ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ

e-ಸುದ್ದಿ ಮಸ್ಕಿ

ಕರೋನಾ ವಿಪತ್ತಿನ ಸಮಯದಲ್ಲಿ ತೊಂದರೆಗೆ ಒಳಗಾಗಿದ್ದ ಕುಟುಂಬಗಳಿಗೆ ಆಹಾರಧಾನ್ಯಗಳ ಕಿಟ್ ಗಳನ್ನು ವಿತರಿಸುವ ಮೂಲಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ನೆರವಿನ ಹಸ್ತ ಚಾಚಿದೆ.
ಮಸ್ಕಿ ನಗರದಲ್ಲಿ ವಿವಿಧೆಡೆ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಕುಟುಂಬಗಳು ಅತೀವ ಸಂಕಷ್ಟಕ್ಕೆ ಒಳಗಾಗಿದ್ದವು. ಅಂದೇ ದುಡಿದು ಅಂದೇ ಉಣ್ಣುವ ಅನಿವಾರ್ಯತೆಯಲ್ಲಿರುವ ಕುಟುಂಬಗಳನ್ನು ಗುರುತಿಸಿದ ರೈತ ಸಂಘದ ಜಿಲ್ಲಾಧ್ಯಕ್ಷರಾದ ರೂಪ ಶ್ರೀನಿವಾಸ್ ನಾಯಕ್ ಅವರು ಹಾಗೂ ಅವರ ಸಂಘದ ಮುಖಂಡರು ಮನೆ ಬಾಗಿಲಿಗೆ ತೆರಳಿ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಮನೆ ಮನೆಗೆ ತಿರುಗಿ ಕೂದಲು ಸಂಗ್ರಹಿಸಿ ದುಡಿಮೆ ಮಾಡಿಕೊಳ್ಳುವವರು, ಪ್ಲಾಸ್ಟಿಕ್ ವಸ್ತುಗಳನ್ನು, ಬಳೆ ಮಾರಾಟ ಮಾಡುವವರು, ಬ್ಯಾಗ್ ರಿಪೇರಿ ಮಾಡಿಕೊಡುವವರು, ಮೀನಿನ ಬಲೆ ಹೆಣೆಯುವವರು, ಕಲ್ಲು ಒಡೆದು ಬೀಸುಕಲ್ಲು ತಯಾರಿಸಿ ಮಾರುವವರು, ಗೌಂಡಿ ಕೆಲಸ ಮಾಡುವವರು, ತಳ್ಳುಗಾಡಿಯಲ್ಲಿ ಸ್ಟೇಷನರಿ ವಸ್ತುಗಳನ್ನು ಮಾರಾಟ ಮಾಡಿ ಬದುಕಿನ ಬಂಡಿ ತಳ್ಳುತ್ತಿರುವವರು, ಹೇರ್ ಪಿನ್, ಕ್ಲಿಪ್ ಗಳನ್ನು ಮಾರುವವರು, ವಿಭೂತಿ ಉಂಡೆಗಳನ್ನು ಮಾರುವವರು ಹೀಗೆ ನೂರಾರು ಕುಟುಂಬಗಳು ಕೆಲಸವಿಲ್ಲದೇ ತೊಂದರೆಗೆ ಸಿಲುಕಿವೆ.
ಕರೋನಾ ಕಾರಣದಿಂದ ಸಂಚಾರಕ್ಕೆ ನಿರ್ಬಂಧ ವಿಧಿಸಿರುವ ಕಾರಣದಿಂದ ಇಂತಹ ಕುಟುಂಬಗಳು ತಮ್ಮ ಕಾಯಕಕ್ಕೆ ತೆರಳುವಂತಿರಲಿಲ್ಲ.
ಹೀಗಾಗಿ ಇಂತಹ ಕುಟುಂಬಗಳು ಹಸಿವಿನ ಸಮಸ್ಯೆಯ ನಡುವೆಯೇ ದಿನದೂಡುತ್ತಿದ್ದವು. ಪರಿಸ್ಥಿತಿಯನ್ನು ಅರಿತ ರೈತ ಸಂಘದ ಮುಖಂಡರು ಹಾಗೂ ಸದಸ್ಯರು ಬಡ ಕುಟುಂಬಗಳ ಮನೆ ಮನೆ ಭೇಟಿ ಮಾಡಿ ಅವರ ಅಗತ್ಯತೆಯನ್ನು ತಿಳಿದುಕೊಂಡು ದವಸ ಧಾನ್ಯಗಳ ಕಿಟ್ಟನ್ನು ವಿತರಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ,ರೂಪ ಶ್ರೀನಿವಾಸ್ ನಾಯಕ್ ಜಿಲ್ಲಾಧ್ಯಕ್ಷರು, ಉಮಾದೇವಿ ನಾಯಕ್ ರಾಜ್ಯ ಸಂಚಾಲಕರು, ಅನಿತಾ ಬಸವರಾಜ್ ಸಿರಿವಾರ್ ತಾಲೂಕು ಅಧ್ಯಕ್ಷರು, ರವಿಕುಮಾರ್ ಜಿಲ್ಲಾ ಅಧ್ಯಕ್ಷರು ಹಸಿರು ಸೇನೆ, ಮಲ್ಲಿಕಾರ್ಜುನರೆಡ್ಡಿ ತಾಲೂಕಾಧ್ಯಕ್ಷ ರಾಯಚೂರ್, ಮಲನಗೌಡ ಪಾಟೀಲ್ ಸದಸ್ಯರು, ತಾಯಪ್ಪ ಮಸ್ಕಿ ತಾಲೂಕು ಅಧ್ಯಕ್ಷರು, ಶೇಖರಪ್ಪ ಸದಸ್ಯರು, ತಿಮ್ಮಣ್ಣ ಬೋವಿ, ಹುಚ್ಚಪ್ಪ, ಇತರರು ಭಾಗಿಯಾಗಿದ್ದರು.

Don`t copy text!