ಜನಪದರ ಲಾವಣಿಯ ಸಂಸ್ಕ್ರತಿ

ಜನಪದರ ಲಾವಣಿಯ ಸಂಸ್ಕ್ರತಿ

ಜನಪದ ಸಾಹಿತ್ಯದ ಪ್ರಕಾರಗಳಲ್ಲಿ ನೃತ್ಯ ಸಂಗೀತ ಪ್ರಧಾನತೆಯನ್ನು ಬಿಂಬಿಸುವ ವಿಶಿಷ್ಟ ಜನಪದ ನರ್ತನ ಲಾವಣಿಯಾಗಿದೆ. ಮಹಾರಾಷ್ಟ್ರದಲ್ಲಿ ಲಾವಣಿ ನರ್ತನಕ್ಕೆ ಜನಪ್ರಿಯವಾದ ಬೇಡಿಕೆ ಇದೆ.ಜನಪದ ರಂಗ ಭೂಮಿಯಲ್ಲಿ ಮಹಾರಾಷ್ಟ್ರ ದ ಈ ನರ್ತನಕ್ಕೆ ತಮಾಷ ಎಂದು ಕರೆಯಲ್ಪ ಡುತ್ತದೆ.ಲಾವಣಿ ಮಹಾರಾಷ್ಟ್ರದ ಜನ ಪ್ರಿಯ ಜಾನಪದ ರೂಪಕವೂ ಹೌದು. ರಂಗಭೂಮಿಯ ಪ್ರಧಾನತೆ ಇರುವ ಇದನ್ನು ತಮಾಷ ಎಂದು ಕರೆಯಲಾಗಿತ್ತದೆ. ಲಾವಣಿಯ ಮುಖ್ಯ ಗುಣವೆಂದರೆ ಡೋಲ್ಕಿ ಎಂಬ ವಾದ್ಯದ ಸಹಾಯದಿಂದ ಸಾಂಪ್ರ ದಾಯಿಕ ಹಾಡು ಮತ್ತು ನೃತ್ಯವನ್ನು ಸಂಯೋಜನೆ ಮಾಡಲಾಗುತ್ತದೆ.ಲಯವೇ ಇದರ ಪ್ರಧಾನ ಗತ್ತು.

ಲಾವಾಣಿ- ಲಾವಣ್ಯ – ಸೌಂದರ್ಯ-ಸೊಬಗು ಸೊಗಸು ಎಂದು ಗುರುತಿಸಿ ಕೊಂಡಿದೆ. ಲಾವಣಿಯನ್ನು ಹೆಸರಿಸುವ ಸೂಚಿಸುವ ಆಂಗ್ಲ ಪದ ballad ಅರ್ಥೈಸಲಾಗಿದೆ. ಲಾವಣಿ ಮಹಾರಾಷ್ಟ್ರದ ಪೇಶ್ವೆಯವರ ಆಡಳಿತದಲ್ಲಿ ರೂಪತಳೆದು ಮನರಂಜ
ನೆಯನ್ನು ಬಿಂಬಿಸುವ ವಿಶಿಷ್ಟ ನರ್ತನವೂ ಹೌದು. ಸಾಂಪ್ರದಾಯಿಕವಾಗಿ ಧರ್ಮ ರಾಜಕೀಯ ಪ್ರಣಯದ ವಿವಿಧ ವಿಷಯಗಳನ್ನು ಲಾವಣಿಗಳು ತಿಳಿಸುತ್ತದೆ. ಉತ್ತರ ಕರ್ನಾಟಕ ಭಾಗದ ಒಂದು ಜನಪ್ರಿಯ ಸಂಪ್ರದಾಯ ಗೀ ಗೀ ..ಡಪ್ಪಿನ ಹಾಡು.. ಹಾಡಕ್ಕಿ ..ಶಾಯರಿ.. ಹರದೇಶಿ ನಾಗೇಶಿ ಕಲ್ಕಿ ತುರಾಯಿ ..ಸವಾಲ್ ಜವಾಬ್.. ಪದಗಳು ಎಂದು ಕರೆಯಲಾಗುತ್ತದೆ. ಮೂಲತಃ ದಣಿದ ಸೈನಿಕರಿಗೆ ಮನರಂಜನೆ ಯ ಜೊತೆಗೆ ವೀರ ಕಥನ ಕಾವ್ಯಗಳೂ ವೀರರನ್ನು ಎಚ್ಚರಿಸುತ್ತದೆ.

ಕರ್ನಾಟಕದಲ್ಲಿ ಜನಪದ ಸಾಹಿತ್ಯ ಮತ್ತು ಲಾವಣಿಗಳ ಸಂಗ್ರಹಕಾರ ಜಾನ್ ಜೆ.ಎಫ್.ಪ್ಲೀಟ್ ಎಂದು ಗುರುತಿಸಲಾಗಿದೆ.
ಲಾವಣಿಗಳಲ್ಲಿ ಎರಡು ಪ್ರಕಾರ..

೧..ನಿರ್ಗುಣ ಲಾವಣಿ(ತಾತ್ವಿಕವಾಗಿ)

೨.. ಶೃಂಗಾರ ಲಾವಣಿ( ಇಂದ್ರಿಯ ಹಾವಭಾವ)

ನಿರ್ಗುಣ ಲಾವಣಿ ದೇವರ ಆರಾಧನೆ ಭಕ್ತಿ ಭಾವದ ಕುರಿತು ಜನಪ್ರಿಯತೆ ಪಡೆದಿದೆ. ಶೃಂಗಾರ ಲಾವಣಿ ಹೆಚ್ಚಾಗಿ ಪುರುಷರು ಬರೆದರೆ ..ಹೆಂಗಸರು ವೇದಿಕೆಯ ಮೇಲೆ ಹಾಡಿ ನೃತ್ಯ ಮಾಡುತ್ತಾರೆ. ಸಾಂಪ್ರದಾಯಿಕವಾಗಿ ಲಾವಣಿಯನ್ನು ಬಯಲು ಲಾವಣಿ ಮೇಳ ಲಾವಣಿ ಎಂದು ಕರೆಯಲಾಗುತ್ತದೆ.ಬಯಲು ಲಾವಣಿಯಲ್ಲಿ ಹೆಸರೆ ಹೇಳುವಂತೆ .ಒಬ್ಬನೆ ಲಾವಣಿಯನ್ನು ಹೇಳುತ್ತಾನೆ.ಆದರೆ ಮೇಳ ಲಾವಣಿಯಲ್ಲಿ ಡಪ್ಪು ತುಂತುಣಿ ತಾಳಗಳೊಂದಿಗೆ ಹಾಡಲಾಗುತ್ತದೆ.ಒಂದು ಗಂಟೆಯ ಅವಧಿಯಲ್ಲಿ ಒಂದು ಸಖ. ಮುಖ್ಯ ವಾಗಿ ಹಾಡು ಹಾಗೂ ಖ್ಯಾಲಿನ್ನುಬಳಸ ಬೇಕಾಗುತ್ತದೆ.ಸವಾಲ್ ಜವಾಬ್ ವಿಚಾರದಲ್ಲಿ ಒಂದು ಗಂಟೆಗೆ ಸೀಮಿತ ಗೊಳಿಸಲು ಸಾದ್ಯವಿಲ್ಲ.ಅದು ಸಂದರ್ಭಾನು ಸಾರ ಬೆಳೆಯುತ್ತದೆ.

ಲಾವಣಿಯ ಈ ಹಾಡನ್ನು ಗಮನಿಸ ಬೇಕು…

ಕಲಿಯುಗದೊಳಗೆ ಹೇಳತೀನಿ ಬಂದII

ಇಂದೇ ಕೇಳಿರಿ ಪಸಂದ IIನೀವೆಲ್ಲಾ..ಕೂಡಿರಿ

ಬಂದು ಕುಂತು ಕೇಳಿರಣ್ಣಾ ಒಳ್ಳೆ ಚಂದ ..೧.

ದುಡ್ಡಿಂದ ಬಂದಿತು ಒಳ್ಳೆ ಘೋರ ಪೂರII

ಕೇಳಿರಿ ಎಲ್ಲಾರಾII ಬಡ ಜನಕೆ ಹತ್ತಿತು ಚಿಂತೆ

ಪೂರಾII ಅವರ ಕೇಳವಲ್ಲರು ಯಾರ್ಯಾರ

ಸಾಲ ಬೇಡಲಿಕ್ಕೋದರುIIಸಾವಕಾರ ಅವರು

ಕೊಟ್ಟಾರು IIಐದಾರು ಬಿರಾಡ ಬಿಟ್ಟುದು

ಬಂದಿತುII ಮಳೆಘೋರ ಚದುರಾ.ಕೇಳೋ

ಸುಂದರII ಇನ್ನು ಹ್ಯಾಂಗ ಮಾಡ ಬೇಕು

ಮನಿ ಮಾರII. ಬಿಟ್ಟು ಹೋಗೋದು ಬಂತ

ಸಂಸಾರII ಅವರು ಮಾಡತಾರ ಮನಸಿಗೆ

ನೊಂದII ಇಂದೇ ಕೇಳಿರಿ ಒಂದೊಂದ..೨.
ಲಾವಣಿಯ ಈ ಪದ್ಯವು ಒಂದು ಊರಿನ ಕಥನ ಪ್ರಸಂಗವನ್ನು ನೆನಪಿಸುತ್ತದೆ. ಕೇಳು ಎನ್ನುವಲ್ಲಿ ಮನುಷ್ಯನ ಶ್ರವಣ ಶಕ್ತಿಯ ಪಾಲುಂಟು.ಹೇಳುವುದಕ್ಕೆ ದೈತ್ಯ ಶಕ್ತಿಯ ಸಂಬಂದ ವಿದೆ.ಹೇಳುತ್ತೇನೆ ಎಂದು ಹಾಡುಗಾರ ಬಳಸುತ್ತಾ..ಕೇಳುವಿಕೆಯಲ್ಲಿ ಸಮಾಜದ ಜನರ ಜೊತೆ ತನ್ನ ನೋವನ್ನು ಹಂಚಿ ಕೊಳ್ಳುತ್ತಾನೆ.ಕುಂತು ಕೇಳಿರಣ್ಣಾ ಒಳ್ಳೆ ಛಂದಾ. ನಾ ಹೇಳುವೆ ನೀ ಕೇಳು ಎಂಬ ಅಧಿಕಾರ ಯುತಹೇಳಿಕೆ ಯಿಂದ ಪ್ರಾರಂಭ ವಾಗುತ್ತದೆ. ಲಾವಣಿ ಹೇಳುವ ಮತ್ತು ಕೇಳುವ ಸಂಸ್ಕ್ರತಿಯು ಕಲಿಯುಗದ ಅನನ್ಯತೆಯನ್ನು ಪಡೆಯುತ್ತದೆ. ಜನಪದರ ಸಾಂಸ್ಕೃತಿಕ ಲಾವಣಿ ಹಾಡುವ ಕ್ರಿಯೆಯ ಪ್ರೇರಣೆಗಳಾಗಿ ಮೌಖಿಕತೆಯಲ್ಲಿ ಬಿಚ್ಚುತ್ತಾ ಸಾಗುತ್ತದೆ. ಕಲಿಯುಗದವರಿಗೆ ನಾನು ಹೇಳುವ …ರೈತಾಪಿ ಜನ ವರ್ಗದವರ ಅಳಲು ಅವರ ಮೇಲಾಗುವ ದೌರ್ಜನ್ಯ ವನ್ನು ಖಂಡಿಸುವ ಕುರಿತು ಹೇಳುವ ಸಾಲುಗಳು ಇವಾಗಿವೆ.ಅಂದು ಸರಕಾರಕ್ಕೆ ತೆರಿಗೆ ಕೊಡಬೇಕಾದ ಸಂದರ್ಭದಲ್ಲಿ.. ದುಡ್ಡಿಲ್ಲದ ರೈತ ತನ್ನ ಹೊಲದ ದಾನ್ಯವನ್ನೇತೆರಿಗೆ ಯಾಗಿ ಕೊಡ ಬೇಕಾಗಿತ್ತು.ಮಳೆ ಬೆಳೆ ಇಲ್ಲ ದಿದ್ದರೆ ಬರಗಾಲ ಪ್ರಕೃತಿಯ ವಿಕೋಪಗಳಲ್ಲಿ ಮಾನಸಿಕವಾಗಿ ಹಿಂಸೆಯನ್ನು ಅನುಭವಿ ಸುತ್ತಾ ನೆ.ಹಣವೂ ಇಲ್ಲ ಬೆಳೆಯೂ ಇಲ್ಲದಾಗ ತನ್ನ ಜಮೀನಿನ ಕೆಲವು ಭಾಗವನ್ನು ಊರ ಸಾಹುಕಾರನಿಗೆ ಒತ್ತೆ ಇಡುತ್ತಾನೆ. ಇದನ್ನೆ ಹಾಡುಗಾರ ಹೇಳುವುದು. ಬಡ ಜನರಿಗೆ ಹತ್ತಿತು ಪೂರ ಚಿಂತೆ..ಎನ್ನುವಲ್ಲಿ ಭೂಮಿಯನ್ನು ಕಳೆದು ಕೊಂಡ ರೈತರು ಸಾಹುಕಾರರ ಸೇವಕರಾಗುತ್ತಿದ್ದಾರೆ. ಆಡಳಿತದ ಮಧ್ಯವರ್ತಿಯಾದ ಜಮೀಂದಾರ ಬಡ ರೈತನ ಸಂಸಾರದ ಮೇಲೆ ಆರ್ಥಿಕತೆಯ ಕರಿಛಾಯೆ ಬೀಳುತ್ತದೆ.ರಾಜಕೀಯ ವ್ಯವಸ್ಥೆ ಯಲ್ಲಿ ರೈತನನ್ನು ಮಲತಾಯಿ ಧೋರಣೆಯ ಮೂಲಕ ಕಾಣಲಾಗುತ್ತದೆ.ಹೀಗಾಗಿ ಶೋಷಿತ ಬಡ ರೈತನು ಮಾನಸಿಕ ಅಸ್ವಸ್ಥತೆ ಕಾರಣವಾಗಿ ಮನ ನೊಂದು ಲಾವಣಿಯ ಹಾಡಿನ ಮೂಲಕ ಸಮೂಹದಲ್ಲಿ ನಿವೇದಿಸಿಕೊಳ್ಳುತ್ತಾನೆ.

ಜನಪದರ ಜೀವನದ ಆಚರಣೆಗಳು ಬಸವಣ್ಣನ ಸಾಂಸ್ಕೃತಿಕ ಧರ್ಮದ ಮೂಲಕ ಗುರುತಿಸಿಕೊಳ್ಳುತ್ತದೆ.ಬಸವಣ್ಣನನ್ನು ದೇವರೆಂದು ತಿಳಿದುಅವರು ಹೇಳುವ ಅವರ ಮನದ ಭಾಷೆ ಈ ತೆರನಾಗಿದೆ…

ಜಾಲಿಹಾಳು ಎಂಬುದು ಊರಾ ಪೂರಾ

ಕೇಳೋ ವಿಸ್ತಾರII ಅಲ್ಲಿಹನು ಬಸವಣ್ಣ

ದೇವರII.ಪದ ಮಾಡಿ ಹಾಡ್ಯಾರು ಗೆಳೆಯರಾII

ಅಕ್ಷರ ಹೇಳುತೀನಿ ಒಳೆ ಪೂರಾII .ಚದುರ

ಮುತ್ತಿನ ಸರಾII.ಮನಸ್ಸಿಗೆ ತಂದು ನೋಡಿರಿ
ಬಲ್ಲವರಾII..ಅಯ್ಯಪ್ಪ ಜಟ್ಟೆಪ್ಪ ಇಬ್ಬರು

ಕುಂತು ಕೇಳುತಾರ IIಬರ್ಪೂರ..ಎಷ್ಟೂ

ಹೇಳಲಿ ಮನಸಿಗೆ ತಂದ IIಇಂದೇ ಕೇಳೊ

ಪಸಂದII. ..೩..

ಜಾಲಿಹಾಳು ಎಂಬ ಊರಲ್ಲಿ ಬಸವಣ್ಣ ದೇವರ ಪದ ಮಾಡಿ ಹಾಡ್ಯಾರ.ಎನ್ನುವ ಊರಿನ ಬಸವಣ್ಣನನ್ನು ಕುರಿತು ಪದ ಕಟ್ಟಿಹಾದುವ ಜನಪದರು ಕಲ್ಯಾಣದ ಬಸವಣ್ಣನ ವ್ಯಕ್ತಿತ್ವ ಕ್ಕೆ ಶರಣೆನ್ನುತ್ತಾರೆ.ನಿಸರ್ಗವೇ ದೇವರೆಂದು ಪೂಜಿಸುವ ಜನಕ್ಕೆ ಏಕದೇವೋಪಾಸನೆ…ಕರಸ್ಥಲಕ್ಕೆ ಲಿಂಗವನ್ನೇ ಕೊಟ್ಟು ಪೂಜಿಸುವ ಅಹ೯ತೆಯನ್ನು ಕೊಟ್ಟವನಾಗಿದ್ದ.ಕತ್ತಲಲ್ಲಿದ್ದ ಜನತೆಗೆ ವಚನಗಳ ಬೆಳಗನ್ನು ಪಸರಿಸಿದ ವನಾಗಿದ್ದ.ಜನಪದ ಶರಣರು ಅಕ್ಷರ ಜ್ಞಾನ ವಿಲ್ಲದಿದ್ದರೂ ಸಂಸ್ಕಾರವಂತರಾಗಿದ್ದರು. ಜ್ಞಾನ ಬಂಡಾರದ ಬಸವಣ್ಣನ ವಚನಗಳನ್ನು ಮುತ್ತಿನ ಅಕ್ಷರ ಗಳಿಗೆ ಹೋಲಿಸಿ ಹಾಡುತ್ತಾರೆ.ಜಟ್ಟ್ಯಪ್ಪ ಅಯ್ಯಪ್ಪ ಮನದ ಮಾನಸ ಶಿವ ಸ್ವರೂಪಿಗಳು”.ಅಯ್ಯಾ ನೀನು ನಿರಾಕಾರನಾಗಿದ್ದಲ್ಲಿ ನಾನು ವೃಷಭನೆಂಬ ವಾಹನ ವಾಗಿದ್ದೆ ಕಾಣಾ” ..ಈ ವಚನವನ್ನು ನೆನಪಿಸಿಕೊಳ್ಳ ಬಹುದು. ಶ್ರಮ ಸಂಸ್ಕ್ರತಿಯ ಜನರಿಗೆ ಅಯ್ಯಪ್ಪ ಜಟ್ಟ್ಯಪ್ಪರು ಕೃತಜ್ಞತರಾಗಿದ್ದಾರೆ.ಮಾನವತಾವಾದಿ ವ್ಯಕ್ತಿಯಾಗಿದ್ದ .ಬಸವಣ್ಣನನ್ನು ಬರ್ಪೂರ ಎನ್ನುವ ಶಬ್ದದ ವಿಶಿಷ್ಟತೆ ಲಾವಣಿ ಹಾಡಿಗೆ ಗತಿಯ ತೀವ್ರತೆಯ ,ಆವೇಗದ ಸುಂದರ ತೆಯನ್ನು ಹೆಚ್ಚಿಸುತ್ತದೆ.

ಲಾವಣಿ ಹಾಡುಗಾರ ತನ್ನ ಪರಂಪರೆಯ ಆಡು ಮಾತಿನ ಕಾಕು ಉದ್ಗಾರಗಳೊಂದಿಗೆ ಲಾವಣಿ ಭಾಷೆಯನ್ನು ಸಶಕ್ತಗೊಳಿಸುತ್ತಾನೆ. ಪ್ರತಿ ಲಾವಣಿಯ ಪದ್ಯಗಳಲ್ಲಿ ವ್ಯಕ್ತಿ ನೆಲೆಯಿದ್ದು ಅದನ್ನು ಮತ್ತೆ ಸಮಾಜ ಮುಖಿಯಾಗಿ ಮರು ಹುಟ್ಟು ಪಡೆಯುವ ಪ್ರಕ್ರಿಯೆ ಸಾಮಾಜಿಕ ಕ್ರಿಯೆ ಯಾಗಿದೆ. ಸಮಾಜದಲ್ಲಿ ಕಲಿತ ಹೊಸ ಆಶಯಗಳನ್ನು ಮರು ನಿರ್ಮಿಸುತ್ತಾನೆ.

*ಡಾ. ಸರ್ವಮಂಗಳ ಸಕ್ರಿ.
ಕನ್ನಡ ಉಪನ್ಯಾಸಕರು.
ರಾಯಚೂರು.

Don`t copy text!