ಅಷ್ಟಾವರಣದಲ್ಲಿ ಗುರು-ಲಿಂಗ-ಜಂಗಮ
ಯಾವುದೇ ಧರ್ಮ ತತ್ವ, ಸಿದ್ಧಾಂತ ಮತ್ತು ಸಾಂಸ್ಕೃತಿಕ ಪರಂಪರೆಯ ನೆಲೆಗಟ್ಟಿನಲ್ಲಿ ನಿಂತಿರುತ್ತದೆ. ಹಾಗೆಯೇ ಲಿಂಗಾಯತ ಧರ್ಮವೂ ಕೂಡ ಪಂಚಾಚಾರ, ಷಟ್ ಸ್ಥಲ ಮತ್ತು ಅಷ್ಟಾವರಣಗಳೆಂಬ ತತ್ವ ಸಿದ್ಧಾಂತಗಳನ್ನು ಆಧಾರವಾಗಿಟ್ಟುಕೊಂಡು ಬೆಳೆದು ಬಂದಂಥ ಧರ್ಮ. ಇವುಗಳನ್ನು ಅಂಗ, ಪ್ರಾಣ ಮತ್ತು ಆತ್ಮ ಎಂದೂ ಕರೆಯಲಾಗುತ್ತದೆ. ಅಷ್ಟಾವರಣ ಉಸಿರಾದರೆ, ಪಂಚಾಚಾರ ನಮ್ಮ ನಡವಳಿಕೆಯನ್ನು ತೋರಿಸುವ ಮತ್ತು ಷಟ್ ಸ್ಥಲ ಲಿಂಗಾಂಗ ಸಾಮರಸ್ಯನ್ನು ತೋರಿಸುವ ತತ್ವಗಳಾಗಿವೆ. ಅಂದರೆ ಎಂಟು ಆವರಣಗಳು, ಐದು ಸನ್ನಡತೆಗಳು ಮತ್ತು ಆರು ಸ್ಥಲಗಳು ಭಕ್ತಿ, ಜ್ಞಾನ, ಕ್ರಿಯೆಗಳ ತ್ರಿವೇಣಿ ಸಂಗಮಗಳಾಗಿದೆ. ಅಷ್ಟಾವರಣ ನಮ್ಮನ್ನು ಹಾದಿ ತಪ್ಪಿಸುವ ಮಾಯೆಯಿಂದ ಅಥವಾ ಅಜ್ಞಾನದಿಂದ ರಕ್ಷಿಸುವ ಕೆಲಸವನ್ನು ಮಾಡುತ್ತವೆ. ಅಷ್ಟಾವರಣಗಳು ಯಾವುವೆಂದರೆ:
1) ಗುರು
2)ಲಿಂಗ
3)ಜಂಗಮ
4)ವಿಭೂತಿ
5)ರುದ್ರಾಕ್ಷ
6)ಮಂತ್ರ
7) ಪಾದೋದಕ
8) ಪ್ರಸಾದ
ಇದರಲ್ಲಿ ಗುರು, ಲಿಂಗ, ಜಂಗಮಕ್ಕೆ ಅತ್ಯಂತ ಮಹತ್ವದ ಸ್ಥಾನ ಇದೆ. ಇವು ಅತ್ಯಂತ ಪೂಜ್ಯನೀಯ. ಈ ಮೂರು ತತ್ವಗಳನ್ನು ಪೂಜಿಸಲು ಮೂರು ಆಕರ ಅಥವಾ ಸಾಧನಗಳನ್ನು ನೀಡತಾರೆ ಅವೇ ವಿಭೂತಿ, ರುದ್ರಾಕ್ಷಿ ಮತ್ತು ಮಂತ್ರ. ಗುರು, ಲಿಂಗ ಮತ್ತು ಜಂಗಮಗಳನ್ನು ವಿಭೂತಿ, ರುದ್ರಾಕ್ಷಿ ಮತ್ತು ಮಂತ್ರಗಳಿಂದ ಪೂಜಿಸಿದಾಗ ಸಿಗುವ ಪ್ರತಿಫಲವೇ ಪಾದೋದಕ ಮತ್ತು ಪ್ರಸಾದ. ಈ ಎಲ್ಲ ತತ್ವಗಳನ್ನು ಆಧ್ಯಾತ್ಮಿಕ ಮತ್ತು ಅನುಭಾವದ ಹಿನ್ನೆಲೆಯಲ್ಲಿ ಬಹಳ ಚರ್ಚೆಯನ್ನು ಮಾಡುವ ಅವಶ್ಯಕತೆಯಿದೆ ಮತ್ತು ಈ ನಿಟ್ಟಿನಲ್ಲಿ ಹಲವಾರು ಅನುಭಾವಿಗಳು ವಿಶ್ಲೇಷಣೆ ಮಾಡಿದ್ದಾರೆ ಕೂಡ. ಪಕ್ಷಿನೋಟದಿಂದ ವಿಶ್ಲೇ಼ಷಣೆ ಮಾಡುವುದಾದರೆ ಗುರು ಎಂದರೆ ಅಂತರಂಗದ ಅರಿವು, ಲಿಂಗ ಅಂದರೆ ಅನುಭವ ಮತ್ತು ಜಂಗಮ ಅಂದರೆ ಅನುಭಾವ.
ತನುವ ಕೊಟ್ಟು | ಗುರುವನೊಲಿಸಬೇಕು ||
ಮನವ ಕೊಟ್ಟು | ಲಿಂಗವನೊಲಿಸಬೇಕು ||
ಧನವ ಕೊಟ್ಟು | ಜಂಗಮವನೊಲಿಸಬೇಕು ||
ಈ ತ್ರಿವಿಧವ | ಹೊರಗು ಮಾಡಿ ||
ಹರೆಯ ಹೊಯಿಸಿ | ಕುರುಹ ಪೂಜಿಸುವ ||
ಗೊರವರ ಮೆಚ್ಚ | ಕೂಡಲಸಂಗಮದೇವ ||
ಬಸವಣ್ಣನವರು ಈ ವಚನದಲ್ಲಿ ಗುರು ಲಿಂಗ ಜಂಗಮ ಇವೆಲ್ಲವೂ ನಮ್ಮೊಳಗಿನ ತತ್ವಗಳು ಅಂತ ಸ್ಪಷ್ಟವಾಗಿ ಹೇಳತಾರೆ. ಗುರು ಎನ್ನುವುದು ಅಂತರಂಗದ ಅರಿವು ಅದಕ್ಕಾಗಿ ತನುವನ್ನು ಧಾರೆ ಎರೆಯಬೇಕು. ಲಿಂವೆಂದರೆ ಆಚಾರ ನಡೆ ನುಡಿ. ಇದು ಶುದ್ಧ ಮನಸ್ಸಿನಿಂದ ನಡೆದಾಗ ಮಾತ್ರ ಆಗುವ ಪ್ರಜ್ಞೆ. ಜಂಗಮವೆಂದರೆ ನಮಗಾಗುವ ಅನುಭಾವ. ಇದನ್ನು ಧನ ಎಂದರೆ ನಮ್ಮ ಸಮಸ್ತ ಶಕ್ತಿಯನ್ನೆಲ್ಲಾ ಕೇಂದ್ರೀಕರಿಸಿ ಸಮಷ್ಠಿಗೆ ಸೇವೆಯನ್ನು ಸಲ್ಲಿಸಿದಾಗ ಆಗುವ ತೃಪ್ತಿಯ ಅನುಭೂತಿ. ಇದನ್ನು ಬಿಟ್ಟು ಸ್ಥಾವರಕ್ಕೆ ಮೊರೆ ಹೋಗಿ ಹುಡುಕಿದರೆ ಗುರು ಲಿಂಗ ಜಂಗಮದ ಬೆಳಕು ಅಥವಾ ಪ್ರಕಾಶ ಸಿಗಲಾರದು.
ಗುರು :
ಅಷ್ಟಾವರಣದಲ್ಲಿ ಗುರು ಒಂದು ಪ್ರಮುಖ ತತ್ವ. ಸನಾತನ ವ್ಯವಸ್ಥೆಯ ಗುರುಕುಲ ಪದ್ಧತಿಗೆ ವ್ಯತಿರಿಕ್ತವಾಗಿ ಶರಣರು ಗುರು ಎಂಬ ಪದವನ್ನು ಕಂಡುಕೊಂಡರು. ಗುರು ಅದು ಸ್ಥಾಯಿ ಭಾವವಲ್ಲ, ಅದು ಸಂಚಾರಿ ಚೇತನ ಮತ್ತು ಅರಿವಿನ ಪ್ರಜ್ಞೆ. ಗುರು ಎಂದರೆ, ವಚನಗಳ ಪ್ರಕಾರ ಅರಿವನ್ನು ಪಡೆದವನು, ತನ್ನನ್ನು ತಾನು ಅರಿತವನು ಅಥವಾ ಆ ಅರಿವೇ ಗುರು.
ಆನು ಮಾಡಲು | ಗುರುವಾದನಲ್ಲದೆ ||
ಗುರು ಮಾಡಲು | ನಾನಾದೆನೆ ||
ಗುರು ಮಾಡಲು | ಲಿಂಗವಾಯಿತ್ತಲ್ಲದೆ ||
ಲಿಂಗ ಮಾಡಲು | ಗುರುವಾದನೆ ||
ಇಂತೀ ಉಭಯ | ಕುಳಸ್ಥಳವನು ||
ಕೂಡಲಚೆನ್ನಸಂಗನ | ಶರಣ ಬಲ್ಲನಲ್ಲದೆ ||
ಎಲ್ಲರೂ | ಎತ್ತ ಬಲ್ಲರು |
ನಾನು ಅರಿತ ಮೇಲೆ ಗುರು ನಾನಾದೆನು ಎನ್ನುವಲ್ಲಿ ತನ್ನನ್ನು ತಾನು ಅರಿಯುವುದೇ ಗುರು ಎನ್ನುವುದನ್ನು ಚೆನ್ನ ಬಸವಣ್ಣನವರು ಈ ವಚನದಲ್ಲಿ ಹೇಳಿದ್ದಾರೆ. ಗುರು ತತ್ವ ಅಂದರೇನೆ ತನ್ನನ್ನು ತಾನು ಅರಿಯುವುದು. ಯಾರನ್ನೋ ಪೂಜಿಸಿ ಯಾರನ್ನೋ ಹೊಗಳಿ ಯಾರಿಂದಲೋ ಕಲಿತು ಆಗಲಾರದ್ದು ಎನ್ನುವುದನ್ನು ಸಾಂಕೇತಿಕವಾಗಿ ಲಿಂಗ ಮಾಡಲು ಗುರುವಾದೆನೆ ಎಂದು ಹೇಳುವುದರ ಮೂಲಕ ತಿಳಿಸಿದ್ದಾರೆ. ಸಾಕಾರ ನಿರಾಕಾರ ತತ್ವವಾದ ಗುರು ಮತ್ತು ಲಿಂಗದ ವ್ಯಾತ್ಯಾಸವನ್ನು ತಿಳಿದವರು ಮಾತ್ರ ಶರಣರಾಗಲು ಸಾಧ್ಯ ಎಂದು ಚೆನ್ನಬಸವಣ್ಣ ಈ ವಚನದ ಮೂಲಕ ನಿರ್ದೇಶಿಸಿದ್ದಾರೆ. ಉಭಯ ಕುಳಸ್ಥಳವನು ಅರಿತಾಗ ಗುರು ಅಂದರೆ ವ್ಯಕ್ತಿಯೂ ಹೌದು ತತ್ವವೂ ಹೌದು ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ. ಒಟ್ಟಾರೆ ಅಷಾವರಣದ ಗುರು ತತ್ವ ತನ್ನನ್ನು ತಾನು ಅರಿಯುವ ಅಂತರಂಗದ ಅರಿವನ್ನು ಸೂಚಿಸುವ ತತ್ವ ಮತ್ತು ಇದನ್ನು ಸಾಕಾರ ರೂಪದಲ್ಲಿರುವ ಗುರು ಸಂಕೇತ ಅಷ್ಟೆ.
ಲಿಂಗ :
ಅಷ್ಟಾವರಣದಲ್ಲಿ ಲಿಂಗ ತತ್ವವು ನಡೆ ನುಡಿ ಶುದ್ಧವಾಗಿರುವುದರ ಸಾಂಕೇತಿಕ ಆಚಾರ ತತ್ವವನ್ನು ಸೂಚಿಸುವ ಪದ ಅಥವಾ ತತ್ವ.
ನಡೆಯಲರಿಯದೆ | ನುಡಿಯಲರಿಯದೆ ||
ಲಿಂಗವ ಪೂಜಿಸಿ | ಫಲವೇನು ಫಲವೇನು ||
ಅವರ ದುಃಖವೆನ್ನ | ದುಃಖ ||
ಅವರ ಸುಖವೆನ್ನ | ಸುಖ ||
ಕೂಡಲಸಂಗನ | ಶರಣರ ಮನ ||
ನೊಂದೆಡೆ ಆನು | ಬೆಂದೆನಯ್ಯಾ ||
ನಮ್ಮ ನಡತೆಯಿಂದ ಮತ್ತು ನಾವಾಡುವ ಮಾತುಗಳಿಂದ ಸಮಾಜದಲ್ಲಿ ಸುಖವನ್ನು ಪಸರಿಸುವ ಚಿಂತನೆ ನಮ್ಮದಾಗಿರಬೇಕು. ಸಮಾಜಮುಖಿ ಚಿಂತನೆಯಲ್ಲಿ ಇಡೀ ಸಮಷ್ಠಿಯ ದುಃಖವನ್ನು ಸ್ವಲ್ಪಮಟ್ಟಿಗಾದರೂ ಕಡಿಮೆ ಮಾಡುವಲ್ಲಿ ಮತ್ತು ಸುಖವನ್ನು ಹಂಚಿಕೊಳ್ಳುವಲ್ಲಿ ಯಶಸ್ವಿಯಾದರೆ ಅದೇ ಲಿಂಗಪೂಜೆ. ಇದರ ಹೊರತು ಲಿಂಗತತ್ವವೆಂಬುದು ಬೇರೆ ಇಲ್ಲಾ ಎನ್ನುವ ಈ ವಚನ ಅಷ್ಟಾವರಣದ ಲಿಂಗ ತತ್ವದ ಮುನ್ನುಡಿ ಬರೆದಂಗಿದೆ. ಲಿಂಗ ತತ್ವ ಎಂದರೆ ಒಟ್ಟಾರೆ ಸಮಷ್ಠಿ ಪ್ರಜ್ಞೆ ಮತ್ತು ಎಲ್ಲರ ಒಳಿತಿಗಾಗಿ ನಮ್ಮ ನಡೆ ನುಡಿಯಿರಬೇಕೆನ್ನುವ ತತ್ವ.
ಕಾಣಬಾರದ ಲಿಂಗವು | ಕರಸ್ಥಲಕ್ಕೆ ಬಂದಡೆ ||
ಎನಗಿದು ಸೋಜಿಗ | ಎನಗಿದು ಸೋಜಿಗ ||
ಅಹುದೆನಲಮ್ಮೆನು | ಅಲ್ಲೆನಲಮ್ಮೆನು ||
ಗುಹೇಶ್ವರ ಲಿಂಗವು | ನಿರಾಳ ನಿರಾಕಾರ ಬಯಲು ||
ಬಯಲು ಎನ್ನುವ ಶಬ್ದ ಬಹುಶಃ ವಚನ ಸಾಹಿತ್ಯದ ಶ್ರೇಷ್ಠ ಕೊಡುಗೆ ಅಂತ ನನ್ನ ಅನಿಸಿಕೆ. ಬಯಲು ಎನ್ನುವುದು ವ್ಯಾಕರಣದಲ್ಲಿ ಹೇಳುವ ಹಾಗೆ ಬಿಟ್ಟಸ್ಥಳವನ್ನು ತುಂಬಿಸಿ ಎಂದಾಗ ಯಾವುದೇ ಸಂದರ್ಭದಲ್ಲಿ ಬಳಕೆ ಮಾಡಬಹುದಾದಂಥ ಪದ. ಬಯಲು ನಿರ್ವಯಲು ಬಯಲಾದರು ಹಾಗೆ ಶ್ರೇಷ್ಠವಾದದ್ದನ್ನು ಸೂಚಿಸುವ ಶಬ್ದ. ಲಿಂಗವು ಸಾಕಾರವೂ ಹೌದು ನಿರಾಕಾರವೂ ಹೌದು. ನಾವು ದೇವಸ್ಥಾನಕ್ಕೆ ಹೋಗತೀವಿ. ಸಾಕಾರ ರೂಪವನ್ನು ಕಂಡು ಕೈ ಮುಗಿದು ಭಕ್ತಿ ಸಮರ್ಪಣೆ ಮಾಡತೀವಿ. ಆದರೆ ಕಣ್ಣುಮುಚ್ಚಿ ಪ್ರಾರ್ಥನೆ ಮಾಡುವುದು ನಿರಾಕಾರ ತತ್ವಕ್ಕೆ. ಎಂಥ ಸೋಜಿಗ ಅಲ್ಲವೇ. ಜ್ಞಾನದ ಇಡೀ ಸಮಸ್ತರೂಪ ಮತ್ತು ಅವ್ಯಕ್ತ ಪ್ರಜ್ಞೆಯನ್ನು ಸೂಚಿಸುವ ಲಿಂಗತತ್ವವನ್ನು ಸೂಚಿಸುವ ಕಾಣಬಾರದ ಇಷ್ಠಲಿಂಗವನ್ನು ಕರಸ್ಥಲದಲ್ಲಿ ನೋಡಿದ ಅಲ್ಲಮ ಪ್ರಭುಗಳು ಇದನ್ನೇ ಎನಗಿದು ಸೋಜಿಗ ಎನಗಿದು ಸೋಜಿಗ ಅಂತ ಹೇಳುವುದು. ಇದು ಅನುಪಮ, ಅವಿರಳ, ಸಮಷ್ಠಿ ಸುಜ್ಞಾನದ ಪ್ರಜ್ಞೆಯ ಲಿಂಗ ತತ್ವ.
ಜಂಗಮ :
ಅಷ್ಟಾವರಣದ ಜಂಗಮ ತತ್ವ ಚೈತನ್ಯ ಮತ್ತು ಜ್ಞಾನ ಸ್ವರೂಪದ ಅಗಾಧ ಚಲನಶೀಲತೆಯುಳ್ಳ ತತ್ವ. ನಾವು ನೋಡುವ ಕಾವಿಧಾರಿ ಜಂಗಮ ರೂಪ ಕೇವಲ ವ್ಯಕ್ತಿಯ ಅಥವಾ ಸ್ಥಾವರ ಸ್ವರೂಪ. ಯಾವಾಗ ವ್ಯಕ್ತಿ ನಡೆ ನುಡಿಯಲ್ಲಿ ಸತ್ಯವನ್ನು ಮತ್ತು ಅಂತರಂಗದಲ್ಲಿ ಶಿವಭಾವವನ್ನು ಜೀವಂತವಿರಿಕೊಂಡು ಲೋಕ ಕಲ್ಯಾಣಕ್ಕಾಗಿ ಚಲಿಸುವಂಥವನು ಆದಾಗ ಮಾತ್ರ ಜಂಗಮನಾಗಲು ಸಾಧ್ಯ. ಲಿಂಗ ತತ್ವವು ನಡೆ ನುಡಿ ಶುದ್ಧವಾಗಿರುವುದರ ಸಾಂಕೇತಿಕ ಆಚಾರ ತತ್ವವನ್ನು ಸೂಚಿಸುವ ಪದ ಅಥವಾ ತತ್ವ.
ಎರೆದಡೆ | ನೆನೆಯದು ||
ಮರೆದಡೆ | ಬಾಡದು ||
ಹುರುಳಿಲ್ಲ ಹುರುಳಿಲ್ಲ | ಲಿಂಗಾರ್ಚನೆ ||
ಕೂಡಲಸಂಗಮದೇವಾ | ಜಂಗಮಕ್ಕೆರೆದಡೆ ||
ಸ್ಥಾವರ | ನೆನೆಯಿತ್ತು ||
ಅಂತರಂಗದ ಚೇತನ ಈ ಜಂಗಮ ತತ್ವ. ಜಲಾಭಿಷೇಕ, ಧೂಪಾರತಿ, ಪುಷ್ಪಾರ್ಚನೆ ಮತ್ತು ನೈವೇದ್ಯದ ಮೂಲಕ ಸ್ಥಾವರ ಲಿಂಗಪೂಜೆಯಿಂದ ಯಾವುದೇ ಪ್ರಯೋಜನವಿಲ್ಲ. ಲಿಂಗಾಯತ ಧರ್ಮ ಇಂತ ಪೂಜೆ ಪುನಸ್ಕಾರಗಳನ್ನು ಪುರಸ್ಕರಿಸುವುದಿಲ್ಲ. ಸಮಷ್ಠಿ ಸುಖಭಾವದ ಪ್ರಜ್ಞೆಯಿಂದ ಮಾಡುವ ಸೇವೆಯನ್ನು ಚೈತನ್ಯಮಯ ಜಂಗಮಕ್ಕೆ ನೀಡಿದರೆ ಕೂಡಲಸಂಗಮನೆಂಬ ಪ್ರಕಾಶಮಯ ಸಮಾಜಕ್ಕೆ ತಲುಪುತ್ತದೆ ಎನ್ನುವ ಜಂಗಮತತ್ವವನ್ನಿ ಈ ವಚನ ಸಾದರ ಪಡಿಸುತ್ತದೆ.
ಜನ್ಮ ಜನ್ಮಕ್ಕೆ | ಹೋಗಲೀಯದೆ ||
ಸೋಹಂ | ಎಂದೆನಿಸದೇ ||
ದಾಸೋಹಂ | ಎಂದೆನಿಸಯ್ಯಾ ||
ಲಿಂಗ ಜಂಗಮದ | ಪ್ರಸಾದದ ||
ನಿಲವ ತೋರಿ | ಬದುಕಿಸಯ್ಯಾ ||
ಕೂಡಲಸಂಗಮದೇವಾ | ನಿಮ್ಮ ಧರ್ಮ ||
ಸಃ ಅಹಂ ಎನ್ನುವಲ್ಲಿ ಅವನೇ ನಾನು ಎನ್ನುವ ಅದ್ವೈತ ತತ್ವದಲ್ಲಿ ಗುರು ಲಿಂಗ ಜಂಗಮ ಎನ್ನುವುದು ನನ್ನೊಳಗೆ ಇರುವ ಅರಿವು, ಆಚಾರ ಮತ್ತು ಜ್ಞಾನ. ಇವು ಜನ್ಮಾಂತರದ ಕುರುಹುಗಳಲ್ಲ. ತನ್ನಲ್ಲಿ ತಾನು ಪ್ರಕಾಶಿಸಿಕೊಳ್ಳಬೇಕಾದ ತತ್ವಗಳು. ಬಸವಣ್ಣನವರು ಮುಂದುವರೆದು ಎಷ್ಟ ಚಂದ ವರ್ಣಿಸತಾರೆ ಅಂದರೆ ದಾಸಃ ಅಹಂ. ನಾನು ದಾಸನು. ಯಾವಾಗ ಇಡೀ ಸಮಾಜವನ್ನು ಜಂಗಮ ರೂಪದಲ್ಲಿ ನೋಡಿದಾಗ ಮಾತ್ರ ದಾಸನಾಗಲು ಮಾತ್ರ ಸಾಧ್ಯ ಎನ್ನುವಲ್ಲಿ ಜಂಗಮ ತತ್ವವನ್ನು ಅತ್ಯಂತ ಎತ್ತರಕ್ಕೆ ತೆಗೆದುಕೊಂಡು ಹೋಗತಾರೆ ಬಸವಣ್ಣ. ಇದು ಜಂಗಮವೆಂಬ ಜ್ಞಾನದ ಹಸಿವಿಗೆ ದಾಸೋಹವೆಂಬ ಕಲ್ಪನೆ ನೀಡಿ ಸಮಷ್ಠಿಯ ಆಧ್ಯಾತ್ಮದ ಕ್ರಾಂತಿಯ ಚಲನಶಿಲತೆ.
ಲಿಂಗದೊಳಗೆ ಜಂಗಮ | ಸಲೆ ಸಂದಿರಬೇಕು ||
ಜಂಗಮದೊಳಗೆ ಲಿಂಗವು | ಸಲೆ ಸಂದಿರಬೇಕು ||
ಅಂಗ-ಪ್ರಾಣಂಗಳಲ್ಲಿ | ಲಿಂಗವ ಹಿಂಗಿರ್ದ ||
ಜಂಗಮವು ಮುಂದೆ | ಚರ-ಪರವಲ್ಲ ||
ಹಿಂದೆ ಗುರುಕರಣ(ನ)ಲ್ಲ | ವೆಂದನಂಬಿಗರ ಚೌಡಯ್ಯ ||
ಎಂಥ ಅನುಪಮ ಸಂಗಮವನ್ನು ಇಲ್ಲಿ ಚೌಡಯ್ಯನವರು ವಿವರಿಸುತ್ತಾರೆ ನೋಡಿ. ಲಿಂಗದೊಳಗೆ ಜಂಗಮ ಸಲೆ ಸಂದಿರಬೇಕು ಅಂದರೆ ಪರಿಪೂರ್ಣವಾಗಿ ತುಂಬಿಕೊಂಡಿರಬೇಕು. ಜಂಗಮದಲ್ಲಿ ಲಿಂಗವು ಸಂಪೂರ್ಣವಾಗಿ ಮುಳುಗಿಕೊಂಡಿರಬೇಕು. ಎಂಥಾ ಅದ್ಭುತ ಸಂಗಮವನ್ನು ಪ್ರತಿಪಾದಿಸಿದ್ದಾರೆ.
ಇದು ಹನ್ನರಡನೇ ಶತಮಾನದ ಸಾಹಿತ್ಯ, ಎಂಥವರನ್ನು ಚಕಿತಗೊಳಿಸುವ, ಜ್ಞಾನದ ದೀಪ್ತಿಯನ್ನು ಬೆಳಗಿಸಬಲ್ಲ ಒಂದು ತಾಕತ್ತು, ಒಂದು ಶಕ್ತಿ ಈ ಸಾಹಿತ್ಯ ಪ್ರಕಾರಕ್ಕಿದೆ. ಇಂತಹ ಸುಂದರ ಚಿತ್ರಣಕ್ಕಾಗಿಯೇ ಇನ್ನೂ ಜೀವಂತವಾಗಿದೆ ಈ ಸಾಹಿತ್ಯ ಮತ್ತು ಮುಂದೆಯೂ ಜೀವಂತವಾಗಿರಬಲ್ಲ ಸಾಹಿತ್ಯ ಇದು. ಇದು ಅಪ್ಪಟ ಬಂಗಾರ. ಬಂಗಾರವನ್ನು ಎಷ್ಟೇ ವರ್ಷ ಮುಚ್ಚಿಟ್ಟರೂ ಬಂಗಾರಾನೇ. ಇದು ಸತ್ಯ, ಇದು ನಿರಾಕಾರ ಬ್ರಹ್ಮ ಸ್ವರೂಪ.
–ವಿಜಯಕುಮಾರ ಕಮ್ಮಾರ, ತುಮಕೂರು –
ಮೋಬೈಲ್ ನಂ : 9741 357 132
ಈ-ಮೇಲ್ : vijikammar@gmail.com