ಜನರ ಹಸಿವನ್ನು ನೀಗಿಸುವ ಹಾದಿಯಲ್ಲಿ ಅಭಿನಂದನ್ ಸಂಸ್ಥೆ
e-ಸುದ್ದಿ, ಮಸ್ಕಿ
ಮಸ್ಕಿ ಪಟ್ಟಣದಲ್ಲಿ ಕೋವಿಡ್ 19 ರ 2ನೇ ಅಲೆಯ ಕಾರಣದಿಂದಾಗಿ ಮಾಡಲಾಗಿರುವ ಲಾಕ್ ಡೌನ್ ನಿಂದಾಗಿ ತೊಂದರೆಗೀಡಾದ ಕಡು ಬಡ ಕುಟುಂಬಗಳಿಗೆ ನೆರವಾಗಲು ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಅಭಿಯಾನವನ್ನು ಆರಂಭಿಸಿದ್ದು, ಈ ಅಭಿಯಾನದ ಅಡಿಯಲ್ಲಿ ಮಸ್ಕಿ ಪಟ್ಟಣದ 9 ಮತ್ತು 16 ನೇ ವಾರ್ಡಿನಲ್ಲಿ ರವಿವಾರದಂದು 60 ಕ್ಕೂ ಅಧಿಕ ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ ನಾಗರಾಜ ಶೆಟ್ಟಿ ಅಭಿನಂದನ್ ಸಂಸ್ಥೆಯು ಬಡ ಕುಟುಂಬಗಳಿಗೆ ಆಹಾರವನ್ನು ಒದಗಿಸುವುದರ ಜೊತೆಗೆ ಔಷಧಗಳನ್ನು ನೀಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಿನಂದನ್ ಸಂಸ್ಥೆ ಹೇಳಿ ಸಾರ್ವಜನಿಕರಲ್ಲಿ ಧೈರ್ಯ ತುಂಬುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಸಾಮಾಜಿಕ ಸಾಮರಸ್ಯವನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ ಎಂದು ನಾಗರಾಜ ಶೆಟ್ಟಿ ಹೇಳಿದರು. ಇದೇ ಸಂದರ್ಭದಲ್ಲಿ ಸಿದ್ದಪ್ಪ ಹಳ್ಳಿ, ಶಿಕ್ಷಕರಾದ ಕಳಕಪ್ಪ ಹಾದಿಮನಿ ಅಭಿನಂದನ್ ಸಂಸ್ಥೆಯ ಕಾರ್ಯದರ್ಶಿಗಳಾದ ರಾಮಣ್ಣ ಹಂಪರಗುಂದಿ, ಸಂಸ್ಥೆಯ ಸದಸ್ಯರಾದ ಶೃತಿ ಹಂಪರಗುಂದಿ, ರೇಣುಕಾ ಹಂಪರಗುಂದಿ,ವಿದ್ಯಾ ಕೊಪ್ಪರದ,ಬಸವರಾಜ್ ಸ್ವಾಮಿ, ರವಿಕುಮಾರ್ ಸ್ಥಾವರಮಠ, ಮಲ್ಲಿಕಾರ್ಜುನ ಬಡಿಗೇರ್, ಅಮೀತ್ ಕುಮಾರ್ ಪುಟ್ಟಿ, ಕಾರ್ತಿಕ್ ಜೋಗೀನ್, ಕೀಶೋರ್, ಪವನ್ ಮುಕ್ತಿ ಹಾಗೂ ಇತರರು ಉಪಸ್ಥಿತರಿದ್ದರು.