ಜೀ ಹಮೇ ಮಂಜೂರ್ ಹೈ

ಜೀ ಹಮೇ ಮಂಜೂರ್ ಹೈ

ಒಹ್
ಯಾರದು ಬಾಗಿಲಲ್ಲಿ
ಒಳಬನ್ನಿ ಹೀಗೆ
ಹೊಸಿಲಿನಾಚೆ
ಚಪ್ಪಲಿಬಿಡಿ
ಜೊತೆಗೆ ನಿಮ್ಮ ಚಿಂತೆಗಳನ್ನು..

ಇಲ್ಲಿ ಕುಳಿತುಕೊಳ್ಳಿ
ತಿಳಿಯುತ್ತಿದೆ
ಬದುಕು ನಿಮ್ಮನ್ನು
ಬಹಳ ದಣಿಸಿದೆಯೆಂದು
ಒಂದು ನಿಮಿಷ
ವಿಶ್ರಮಿಸಿ
ನಾನೀಗ ಬಂದೆ..

ಸಣ್ಣನೆಯ ಉರಿಯಲ್ಲಿ
ಬದುಕ ಕುದಿಗಿಡುತ್ತೇನೆ
ಈ ಮನೆಯಲ್ಲಿ
ನೀವು ಸಿಹಿಯನ್ನು
ಸವಿಯಲೇಬೇಕು
ಜೊತೆಗೆ ಏಲಕ್ಕಿ, ಶುಂಠಿ
ಹಾಕುತ್ತೇನೆ
ಮಸಾಲೆಯುಕ್ತ ಚಹ
ನಡೆಯುತ್ತದಲ್ಲ..

ನೀವು ಕೇಳುತ್ತೀರಾದರೆ
ಚೆಂದನೆಯ ಹಾಡೊಂದನ್ನು
ಗುಣುಗುತ್ತದೆ
ಈ ರೇಡಿಯೋ
ಕೇಳಿ
“ಆಪ್ ಕೀ ನಜರೋಂನೆ ಸಮ್ಝಾ”
ಪ್ರೀತಿಗೆ ಎಷ್ಟೆಲ್ಲ
ಬಾಗಿಲುಗಳು ನೋಡಿ..

ನೀವು ಸ್ಟೀಲ್ ಲೋಟದಲ್ಲಿ
ಕುಡಿಯುತ್ತೀರಾ
ಅಥವಾ ಗಾಜಿನ ಗ್ಲಾಸಾ
ಬೇಡ
ಇಂದು ಮಣ್ಣಿನ ಕಪ್ಪಿರಲಿ..

ತೆಗೆದುಕೊಳ್ಳಿ
ಬಿಸಿಯಿದೆ
ಹದವಾಗಿ ಕಾಯಿಸಿದ್ದೇನೆ
ಚೆನ್ನಾಗಿ ಕುದ್ದಿದೆ
ನನಗೆ ತಿಳಿದಿತ್ತು
ಬದುಕಿನಲಿ ಘಮಲಿರಬೇಕಾದರೆ
ಉಕ್ಕಲು ಬಿಡಬಾರದೆಂದು..

ನಿಧಾನ ಕುಡಿಯಿರಿ
ಮೊದಲು ಪರಿಮಳ ತುಂಬಲಿ
ಎದೆಯನ್ನು
ನಂತರ ಗುಟುಕೇರಿಸಿ
ಹಗುರಾಗಿ
ಕಪ್ಪು ಖಾಲಿಯಾಗಲಿ..

ಈಗ ಹೇಳಿ
ಬಂದ ವಿಷಯ
ಏನು ಕಾರಣ
ಈ ಹುಚ್ಚನ ಮನೆಗೆ ಬಂದದ್ದು..

ಅಲೆಮಾರಿ
ಮುಗುಳ್ನಕ್ಕ
ಬಾಗಿಲ ಬಳಿ ನಡೆದು
ಚಹ ಕುಡಿದೆನಲ್ಲ
ಉತ್ತರ ಸಿಕ್ಕಿತು
ನಾನಿನ್ನು ಬರುವೆ ಎಂದ
ಹಿನ್ನಲೆಯಲ್ಲಿ
ರೆಡಿಯೋ ಇನ್ನೂ ಹಾಡುತ್ತಿತ್ತು
“ಜೀ ಹಮೇ ಮಂಜೂರ್ ಹೈ”..

ಚೇತನ ನಾಗರಾಳ ಬೀಳಗಿ

One thought on “ಜೀ ಹಮೇ ಮಂಜೂರ್ ಹೈ

Comments are closed.

Don`t copy text!