ಸಮಾಜ ಸುಧಾರಕರಾದ ರಾಜಾರಾಂ ಮೋಹನ್ ರಾಯ್
ಜನ್ಮ ದಿನ
ರಾಜಾರಾಂ ಮೋಹನ್ ರಾಯ್ 1772ರ ಮೇ 22ರಂದು ಬಂಗಾಳದ ರಾಧಾನಾಗೊರ್ ಎಂಬಲ್ಲಿ ಜನಿಸಿದರು. ಧಾರ್ಮಿಕ ತಿಳುವಳಿಕೆಗಳನ್ನು ದುರುಪಯೋಗ ಪಡಿಸಿಕೊಂಡು ಕ್ಷುದ್ರರಂತೆ ಬದುಕುತ್ತಿದ್ದ ನಮ್ಮ ದೇಶದ ಧರ್ಮೀಯರನ್ನು ಎಚ್ಚರಿಸಿದ ಪ್ರಜ್ಞಾವಂತರೂ ಮತ್ತು ಕ್ರಾಂತಿಕಾರಕ ಮನೋಭಾವದವರೂ ಆದ ರಾಜಾರಾಂ ಮೋಹನ ರಾಯರು ಸ್ಮರಣೀಯ ವ್ಯಕ್ತಿಗಳಾಗಿದ್ದಾರೆ.
ವೇದಾಂತ, ಉಪನಿಷತ್ತುಗಳನ್ನು ಆಳವಾಗಿ ಅಭ್ಯಸಿಸಿ ಹಿಂದೂ ಧಾರ್ಮಿಕ ಚಿಂತನೆಗಳನ್ನು ತಮ್ಮ ಆಳವಾದ ಚಿಂತನೆಗಳ ಪಕ್ವತೆಯಲ್ಲಿ ಭೇದಿಸಿ ನೋಡಿದ ರಾಜಾರಾಂ ಮೋಹನರಾಯರು ಸತಿ ಪದ್ಧತಿಗಳಲ್ಲಿ ಮಹಿಳೆಯರನ್ನು ಸುಡುತ್ತಿದ್ದ ಹೀನ ಪದ್ಧತಿ, ಬಾಲ್ಯ ವಿವಾಹ, ವರದಕ್ಷಿಣೆ ಪದ್ಧತಿಗಳ ವಿರುದ್ಧವಾಗಿ ಪ್ರಪ್ರಥಮವಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ.
ರಾಜಾರಾಂ ಮೋಹನರಾಯರು ದೇವರುಗಳ ಬಗೆಗಿನ ಅಪಕ್ವ ಕಲ್ಪನೆಗಳ ಚಿಂತನೆಗಳ ಬಗೆಗೆ ಚಿಂತನೆ ನಡೆಸಿದ್ದೇ ಅಲ್ಲದೆ ಕ್ರಾಂತಿಕಾರಕವಾದ ಧಾರ್ಮಿಕ ಬದುಕಿನ ಉತ್ಥಾನಕ್ಕಾಗಿ ತಮ್ಮ ಆಪ್ತ ಗೆಳೆಯರೊಡಗೂಡಿ ಬ್ರಹ್ಮ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದರು. ಅವರ ಆಧುನಿಕ ಚಿಂತನೆಗಳು ಭಾರತದಲ್ಲಿನ ರಾಜಕೀಯ, ಶಿಕ್ಷಣ, ಸಾರ್ವಜನಿಕ ಆಡಳಿತ ಮತ್ತು ಧಾರ್ಮಿಕ ಚಿಂತನೆಗಳ ಮೇಲೆ ಕ್ರಾಂತಿಕಾರಕ ಬದಲಾವಣೆ ಉಂಟಾಗಲು ಪ್ರಮುಖ ಶಕ್ತಿಯಾಗಿ ರೂಪುಗೊಂಡಿದ್ದು ಇತಿಹಾಸವಾಗಿದೆ.
ಉತ್ತಮ ಶಿಕ್ಷಣ ವ್ಯವಸ್ಥೆ ನೀಡುವುದಕ್ಕಾಗಿ, ಉತ್ತಮ ಕಾಲೇಜಿನ ನಿರ್ಮಾಣಕ್ಕಾಗಿ ತಮ್ಮ ಸ್ವಂತ ಹಣವನ್ನು ವ್ಯಯಿಸಿದ ರಾಜಾರಾಂ ಮೋಹನ ರಾಯರು ಮಹಿಳೆಯರಿಗೆ ಪಿತ್ರಾರ್ಜಿತ ಆಸ್ಥಿಯಲ್ಲಿ ಪಾಲು ನೀಡುವ ವಿಚಾರದಲ್ಲಿ ಕೂಡಾ ಕಾರ್ಯ ನಿರ್ವಹಿಸಿದರು.
ರಾಜಾರಾಂ ಮೋಹನ ರಾಯರು 1833ರ ಸೆಪ್ಟೆಂಬರ್ 27ರಂದು ನಿಧನರಾದರು.
‘ಕನ್ನಡ ಸಂಪದದಿಂದ