ಮಹಾಂತರ ನೆನಪು
ಡಾ|| ಮಹಾಂತಪ್ಪನವರ ನೆನೆಯುವೆವು ದಿನದಿನವು
ನಿಮ್ಮ ನೆನಪೆ ನಮಗಾಗಿಹುದು ಜೀವನಾಮೃತವು ||
ನಿಮ್ಮ ಚಿರ ನಗುವೆ ನಮಗೆ ದಾರಿ ದೀಪವು
ಆ ಜ್ಞಾನದೀಪದ ಬೆಳಕಲ್ಲೆ ಸಾಗುವೆವು ನಾವು ||
ಬಸವಧರ್ಮದ ಬೀಜವಾ ಬಿತ್ತಿರುವಿರಿ ನೀವು
ಆ ಸಂಮೃದ್ಧ ಫಲವಾ ಪಡೆಯುತ್ತಿರುವೆವು ನಾವು ||
ಬಸವಣ್ಣನವರ ಪ್ರತಿರೂಪವೆ ಆಗಿರುವಿರಿ ನೀವು
ನೀವು ನಡೆದ ಸುಜ್ಞಾನ ಮಾರ್ಗದಲಿ ಸಾಗುವೆವು ನಾವು ||
ಬಸವ ಧರ್ಮದ ಮಹಾ ದಂಡನಾಯಕರು ನೀವು
ನಾಡೆಲ್ಲ ಬಸವ ಬೆಳಕ ಹರಡುವೆವು ನಾವು ||
ಲಿಂಗ ರೂಪಿ ಜಂಗಮ ಸ್ವರೂಪಿ ಪ್ರಣವ ಸ್ವರೂಪಿಗಳು ನೀವು
ನಮ್ಮ ಲಿಂಗದಲ್ಲಿಯೆ ನಿಮ್ಮನು ಕಾಣುವೆವು ನಾವು ||
‘ಬಸವ’ ನಾಮದ ಅಂಕುಶವ ಕೊಟ್ಟಿರುವುರಿ ನೀವು
ಬಸವತತ್ವ ಹಿಡಿದು ಮಾಯೆಯಾ ಗೆಲ್ಲುವೆವು ನಾವು ||
ನೀವು ಹಿಡಿದ ಮಹಾಂತ ಜೋಳಿಗೆಯ ಬಿಟ್ಟಿಲ್ಲ ನಾವು
ಲಿಂಗ ಕಟ್ಟುವುದನು ಮುಂದುವರೆಸುವೆವು ನಾವು ||
ನೀವು ಕೊಟ್ಟ ಅರಿವಿನಿಂ ಮೂರ್ತಿಪೂಜೆಯಾ ಬಿಟ್ಟಿರುವೆವು ನಾವು
ಹಾಲ್ಕುಡಿವ ಹಬ್ಬವನು ನಾಡೆಲ್ಲ ಹಬ್ಬುವೆವು ನಾವು ||
ಸಂಯಮ ಪ್ರಶಸ್ತಿಗಳು ಹೆಮ್ಮೆ ಪಡುತಿಹವು
ಡಾಕ್ಟರೇಟ ಪ್ರಶಸ್ತಿಯ ಗೌರವ ಹೆಚ್ಚಿಸಿದಿರಿ ನೀವು ||
ಮಾನವೀಯತೆಯ ಸಾಕಾರ ಮೂರ್ತಿಗಳು ನೀವು
ಮೌಢ್ಯದಾ ಬೇರು ಕಿತ್ತೆಸೆದವರು ನೀವು ||
ಬೆಲೆಕಟ್ಟಲಾಗದ ಗುರುಮಹಾಂತರ ಕೊಟ್ಟಿರುವಿರಿ ನೀವು
ಅವರ ಅರಿವಿನಾ ಮಾರ್ಗದಲಿ ಸಾಗುವೆವು ನಾವು ||
ನಿಮ್ಮ ಆಣತಿಯಂತೆಯೆ ಮುನ್ನಡೆಯುವೆವು ನಾವು
ನಿಮ್ಮಾಸೆಯ ಕಲ್ಯಾಣ ರಾಜ್ಯವ ಕಟ್ಟುವೆವು ನಾವು ||
–ಸವಿತಾ. ಎಮ್. ಮಾಟುರ
ಇಲಕಲ್ಲ