಕೊಂಡು ಮನೆ ಸೇರುತ್ತಿರುವ ದೃಶ್ಯಗಳು ಕಂಡು ಬಂದವು.
ಸ್ಪಂದನೆ: ಸರ್ಕಾರ ವಿಕೇಂಡ್ ಕಪ್ರ್ಯೂ ಜಾರಿ ಮಾಡಿರುವುದರಿಂದ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ನಿಗದಿತ ಸಮಯದಲ್ಲಿ ವ್ಯಾಪಾರ ಮಾಡಕೊಂಡು ಮುಚ್ಚುತ್ತಿದ್ದಾರೆ. ಅಲ್ಲದೇ ಜನರು ಸಹ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಅನಗತ್ಯವಾಗಿ ಓಡಾಡದೇ ಬೇಗನೇ ಮನೆ ಸೇರಿಕೊಳ್ಳುತ್ತಿದ್ದಾರೆ.
ಪೊಲೀಸ್ ಗಸ್ತು: ಸರ್ಕಾರ ಕಪ್ರ್ಯೂ ಜಾರಿ ಮಾಡಿರುವುದರಿಂದ ಅನಗತ್ಯವಾಗಿ ರಸ್ತೆ ಮೇಲೆ ತಿರುಗಾಡುವವರಿಗೆ ಪೊಲೀಸರು ಲಾಠಿ ರುಚಿ ತೊರಿಸುವದರ ಜೊತೆಗೆ ದಂಡವನ್ನು ವಿಧಿಸುವ ಮೂಲಕ ಅನಗತ್ಯವಾಗಿ ಓಡಾಡುವವರಿಗೆ ಬುದ್ದಿ ಕಲಿಸುತ್ತಿದ್ದಾರೆ. ಇದರಿಂದ ಜನರು ರಸ್ತೆ ಮೇಲೆ ಬರಲು ಭಯ ಪಡುತ್ತಿದ್ದಾರೆ.
ಬಸ್ ನಿಲ್ದಾಣ ಖಾಲಿ ಖಾಲಿ: ರಾಜ್ಯದಲ್ಲಿ ಕೆಎಸ್‍ಆರ್‍ಟಿಸಿ ನೌಕರರು ಕಳೆದ 15 ದಿನಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಆದರೆ ಕಳೆದ ಮೂರು ದಿನಗಳಿಂದ ಬಸ್ ಸಂಚಾರ ಆರಂಭವಾಗಿದೆ. ಆದರೆ ಇದೀಗ ಸರ್ಕಾರ ಲಾಕ್‍ಡೌನ್ ಜಾರಿ ಮಾಡಿರುವುದರಿಂದ ಜನರ ಓಡಾಟ ಕಡಿಮೆಯಾಗಿದೆ. ಇದರಿಂದ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಲ್ಲದೇ ಸಾರಿಗೆ ಇಲಾಖೆ ಬಸ್‍ಗಳು ಖಾಲಿಯಾಗಿ ಸಂಚಾರ ಮಾಡುತ್ತಿರುವ ದೃಶ್ಯಗಳು ಕಂಡು ಬಂದವು.