ಗಜಲ್ 

ಗಜಲ್ 

ನಿನ್ನಯ ಅನುರಾಗವನ್ನು ಆಲಂಗಿಸಿದ ಮೇಲೆ ಬೇರೇನೂ ಬೇಕಿಲ್ಲ
ನನ್ನ ಹೆಜ್ಜೆಗಳೊಂದಿಗೆ ಹೆಜ್ಜೆ ಮೂಡಿದ ಮೇಲೆ ಬೇರೇನೂ ಬೇಕಿಲ್ಲ

ನಿನ್ನನ್ನು ಬೇಡಿದ ಮೇಲೆ ಮತ್ತೇನಿದೆ ಆ ದೇವರಲ್ಲಿ ಮೊರೆಯಿಡಲು
ನಿನ್ನ ಮಂದಹಾಸದ ಮುಖ ನೋಡಿದ ಮೇಲೆ ಬೇರೇನೂ ಬೇಕಿಲ್ಲ

ನಿನ್ನಿಂದಲೇ ಪ್ರೇಮದ ಪಂಚಮವೇದ ಸಾಕ್ಷಾತ್ಕಾರವಾಗಿದೆ ಗೆಳತಿ
ನನ್ನ ಕಂಗಳಿಗೆ ಒಲವಿನ ಸ್ವರ್ಗ ದೊರಕಿದ ಮೇಲೆ ಬೇರೇನೂ ಬೇಕಿಲ್ಲ

ನನ್ನ ಬಯಕೆಗಳೆಲ್ಲವು ನಿನ್ನ ಸುತ್ತ-ಮುತ್ತಲೆ ಪ್ರದಕ್ಷಿಣೆ ಹಾಕುತಿದ್ದವು
ನಿನ್ನ ಅಧರದ ಮಧು ಬಟ್ಟಲು ಲಭಿಸಿದ ಮೇಲೆ ಬೇರೇನೂ ಬೇಕಿಲ್ಲ

‘ಮಲ್ಲಿ’ಯ ಪುಟ್ಟ ಪರಪಂಚ ಆಳುವ ಮಧು ತುಂಬಿದ ಹೂಜಿ ನೀನು
ತಿಂಗಳ ಬೆಳಕಿನ ಬಾಳಲ್ಲಿ ಶಶಿ ಸಂಧಿಸಿದ ಮೇಲೆ ಬೇರೇನೂ ಬೇಕಿಲ್ಲ

*-✍️ರತ್ನರಾಯಮಲ್ಲ, ಕಲಬುರ್ಗಿ

 

Don`t copy text!