ವಚನಗಳ ಒಳದನಿ ಮೌಲ್ಯಗಳ ಖನಿ

 

ನಾ ಓದಿದ ಪುಸ್ತಕ- ಪುಸ್ತಕ ಪರಿಚಯ

” ಒಳದನಿ “
(ವಚನಗಳು)

ಕೃತಿ ಕರ್ತೃ:- ಶ್ರೀ ಗಿರಿರಾಜ ಹೊಸಮನಿ
ಅಂಕಿತ ನಾಮ: ನಮ್ಮ ಬಸವಣ್ಣ

” ವಚನಗಳ ಒಳದನಿ ಮೌಲ್ಯಗಳ ಖನಿ “

ವಯೋವೃದ್ಧರೂ, ಜ್ಞಾನ ವೃದ್ಧರೂ ಆದ
ಮಾನ್ಯ ಶ್ರೀ ಗಿರಿರಾಜ ಹೊಸಮನಿ ಅವರು, ಅವರ ಇಳಿ ವಯಸ್ಸಿನಲ್ಲೂ ಸಾಹಿತ್ಯದ ಅಧ್ಯಯನ ಮತ್ತು ರಚನೆಯಲ್ಲಿ ಆಸಕ್ತಿದಯಕರಾಗಿದ್ದಾರೆಂದರೆ, ಅವರ ತಲ್ಲೀನತೆ ಕಂಡು ನಾವು ಯುವಕರು ನಾಚಬೇಕಿದೆ. ಟಿ‌.ವಿ, ಮೊಬೈಲ್ ಹಾವಳಿಯಿಂದ ಪುಸ್ತಕ ಓದುವ ಹವ್ಯಾಸವೇ ಕಡಿಮೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ
ಇಂದಿಗೂ ಯುವಕರ ಬರವಣಿಗೆ ಓದಿ ಫೋನಾಯಿಸಿ ಪ್ರೋತ್ಸಾಹಿಸುವ ಹೊಸಮನಿಯವರ ವ್ಯಕ್ತಿತ್ವ ಒಂದು ತುಂಬಿದ ಕೊಡ.
ಶ್ರೀಯುತರು ನಿವೃತ್ತ ಶಿಕ್ಷಕರಾಗಿದ್ದು, ವೃತ್ತಿಯಲ್ಲಿದ್ದಾಗಲೂ ಕರ್ತವ್ಯದ ಜೊತೆಗೆ ಪ್ರವೃತ್ತಿಯನ್ನು ಆದರಿಸಿ, ಬೆಳೆಸಿದ ಪರಿಗೆ ಮಾತುಗಳು ಮೌನವಾಗುತ್ತವೆ. ಶ್ರೀ ಗಿರಿರಾಜ ಹೊಸಮನಿಯವರು ಸಾಹಿತ್ಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದು, ಅವರ ಸಾಹಿತ್ಯ ಮತ್ತು ಅವರು ಇಂದಿಗೂ ಹಲವರಿಗೆ ಅಧ್ಯಯನದ ವ್ಯಕ್ತಿಯಾಗಿದ್ದಾರೆಂದರೆ ಅತಿಶಯೋಕ್ತಿ ಅಲ್ಲ. ೧೯೯೦ ನೇ ಇಸವಿಯಲ್ಲಿಯೇ ಇವರ ಕವಿತೆಯನ್ನು (ಆಮೆ) ನಮ್ಮ ಪಠ್ಯದಲ್ಲಿ ಓದಿದ್ದು ಇಂದಿಗೆ ಸಂತೋಷ ಕೊಡುವಂತಹುದು. ಪ್ರಸ್ತುತ ಲಿಂಗಸುಗೂರಲ್ಲಿ ವಾಸವಾಗಿರುವ ಶ್ರೀಯುತರು ಆನ್ಲೈನ್ ಸಾಹಿತ್ಯಿಕ ಚಟುವಟಿಕೆಗಳಲ್ಲೂ ತಮ್ಮ ಜ್ಞಾನಾನುಭವದ ಸಾರವನ್ನು ನಮಗೆ ಹಂಚುತ್ತಲೇ ಇದ್ದಾರೆನ್ನುವುದು ನಮ್ಮ ಭಾಗ್ಯವೇ ಸರಿ.


ಶ್ರೀ ಗಿರಿರಾಜ ಹೊಸಮನಿಯವರು
ನಮ್ಮ ಬಸವಣ್ಣ “ ಅಂಕಿತದಲ್ಲಿ ೨೫೬+೧೩೯ ವಚನಾಮೃತಗಳ ಸಂಗ್ರಹ ಸಂಕಲನವನ್ನು “ಒಳದನಿ” ಶೀರ್ಷಿಕೆಯಡಿ ೨೦೧೭ ರಲ್ಲಿ ಓದುಗರ ಅಭಿಲಾಷೆಯ ಪಾನಕ್ಕೆ ನೀಡಿದ್ದಾರೆ. ೨೫೬ ವಚನಗಳಲ್ಲಿ ಯಾವುದೇ ಸಾಲುಗಳ ನಿಯಮವಿಲ್ಲ. ಇವು ಒಂದನೇ ಭಾಗದವು ಆದರೆ ಎರಡನೇ ಭಾಗದ ೧೩೯ ವಚನಗಳು ಬಹುತೇಕ ನಾಲ್ಕು ಸಾಲುಗಳಿನವುಗಳಾಗಿವೆ.
ಈ ಒಳದನಿ ಕೃತಿಯಲ್ಲಿ ಶ್ರೀಯುತರು, ಮಾನವನ ಅಂತರಂಗದ ಪ್ರತಿಯೊಂದು ಭಾವಗಳಿಗೂ ಸ್ಪಂದಿಸುವ ಧ್ವನಿ ಕೇಳಿಸುತ್ತದೆ. ಸಾಹಿತ್ಯ, ಪೌರಾಣಿಕ, ಬಸವಣ್ಣನವರ ಆದರ್ಶ, ತತ್ವವನ್ನು ತಿಳಿಸುತ್ತ; ಹಲವರು ಇನ್ನೂ ಜೋತು ಬಿದ್ದಿರುವ ಮೌಢ್ಯತೆಗಳ ಕುರಿತಾಗಿ ಮಾತಾಗಿ, ಮದ್ದಾಗಿ‌ ತಮ್ಮ ವಚನಗಳನ್ನು ನೀಡಿದ್ದಾರೆ.
ಶಿಕ್ಷಣ, ಗೆಳೆತನ, ಅಂತರಂಗ ಜ್ಞಾನ, ಮನಸಿನ ಬಗೆಗೆ, ಸಂಪ್ರದಾಯದ ಬಗೆಗೆ, ಶಿಕ್ಷಣ, ರಾಜಕೀಯದ ಕೆಟ್ಟ ಸ್ಥಿತಿಯನ್ನು ವಚನಗಳಲ್ಲಿ ಕಟ್ಟಿಕೊಡುತ್ತಾರೆ.

‘ನೀನಾಗು’, ‘ನಿನ್ನ ನೀ ಅರಿ’, ‘ನೀನೊಂದು ಆದರ್ಶ’, ‘ನಾಳೆ ನಿಂದಲ್ಲ’, ‘ನಿನ್ನ ಮನೆ ಶುದ್ಧ’, ‘ ‘ನಾ’ನರಿಯದ ಜ್ಞಾನ’ ಹೀಗೆ ಹತ್ತಾರು ವಚನಗಳ ಮೂಲಕ ನಮ್ಮನ್ನು ಅರಿತು, ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲೂ, ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಲೂ ದಾರಿಯಗುತ್ತಾರೆ.
ಇಲ್ಲಿನ ಅನೇಕ ವಚನಗಳು ನಮ್ಮ ಅಂತರ್ಧ್ವನಿಯ ಪ್ರತಿಬಿಂಬ ರೂಪಗಳು. ವಯೋಸಹಜವಾಗಿಯೋ, ಅಥವಾ ನಮ್ಮ ತಿಳುವಳಿಕೆ ಮಟ್ಟದಿಂದಲೋ ನಮ್ಮಲ್ಲಿ ಅನೇಕ ದ್ವಂದ್ವತೆಗಳು ಮನೆಮಾಡಿರುತ್ತವೆ. ಅಂತಹ ದ್ವಂದ್ವತೆಗಳನ್ನು ಪ್ರತಿಯೊಬ್ಬ ಮಾನವನೂ ತನ್ನ ಬದುಕಲ್ಲಿ ದಾಟಿ ಬರಲೇಬೇಕು. ಆದರೆ ಆ ಹೆಜ್ಜೆಗಳಿಗೆ ಒಂದು ಸರಿಯಾದ ಸುಮಾರ್ಗ ಬೇಕು. ಅಂತಹ ಮಾರ್ಗವನ್ನು ನೀಡುತ್ತ ಬಂದಿರುವ ಬಸವಣ್ಣ, ಅಲ್ಲಮ, ಅಕ್ಕನವರ ಸಾಲಿಗೆ ಮತ್ತೊಂದು ಮೇರು ವ್ಯಕ್ತಿಯಾಗಿ
” ಶ್ರೀ ಗಿರಿರಾಜ ಹೊಸಮನಿ “ಯವರು ಸೇರ್ಪಡೆಗೊಳ್ಳುತ್ತಾರೆ. ಆದರೆ ವಿಶೇಷವೆಂದರೆ ಇತಿಹಾಸದ ವಚನಕಾರರ ವಚನಗಳು ಸಾಮಾನ್ಯರಿಗೆ ಬೇಗ ಅರ್ಥವಾಗುವುದಿಲ್ಲ. ಅದರೆ ಹೊಸಮನಿ ಅವರ ವಚನ ಸಾಹಿತ್ಯದಲ್ಲಿ ಯಾವುದೇ ಕ್ಲಿಷ್ಟತೆ ಇಲ್ಲ. ಸಾಮಾನ್ಯ ಓದುಗರಿಗೂ ನಿಲುಕುವಂತಹ ಸಾಲುಗಳಿಂದ ಕೂಡಿದ ಮತ್ತು ವೈವಿಧ್ಯಮಯ, ಬದುಕಿಗೆ ಹತ್ತಿರ ಇರುವಂತಹ ಸಾರಾಂಶದ ಕೆಲ ವಚನಗಳ ಸಾಲುಗಳನ್ನು ನೆನೆಯುತ್ತ ಪಾವನವಾಗುವ ಈ ಸಮಯ ನನಗೆ ವರದಾನ ಎನಿಸುತ್ತದೆ. ನನ್ನ ಓದಿನ ಅನುಭವಗಳನ್ನು ತಮ್ಮ ಮುಂದೆ ಯಥಾವತ್ತಾಗಿ ಯಥಾನುಶಕ್ತಿಯಾಗಿ ಹಂಚಿಕೊಳ್ಳುವೆ. ಸ್ವೀಕರಿಸಿ….

* ” ದುಡಿಮೆ ದಾಸೋಹವಾದಾಗ ‘ಅರ್ಪಿತ’,
ಕಾಡಿ ಬೇಡಿ ತಂದ ದಾಸೋಹ ‘ಅನರ್ಪಿತ’,
ದಾಸೋಹ ಆಡಂಬರವಲ್ಲ ‘ಶಿವಾರ್ಪಿತ’…”
….. ಭಕ್ತಿಯ “ದಾಸೋಹ” ಎಂಬುದು ಕಾಯಕದಿಂದ ಶಿವನ ಪಾದಕ್ಕೆ ತಲುಪಬೇಕೇ ವಿನ:, ಒತ್ತಡ ಹೇರುವ ಮೂಲಕ/ಅವಲಂಬಿತವಾದಾಗ ಅರ್ಪಿತವಾಗುವುದಲ್ಲ, ಅದು ಎಂದಿಗೂ ಶಿವನಿಗೆ ಅನರ್ಪಿತ ಎನ್ನುತ್ತಾರೆ.

* ಅಂತೆಯೇ ” ಅನ್ನ ” ವಚನದಲ್ಲಿ
” ನೀನುಣ್ಣುವ ಅನ್ನ ದುಡಿದುಂಡರೆ ರಸವಾದೀತು,
ಪಡೆದುಂಡರೆ ಕಸವಾದೀತು “
…. ಎಂದು ಅದ್ಭುತವಾಗಿ, ಸರಳವಾಗಿ, ದುಡಿಯದೇ ಅನ್ನ ಬಯಸುವ ಸೋಮಾರಿ ವರ್ಗದವರಿಗೆ ಚಾಟಿ ಏಟನ್ನು ನೀಡುತ್ತಾರೆ.
ಇದರ ಜೊತೆಗೆ

* ” ಕಾಯಕವೆಂದರೆ ಕತ್ತೆ ದುಡಿತವಲ್ಲ,
ಕರ್ತವ್ಯ ಪ್ರಜ್ಞೆಯಿಂದ ಮಾಡುವುದು “
…… ‌ಎಂದು ಕಾಯಕ ಕರ್ತವ್ಯ ಎರಡು ಪ್ರಾಮಾಣಿಕ ನೆಲೆಗಟ್ಟಿನಲ್ಲಿರುವಂತಹವು ಎಂಬುದಾಗಿ ತಿಳಿಸಿ, ಶಿವಾರ್ಪಿತವಾಗುವುದು ಅಂತರಂಗದ ಪ್ರಜ್ಞೆ ಜಾಗ್ರತವಾದಾಗಲೇ ಎಂಬ ಭಾವವನ್ನು ” ಪ್ರಸಾದ ” ವಚನದಲ್ಲಿ ವ್ಯಕ್ತಪಡಿಸುತ್ತಾರೆ. ಇಂತಹ ಆದರ್ಶ ಸಾರುವ ವಚನಗಳು ನಮ್ಮ ಬದುಕಿಗೆ ದಾರಿದೀಪವಾಗುತ್ತವೆ ಎಂಬುದು ನಾ ತಿಳಿದುಕೊಂಡ ಸತ್ಯ.

ಮತ್ತೊಂದೆಡೆ,
ಕೈಬಾಯಿ ಕಚ್ಚೆಗಳು ತನ್ನಿಚ್ಚೆಯಲ್ಲಿರದವನ ಬದುಕು
ಬದುಕಲ್ಲ; ಅದೊಂದು ‘ ಅತ್ಮವಂಚನೆ ‘….”
…. ಎಂತಹ ಔಚಿತ್ಯಪೂರ್ಣವಾದ ಮಾತು ಅಲ್ವಾ. ಮನುಜನಿಗೆ ತನ್ನ ಅಂಗಗಳ ಮೇಲೆ, ಮನಸಿನ ಮೇಲೆ ಹಿಡಿತವಿರಬೇಕು. ಕೈ, ಬಾಯಿ, ಕಚ್ಚೆಗಳು ಯಾವತ್ತಿಗೂ ಶುದ್ಧವಿರಬೇಕು. ಶೀಲವಂತಿಕೆ ಏಂಬುದು ಕೈಗೂ ಬಾಯಿಗೂ ಇರಬೇಕೆನ್ನುವ, ಶ್ರಿಯುತರು ಭಾಗ ೨ ರಲ್ಲಿಯೂ ಸಹ,
“ಕೈ ಬಾಯಿ ಕಚ್ಚೆಗಳು ಇಚ್ಛೆಯಲಿರದವನ
ಮಚ್ಚಿಲೆ ಹೊಡೆಯೆಂದ ನಮ್ಮ ಬಸವಣ್ಣ” ಎಂದು
“ಕೈಬಾಯಿಕಚ್ಚೆ” ವಚನದಲ್ಲಿ ಹೇಳಿ, ಮುಂದುವರಿದು;
ಮನೋನಿಗ್ರಹ ಸಾಮರ್ಥ್ಯ ಇಲ್ಲವೆಂಬುದೂ ಒಂದು
‘ ಆತ್ಮವಂಚನೆ ‘ ಎಂದು “ಆಚಾರ” ವಚನದಲ್ಲಿ ತಿಳಿಸುತ್ತಾರೆ.

ಹಾಗೆ ಬದುಕು, ವರ್ತಮಾನದ ಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳುವಂತಿರಬೇಕು. ಅಂತೆಯೇ ಇದಕ್ಕೆ ಸಾಮ್ಯವಾಗಿ ನಮ್ಮತನ, ನಮ್ಮ ಆದರ್ಶವನ್ನು ಬಿಡದೆ ಸಾಗುತ್ತಿರಬೇಕೆಂಬುದನ್ನು ಶ್ರೀಯುತರು
ಅಂತಪ್ಪನ ಚಾವಡಿಯಲ್ಲಿ ಅಂತಪ್ಪನಂತೆ
ಇಂತಪ್ಪನ ಚಾವಡಿಯಲ್ಲಿ ಇಂತಪ್ಪನಂತೆ…. ಇದ್ದು
ಬಂಡಿಯಲಿ ಕುಳಿತಾಗ ಹೋದ ಕಡೆ ಹೋಗು”
……. ಎಂದು “ನಿನ್ನ ನೀ ಬಿಡದಿರು” ವಚನದಲ್ಲಿ, ಮಾರ್ಮಿಕವಾಗಿ ಬದುಕಿನ ದಾರಿಯನ್ನು ತಿಳಿಯಗೊಡುತ್ತ, ಹೊಂದಿಕೊಳ್ಳುವ ಅವಶ್ಯಕತೆ, ಅನಿವಾರ್ಯತೆಯನ್ನು ತೋರಗೊಡುತ್ತ..
” ಎಲ್ಲಿ ಹೋದರೇನು? ಯಾವುದಾದರೇನು?
ನಿನ್ನ ನೀ ಬಿಡದಿರು ಎಂದಾತ ನಮ್ಮ ಬಸವಣ್ಣ ”
ಎಂದು ಬೋಧಿಸುತ್ತಾರೆ.

* ನಿನ್ನ ನೀನು, ನಿನ್ನ ತನವನ್ನು ನೀನು ಬಿಡದೆ‌ ಸಾಗುತ್ತಲೇ, ” ನಿನ್ನ ನೀ ಅರಿ ” ಎಂಬ ಕಿವಿ ಮಾತನ್ನು ಈ ರೀತಿ ವ್ಯಕ್ತಪಡಿಸುತ್ತಾರೆ.
” ನಡೆ ನುಡಿ ಒಂದಾಗಬೇಕು; ಅದು ಜೀವನ
ಬದುಕು ಬರಹ ಒಂದಾಗಬೇಕು: ಅದು ಸಾಹಿತ್ಯ
ಬ್ರಹ್ಮಚರ್ಯ ಒಳಗೊಳ್ಳಬೇಕು; ಅದು ಸ್ವಾಮಿತ್ವ
ಜ್ಞಾನದ ಖಣಿಯಾಗಿರಬೇಕು; ಆತ ಶಿಕ್ಷಕ ”
….. ಎಂದು ನಮ್ಮ ನಡೆ ನುಡಿಗಳೊಂದಾಗಿರಬೇಕು ಅಂದಾಗ ಮಾತ್ರ ನಮ್ಮನ್ನು ನಾವು ಅರಿತಂತೆ, ಅರಿವು ಮತ್ತು ಬದುಕು ಬೇರೆ ಬೇರೆ ಅಲ್ಲ, ನಮ್ಮ ಬಸವಣ್ಣನ ತತ್ವ ಇದು ಎಂದು ಸ್ಪಷ್ಟಪಡಿಸುತ್ತಾರೆ. ಮುಂದೆ ಭಾಗ ೨ ರಲ್ಲಿಯೂ “ನಡೆನುಡಿ” ವಚನದಲ್ಲಿ ಇದೇ ಭಾವವನ್ನು ವ್ಯಕ್ತಪಡಿಸುತ್ತಾರೆ.

ಸಜ್ಜಲಶ್ರೀ ಶರಣಮ್ಮವ್ವ ತಾಯಿಯ ಬಗೆಗಂತೂ ಬಹಳ ಅರ್ಥಗರ್ಭಿತವಾಗಿ ಮನಕ್ಕೆ ಮುಟ್ಟುವಂತೆ ಸುಮಾರು ೮ ವಚನಗಳನ್ನು ಬರೆದು, ತಾಯಿಯ ಮಹಿಮೆಯನ್ನು ಸಾರಿದ್ದಾರೆ. ಅವರ ಬಗ್ಗೆ ವರ್ಣಿಸುತ್ತ..
ಹಿಂದುಳಿದ ಮುಂದುವರಿದ ಮೇಲು ಕೀಳೆಂಬ
ಅಂತಸ್ತುಗಳನ್ನೆಲ್ಲ ಕಿತ್ತೊಗೆದು,
ಮೇಲು ಮಂಟಪ ಮನೆಯೊಳಾಡಿದವಳು
ನಮ್ಮವ್ವ “
…… ಎಂದು ಬಸವ ತತ್ವವನ್ನು ತಮ್ಮ ನಡೆ ನುಡಿಯಲ್ಲಿ ಹರಿಸಿಕೊಂಡು ಮಹಾನ್ ಚೇತನವಾದುದರ ಬಗೆಗೆ ವಚನ ಭಕ್ತಿಯನ್ನು ಅರ್ಪಿಸುತ್ತಾರೆ.
” ಮಾತು ಮುತ್ತಿನ ಹಾರ; ನಗೆ ಮೊಗವು ಬೆಳ್ದಿಂಗಳು,
ಕಂಗಳೆರಡು ಹಚ್ಚಿಟ್ಟ ದೀಪ,
ಬೆಳ್ಳಿ ಎಲೆಗಳ ಬೆಳೂದಲು; ರೇಶಿಮೆಯ ಮೈ ಬಣ್ಣ”
…. ಎಂಬಿತ್ಯಾದಿಯಾಗಿ ಅವ್ವನನ್ನು ಅಮೋಘವಾಗಿ ವರ್ಣಿಸುತ್ತಾರೆ.
ಶ್ರೀಯುತರ ವಚನೋಕ್ತಿಗಳಿಗೆ ” ನಮ್ಮ ಬಸವಣ್ಣ” ಎಂಬ ಅಂಕಿತವನ್ನೂ ಶರಣಮ್ಮವ್ವನವರು ನೀಡಿದ್ದಾರೆ.
“ವಚನಗಳನ್ನು ಬರೆಯುವ ಇರಾದೆ ಎನಗಿರಲಿಲ್ಲ,
ಸ್ತಬ್ದಗೊಂಡ ಬರವಣಿಗೆ ಚಿಗುರೊಡೆಯಲು
ಪ್ರೇರಣಾದಾಯಕವಾದವರೂ ಶರಣಮ್ಮವ್ವ….”
ಎಂಬ ಅಭಿಮಾನಪೂರ್ವಕ ನುಡಿಗಳು ಭಕ್ತರಿಗೆ ತಲುಪದೇ ಇರಲಾರವು.

ಮುಂದೆ ಮಾನವನಿಗಿರುವ ಎರಡು ವ್ಯಕ್ತಿತ್ವಗಳನ್ನು, ಒಳನೋಟ ಹೊರನೋಟ ಸತ್ಯಾ ಸತ್ಯ ಮುಖವನ್ನು
” ಭವಗೆಟ್ಟ ಬದುಕು ” ವಚನದಲ್ಲಿ ಬಿಚ್ಚಿಡುತ್ತಾರೆ.

ಹಣ ಅಕ್ಷರಗಳೆರಡು ಭುವಿ ಬದುಕಿಗೆ ಸಾಧನವಾದರೆ, ಅವನೇ ವಿದ್ಯಾವಂತ, ಶ್ರೀಮಂತ. ಎಂದು ” ಆತ್ಮವಿದ್ಯೆ ” ವಚನದಲ್ಲಿ ಹಣ ಮತ್ತು ವಿದ್ಯೆಯ ಸಂಪತ್ತನ್ನು ಬಳಸಿಕೊಳ್ಳುವ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟಿರುವುದು ಇಂದಿನ ಯುವ ಪೀಳಿಗೆಗೆ ಪಾಠವಾಗುತ್ತದೆ.

“ವೃತ್ತಿ ಪ್ರವೃತ್ತಿ”ಗಳನ್ನು ಸಾಮ್ಯೀಕರಿಸಿಕೊಂಡು ಸಾಗಿದ ತಮ್ಮ ಬದುಕಿನ ಕುರಿತಾಗಿಯೇ‌ ವಚನ ರಚಿಸಿ, ಎರಡಕ್ಕೂ ನ್ಯಾಯ ಒದಗಿಸಿದರ ಕುರಿತಾಗಿ ಉತ್ತಮವಾಗಿ ಉಲ್ಲೇಖಿಸುತ್ತಾರೆ.

ಆಸೆ, ಕೋಪ, ಅಹಂಕಾರಗಳು ಬೆನ್ನಟ್ಟಿರುವ ವ್ಯಷ್ಠಿಗಳು, ಅವುಗಳಿಂದ ಮುಕ್ತಿ ಸಿಕ್ಕು ” ಸಮಷ್ಠಿ ” ಯಾಗಿ ಸುಖಿಸಬೇಕಾದರೆ, ಗುರೂಪದೇಶದಿಂದ ಮಾತ್ರ ಸಾಧ್ಯ ಎನ್ನುವ ವಚನಕಾರರ ಮಾತೂ ನಮಗೆಲ್ಲ ಉಪದೇಶವಾಗಿ ಶಾಶ್ವತವಾಗಿ ಉಳಿಯುತ್ತದೆ.

“ನಾವು ಮಾಡುವ ಕರ್ಮ”ದ ಫಲವನ್ನು; ಮಕ್ಕಳು ಮೊಮ್ಮೊಕ್ಕಳಾದರೂ ಉಣ್ಣಲೇಬೇಕು, ಕರ್ಮ ಒಂದು ಕಟ್ಟಿಟ್ಟ ಬುತ್ತಿ… ತಲೆಮಾರುಗಳವರೆಗೆ ರವಾನೆಯಾಗುವಂತದ್ದು ಎಂದು ಮಾರ್ಮಿಕವಾಗಿ ಮಾನವನ ಪಾಪ ಕರ್ಮಗಳ ಕುರಿತಾಗಿ ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಾರೆ.

ಬಜಾರ ತಿರುಗಿ ಬರತೈತಿ ರಾಜಕೀಯ
ಮಾರಾಟಕಿಟ್ಟೈತೆ ತನ್ನಧ್ಯೇಯ!
ಕೈ ಮಾಡಿ ಕರಿತೈತೆ ಬಸವಿಯ ಹಂಗ!
ಬೆನ್ನತ್ತಿ ಹೋಗುವನು ಆಗುವನು ಹುಚ್ ಮಂಗ!”
ಪ್ರಸ್ತುತ ರಾಜಕಾರಣ, ರಾಜಕಾರಣಿಗಳ ಕುರಿತಾಗಿ ಸತ್ಯದ ಮುಖವನ್ನು ಕನ್ನಡಿಯಾಗಿಸಿದ್ದಾರೆ. ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲವೆಂಬುದನ್ನು ಕಾವ್ಯಾತ್ಮಕ ಶೈಲಿಯಲ್ಲಿ ಮಾರ್ಮಿಕವಾಗಿ ತಿಳಿಹೇಳುತ್ತಾರೆ.

” ಕೈಯಲ್ಲಿ ‘ಕಾವ್ಯವಿರಲಿ’ ಪಕ್ಕದಲಿ ‘ಹೆಂಡತಿ’ಇರಲಿ ”
ಎಂಬ ನುಡಿಗಟ್ಟಿನಂತಿರುವ ಶ್ರೀಯುತರ ವಾಕ್ಯ ಮುಂದುವರೆದು,
“ಕಾವ್ಯ ಅಂತರಂಗದ ಪ್ರೀತಿ ‘ಅವಳು’ ಬಹಿರಂಗದ ಪ್ರೀತಿ
ರಸಾವೇಶದುತ್ಸಾಹ ಚಿಮ್ಮುತಿರಲಿ ನಮ್ಮ ಬಸವಣ್ಣ”;
….. ಎಂದರೆ ಕಾವ್ಯಕೂ, ಸಂಸಾರಕೂ ಅವಿನಾಭಾವ ಸಂಬಂಧವುಂಟು, ಕಾವ್ಯ ಹುಟ್ಟುವಲ್ಲಿ ಸಂಸಾರದ ರಸಘಳಿಗೆ ಇರಲೇಬೆಕು ಎಂಬ ಮಾತು ನಿಜವಾಗಲು ಉತ್ಸಾಹ ಚಿಮ್ಮಿಸುವಂತಹುದೆಂಬುದನ್ನು ಓದುಗ ಮರೆಯಲಾರ.

ಇಂದಿನ ರಾಜಕೀಯದ ಡೊಂಬರಾಟಗಳನ್ನೂ “ರಾಜನೀತಿ” ವಚನದಲ್ಲಿ ಬಿಚ್ಚಿಡುತ್ತಾರೆ. ಬೇನಾಮಿ ಆಸ್ತಿಯನ್ನು ಮನೆ ಕಾಯ್ವ ನಾಯಿ ನರಿಗಳ ಹೆಸರಲೂ ಮಾಡುವ ಸಮಾಜ ಸೇವೆಯ ಸೋಗಿನ ಮುಖವಾಡ ರಾಜಕಾರಣಿಗಳದ್ದು ಎಂದು ವ್ಯಂಗ್ಯವಾಡುತ್ತಾರೆ.

ಮುಂದೆ ಬದುಕೆಂಬುದು ರಾಮಾಯಣ. ಎಲ್ಲ ಪಾತ್ರಗಳೂ ನಮ್ಮಲ್ಲಿರುವವು. ನಾವು ಬದುಕುವ ರೀತಿಯಿಂದ ನಮ್ಮ ಪಾತ್ರ ನಿರ್ಧಾರವಾಗುತ್ತದೆ ಎಂದು ತಿಳಿಸುತ್ತಾರೆ.

ಮಾತಿನಿಂದಾಗುವ ಒಳ್ಳೆಯ ಮತ್ತು ಕೆಟ್ಟ ಲಾಭ, ನಷ್ಟಗಳ ಕುರಿತಾಗಿ ಬರೆಯುತ್ತಾರೆ. ಧರ್ಮವೆಂಬುದು ಶಾಸ್ತ್ರ ಗ್ರಂಥಗಳಲ್ಲಿಲ್ಲ, ಬದುಕುವ ಮಾರ್ಗದಲ್ಲಿ ಧರ್ಮವನ್ನು ಕಾಪಾಡಿಕೊಳ್ಳಬೇಕೆಂದಿದ್ದಾರೆ.

ತಮಗೆ ವಿದ್ಯೆ ಕಲಿಸಿದ ಅಡವೀಶ (ಅ.ರಾ.ಗೋಡಿ) ಗುರುಗಳನ್ನು ನೆನೆಯುವುದನ್ನು ಮರೆಯದ ವಚನಕಾರರು ಗುರುಭಕ್ತಿಯನ್ನು ಸಾಹಿತ್ಯದ ಮೂಲಕ ಅರ್ಪಿಸುತ್ತಾರೆ.

ಹೀಗೆ ಶ್ರೀ ಗಿರಿರಾಜ ಹೊಸಮನಿ ಅವರ ವಚನಗಳನ್ನು ಹೇಳುತ್ತ ಸಾಗಿದರೆ ಅದೊಂದು ತೀರದ ಬಯಕೆ, ತೀರವಿಲ್ಲದ ಸಾಗರ. ಬಹುತೇಕ ಎಲ್ಲ ತರಹದ ವಿಷಯಗಳನ್ನೂ ಕ್ರೋಢೀಕರಿಸಿಯೇ ರಚನೆಯಾದಂತಹ ಕೃತಿ. ಅವರ ಒಂದೊಂದು “ಒಳದನಿ”ಗಳು ನಮ್ಮ ದನಿಗಳೂ ಹೌದು ಎಂದು ಅವರೇ ಮುಖಪುಟದಲ್ಲಿ ಹೇಳಿದ್ದು ಸತ್ಯ ಎಂಬುದು ಕೃತಿಯ ಸಂಪೂರ್ಣ ಓದಿನ ನಂತರ ನಮಗನ್ನಿಸುತ್ತದೆ.

ಬರೆಯುವ ಪಕ್ವತೆ ರಚನಾಕಾರರದ್ದಾದರೆ, ಅದನ್ನು ಅರ್ಥೈಸಿಕೊಳ್ಳಲು, ಅದರಂತೆ ನಡೆಯಲು ನಮ್ಮ ಮನಸುಗಳು ಕೂಡ ಪಕ್ವವಾಗಬೇಕು. ಅಂದಾಗಲೇ ಇಂತಹ‌ ಹಿರಿ ಜೀವಿಗಳ ಅಕ್ಷರಕ್ಕೆ ನ್ಯಾಯ, ಶ್ರಮಕ್ಕೆ ಫಲ ಸಿಕ್ಕಂತಾಗುತ್ತದೆ. ಮುಂದೆ ತಾವೂ ಈ ಕೃತಿಯ ಓದಿನಲ್ಲಿ ಭಾಗಿ ಆಗುತ್ತೀರಿ ಎಂಬ ನಂಬಿಕೆಯೊಂದಿಗೆ ಶರಣು ಹೇಳುತ್ತೇನೆ. “ನಮ್ಮ ಬಸವಣ್ಣ” ಅಂಕಿತದ ವಚನಗಳು ಎಲ್ಲೆಡೆ ಪಸರಿಸುವಂತಾಗಲಿ ಎಂಬ ಭಾವದೊಂದಿಗೆ…

— ವರದೇಂದ್ರ ಕೆ ಮಸ್ಕಿ
9945253030

ಪುಸ್ತಕಕ್ಕಾಗಿ ಸಂಪರ್ಕಿಸಿ
– ಶ್ರೀ ಗಿರಿರಾಜ ಹೊಸಮನಿ
9740344463

Don`t copy text!