ವಚನ ಸಾಹಿತ್ಯದ ಆಶಯಗಳು-4
(ನಿನ್ನೆಯ ಸಂಚಿಕೆಯ ಮುಂದುವರಿದ ಭಾಗ)
ಬಸವಣ್ಣನವರ ದೃಷ್ಟಿಯಲ್ಲಿ ದೇವರು
ಬೀಜದಲ್ಲಿ ವೃಕ್ಷ ಇರುವ ಹಾಗೆ ನಮ್ಮೊಳಗೆ ಪರಮಾತ್ಮನಿದ್ದಾನೆ. ದಾಸೋಹಂ ಭಾವದಿಂದ ಲೋಕಹಿತ ಬಹಿಸಿದಾಗ ನಮ್ಮ ವ್ಯಕ್ತಿತ್ವ ವಿಕಸನವಾಗುತ್ತದೆ. ಆಗ ನಮ್ಮೊಳಗಿನ ದೇವರು ನಮ್ಮ ಅನುಭಾವಕ್ಕೆ ಬರುತ್ತಾನೆ. ಈ ಅನುಭಾವವು ನಮ್ಮನ್ನು ದೇವರೊಡನೆ ಐಕ್ಯಸ್ಥಿತಿಗೆ ಒಯ್ಯೋತ್ತದೆ. ಇದೇ ‘ಲಿಂಗಾಂಗ ಸಾಮರಸ್ಯ’ ಇದೇ ಶಿವಯೋಗದ ಫಲ !
ಬಸವಣ್ಣನವರು ಎಲ್ಲರಲ್ಲಿಯೂ ದೇವರನ್ನು ಕಾಣುತ್ತಾರೆ. ಅವರ ಒಂದು ಸರಳ ವಚನ ಸಾಕ್ಷಿ. ಮೇಲ್ನೋಟದಲ್ಲಿ ಸರಳವಾದರೂ ಆ ವಚನದ ಒಳಾರ್ಥ ಎಲ್ಲರಲ್ಲಿಯೂ ದೇವರನ್ನು ಕಾಣುವ ನೋಟ !
ತಂದೆ ನೀನು, ತಾಯಿ ನೀನು,
ಬಂಧು ನೀನು, ಬಳಗ ನೀನು
ನೀನಲ್ಲದೆ ಮತ್ತಾರೂ ಇಲ್ಲವಯ್ಯ, ಕೂಡಲಸಂಗಮದೇವಾ
ಹಾಲಲದ್ದು, ನೀರಲದ್ದು
ಅಲ್ಲಮ ಪ್ರಭುಗಳ ಒಂದು ವಚನವನ್ನು ಅವಲೋಕಿಸಿದಾಗ ದೇವರ ಬಗ್ಗೆ ಅವರ ಹೇಳಿಕೆ ಅದ್ಭುತವಾದದ್ದು !
ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದಡೆ ದೇವರೆತ್ತ ಹೋದರೋ ?
ಲಿಂಗ ಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ ಗುಹೇಶ್ವರಾ..
ನಮ್ಮ ಒಳಗಿರುವ ವಿಶ್ವ ವ್ಯಾಪಿಯಾಗಿರುವ ದೇವರು ಎಲ್ಲಿ ಹೋದರು ಎಂದು ಕೇಳುತ್ತಾರೆ ಪ್ರಭುಗಳು. ನಮ್ಮ ಒಳ ಜಗತ್ತು ಮತ್ತು ಹೊರ ಜಗತ್ತಗಳಲ್ಲಿ ದೇವರು ವ್ಯಾಪಿಸಿದ್ದಾನೆ.
ಬಸವಣ್ಣನವರ ಗುರಿ ಲೋಕಕಲ್ಯಾಣವಾದುದರಿಂದ ಅವರು ಜನ ಸಮುದಾಯದಲ್ಲೇ ದೇವರನ್ನು ಕಂಡರು. ಇಡೀ ಸಮಾಜಕ್ಕೆ ‘ಜಂಗಮಲಿಂಗ’ವೆಂದು ಕರೆದರು. ನೀರಿಲ್ಲದೆ ಮೀನುಗಳು ಬದುಕಲಾರದಂತೆ ಜನ ಸಮುದಾಯವಿಲ್ಲದೆ ಶರಣರು ಬದುಕಲಾರರು ಎಂಬುದನ್ನು ಅವರ ಈ ವಚನದಲ್ಲಿ ನೋಡಬಹುದು.
ಜಲವ ತಪ್ಪಿದ ಮತ್ಸ್ಯ ಬದುಕೂದೆ ಸೋಜಿಗ
ಗಣ ತಿಂಥಿಣೀಯೊಳಗಿರಿಸೆನ್ನ ಲಿಂಗವೇ
ಶಿವಶಿವಾ ಕೂಡಲಸಂಗಮದೇವಾ
ಅವಿರಳ ಜ್ಞಾನಿ ಚೆನ್ನಬಸವಣ್ಣ ತನ್ನ ಒಂದು ವಚನದಲ್ಲಿ ಬಸವಣ್ಣನವರ ಕುರಿತು ಹೇಳಿದ ಮಾತು ಬಹಳ ಅರ್ಥಪೂರ್ಣವಾದುದು.
ಕವಿತ್ವ ಸಾಧಕರೆಲ್ಲರೂ ಕಳವಳಿಸಿ ಹೋದರು
ವಿದ್ಯಾ ಸಾಧಕರೆಲ್ಲರೂ ಬುದ್ಧಿಗೆಟ್ಟರು
ತತ್ವ ಸಾಧಕರೆಲ್ಲರೂ ಭಕ್ತಿಹೀನನಾದರು
ಲಿಂಗಸಾಧಕರೆಲ್ಲರೂ ಭೂಭಾರಕರಾದರು
ಕೂಡಲ ಚೆನ್ನಸಂಗಮದೇವಯ್ಯ
ನಿಮ್ಮ ಬಸವಣ್ಣ ಜಂಗಮಸಾಧಕನಾಗಿ ಸ್ವಯಂ ಲಿಂಗವಾದನು!
-ಚನ್ನಬಸವಣ್ಣ
ಅಂದರೆ ಚೈತನ್ಯವನ್ನರಿಯದ ಇವರೆಲ್ಲ ನಿರರ್ಥಕ ಬದುಕನ್ನು ಸಾಗಿಸಿದವರು. ಆದರೆ ಬಸವಣ್ಣನವರು ಸಕಲ ಜೀವಾತ್ಮರಲ್ಲಿ ದೇವರನ್ನು ಕಂಡು ಬದುಕನ್ನು ಸವೆಸಿ ದೈವತ್ವಕ್ಕೇರಿದವರು.
ಹೀಗೆ ಬಸವಣ್ಣನವರ ಪ್ರಕಾರ ಕಣ್ಣಿಗೆ ಕಾಣುವ ವಸ್ತುಗಳೆಲ್ಲ ಸ್ಥಾವರ : ಒಳಗಣ್ಣಿಗೆ ಕಾಣುವ ಚೈತನ್ಯ ಮಾತ್ರ ಜಂಗಮವಾಗಿದ್ದು ಅದುವೇ ದೇವರು. ವೈಜ್ಞಾನಿಕ ಮನೋಭಾವದ ಅವರು ಈ ರೀತಿಯಲ್ಲಿ ಸ್ಥಾವರ ಮತ್ತು ಜಂಗಮದ ರಹಸ್ಯ ಬಿಡಿಸಿ ದೇವರ ಅಸ್ಥಿತ್ವವನ್ನು ತಿಳಿಯಪಡಿಸಿದರು. ಚೈತನ್ಯಾತ್ಮಕ ಭೌತಿಕವಾದ ಎಂಬ ತತ್ವಜ್ಞಾನದ ಹರಿಕಾರರಾದರು. ಅದರ ಮೂಲಕ ‘ಸರ್ವಸಮತ್ವ’ದಿಂದ ಕೂಡಿದ ಸಾಮಾಜಿಕ ವ್ಯವಸ್ಥೆ ತರಲು ಹೋರಾಡಿದರು. ಈ ರೀತಿ ಲೋಕಕಲ್ಯಾಣಕ್ಕಾಗಿ ಶ್ರಮಿಸಿ ಜಗಜ್ಯೋತಿಯಾದರು.
ಶರಣು
(ಆಧಾರ)
-ಶ್ರೀಮತಿ ಹಮೀದಾಬೇಗಂ ದೇಸಾಯಿ, ಸಂಕೇಶ್ವರ